ಗಾಳಿಯಿಂದ ವಿದ್ಯುತ್ ನೀರು ಉತ್ಪಾದಿಸುವ ವಿಂಡ್ ಟರ್ಬೈನ್ ಆವಿಸ್ಕಾರ, ಈ ಯುವಕನ ಕೆಲಸಕ್ಕೆ ಪ್ರಧಾನಿ ಮೋದಿ ಮೆಚ್ಚುಗೆ

0 126

ಸುಮಾರು 1990 ರ ವೇಳೆಗೆ ಭಾರತದಲ್ಲಿ ಪವನ ವಿದ್ಯುತ್ ಅಭಿವೃದ್ಧಿ ಕಂಡಿತು. ಅದಲ್ಲದೇ ಕಳೆದ ಕೆಲವು ವರ್ಷಗಳಿಂದ ಅದರ ಪ್ರಮಾಣದಲ್ಲಿ ಏರಿಕೆ ಕೂಡಾ ಕಂಡಿದೆ. ಈ ಗಾಳಿ ವಿದ್ಯುತ್ ಉದ್ಯಮಕ್ಕೆ ಡೆನ್ಮಾರ್ಕ್ ಅಥವಾ US ಹೊಸ ಪ್ರವೇಶ ಮಾಡಿದ್ದರೂ ಭಾರತವು ಇಡೀ ವಿಶ್ವದಲ್ಲಿ ಐದನೆಯ ಅತಿ ದೊಡ್ಡ ದೇಶವಾಗಿ, ಈ ಗಾಳಿ ವಿದ್ಯುತ್ ಸ್ಥಾಪನೆಯಲ್ಲಿ ತನ್ನ ಸ್ಥಾನ ಪಡೆದಿದೆ. ಇದೀಗ ಪ್ರಧಾನಿ ನರೇಂದ್ರ ಮೋದಿ ಅವರ ಈ ಒಂದು ಕಲ್ಪನೆ ನನಸಾಗಿದೆ ಎನ್ನಬಹುದು. ಒಬ್ಬ ಯುವಕ ಗಾಳಿಯಿಂದ ವಿದ್ಯುತ್ ನೀರು ಉತ್ಪಾದಿಸುವ ವಿಂಡ್ ಟರ್ಬೈನ್ ಅಭಿವೃದ್ಧಿ ಪಡಿಸಿದ್ದಾನೆ. ಹೇಗೆ ಇದನ್ನು ಮಾಡಲಾಗಿದೆ ? ಆ ಹುಡುಗ ಯಾರು? ಇದರ ಕುರಿತಾಗಿ ನಾವು ಈ ಲೇಖನದ ಮೂಲಕ ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳೋಣ.

ಇಡೀ ಭೂಮಿ ಶೇ. 70ರಷ್ಟು ನೀರಿನಿಂದ ಕೂಡಿದೆ ಆದರೂ ಸಹ ಇಂದಿಗೂ ಕೂಡ ಅನೇಕ ಕಡೆ ಕುಡಿಯುವ ನೀರು ಸಮರ್ಪಕವಾಗಿ ಲಭ್ಯವಾಗ್ತಿಲ್ಲ ಎನ್ನುವುದು ವಿಷಾದಕರ ಸಂಗತಿ. ಎಲ್ಲಾ ಕಡೆ ನೀರಿದ್ದರೂ ಕೂಡ, ಅದು ಶುದ್ಧವಾಗಿಲ್ಲ ಅಂದರೆ ಕುಡಿಯಲು ಯೋಗ್ಯವಾಗಿಲ್ಲ. ನದಿ, ಹಳ್ಳ, ಕೊಳ್ಳಗಳಲ್ಲದೇ ನಮ್ಮ ಸುತ್ತಲೂ ಇರುವ ಗಾಳಿಯಲ್ಲೂ ಸಹ ನೀರಿದೆ ಅನ್ನೋದು ಗೊತ್ತಿದೆ. ಆ ತೇವವನ್ನೇ ಕುಡಿಯುವ ನೀರಾಗಿ ಪರಿವರ್ತಿಸಬಲ್ಲ ವಾಟರ್​ ಪ್ಲಾಂಟ್​​ಗಳ ಬಗ್ಗೆಯೂ ನಾವು ಕೇಳಿದ್ದೀವಿ. ಈಗ ಭಾರತದಲ್ಲಿ ಯುವಕನೊಬ್ಬ ಅದನ್ನ ಮತ್ತೊಂದು ಹಂತಕ್ಕೆ ಕೊಂಡೊಯ್ದಿದ್ದು, ಗಾಳಿಯಲ್ಲಿನ ತೇವಾಂಶದಿಂದ ವಿದ್ಯುತ್ ಹಾಗೂ ಕುಡಿಯುವ ನೀರು ಎರಡನ್ನೂ ಉತ್ಪಾದಿಸಬಲ್ಲ ವಿಂಡ್​ ಟರ್ಬೈನ್(ಪವನ ಯಂತ್ರ) ಅನ್ನು ಅಭಿವೃದ್ಧಿಪಡಿಸಿದ್ದಾರೆ. ಆಂಧ್ರಪ್ರದೇಶದ ಎಲೆಕ್ಟ್ರಿಕಲ್ ಇಂಜಿನಿಯರ್ ಆಗಿರುವ ಮಧು ವಜ್ರಕರೂರ್​ ಇಂಥದ್ದೊಂದು ಸಾಧನೆಯನ್ನು ಮಾಡುವ ಮೂಲಕ ಸುದ್ದಿಯಾಗಿದ್ದಾರೆ. ಕೇಂದ್ರ ಸಚಿವ ಪ್ರಕಾಶ್​ ಜಾವ್ಡೇಕರ್​ ಈ ಯುವಕನ ಬಗ್ಗೆ ಟ್ವೀಟ್ ಮಾಡಿ ಅಭಿನಂದಿಸಿದ್ದಾರೆ. ಮಧು ಅವರ ಈ ಸರಳ ಅನ್ವೇಷಣೆ, ದೊಡ್ಡ ಸಮಸ್ಯೆಗಳಾದ ವಿದ್ಯುತ್​ ಹಾಗೂ ನೀರಿನ ಅಭಾವ ಎರಡಕ್ಕೂ ಪರಿಹಾರ ನೀಡಬಹುದಾಗಿದೆ.

ದಿನಕ್ಕೆ 80 ರಿಂದ 100 ಲೀಟರ್ ನೀರನ್ನು ಉತ್ಪಾದಿಸಬಲ್ಲದು ಟರ್ಬೈನ್. ಈ ಟು ಇನ್ ಒನ್ ವಿಂಡ್ ಟರ್ಬೈನ್, ದಿನಕ್ಕೆ ಸುಮಾರು 30 ಕಿಲೋವ್ಯಾಟ್ ವಿದ್ಯುತ್ ಮತ್ತು 80 ರಿಂದ 100 ಲೀಟರ್ ನೀರನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಇದರರ್ಥ ಇದು ಸುಮಾರು 25 ಮನೆಗಳ ವಿದ್ಯುತ್ ಬೇಡಿಕೆಯನ್ನು ಇದರ ಮೂಲಕ ಪೂರೈಸಬಲ್ಲದು. ಕಳೆದ ಹಲವು ವರ್ಷಗಳಿಂದ ಮಧು, ವಿಂಡ್ ಟರ್ಬೈನ್‌ಗಳಿಂದ ನೀರು ಉತ್ಪಾದಿಸುವ ಯೋಜನೆಗಾಗಿ ಶ್ರಮ ವಹಿಸಿ ಕೆಲಸ ಮಾಡಿದ್ದಾರಂತೆ. ಈ ಕುರಿತು ಮಾಧ್ಯಮವೊಂದರೊಂದಿಗೆ ಮಾತನಾಡಿರುವ ಅವರು, ನನ್ನ ಬಾಲ್ಯದಿಂದಲೂ ಶುದ್ಧ ಕುಡಿಯುವ ನೀರು ಮತ್ತು ಸಮರ್ಪಕ ವಿದ್ಯುತ್ ಪಡೆಯಲು ಸಾಧ್ಯವಾಗಲಿಲ್ಲ. ಹೀಗಾಗಿ ನಾನು ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ನಿರ್ಧರಿಸಿದೆ. ವಿದ್ಯುತ್ ಮತ್ತು ಶುದ್ಧ ನೀರನ್ನು ಉತ್ಪಾದಿಸಬಲ್ಲ ಯಂತ್ರ ತಯಾರಿಸಲು ಕಾರ್ಯ ಆಂಭಿಸಿದೆ. ನಮ್ಮ ಮನೆಯಲ್ಲಿ ಹಣಕಾಸಿನ ಸ್ಥಿತಿ ಉತ್ತಮವಾಗಿರಲಿಲ್ಲ. ಹೀಗಾಗಿ ಈ ಯೋಜನೆಗಾಗಿ ಉಳಿತಾಯದ ಮೂಲಕ ಹಣ ಸಂಗ್ರಹಿಸಿದೆ ಎಂದು ತಿಳಿಸಿದ್ದಾರೆ.  

ಇನ್ನು ಈ ಟರ್ಬೈನ್ ಹೇಗೆ ಕೆಲಸ ಮಾಡುತ್ತೆ ಅಂತಾ ನೋಡುವುದಾದರೆ, ವಿಂಡ್ ಟರ್ಬೈನ್‌ಗೆ ಜೋಡಿಸಲಾದ ಫ್ಯಾನ್‌ನ ಮಧ್ಯದಲ್ಲಿ ಒಂದು ದ್ವಾರವಿರುತ್ತದೆ. ಅದರ ಮೂಲಕ ಗಾಳಿಯನ್ನು ಒಳಗೆ ಎಳೆದುಕೊಳ್ಳುತ್ತದೆ. ನಂತರ ಕೂಲಿಂಗ್ ಕಂಪ್ರೆಸರ್​​ನ ಸಹಾಯದಿಂದ ಗಾಳಿಯನ್ನು ತಂಪಾಗಿಸಲಾಗುತ್ತದೆ. ಈ ರೀತಿ, ತೇವಾಂಶವುಳ್ಳ ಗಾಳಿಯಲ್ಲಿರುವ ನೀರಿನ ಆವಿ, ಕಡಿಯುವ ನೀರಾಗಿ ಪರಿವರ್ತನೆಯಾಗುತ್ತದೆ. ನಂತರ ಇದನ್ನು ಶುದ್ಧೀಕರಣಕ್ಕಾಗಿ ತಾಮ್ರದ ಕೊಳವೆಗಳ ಮೂಲಕ ಶೇಖರಣಾ ಟ್ಯಾಂಕ್‌ಗಳಿಗೆ ಕಳುಹಿಸಲಾಗುತ್ತದೆ. ಈ ತಂತ್ರಜ್ಞಾನ, ಕರಾವಳಿ ಪ್ರದೇಶಗಳಲ್ಲಿ ಹಾಗೂ ಸಣ್ಣ ಉದ್ಯಮಗಳಿಗೆ ಬಹಳ ಉಪಯುಕ್ತವಾಗಲಿದೆ. ಇದು ವಿದ್ಯುತ್ ಬಿಲ್ ಖರ್ಚನ್ನು ಕಡಿಮೆಯಾಗಿಸುವ ಜೊತೆಗೆ ನೀರಿನ ಕೊರತೆಯನ್ನ ನಿವಾರಿಸಬಲ್ಲದು ಎನ್ನಲಾಗಿದೆ.

ಈ ಮೂಲಕ ಪ್ರಧಾನಿ ಮೋದಿಯ ಕಲ್ಪನೆಯನ್ನ ಮಧು ಅವರು ನನಸಾಗಿಸಿದ್ದಾರೆ. ಇತ್ತೀಚೆಗೆ ಅಷ್ಟೇ ಪ್ರಧಾನಿ ಮೋದಿ, ಗಾಳಿಯ ತೇವಾಂಶದಿಂದ ನೀರು ಹಾಗೂ ವಿದ್ಯುತ್ ಉತ್ಪಾದಿಸುವ ಪ್ರಕ್ರಿಯೆ ಕುರಿತು ತಮ್ಮ ಭಾಷಣದಲ್ಲಿ ಹೇಳಿದ್ದರು. ಈಗ ಮಧು ಅವರ ಈ ಆವಿಷ್ಕಾರದ ರೂಪದಲ್ಲಿ ಮೋದಿ ಕಲ್ಪನೆಯ ವಿಂಡ್ ಟರ್ಬೈನ್ ವಾಸ್ತವಕ್ಕೆ ಬಂದಿದೆ. ಈ ಹಿನ್ನೆಲೆ ಸಚಿವ ಪ್ರಕಾಶ್​ ಜಾವ್ಡೇಕರ್​ ಮಧುಗೆ ಅಭಿನಂದನೆ ತಿಳಿಸಿದ್ದಾರೆ.

Leave A Reply

Your email address will not be published.