ಭಗವಂತನ ಸೃಷ್ಟಿಯಲ್ಲಿ ಹೆಣ್ಣು ಅಪರೂಪದ ಸೃಷ್ಟಿ. ಹೆಣ್ಣಿನ ಸೌಂದರ್ಯಕ್ಕೆ ಮಾರು ಹೋಗದವರೆ ಇಲ್ಲ ಎಂಬುದನ್ನು ಪುರಾಣಗಳಲ್ಲಿ ನೋಡಬಹುದು. ಪುರಾಣದಲ್ಲಿ ಉಲ್ಲೇಖಿತವಾದ ವಿಶ್ವಾಮಿತ್ರ ಮಹರ್ಷಿ ಹಾಗೂ ಮೇನಕೆಯ ಪ್ರೇಮ ಕಥೆಯನ್ನು ಈ ಲೇಖನದಲ್ಲಿ ನೋಡೋಣ.

ಭಗವಂತನು ತನ್ನ ಸೃಷ್ಟಿಯಲ್ಲಿ ಹೆಣ್ಣಿಗೆ ಎಲ್ಲ ರೀತಿಯ ಗುಣವನ್ನು ಕರುಣಿಸಿದ್ದಾನೆ. ಹೆಣ್ಣು ಮನಸ್ಸು ಮಾಡಿದರೆ ತನ್ನ ಸೌಂದರ್ಯದಿಂದ, ವಿನಯದಿಂದ ಏನನ್ನಾದರೂ ಆಳುತ್ತಾಳೆ. ಪುರುಷ ಪ್ರಧಾನ ಸಮಾಜದಲ್ಲಿ ಕೆಲವು ಗಂಡಸರು ಈಗಲೂ ಹೆಣ್ಣನ್ನು ದುರ್ಬಲಳು ಎಂದು ಪರಿಗಣಿಸುತ್ತಾರೆ. ಹೆಣ್ಣು ತನ್ನ ಸೌಂದರ್ಯದಿಂದ ಗಂಡಸರನ್ನು ದುರ್ಬಲ ಮಾಡುವ ಶಕ್ತಿಯನ್ನು ಹೊಂದಿದ್ದಾಳೆ. ಹೆಣ್ಣಿನ ಸೌಂದರ್ಯಕ್ಕೆ ಮನಸೋಲದ ಗಂಡಸರೆ ಇಲ್ಲ ಒಂದು ವೇಳೆ ಹೆಣ್ಣಿನ ಸೌಂದರ್ಯಕ್ಕೆ ಮನಸೋಲದ ಗಂಡಸಿನ ಬಗ್ಗೆ ಸಂಶಯ ಹುಟ್ಟುತ್ತದೆ. ರಾಜಕೀಯ ವ್ಯಕ್ತಿಗಳಾಗಲಿ, ರಾಜನೇ ಆಗಿರಲಿ ಮತ್ತು ಸೆಲೆಬ್ರಿಟಿಯಾಗಲಿ ಹೆಣ್ಣಿನ ಸೌಂದರ್ಯದ ಮುಂದೆ ಯಾವ ಆಟ ನಡೆಯುವುದಿಲ್ಲ ಇದು ಶತ ಶತಮಾನಗಳಿಂದ ನಡೆದುಕೊಂಡು ಬಂದಿದೆ. ಭೂಮಿಯ ಮೇಲೆ ಯುದ್ಧ ನಡೆದರೆ ಅದು ಹೆಣ್ಣಿಗಾಗಿ ಅಥವಾ ಮಣ್ಣಿಗಾಗಿ ಎಂದು ಹಿರಿಯರು ಹೇಳುತ್ತಾರೆ. ಹೆಣ್ಣಿನ ಸೌಂದರ್ಯದಿಂದ ರಾಜರು, ಋಷಿಗಳು ತಮ್ಮ ಸರ್ವಸ್ವವನ್ನು ಕಳೆದುಕೊಂಡ ಉದಾಹರಣೆಗಳು ಇತಿಹಾಸದಲ್ಲಿ, ಪುರಾಣಗಳಲ್ಲಿ ನೋಡುತ್ತೇವೆ.

ವಿಶ್ವಾಮಿತ್ರ ಮಹರ್ಷಿಗಳು ಬಹಳ ವರ್ಷಗಳಿಂದ ಒಂದು ಕಾಡಿನಲ್ಲಿ ತಪಸ್ಸನ್ನು ಮಾಡುತ್ತಿದ್ದರು. ಅವರು ಭೂಮಿಯ ಮೇಲೆ ಸುಂದರ ಸಮಾಜವನ್ನು ಕಟ್ಟಲು, ಭೂಮಿಯನ್ನು ಸ್ವರ್ಗದಂತೆ ಮಾಡಲು ತಪ್ಪಸ್ಸನ್ನು ಮಾಡುತ್ತಿದ್ದರು. ತಪಸ್ಸು ಮಾಡುವಾಗ ಕಾಡಿನಲ್ಲಿ ಘೋರ ಪ್ರಾಣಿಗಳಿದ್ದವು ಆದರೂ ಹೆದರಲಿಲ್ಲ. ಗಾಳಿ, ಬಿರುಗಾಳಿ, ಗುಡುಗು, ಸಿಡಿಲು, ಮಿಂಚು ಪ್ರಾಕೃತಿಕ ವಿಕೋಪಗಳು ಬಂದರೂ ಅವರು ವಿಚಲಿತರಾಗಲಿಲ್ಲ. ಲೋಕಸಂಚಾರಿ ನಾರದರಿಗೆ ವಿಶ್ವಾಮಿತ್ರರ ಉದ್ದೇಶ ತಿಳಿಯುತ್ತದೆ ಆಗ ನಾರದರು ಸ್ವರ್ಗಾಧಿಪತಿ ಇಂದ್ರನಿಗೆ ಈ ವಿಷಯವನ್ನು ತಿಳಿಸುತ್ತಾರೆ. ಇದನ್ನು ತಿಳಿದ ಇಂದ್ರನು ತನ್ನ ಸ್ಥಾನ ಕಷ್ಟದಲ್ಲಿದೆ ಎಂದು ಚಿಂತಿಸುತ್ತಾನೆ. ಭೂಮಿಯ ಮೇಲೆ ಸ್ವರ್ಗ ಸೃಷ್ಟಿಯಾದರೆ ತನ್ನ ಸ್ವರ್ಗಕ್ಕೆ ಯಾವುದೇ ಬೆಲೆ ಇರುವುದಿಲ್ಲ ಎಂದು ಅರಿತ ಇಂದ್ರನು ವಿಶ್ವಾಮಿತ್ರರ ತಪಸ್ಸನ್ನು ಭಂಗ ಮಾಡಲು ಯೋಚನೆ ಮಾಡುತ್ತಾರೆ.

ಇಂದ್ರ ದೇವನು ವಿಶ್ವಾಮಿತ್ರ ಋಷಿಗಳ ತಪಸ್ಸನ್ನು ಭಂಗ ಪಡಿಸಲು ಸ್ವರ್ಗದ ಅತ್ಯಂತ ಸುಂದರ ಅಪ್ಸರೆ ಮೇನಕೆಯನ್ನು ಕರೆದು ಭೂಲೋಕಕ್ಕೆ ಹೋಗಿ ವಿಶ್ವಾಮಿತ್ರರ ತಪಸ್ಸನ್ನು ಭಂಗಪಡಿಸಲು ಆಜ್ಞೆ ಮಾಡುತ್ತಾನೆ. ಇಂದ್ರನ ಆಜ್ಞೆಯನ್ನು ಕೇಳಿದ ಮೇನಕೆ ಮೊದಲು ಒಪ್ಪುವುದಿಲ್ಲ ನಂತರ ಸ್ವರ್ಗಲೋಕದ ಉಳಿವಿಗಾಗಿ ಈ ಕಾರ್ಯವನ್ನು ಮಾಡಲೇಬೇಕಿತ್ತು. ಮೇನಕೆ ಭೂಲೋಕಕ್ಕೆ ಬಂದು ವಿಶ್ವಾಮಿತ್ರರ ಮುಂದೆ ನರ್ತನ ಮಾಡುತ್ತಾಳೆ ಆದರೆ ವಿಶ್ವಾಮಿತ್ರರು ವಿಚಲಿತರಾಗಲಿಲ್ಲ. ವಿಶ್ವಾಮಿತ್ರರ ತಪಸ್ಸನ್ನು ಭಂಗಪಡಿಸಲು ಮೇನಕೆಯ ಪ್ರಯತ್ನ ವಿಫಲವಾಯಿತು ಆಗ ಇಂದ್ರ ತನ್ನ ಯೋಜನೆ ವಿಫಲವಾಗುತ್ತಿರುವ ಸೂಚನೆಗಳನ್ನು ನೋಡಿ ಇಂದ್ರನು ಕಾಮದೇವನನ್ನು ಕರೆಯಿಸಿ ವಿಶ್ವಾಮಿತ್ರರ ಮೇಲೆ ಕಾಮದ ಬಾಣವನ್ನು ಬಿಡುವಂತೆ ಆಜ್ಞೆ ಮಾಡುತ್ತಾನೆ. ಅದರಂತೆ ಕಾಮದೇವನು ವಿಶ್ವಾಮಿತ್ರರ ಮೇಲೆ ಬಾಣವನ್ನು ಬಿಡುತ್ತಾನೆ ಅದು ವಿಶ್ವಾಮಿತ್ರರ ಮೇಲೆ ತನ್ನ ಪ್ರಭಾವ ಬೀರುತ್ತದೆ. ಆಗ ವಿಶ್ವಾಮಿತ್ರರ ತಪಸ್ಸು ಭಂಗವಾಯಿತು ವಿಶ್ವದ ಅತ್ಯಂತ ಸುಂದರಿ ಮೇನಕೆಯ ಸೌಂದರ್ಯದಿಂದ ವಿಶ್ವಾಮಿತ್ರರು ಆಕರ್ಷಿತರಾಗಿ ಅವರ ಹೃದಯದಲ್ಲಿ ಪ್ರೇಮ ಪ್ರಾರಂಭವಾಗುತ್ತದೆ. ಮೇನಕೆಯೂ ವಿಶ್ವಾಮಿತ್ರರ ಪ್ರೇಮದಲ್ಲಿ ಸಿಲುಕುತ್ತಾಳೆ ತಾನು ಬಂದಿರುವ ಉದ್ದೇಶ ವಿಶ್ವಾಮಿತ್ರರಿಗೆ ತಿಳಿದರೆ ಸಿಟ್ಟಾಗುತ್ತಾರೆ ಎಂದು ಮನಸ್ಸಿನಲ್ಲಿ ಭಯಪಡುತ್ತಾಳೆ. ತಾನು ವಿಶ್ವಾಮಿತ್ರರರನ್ನು ಬಿಟ್ಟು ಹೋದರೆ ಮತ್ತೆ ಅವರು ತಪಸ್ಸಿಗೆ ಕುಳಿತುಕೊಳ್ಳುತ್ತಾರೆ ಎಂದು ಯೋಚಿಸಿ ಅವರನ್ನು ವಿವಾಹವಾಗುತ್ತಾಳೆ. ನಂತರ ವಿಶ್ವಾಮಿತ್ರ ಹಾಗೂ ಮೇನಕೆಗೆ ಒಂದು ಹೆಣ್ಣು ಮಗು ಜನಿಸುತ್ತದೆ.

ಮೇನಕೆಯು ಭೂಲೋಕಕ್ಕೆ ಬಂದ ಉದ್ದೇಶವನ್ನು ಸಂಪೂರ್ಣವಾಗಿ ಮರೆತು ಹೋಗುತ್ತಾಳೆ. ಒಮ್ಮೆ ಮೇನಕೆ ತನ್ನ ಮಗಳೊಂದಿಗೆ ಆಟವಾಡುತ್ತಿರುವಾಗ ಇಂದ್ರನು ಪ್ರತ್ಯಕ್ಷನಾಗಿ ಮೇನಕೆ ನೀನು ಬಂದ ಕಾರ್ಯವನ್ನು ಮರೆತಿರುವೆ, ನನ್ನ ಜೊತೆ ಈಗಲೇ ಸ್ವರ್ಗಲೋಕಕ್ಕೆ ಬರುವಂತೆ ಆಜ್ಞೆ ಮಾಡುತ್ತಾನೆ. ಆಗ ಮೇನಕೆ ತನ್ನ ಪುತ್ರಿ ಹಾಗೂ ಪತಿಯನ್ನು ಬಿಟ್ಟು ಹೋಗಲು ಮನಸ್ಸಿಲ್ಲದೆ ಇಂದ್ರನ ಬಳಿ ತಾನು ಇಲ್ಲಿಯೇ ಇರುವುದಾಗಿ ಕೇಳಿಕೊಳ್ಳುತ್ತಾಳೆ ಇದನ್ನು ಕೇಳಿದ ಇಂದ್ರದೇವನು ಕೋಪಗೊಂಡು ನೀನು ನನ್ನ ಜೊತೆ ಬರಲಿಲ್ಲವೆಂದರೆ ನೀನು ಶಿಲೆಯಾಗಿ ಹೋಗುತ್ತೀಯಾ ಎಂದು ಶಾಪ ಕೊಡಲು ಮುಂದಾಗುತ್ತಾನೆ. ಆಗ ಮೇನಕೆ ವಿಶ್ವಾಮಿತ್ರರಿಗೆ ತಾನು ಬಂದ ಉದ್ದೇಶವನ್ನು ತಿಳಿಸುತ್ತಾಳೆ ಇದರಿಂದ ವಿಶ್ವಾಮಿತ್ರರಿಗೆ ಕೋಪ ಹಾಗೂ ಬೇಸರವಾಗುತ್ತದೆ. ಮೇನಕೆ ವಿಶ್ವಾಮಿತ್ರರನ್ನು ಹಾಗೂ ಮಗಳನ್ನು ಬಿಟ್ಟು ಸ್ವರ್ಗಕ್ಕೆ ತೆರಳುತ್ತಾಳೆ. ವಿಶ್ವಾಮಿತ್ರರು ಸಂಕಟಕ್ಕೆ ಸಿಲುಕಿ ತಮ್ಮ ಮಗಳನ್ನು ಸ್ನೇಹಿತನ ಆಶ್ರಮದಲ್ಲಿ ಬೆಳೆಸುತ್ತಾರೆ. ಅವಳ ಹೆಸರು ಶಕುಂತಲೆ ಅವಳು ಸುಂದರ ಕನ್ಯೆ ಆದನಂತರ ದುಷ್ಯಂತ ಮಹಾರಾಜನೊಂದಿಗೆ ಪ್ರೇಮ ವಿವಾಹವಾಗುತ್ತಾಳೆ. ಋಷಿಮುನಿಗಳನ್ನು ತಲ್ಲಣಗೊಳಿಸುವ ಶಕ್ತಿ ಹೆಣ್ಣಿಗಿದೆ.

Leave a Reply

Your email address will not be published. Required fields are marked *