ಕರ್ನಾಟಕದಲ್ಲಿ ಗಂಡುಮೆಟ್ಟಿದ ನಾಡು ಹುಬ್ಬಳಿಗೆ ಯಾಕೆ ವಿಶೇಷ ಸ್ಥಾನವಿದೆ ಗೊತ್ತೇ?

0 3

ಕರ್ನಾಟಕ ರಾಜ್ಯದಲ್ಲಿ ಹಲವು ನಗರಗಳಿವೆ. ರಾಜ್ಯದ ಪ್ರಮುಖ ನಗರಗಳಲ್ಲಿ ಹುಬ್ಬಳ್ಳಿ ನಗರವು ಒಂದಾಗಿದೆ. ನಮ್ಮ ರಾಜ್ಯದ ಹುಬ್ಬಳ್ಳಿ ನಗರವು ತನ್ನದೇ ಆದ ಆಧ್ಯಾತ್ಮಿಕ, ಐತಿಹಾಸಿಕ, ಶೈಕ್ಷಣಿಕ ಮಹತ್ವವನ್ನು ಹೊಂದಿದೆ. ಹಾಗಾದರೆ ಹುಬ್ಬಳ್ಳಿಯ ಬಗ್ಗೆ ಸ್ವಾರಸ್ಯಕರ ಮಾಹಿತಿಯನ್ನು ಈ ಲೇಖನದಲ್ಲಿ ನೋಡೋಣ.

ಗಂಡು ಮೆಟ್ಟಿದ ನಾಡು ಎಂಬ ಹೆಸರು ಪಡೆದ ಹೆಮ್ಮೆಯ ನಗರ ಹುಬ್ಬಳ್ಳಿ. ಒಂದು ಕಾಲದಲ್ಲಿ ಈ ನಗರವನ್ನು ರಾಜ್ಯದ ಮಿನಿ ಬಾಂಬೆ ಎಂದು ಕರೆಯುತ್ತಿದ್ದರು. ಹುಬ್ಬಳ್ಳಿ ಧಾರವಾಡಕ್ಕೆ ಸೇರಿದ ಒಂದು ನಗರ ಮತ್ತು ಧಾರವಾಡದ ತಾಲ್ಲೂಕುಗಳಲ್ಲಿ ಒಂದು ತಾಲ್ಲೂಕು ಆಗಿದೆ. ಹುಬ್ಬಳ್ಳಿ-ಧಾರವಾಡವನ್ನು ರಾಜ್ಯದ ಮುಖ್ಯ ಅವಳಿನಗರ ಎಂದು ಕರೆಯುತ್ತಾರೆ. ಹುಬ್ಬಳ್ಳಿಯನ್ನು ವ್ಯಾಪಾರ ವ್ಯವಹಾರಗಳಿಂದ ರಾಜ್ಯದ ಹಾಗೂ ದಕ್ಷಿಣ ಮಹಾರಾಷ್ಟ್ರದ ಪ್ರಮುಖ ಕಮರ್ಷಿಯಲ್ ಹಬ್ ಎಂದು ಕರೆಯಲಾಗುತ್ತದೆ. ಹುಬ್ಬಳ್ಳಿ ಐತಿಹಾಸಿಕವಾಗಿ, ಧಾರ್ಮಿಕವಾಗಿ ತನ್ನದೇ ಆದ ಪ್ರಾಮುಖ್ಯತೆಯನ್ನು ಹೊಂದಿದೆ. ಹೂವು ಮತ್ತು ಬಳ್ಳಿ ಎರಡು ಹೆಸರು ಸೇರಿ ಹುಬ್ಬಳ್ಳಿ ಎಂಬ ಹೆಸರು ಬಂದಿತು. ವಿಸ್ತಾರ ಹಾಗೂ ಜನಸಾಂದ್ರತೆಯಲ್ಲಿ ಬೆಂಗಳೂರನ್ನು ಹೊರತುಪಡಿಸಿದರೆ ಎರಡನೇಯ ನಗರ ಹುಬ್ಬಳ್ಳಿ ಎಂದು ಗುರುತಿಸಿಕೊಂಡಿದೆ. ಹುಬ್ಬಳ್ಳಿ ಉತ್ತರ ಕರ್ನಾಟಕದ ಅನಧಿಕೃತ ರಾಜಧಾನಿ ಎಂದು ಮಾನ್ಯತೆ ಪಡೆದಿದೆ.

ನಾರ್ತ್ ವೆಸ್ಟರ್ನ್ ಬಸ್ ಸಾರಿಗೆಯ ಮುಖ್ಯ ಪ್ರಧಾನ ಕಚೇರಿ ಹುಬ್ಬಳ್ಳಿಯಲ್ಲಿದೆ. ಸಾವಿರಾರು ವರ್ಷಗಳ ಚರಿತ್ರೆಯನ್ನು ಈ ನಗರ ಹೊಂದಿದೆ. ಬಾದಾಮಿ ಚಾಲುಕ್ಯರು, ರಾಯರು, ವಿಜಯನಗರದ ಅರಸರು, ಆದಿಲ್ ಶಾಹಿಗಳು, ನವಾಬರು, ಪೇಶ್ವೆಗಳು, ಮರಾಠಿಗರು, ಹೈದರಲಿ ಮುಂತಾದವರು ಈ ನಗರದಲ್ಲಿ ಆಳಿದ್ದಾರೆ. ಚಾಲುಕ್ಯರು ಇಲ್ಲಿನ ಸುಪ್ರಸಿದ್ದ ಚಂದ್ರಮೌಳೇಶ್ವರ ದೇಗುಲವನ್ನು 900 ವರ್ಷಗಳ ಹಿಂದೆಯೇ ಸ್ಥಾಪಿಸಿದ್ದಾರೆ. ರಾಯರ ಆಳ್ವಿಕೆ ಕಾಲದಲ್ಲಿ ರಾಯರ ಹುಬ್ಬಳ್ಳಿ ಎಂದೆ ಕರೆಸಿಕೊಂಡಿತ್ತು. ಅವರಿಂದ ಪ್ರಸಿದ್ದ ಭವಾನಿ ಶಂಕರ ದೇವಾಲಯ ಹಾಗೂ ಅನೇಕ ಜೈನ ಬಸೀದಿಗಳ ನಿರ್ಮಾಣ ಕಾರ್ಯ ಜರುಗಿತು. ರಾಯರು ಸರ್ವಧರ್ಮ ಸಹಿಷ್ಣುರಾಗಿದ್ದು ಹಿಂದೂ ಮಂದಿರಗಳ ಜೊತೆಗೆ ಜೈನ ಬಸೀದಿಗಳ ನಿರ್ಮಾಣ ಕಾರ್ಯಕ್ಕೆ ದಾನ ಮಾಡಿ ಪ್ರೋತ್ಸಾಹ ನೀಡುತ್ತಿದ್ದರು. ವಿಜಯನಗರ ಅರಸರ ಕಾಲದಲ್ಲಿ ಹುಬ್ಬಳ್ಳಿ ನಗರ ರಾಜ್ಯದ ಪ್ರಮುಖ ವಾಣಿಜ್ಯ ನಗರವಾಗಿತ್ತು. ನಂತರ ಹುಬ್ಬಳ್ಳಿ ಆದಿಲ್ ಶಾಹಿಗಳ ವಶವಾಯಿತು. ಮುಂದೆ ಬ್ರಿಟಿಷರ ಕಾಲದಲ್ಲಿ ಹುಬ್ಬಳ್ಳಿಯಲ್ಲಿ ಒಂದು ಕಾರ್ಖಾನೆ ಪ್ರಾರಂಭವಾಯಿತು.

1607 ರಲ್ಲಿ ಮೊಘಲರ ವಿರುದ್ಧ ದಂಗೆಯೆದ್ದ ಶಿವಾಜಿ ಹುಬ್ಬಳ್ಳಿಯನ್ನು ಮುತ್ತಿಗೆ ಹಾಕಿದನು ಆದಿಲ್ ಶಾಹಿಗಳನ್ನು ಸೋಲಿಸಿ ಕಾರ್ಖಾನೆಯನ್ನು ವಶಪಡಿಸಿಕೊಂಡನು. ನಂತರ ಹುಬ್ಬಳ್ಳಿ ಪುನಃ ಮೊಘಲರ ವಶವಾಯಿತು. ನಂತರ ಬಸಪ್ಪ ಶೆಟ್ಟರ್ ಎಂಬ ವ್ಯಾಪಾರಿಯಿಂದಾಗಿ ಈಗಿನ ದುರ್ಗದ ಬಯಲಿನಲ್ಲಿ ಹೊಸ ಹುಬ್ಬಳ್ಳಿ ನಗರ ನಿರ್ಮಾಣವಾಗುತ್ತದೆ. ಮೊಘಲರ, ನವಾಬರ, ಹೈದರಾಲಿಯ ಆಳ್ವಿಕೆಯ ನಂತರ ಹುಬ್ಬಳ್ಳಿ ಪೇಶ್ವೆ ಮತ್ತು ಬ್ರಿಟಿಷರ ಆಳ್ವಿಕೆಗೆ ಒಳಗಾಯಿತು. ಪೇಶ್ವೆಗಳನ್ನು ಸೋಲಿಸಿದ ಬ್ರಿಟಿಷರ ಆಳ್ವಿಕೆಗೆ ಹುಬ್ಬಳ್ಳಿ ಒಳಪಟ್ಟ ನಂತರ ರೈಲು ಮಾರ್ಗ ನಿರ್ಮಾಣ ಮಾಡಲಾಯಿತು. ಹುಬ್ಬಳ್ಳಿಯ ಸಿದ್ಧಾರೂಢ ಹಾಗೂ ಮೂರು ಸಾವಿರ ಮಠ ಪ್ರಮುಖ ಧಾರ್ಮಿಕ ಕೇಂದ್ರಗಳಾಗಿವೆ. ಮೂರು ಸಾವಿರ ಮಠಕ್ಕೆ ಸುಮಾರು 800 ವರ್ಷಗಳ ಚರಿತ್ರೆಯಿದೆ. ಅದು ಬಸವಣ್ಣನ ಕಾಲದಲ್ಲಿ ನಿರ್ಮಾಣವಾಗಿತ್ತು ಬಸವಣ್ಣ ಬಿಜ್ಜಳನ ಆಸ್ಥಾನದಿಂದ ಅವಮಾನಿತನಾಗಿ ಹೊರಟಾಗ ಅವರೊಂದಿಗೆ ಹೊರಟ ಸುಮಾರು 3,000 ಶರಣರು ಹುಬ್ಬಳ್ಳಿಗೆ ಬಂದು ಈ ಮಠವನ್ನು ಸ್ಥಾಪಿಸಿದರು.

ಒಂದು ಲಕ್ಷಕ್ಕೂ ಹೆಚ್ಚು ಸಣ್ಣ ಹಾಗೂ ಗುಡಿ ಕೈಗಾರಿಕೆಗಳಿರುವ ರಾಜ್ಯದ ಏಕೈಕ ನಗರ ಹುಬ್ಬಳ್ಳಿ. ಇಲ್ಲಿಯ ನವನಗರ ಎಂಬಲ್ಲಿ ಭಾರತ ಸರ್ಕಾರ ಸಾಫ್ಟ್ ವೇರ್ ಟೆಕ್ನಾಲಜಿ ಪಾರ್ಕ್ ಆಫ್ ಇಂಡಿಯಾ ಎಂಬ ಸುಪ್ರಸಿದ್ಧ ಟೆಕ್ ಪಾರ್ಕ್ ಅನ್ನು ಸ್ಥಾಪಿಸಿದೆ. ಹುಬ್ಬಳ್ಳಿಯಲ್ಲಿ ಹತ್ತಿಯನ್ನು ಹೆಚ್ಚಾಗಿ ಬೆಳೆಯುತ್ತಾರೆ, ಶೇಂಗಾ, ಎಣ್ಣೆಕಾಳುಗಳನ್ನು ಹೆಚ್ಚಾಗಿ ಬೆಳೆಯುತ್ತಾರೆ ಅಲ್ಲದೆ ಮ್ಯಾಂಗನೀಸ್ ಹಾಗೂ ಓರ್ಕ್ ಖನಿಜಗಳನ್ನು ತಯಾರಿಸಲಾಗುತ್ತದೆ. ಹುಬ್ಬಳ್ಳಿಯು ಪ್ರಮುಖ ಶೈಕ್ಷಣಿಕ ಕೇಂದ್ರವಾಗಿದೆ, ಇಲ್ಲಿ ಕೆಎಲ್ಇ ಟೆಕ್ನಾಲಜಿ ಯುನಿವರ್ಸಿಟಿಯನ್ನು ತೆರೆಯಲಾಗಿದೆ. ಕರ್ನಾಟಕ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ ಎಂಬ ಸಂಸ್ಥೆಯನ್ನು ಸ್ಥಾಪಿಸಲಾಗಿದೆ ಅಲ್ಲದೆ ಇಲ್ಲಿ ಕರ್ನಾಟಕ ಸ್ಟೇಟ್ ಲಾ ಯುನಿವರ್ಸಿಟಿ, ನೆಹರು ಆರ್ಟ್ಸ್ ಕಾಮರ್ಸ್ ಸೈನ್ಸ್ ಕಾಲೇಜು ಮತ್ತು ಜೆಎಸ್ಎಸ್ ಇನ್ಸ್ಟಿಟ್ಯೂಟ್ ಇತ್ಯಾದಿ ಪ್ರಮುಖ ಶಿಕ್ಷಣ ಕೇಂದ್ರಗಳಿವೆ. ಹುಬ್ಬಳ್ಳಿಯಲ್ಲಿ ವಿಮಾನ ನಿಲ್ದಾಣವಿದೆ. ಇಂದು ಹುಬ್ಬಳ್ಳಿ ಹೊಸ ಹುಬ್ಬಳ್ಳಿ, ಹಳೆ ಹುಬ್ಬಳ್ಳಿ, ಗ್ರಾಮಾಂತರ ಹುಬ್ಬಳ್ಳಿ ಎಂಬ ವಿಭಜನೆಗೊಳಪಟ್ಟಿದೆ. ಹುಬ್ಬಳ್ಳಿ ನಗರ ಪ್ರಮುಖ ಹತ್ತಿ ಹಾಗೂ ಕಬ್ಬಿಣದ ವ್ಯಾಪಾರ ಕೇಂದ್ರವಾಗಿದ್ದು ದೇಶದ ಹಲವು ನಗರಗಳ ಜೊತೆ ವ್ಯಾಪಾರ ವಹಿವಾಟನ್ನು ಹೊಂದಿದೆ. ಇಲ್ಲಿಯ ಹತ್ತಿ ಮಾರುಕಟ್ಟೆ ದೇಶದ ಅತಿದೊಡ್ಡ ಹತ್ತಿ ಮಾರುಕಟ್ಟೆಯಾಗಿದೆ.

ಕರ್ನಾಟಕದಲ್ಲಿ ಮಾತ್ರವಲ್ಲದೇ ಭಾರತದಲ್ಲಿ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ನಗರ ಹುಬ್ಬಳ್ಳಿಯಾಗಿದೆ. ಹುಬ್ಬಳ್ಳಿ ಹಾಗೂ ಧಾರವಾಡದಲ್ಲಿ ಸುಮಾರು ಹನ್ನೊಂದು ಲಕ್ಷಕ್ಕಿಂತ ಹೆಚ್ಚು ಜನರು ವಾಸವಾಗಿದ್ದಾರೆ. ಹುಬ್ಬಳ್ಳಿಯು ಕೈಮಗ್ಗ ಘಟಕ ಹಾಗೂ ಉನ್ನತ ಗುಣಮಟ್ಟದ ಜವಳಿಗೆ ಪ್ರಸಿದ್ಧಿ ಪಡೆದಿದೆ. ಭಾರತದ ರಾಷ್ಟ್ರ ಧ್ವಜವನ್ನು ತಯಾರಿಸುವ ಏಕೈಕ ನಗರ ಹುಬ್ಬಳ್ಳಿ. ಹುಬ್ಬಳ್ಳಿಯ ಬೆಂಗೇರಿ ಎಂಬ ಹಳ್ಳಿಯಲ್ಲಿ ಕರ್ನಾಟಕ ಖಾದಿ ಗ್ರಾಮೋದ್ಯೋಗ ಸಂಯುಕ್ತ ಸಂಘದ ಮೂಲಕ ದೇಶಕ್ಕೆ ಬಾವುಟವನ್ನು ನೇಯ್ದು ರವಾನಿಸುವ ಅಧಿಕೃತ ಪರವಾನಿಗೆಯನ್ನು ಹೊಂದಿರುವ ಏಕೈಕ ಊರಾಗಿದೆ. ಹುಬ್ಬಳ್ಳಿಯ ಅಮರಗೋಳ ಎಂಬಲ್ಲಿನ ಸರಕಾರಿ ಕೃಷಿ ಮಾರುಕಟ್ಟೆ ಏಷ್ಯಾದ ದೊಡ್ಡ ಎಪಿಎಂಸಿ ಎಂದು ಹೆಸರಾಗಿದೆ. ಧಾರವಾಡ ನಗರವನ್ನು ಕನ್ನಡ ಸಾಹಿತ್ಯದ ತವರುಮನೆ ಎಂದು ಕರೆಯಲಾಗುತ್ತದೆ. ನಾಡಕವಿ ದಾರಾ ಬೇಂದ್ರೆ ಧಾರವಾಡದವರು. ಹಿಂದೂಸ್ತಾನಿ ಸಂಗೀತಕ್ಕೆ ಹೆಸರಾದ ಭೀಮಸೇನ ಜೋಶಿ, ಗಂಗೂಬಾಯಿ ಹಾನಗಲ್ ಅವರ ಹುಟ್ಟೂರು ಕೂಡ ಹುಬ್ಬಳ್ಳಿ-ಧಾರವಾಡ ಅಲ್ಲದೆ ವಿಜಯ ಸಂಕೇಶ್ವರ, ಸುಧಾಮೂರ್ತಿ, ಗುರುರಾಜ ದೇಶಪಾಂಡೆ, ಪ್ರಹ್ಲಾದ್ ಜೋಶಿ ಮೊದಲಾದ ಗಣ್ಯರು ಹುಬ್ಬಳ್ಳಿ-ಧಾರವಾಡದವರಾಗಿದ್ದಾರೆ.

ಹುಬ್ಬಳ್ಳಿಯ ಖಡಕ್ ಆಹಾರ ರಾಜ್ಯದಲ್ಲಿ ಅಗ್ರಸ್ಥಾನ ಪಡೆದಿದೆ. 2017ರಲ್ಲಿ ವಿಶ್ವಬ್ಯಾಂಕಿನ ಗ್ರೀನ್ ಸಿಟಿ ಆಯ್ಕೆಯಲ್ಲಿ ಆಯ್ಕೆಯಾದ ದೇಶದ ಮೂರು ನಗರಗಳಲ್ಲಿ ಹುಬ್ಬಳ್ಳಿ ನಗರವು ಒಂದಾಗಿದ್ದು ಹೆಮ್ಮೆಯ ಸಂಗತಿ. ಕೇಂದ್ರ ಸರ್ಕಾರದ ಮಹತ್ವಕಾಂಕ್ಷಿ ಯೋಜನೆಗಳಾದ ಸ್ಮಾರ್ಟ್ ಸಿಟಿ ಹಾಗೂ ಸೋಲಾರ್ ಸಿಟಿ ಯೋಜನೆಗೆ ಆಯ್ಕೆಯಾದ ಭಾರತದ ಕೆಲವೇ ನಗರಗಳಲ್ಲಿ ಹುಬ್ಬಳ್ಳಿ ಕೂಡಾ ಒಂದು. ಹುಬ್ಬಳ್ಳಿಯ ಕೋರ್ಟ್ ಕಾಂಪ್ಲೆಕ್ಸ್ ದೇಶ ಮಾತ್ರವಲ್ಲದೆ ಏಷ್ಯಾದಲ್ಲಿಯೇ ಅತ್ಯಂತ ದೊಡ್ಡ ಮಟ್ಟದ ತಾಲ್ಲೂಕ್ ಮಟ್ಟದ ಕೋರ್ಟ್ ಕಟ್ಟಡ ಎಂದು ಕರೆಸಿಕೊಂಡಿದೆ, ಇಲ್ಲಿನ ವಿದ್ಯಾನಗರದಲ್ಲಿ ಐದು ಎಕರೆ ಜಾಗದಲ್ಲಿ ಕಟ್ಟಲಾಗಿರುವ ಕೋರ್ಟ್ ಕಾಂಪ್ಲೆಕ್ಸ್ 122 ಕೋಟಿ ರೂಪಾಯಿಗಳಲ್ಲಿ ನಿರ್ಮಾಣಗೊಂಡಿದೆ. ಕ್ವಿಟ್ ಇಂಡಿಯಾ ಚಳುವಳಿ, ಸಿಪಾಯಿದಂಗೆಯ ಪ್ರಮುಖ ಸ್ವಾತಂತ್ರ್ಯ ಸಂಗ್ರಾಮಗಳಿಗೆ ಅನೇಕ ವೀರ ಹೋರಾಟಗಾರರನ್ನು ಈ ನಗರ ಕೊಟ್ಟಿದೆ. ಹುಬ್ಬಳ್ಳಿಯ ನೃಪತಂಗ ಬೆಟ್ಟ, ಉಣಕಲ್ ಕೆರೆ, ಇಂದಿರಾ ಗಾಜಿನ ಮನೆ, ಶಿರಡಿ ಸಾಯಿ ಮಂದಿರ, ಸಂಜೀವಿನಿ ಗಾರ್ಡನ್ ಮುಂತಾದ ಸ್ಥಳಗಳು ಪ್ರಸಿದ್ಧಿಯಾಗಿದೆ. ಹುಬ್ಬಳ್ಳಿಯು ಸಾವಿರಾರು ವರ್ಷಗಳಿಂದ ರಾಜ್ಯದ ಹೆಮ್ಮೆಯ ದ್ಯೋತಕವಾಗಿ ನಾಡಿನ ವೀರ ಪರಂಪರೆಯ ಬಿಂಬಕವಾಗಿ ಗುರುತಿಸಿಕೊಂಡಿದೆ. ಹುಬ್ಬಳ್ಳಿಗೆ ಭೇಟಿ ನೀಡದೆ ಇರುವವರು ಒಮ್ಮೆ ಹುಬ್ಬಳ್ಳಿಯನ್ನು ಭೇಟಿಮಾಡಿ ವೀರಪರಂಪರೆಯ ಬಗ್ಗೆ ತಿಳಿದುಕೊಳ್ಳಿ.

Leave A Reply

Your email address will not be published.