ಶಿವಲಿಂಗದ ಮೇಲೆ ತುಪ್ಪವನ್ನ ಹಾಕಿದರೆ ಅದು ಬೆಣ್ಣೆ ಆಗಿ ಪರಿವರ್ತನೆಯಾಗುವ ಶಿವಗಂಗೆ ಪವಾಡವನ್ನೊಮ್ಮೆ ಓದಿ..

0 13

ಉತ್ತರದಲ್ಲಿ ಸರ್ಪ, ದಕ್ಷಿಣದಲ್ಲಿ ಗಣೇಶ, ಪೂರ್ವದಲ್ಲಿ ನಂದಿ ಆದರೆ, ಪಶ್ಚಿಮದಲ್ಲಿ ಶಿವಲಿಂಗ ಇರುವ ಈ ಸ್ಥಳ ದಕ್ಷಿಣದ ಕಾಶಿ ಎಂದೇ ಪ್ರಖ್ಯಾತಿ ಹೊಂದಿದೆ. ಅದುವೇ ಶಿವಗಂಗೆ ಬೆಟ್ಟ. ಶಿವನ ಧ್ಯಾನ ಮಾಡಬೇಕು. ಗಂಗಾ ಮಾತೆಯ ಪಾದವನ್ನ ಸ್ಪರ್ಶ ಮಾಡಬೇಕು, ಒಂದಿಷ್ಟು ಟ್ರೆಕಿಂಗ್, ಹದ್ದಿನ ಕಣ್ಣಿನಂತೆ ಆಕಾಶದಿಂದ ಭೂಮಿಯನ್ನು ವೀಕ್ಷಿಸಬೇಕು ಅಂತ ಅನ್ನಿಸಿದ್ರೆ ಖಂಡಿತವಾಗಿಯೂ ಶಿವಗಂಗೆ ಬೆಟ್ಟಕ್ಕೆ ಭೇಟಿ ನೀಡಲೇ ಬೇಕು. ಶಿವ ಗಂಗೆ ಬೆಟ್ಟದ ಕುರಿತಾದ ಪುಟ್ಟ ಮಾಹಿತಿ ಈ ಲೇಖನದಲ್ಲಿ.

ಶಿವಗಂಗೆ ಕ್ಷೇತ್ರವನ್ನು ದಕ್ಷಿಣ ಕಾಶಿ ಅಂತಲೂ ಕರೆಯುತ್ತಾರೆ. ಒಂದೊಂದು ದಿಕ್ಕಿನಿಂದಲೂ ಒಂದೊಂದು ಆಕಾರದಲ್ಲಿ ಕಾಣಸಿಗತ್ತೇ ಈ ಶಿವಗಂಗೆ ಬೆಟ್ಟ. ಉತ್ತರ ದಿಕ್ಕಿನಿಂದ ನೋಡಿದರೆ ಈ ಶಿವಗಂಗೆ ಬೆಟ್ಟ ಸರ್ಪದಂತೆ ಕಾಣುತ್ತದೆ. ದಕ್ಷಿಣ ದಿಕ್ಕಿನಿಂದ ನೋಡಿದರೆ ಗಣೇಶನಂತೆ ಕಾಣುತ್ತದೆ. ಪೂರ್ವದಿಂದ ನೋಡಿದರೆ ನಂದಿಯಂತೆಯೂ ಹಾಗೂ ಪಶ್ಚಿಮ ದಿಕ್ಕಿನಿಂದ ನೋಡಿದರೆ ಶಿವಲಿಂಗದಂತೆಯೂ ಕಾಣುತ್ತದೆ. ಇದೆ ಈ ಕ್ಷೇತ್ರದ ಮಹತ್ವ ಆಗಿದೆ ಎನ್ನಬಹುದು. ಶಿವಗಂಗೆ ಕ್ಷೇತ್ರಕ್ಕೆ ಹೊಗೋದು ಹೇಗೆ ಎಷ್ಟು ದೂರದಲ್ಲಿದೆ ಅನ್ನೋದನ್ನ ನೋಡುವುದಾದರೆ…

ಇದು ರಾಜ್ಯದ ರಾಜಧಾನಿ ಬೆಂಗಳೂರಿನಿಂದ ಕೇವಲ ೫೪ km ದೂರದಲ್ಲಿ ಇದೆ. ತುಮಕೂರಿನಿಂದ ೨೮ km ಹಾಗೂ ಹಾಸನದಿಂದ ೧೪೭ km ಹಾಗೂ ಮೈಸೂರಿನಿಂದ ೧೫೭ km ದೂರದಲ್ಲಿದೆ. ಬೆಂಗಳೂರು ಪುಣೆ ಹೆದ್ದಾರಿಯಲ್ಲಿ ಧಾಭಾಸ್ ಪೇಟೆ ಅಂತ ಸಿಗತ್ತೆ ಇದು ಒಂದು ರೀತಿಯ ಜಂಕ್ಷನ್ ಇದ್ದ ಹಾಗೆ. ಈ ರಾಷ್ಟ್ರೀಯ ಹೆದ್ದಾರಿ ಇಂದಲೇ ಶಿವಗಂಗೆ ಬೆಟ್ಟ ಕಾಣಸಿಗುತ್ತದೆ. ಧಾಭಾಸ್ ಪೇಟೆ ಇಂದ ೧೨ km ಒಳಗೆ ಹೋದರೆ ಶಿವಗಂಗೆ ಬೆಟ್ಟ ಪ್ರತ್ಯಕ್ಷ. ನೀವು ಯಾವ ದಿಕ್ಕಿನಿಂದ ಹೋಗುತ್ತೀರೋ ಆ ಆ ದಿಕ್ಕಿನಿಂದ ಶಿವ ಗಂಗೆ ಬೆಟ್ಟ ವಿಶೇಷವಾಗಿ ಕಾಣುತ್ತದೆ. ಅಲ್ಲಿ ನಿಮ್ಮ ವಾಹನಗಳನ್ನು ನಿಲ್ಲಿಸಿ ಅಲ್ಲೇ ಸಿಗುವ ಅಂಗಡಿಗಳಲ್ಲಿ ಹಣ್ಣು ಕಾಯಿ ಹೂವುಗಳನ್ನು ಕೊಂಡುಕೊಂಡು ಅಲ್ಲೇ ಇರುವ ಕಲ್ಯಾಣಿಯ ದರ್ಶನ ಪಡೆದು ಅಲ್ಲಿಂದ ಮುಂದೆ ಬೆಟ್ಟ ಹತ್ತಲು ಆರಂಭಿಸಬೇಕು.

ಬೆಟ್ಟ ಹತ್ತಲು ಆರಂಭಿಸುವ ಮೊದಲೇ ಶಿವನ ಬೃಹತ್ ಒಂದು ವಿಗ್ರಹ ಕಾಣಿಸುತ್ತೆ. ಬೆಟ್ಟ ಹತ್ತುವಾಗ ಅಲ್ಲಿ ವಾನರರ ಸೈನ್ಯ ಇರುವುದರಿಂದ ನಿಮ್ಮ ಕೈಯಲ್ಲಿ ಇರುವ ವಸ್ತುಗಳ ಬಗ್ಗೆ ಸ್ವಲ್ಪ ಕಾಳಜಿ ವಹಿಸುವುದು ಉತ್ತಮ. ಬೆಟ್ಟ ಹತ್ತುವಾಗ ಮೊದಲು ಸಿಗುವುದೇ ಗಂಗಾಧರೆಶ್ವೇರ ಗುಡಿ. ಅಲ್ಲಿಯೇ ಗಣೇಶನ ಗುಡಿಯೂ ಕೂಡಾ ಇದೆ. ಗಂಗಾಧರೆಶ್ವರ ದೇವಾಲಯ ಬೆಟ್ಟದ ಆರಂಭದಲ್ಲಿ ಇದ್ದು ಇಲ್ಲಿ ಉದ್ಭವ ಶಿವಲಿಂಗ ಇದೆ. ಇಲ್ಲಿ ಒಂದು ಅದ್ಭುತ ನಡೆಯುತ್ತೆ. ಏನು ಅಂದರೆ, ನಾವೆಲ್ಲಾ ಬೆಣ್ಣೆಯಿಂದ ತುಪ್ಪ ಆಗುವುದನ್ನು ನೋಡಿದ್ದೇವೆ ಆದರೆ ಇಲ್ಲಿನ ಶಿವಲಿಂಗದ ಮೇಲೆ ತುಪ್ಪವನ್ನ ಹಾಕಿದರೆ ಅದು ಬೆಣ್ಣೆ ಆಗಿ ಪರಿವರ್ತನೆ ಆಗುತ್ತದೆ. ಹಾಗಾಗಿ ಅಭಿಶೇಖದ ಸಮಯದಲ್ಲಿ ಭಕ್ತರು ಈ ಪವಾಡವನ್ನು ನೋಡಲು ಬಯಸುತ್ತಾರೆ. ಶಿವ ಗಂಗೆಗೆ ಭೇಟಿ ನೀಡಿದರೆ ಎಲ್ಲರೂ ನೋಡಲೇಬೆಕಾದ ಒಂದು ಅದ್ಭುತ ಇದು. ಇಲ್ಲಿ ಶಿವಲಿಂಗದಿಂದ ಆದ ಬೆಣ್ಣೆಗೆ ಔಷಧೀಯ ಗುಣವೂ ಸಹ ಇದೆ ಅನೇಕ ಕಾಯಿಲೆಗಳನ್ನು ಗುಣಪಡಿಸುತ್ತದೆ ಎಂದು ಭಕ್ತರ ನಂಬಿಕೆ. ಇಲ್ಲಿ ಒಂದು ಸುರಂಗ ಕೂಡ ಇದ್ದು ಈಗಲೂ ಕೂಡ ಇದು ನೀಡಲು ಸಿಗುತ್ತದೆ. ಈ ಸುರಂಗದಲ್ಲಿ ಮುಂದೆ ಹೋದರೆ, ಇದು ಬೆಂಗಳೂರಿನಲ್ಲಿ ಇರುವ ಗವಿ ಗಂಗಾಧರೇಶ್ವರ ದೇವಾಲಯಕ್ಕೆ ಬಂದು ತಲುಪುತ್ತದೆಯಂತೆ. ಆದರೆ ಈಗ ಉಸಿರಾಡಲು ಸಮಸ್ಯೆ ಆಗುವುದರಿಂದ ಹಾಗೂ ಸುರಂಗದ ಮಧ್ಯದಲ್ಲಿ ಹಾವುಗಳು ಇರುವುದರಿಂದ ಈ ಸುರಂಗದ ಒಳಗೆ ಹೋಗುವುದು ಅಸಾಧ್ಯ.

ಅಲ್ಲಿಂದ ಹಾಗೆ ಮುಂದುವರೆದು ಹೋದರೆ ಕಡಿದಾದ ಕಲ್ಲುಬಂಡೇ ಸಿಗತ್ತೆ. ಅಲ್ಲಿ ಸಾಲು ಸಾಲು ಮೆಟ್ಟಿಲುಗಳು ಇವೆ ಪಕ್ಕದಲ್ಲಿ ಹಿಡಿದುಕೊಳ್ಳಲು ಕಬ್ಬಿಣದ ಸರಳುಗಳನ್ನು ಈಗ ಮಾಡಿದ್ದಾರೆ. ಹಾಗೆ ಮೇಲೇ ಹತ್ತಿ ಹೋದರೆ ದಣಿವಾರಿಸಿಕೊಳ್ಳಲು ಹಲವಾರು ಸಣ್ಣ ಪುಟ್ಟ ಅಂಗಡಿಗಳು ಸಿಗುತ್ತವೆ. ಸ್ವಲ್ಪ ದಣಿವಾರಿಸಿಕೊಂಡು ಹಾಗೇ ಮುಂದುವರೆದರೆ ಅಲ್ಲಿ ಒಳಕಲ್ಲು ತೀರ್ಥ ಎಂಬ ಸ್ಥಳ ಇದೆ. ಇಲ್ಲಿರುವ ಒಳಕಲ್ಲಿನಲ್ಲಿ ವರ್ಷದ 365 ದಿನವೂ ನೀರು ಇರತ್ತೆ. ಆದರೆ, ಇಲ್ಲಿ ನೀವು ಅಂದುಕೊಂಡಿದ್ದು ಆಗತ್ತೋ ಇಲ್ಲವೋ ಎಂಬ ಪರೀಕ್ಷೆಯನ್ನು ಮಾಡಬಹುದು. ನೀವು ಏನಾದರೂ ಅಂದುಕೊಂಡು ಅದು ಆಗಬೇಕೋ ಇಲ್ಲವೋ ಎಂಬುದನ್ನು ನೋಡಲು ಈ ಒಳಕಲ್ಲಿನ ಒಳಗೆ ಕೈ ಹಾಕಿದರೆ ನೀವು ಅಂದುಕೊಂಡಿದ್ದು ಸಿಗುವುದಾದರೆ ನಿಮ್ಮ ಕೈ ಗೆ ನೀರು ಸಿಗುತ್ತದೆ ಕೆಲಸ ಆಗೋದಿಲ್ಲ ಅಂತ ಇದ್ರೆ ಕೈ ಗೆ ನೀರು ಸಿಗುವುದಿಲ್ಲ. ಇದು ಇಲ್ಲಿನ ಒಂದು ವಿಶೇಷವಾದ ನಂಬಿಕೆ ಆಗಿದೆ. ತುಂಬಾ ಜನರ ಅನುಭವದ ಪ್ರಕಾರ ಇದು ನಿಜ. ಎಲ್ಲವೂ ಅವರವರ ನಂಬಿಕೆಗೆ ಬಿಟ್ಟಿದ್ದು.

ಅಲ್ಲಿಂದ ಹಾಗೇ ಮುಂದುವರೆದರೆ ಒಂದು ಶಿವ ಪಾರ್ವತಿಯರ ಮಂದಿರ ಇದೆ. ಅಲ್ಲಿ ದ್ವಾದಶ ಜ್ಯೋತಿರ್ಲಿಂಗಗಳೂ ಇವೆ. ಕಡಿದಾದ ಬೆಟ್ಟವನ್ನು ಏರಿದ ಮೇಲೆ ಸ್ವಲ್ಪ ದಣಿವಾರಿಸಿಕೊಳ್ಳಲು ಅವಕಾಶ ಇದೆ. ಇಲ್ಲಿಯೂ ಕೂಡ ತಿನ್ನಲು ಕುಡಿಯಲು ತಂಪಾದ ಪಾನೀಯಗಳು ತಿನಿಸುಗಳು ಸಿಗುತ್ತವೆ. ಸ್ವಲ್ಪ ದಣಿವಾರಿಸಿಕೊಂಡು ಮತ್ತೆ ಬೆಟ್ಟ ಏರುತ್ತಾ ಹೋದಂತೆ ಒಂದು ಬಂಡೆಯ ಮೇಲೆ ಎತ್ತರದಲ್ಲಿ ನಂದಿಯ ವಿಗ್ರಹ ಕಾಣಸಿಗುತ್ತದೆ. ಈ ನಂದಿ ವಿಗ್ರಹದ ಪ್ರದಕ್ಷಿಣೆ ಹಾಕುವುದೇ ಒಂದು ಸಾಹಸದ ಕೆಲಸ. ಯಾಕಂದ್ರೆ ಇಲ್ಲಿ ಒಂದು ಕಾಲು ಇಡಲೂ ಸಹ ಜಾಗ ಚಿಕ್ಕದು. ಇನ್ನೊಂದು ಕಡೆ ಆಳವಾದ ಪ್ರಪಾತ. ಇಷ್ಟೊಂದು ಸಾಹಸ ಮಾಡಿದಮೇಲೆ ಬೆಟ್ಟದ ತುತ್ತ ತುದಿಗೆ ತಲುಪಲು ಕೇವಲ ಕೆಲವೇ ಕೆಲವು ಹೆಜ್ಜೆಗಳು ಇರತ್ತೆ. ಕೊನೆಗೂ ದೇಹ ದಂಡಿಸಿ ಹೇಗೋ ಬೆಟ್ಟದ ತುದಿಯನ್ನು ತಲುಪಿದ ಮೇಲೆ ಎಲ್ಲಾ ದಣಿವು ಮರೆತೇ ಹೋಗತ್ತೆ. ಇದಕ್ಕೆ ಕಾರಣ ಏನು ಅಂದ್ರೆ ಬೆಟ್ಟದ ಮೇಲಿಂದ ಕಾಣುವ ಮನೋಹರ ದೃಶ್ಯ.

ಬೆಟ್ಟದ ತುದಿಯಲ್ಲಿನ ಆಕರ್ಷಣೆ ಎಂದರೆ ಬೆಟ್ಟದ ತುದಿಯಲ್ಲಿ ಕಟ್ಟಿರುವ ಗಂಟೆಗಳು. ಅದನ್ನ ನೋಡಿದರೆ ಯಾರು ಇಲ್ಲಿ ಬಂದು ಗಂಟೆ ಕಟ್ಟಿರುವುದು ಎಂಬ ಪ್ರಶ್ನೆ ಮೂಡದೇ ಇರಲ್ಲ. ಬೆಟ್ಟದ ಮೇಲೆ ನೋಡಲೇಬೇಕಾದ ಇನ್ನೊಂದು ಮುಖ್ಯ ಜಾಗ ನಾಟ್ಯ ರಾಣಿ ಶಾಂತಲೆಯು ಮೇಲಿಂದ ಕೆಳಗೆ ಬಿದ್ದ ಜಾಗ. ಹಿಂದೆ ಈ ಸ್ಥಳವು ಹೊಯ್ಸಳ ರಾಜರ ವರ್ಷದಲ್ಲಿ ಇತ್ತು. ರಾಜ ವಿಷ್ಣುವರ್ಧನನ ಪತ್ನಿ ರಾಣಿ ಶಾಂತಲಾ ಮಗನಿಗೆ ಜನ್ಮ ನೀಡಲಿಲ್ಲ ಎಂಬ ಖಿನ್ನತೆಯಿಂದ ಇಲ್ಲಿ ಕೆಳಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಳು ಎಂದು ಹೇಳುತ್ತಾರೆ. ಹಾಗಾಗಿ ಶಾಂತಲಾ ಬಿದ್ದ ಈ ಸ್ಥಳವನ್ನು ಶಾಂತಲಾ ಡ್ರಾಪ್ ಎಂದೇ ಕರೆಯುತ್ತಾರೆ. ಈ ಜಾಗ ಅಷ್ಟೇ ಭಯಾನಕ ಹಾಗೂ ಅದ್ಭುತವೂ ಆಗಿದೆ. ಈಗ ಈ ಜಾಗಕ್ಕೆ ಕಂಬಿಗಳನ್ನು ಹಾಕಿದ್ದಾರೆ ಆದರೂ ಸ್ವಲ್ಪ ಎಚ್ಚರ ವಹಿಸುವುದು ಒಳ್ಳೆಯದು.

ಪಾತಾಳ ಗಂಗೆ ಇಲ್ಲಿ ಶಂಕರಾಚಾರ್ಯರ ಒಂದು ಶಾಖಾ ಮಠ ಇದೆ. ಇಲ್ಲಿ ಒಂದು ಪಾತಾಳ ಗಂಗೆ ಇದ್ದು ಸದಾ ನೀರಿನಿಂದ ತುಂಬಿ ಇರುತ್ತದೆ. ಇನ್ನು ಬೆಟ್ಟದಿಂದ ಕೆಳಗೆ ಇಳಿಯುವಾಗ ಇನ್ನೊಂದು ವಿಶೇಷ ದೇವಸ್ಥಾನದ ದರ್ಶನ ಪಡೆಯಬಹುದು. ಶ್ರೀ ಹೊನ್ನಾದೇವಿ ದೇವಸ್ಥಾನ. ಇಲ್ಲೂ ಕೂಡಾ ಗಂಗಾಧರೇಶ್ವರ ದೇವಾಲಯ ಇದೆ. ಇಲ್ಲಿ ಪ್ರತೀ ವರ್ಷ ಜನವರಿಯಲ್ಲಿ ಸಂಕ್ರಾಂತಿ ಸಮಯದಲ್ಲಿ ಎರಡೂ ದೇವರಿಗೆ ವಿವಾಹ ಮಹೋತ್ಸವವನ್ನು ಮಾಡಲಾಗುತ್ತದೆ. ಇಷ್ಟೆಲ್ಲಾ ನೋಡಿದ ಮೇಲೆ ಎಲ್ಲರೂ ಒಮ್ಮೆ ಶಿವ ಗಂಗೆಯ ದರ್ಶನವನ್ನು ಪಡೆಯಲೇಬೇಕು.

Leave A Reply

Your email address will not be published.