ಸೌಂದರ್ಯ ರಾಶಿ ಹೊಂದಿರುವ ಪ್ರವಾಸಿ ತಾಣ, ಕರ್ನಾಟಕದ ಊಟಿ ಗೇಸ್ ಮಾಡಿ ಯಾವುದು ಈ ಸ್ಥಳ

0 56

ಮಳೆಯಲ್ಲಿ ಮಿಂದು, ಹಸಿರನ್ನು ಹೊದ್ದು ಪ್ರಕೃತಿ ನವ ವಧುವಿನಂತೆ ಕಂಗೊಳಿಸುತ್ತಿದ್ದಾಳೆ. ಬಿಟ್ಟು ಬಿಡದೆ ಸುರಿಯುವ ಮುಂಗಾರು ಮಳೆಗೆ ಧುಮ್ಮಿಕ್ಕುವ ಜಲಪಾತಗಳು. ನಿತ್ಯ ಹರಿದ್ವರ್ಣ ಕಾಡುಗಳ ಹಸಿರಿನ ಕಣ್ಣಿಗೆ ತಂಪೆರೆಯುವ ದೃಶ್ಯಗಳು. ಇವೆಲ್ಲವೂ ಕರ್ನಾಟಕದ ಊಟಿ ಸಕಲೇಶಪುರದಲ್ಲಿ ಕಂಡು ಬರುತ್ತದೆ. ಪ್ರವಾಸಿಗರನ್ನೂ, ಪ್ರಕೃತಿ ಪ್ರೀತಿಯರನ್ನು ತನ್ನತ್ತ ಸೆಳೆಯುತ್ತದೆ. ಸಕಲೇಶಪುರದ ಪ್ರವಾಸಿ ತಾಣದ ಬಗ್ಗೆ ನಾವೂ ಇಲ್ಲಿ ತಿಳಿಯೋಣ.

ಸಕಲೇಶಪುರ ಎನ್ನುವ ಸೌಂದರ್ಯ ರಾಶಿ ಹೊಂದಿರುವ ಪ್ರವಾಸಿ ತಾಣ ರಾಜಧಾನಿ ಬೆಂಗಳೂರಿನಿಂದ 250 ಕಿಲೊಮೀಟರ್ ದೂರದಲ್ಲಿ ಇದೆ. ಆದರೆ ಬಂದರು ರಾಜಧಾನಿ ಎಂದು ಕರೆಯಲ್ಪಡುವ ಮಂಗಳೂರಿನಿಂದ 130 ಕಿಲೊಮೀಟರ್ ದೂರದಲ್ಲಿದೆ. ಸಕಲೇಶಪುರದ ಸುಂದರ ಏಳು ಪ್ರವಾಸಿ ತಾಣಗಳ ಪರಿಚಯ ಇಲ್ಲಿದೆ. ಮೊದಲನೆಯದಾಗಿ ಸಕಲೇಶಪುರದಿಂದ 40 ಕಿಲೊಮೀಟರ್ ದೂರದಲ್ಲಿ ಜೇನುಕಲ್ಲು ಇದೆ. ಈ ಜೇನುಕಲ್ಲಿಂದ 8 ಕಿಲೋಮೀಟರ್ ದೂರದಲ್ಲಿ ಬೆಟ್ಟ ಭೈರವೇಶ್ವರ ದೇವಾಲಯ ಕೂಡ ಇದೆ. ಜೇನುಕಲ್ಲು ಕರ್ನಾಟಕದ ಅತ್ಯಂತ ದೊಡ್ಡ ಶಿಖರಗಳಲ್ಲಿ ಎರಡನೆಯ ಸ್ಥಾನ ಪಡೆದಿದೆ. ಹಾಗೂ ಜೇನುಕಲ್ಲು ಸಕಲೇಶಪುರದ ಚಾರಣ ಅಂದರೆ ಟ್ರೆಕ್ಕಿಂಗ್ ಸ್ಥಳಗಳಲ್ಲಿ ಒಂದು. ಜೇನುಕಲ್ಲು ಶಿಖರವನ್ನು ಬೆಟ್ಟ ಭೈರವೇಶ್ವರ ದೇವಾಲಯದಿಂದ ತಲುಪಲು ಸಾಧ್ಯವಿದೆ. ಶಿಖರ ತಲುಪಲು ಚಾರಣ ಮಾಡಿದರೆ 4-5 ಗಂಟೆ ಬೇಕಾಗುತ್ತದೆ. ಜೇನುಕಲ್ಲಿನ ಪಕ್ಕದಲ್ಲಿರುವ ಬೆಟ್ಟಕ್ಕೆ ದಿಗ್ಗಾಲು ಅಥವಾ ದೀಪದ ಕಲ್ಲು ಎಂಬ ಹೆಸರು ಇದೆ. ಮಂಜಿನ ಕಾರಣದಿಂದ ಮಳೆಗಾಲದಲ್ಲಿ ರಸ್ತೆಗಳು ಸರಿಯಾಗಿ ಕಾಣಿಸುವುದಿಲ್ಲ. ಮಳೆಗಾಲದಲ್ಲಿ ಚಾರಣ ಅಪಾಯಕಾರಿ ಆಗಬಹುದು. ಸಪ್ಟೆಂಬರ್ ನಿಂದ ಫೆಬ್ರವರಿ ಜೇನುಕಲ್ಲಿನಲ್ಲಿ ಚಾರಣ ಮಾಡುವವರಿಗೆ ಉತ್ತಮ ಸಮಯ. ಎರಡನೆಯದಾಗಿ ಮೂಕನಮನೆ ಅಬ್ಬಿ ಫಾಲ್ಸ್. ಅಬ್ಬಿ ಫಾಲ್ಸ್ ಸಕಲೇಶಪುರದಿಂದ 38 ಕಿಲೊಮೀಟರ್ ದೂರದಲ್ಲಿ ಹೆತ್ತೂರಿನ ಬಳಿಯಿದೆ. ಪುಟ್ಟ ಜಲಪಾತ ಅಬ್ಬಿ ಫಾಲ್ಸ್ ಪಿಕ್ ನಿಕ್ ಗೆ ಒಂದು ಒಳ್ಳೆಯ ತಾಣ. ಈ ಪುಟ್ಟ ಜಲಪಾತ 20 ಅಡಿ ಎತ್ತರವಿದೆ. ಬಿರು ಬೇಸಿಗೆಯಲ್ಲೂ ತಣ್ಣನೆಯ ನೀರು ಸಿಗುತ್ತದೆ. ಈ ಜಲಪಾತ ನೋಡಬೇಕಾದರೆ ಜಲಪಾತ ಹರಿಯುವ ಪಕ್ಕದಿಂದಲೆ ಇಳಿಯಬೇಕು. ಇಳಿಯಬೇಕಾದರೆ ಎಚ್ಚರಿಕೆ ವಹಿಸಬೇಕು ಏಕೆಂದರೆ ಹರಿಯುವ ನೀರಿನ ಜೊತೆ ಪಾಚಿಕಟ್ಟಿದ ಪ್ರದೇಶಗಳು ಜಾರುವಂತೆ ಮಾಡುತ್ತದೆ.

ಮೂರನೆಯದಾಗಿ ಮಂಜರಾಬಾದ್ ಕೋಟೆ ಒಂದು ಪ್ರೇಕ್ಷಣಿಯ ತಾಣ. ನಕ್ಷತ್ರ ಆಕಾರದಲ್ಲಿ ಇರುವ ಈ ಕೋಟೆಯನ್ನು ಟಿಪ್ಪು ಸುಲ್ತಾನ್ ನಿರ್ಮಿಸಿದನು. ಮಂಜರಾಬಾದ್ ಕೋಟೆ ಸಕಲೇಶಪುರದಿಂದ 10 ಕಿಲೊಮೀಟರ್ ದೂರದಲ್ಲಿದೆ. ಈ ಕೋಟೆಯು ಹೇಮಾವತಿ ನದಿಯ ಬಲದಡದಲ್ಲಿ ನಿರ್ಮಾಣವಾಗಿದೆ. ಬೆಂಗಳೂರಿನಿಂದ ಮಂಗಳೂರಿಗೆ ಹೋಗುವ ರಾಷ್ಟ್ರೀಯ ಹೆದ್ದಾರಿ 48 ರಲ್ಲಿ ಮಂಜರಾಬಾದ್ ಕೋಟೆ ಸಿಗುತ್ತದೆ. 988 ಮೀಟರ್ ಎತ್ತರದ ಬೆಟ್ಟದ ಮೇಲೆ ಮಂಜರಾಬಾದ್ ಕೋಟೆ ಇದೆ. ಈ ಕೋಟೆಯ ಮೇಲಿಂದ ಕೆಳಗಿನ ನೋಟ ಅತ್ಯಂತ ಸುಂದರವಾಗಿ ಕಾಣುತ್ತದೆ. ಈ ಕೋಟೆಯಿಂದ ಅರಬ್ಬೀ ಸಮುದ್ರವನ್ನು ನೋಡಬಹುದು. ಮಂಜು ಮುಸುಕಿರದೆ ಇದ್ದಲ್ಲಿ ಈ ನೋಟ ಕಾಣ ಸಿಗುತ್ತದೆ. 1785-92 ರ ನಡುವೆ ಟಿಪ್ಪು ಸುಲ್ತಾನ್ ಈ ಕೋಟೆ ಕಟ್ಟಿಸಿದನು. ಈ ಕೋಟೆಯನ್ನು ನಾಲ್ಕನೆಯ ಆಂಗ್ಲೋ ಮೈಸೂರು ಯುದ್ಧದಲ್ಲಿ ಬಳಸಲಾಗಿತ್ತು. ಈ ಕೋಟೆ ಕೊಳ, ಊಟದ ಗೃಹ, ಸ್ನಾನದ ಗೃಹ, ಶೌಚಾಲಯ, ಮದ್ದು ಗುಂಡು ಸಂಗ್ರಹಿಸುವ ಸ್ಥಳ, ಸುರಂಗ ಮಾರ್ಗಗಳು ಇದೆ. ನಾಲ್ಕನೆಯದಾಗಿ ಶಿಶಿಲೆ ಬೆಟ್ಟ ಅಥವಾ ಎತ್ತಿನ ಭುಜ. ಸಕಲೇಶಪುರದಿಂದ 34 ಕಿಲೊಮೀಟರ್ ದೂರದಲ್ಲಿದೆ ಈ ಚಾರಣಿಗರ ಸ್ವರ್ಗ ಎಂದು ಕರೆಸಿಕೊಂಡ ಶಿಶಿಲೆ ಬೆಟ್ಟ. ಈ ಬೆಟ್ಟ ನೋಡಲು ಎತ್ತಿನ ಭುಜದಂತೆ ಕಾಣುತ್ತದೆ ಆದ್ದರಿಂದ ಇದಕ್ಕೆ ಎತ್ತಿನ ಭುಜ ಎಂತಲೂ ಹೆಸರು. ಈ ಶಿಶಿಲೆ ಬೆಟ್ಟದ ಸುತ್ತಲೂ ನೋಡಿದರೆ ಹಸಿರಿನ ಜೊತೆಗೆ ಹಿಮಗಳೆ ಕಾಣಿಸುತ್ತದೆ.

ಐದನೆಯದಾಗಿ ಮಂಜೆಹಳ್ಳಿ ಜಲಪಾತ. ಇದೊಂದು ನಯನ ಮನೋಹರ ಪರಿಪೂರ್ಣ ಪ್ರವಾಸಿ ತಾಣವಾಗಿದೆ. ಈ ಮಂಜೆಹಳ್ಳಿ ಜಲಪಾತ ಸಕಲೇಶಪುರದಿಂದ ಕೇವಲ 8 ಕಿ.ಮೀ ದೂರದಲ್ಲಿದೆ. ಮಂಜೆಹಳ್ಳಿಯಿಂದ ಒಂದು ಕಿಲೊಮೀಟರ್ ದೂರ ಇದೆ ಫಾಲ್ಸ್. ಮಳೆಗಾಲದಲ್ಲಿ ಅತ್ಯಂತ ಸುಂದರವಾಗಿ ಕಾಣುತ್ತದೆ. ಈ ಜಲಪಾತದಿಂದ ಪುಷ್ಪಗಿರಿ ಬೆಟ್ಟವು ಕಾಣಸಿಗುತ್ತದೆ. ಈ ಜಲಪಾತವು ಹಂತಹಂತವಾಗಿ ಧರೆಗಿಳಿದು ಬರುತ್ತದೆ. ಆರನೆಯದಾಗಿ ದೋಣಿಗಲ್ ಯಡಕುಮರಿ. ಎಣಿಕೆಗೂ ಸಿಗದಷ್ಟು ಗಿರಿ ಶಿಖರವನ್ನು ಪಶ್ಚಿಮ ಘಟ್ಟಗಳ ಸಾಲಿನಲ್ಲಿ ಇದೆ. ಇಲ್ಲಿ ಚಾರಣ ಮಾಡಿದರೆ ಅದರ ಅನುಭವವೇ ಬೇರೆ. ಹಸಿರು ಹಾದಿಯಲ್ಲಿ 18 ಕಿಲೊಮೀಟರ್ ರೈಲು ಹಳಿಗಳ ಮೇಲೆ ಚಾರಣ ಮಾಡಬೇಕು. ಮಂಗಳೂರಿನಿಂದ ಬೆಂಗಳೂರಿಗೆ ಹೋಗುವ ಮಾರ್ಗದಲ್ಲಿ ಈ ಎರಡು ನಿಲ್ದಾಣಗಳು ಸಿಗುತ್ತದೆ. ಏಳನೆಯದಾಗಿ ಬಿಸಿಲೆಘಾಟ್. ಸಕಲೇಶಪುರದಿಂದ 50 ಕಿಲೊಮೀಟರ್ ದೂರದಲ್ಲಿ ಇರುವ ಘಾಟ್ ಈ ಬಿಸಿಲೆಘಾಟ್ ಹಸಿರ ಸಿರಿಯನ್ನೆ ಹೊದ್ದು ಮಲಗಿದೆ ಈ ಬಿಸಿಲೆಘಾಟ್. ಪಶ್ಚಿಮ ಘಟ್ಟಗಳ ಸುಂದರ ನೋಟ ಇಲ್ಲಿ ಸಿಗುತ್ತದೆ. ಬಿಸಿಲೆಘಾಟ್ ರಸ್ತೆಯ ಬದಿಯಲ್ಲಿ ನೂರಾರು ಅಡಿಯ ಪ್ರಪಾತ ನೋಡಿದ ಎಂಥವರಿಗೂ ಎದೆ ಝಲ್ಲೆನ್ನುತ್ತದೆ. ಎರಡು ಅಂತಸ್ಥಿನಲ್ಲಿ ವಿಕ್ಷಣಾ ಗೋಪುರ ಹೊಂದಿದೆ. ಬಿಸಿಲೆಘಾಟ್ ಪ್ರದೇಶವು ಅರಣ್ಯ ಇಲಾಖೆಯ ಅಡಿಯಲ್ಲಿ ಬರುತ್ತದೆ.

ಹಸಿರು ಹೊದ್ದ ಪ್ರಕೃತಿ ಎಂತಹ ಜಂಜಾಟದ ಬದುಕಿಗೂ ಬಣ್ಣ ತುಂಬುತ್ತದೆ. ಯೋಚನೆಗಳಲ್ಲಿ, ಒತ್ತಡದಿಂದ ಮಾನಸಿಕ ಆರೋಗ್ಯ ಹದಗೆಟ್ಟಂತಹ ಸಂದರ್ಭದಲ್ಲಿ ಇಂತಹ ಹಸಿರು ಪ್ರದೇಶಗಳಿಗೆ ಭೇಟಿ ನೀಡಿದಾಗ ಒತ್ತಡ ಕರಗಿ ಮನಸ್ಸು ಹಗುರಾಗುತ್ತದೆ.

Leave A Reply

Your email address will not be published.