ಚಳಿಗಾಲ ಪ್ರಾರಂಭವಾಗುತ್ತಿದ್ದಂತೆ ಹೆಚ್ಚಿನವರಲ್ಲಿ ಕಾಡುವ ಸಮಸ್ಯೆಯೆಂದರೆ ತುಟಿ ಒಡೆಯುವುದು ಮತ್ತು ಚರ್ಮ ಸುಕ್ಕುಗಟ್ಟಿದಂತೆ ತಡೆಯುವುದು ಹೇಗೆ ಎನ್ನುವುದು. ಹೇಳಿ ಕೇಳಿ ಹುಡುಗಿಯರಿಗೆ ಚರ್ಮ, ತುಟಿಗಳ ಮೇಲೆ ಅತಿಯಾದ ಕಾಳಜಿ ಇರುವುದರಿಂದ ಅವುಗಳ ಸಂರಕ್ಷಣೆ ತಲೆ ನೋವಾಗಿ ಬಿಡುತ್ತದೆ. ಅದು ಕೂಡ ಚಳಿಗಾಲದಲ್ಲಿ ಕೊಂಚ ಹೆಚ್ಚಾಗಿಯೇ ತುಟಿಗಳು ಒಡೆಯುವ ಕಾರಣದಿಂದ ಅದರ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕಾಗುತ್ತದೆ. ಹಾಗಾಗಿ ಮನೆ ಮದ್ದಿನಿಂದ ತುಟಿಗಳನ್ನು ಹೇಗೆ ಸಂರಕ್ಷಿಸುವುದು ಮತ್ತು ಚಳಿಗಾಲದಲ್ಲಿಯೂ ಹೇಗೆ ಅಧರಗಳ ಅಂದವನ್ನು ಹೆಚ್ಚಿಸುವುದು ಎನ್ನುವುದರ ಕುರಿತು ಮಾಹಿತಿಯನ್ನು ನಾವು ಈ ಲೇಖನದ ಮೂಲಕ ತಿಳಿದುಕೊಳ್ಳೋಣ.

ಮೃದು ತುಟಿ ಹೊಂದುವುದು ಆರೋಗ್ಯವಂತರ ಲಕ್ಷಣ. ಆದರೆ, ಹವಾಮಾನ ಅಂಶಗಳು, ಸೌಂದರ್ಯವರ್ಧಕಗಳ ಬಳಕೆ ಮತ್ತು ಧೂಮಪಾನ ಮತ್ತು ಮದ್ಯಪಾನದಂಥ ಚಟಕ್ಕೆ ಹಾಗೂ ಆಧುನಿಕ ಜೀವನಶೈಲಿಯಿಂದ ತುಟಿಗಳು ಆಗಾಗ್ಗೆ ಒಣಗುತ್ತವೆ. ಒಡೆಯುತ್ತವೆ. ಆರೋಗ್ಯವಂತ, ಕೆಂಪು ತುಟಿಗಳನ್ನು ಹೊಂದಲು ಇಲ್ಲಿವೆ ಕೆಲವು ಸಿಂಪಲ್ ಟಿಪ್ಸ್. ಈ ವಿಧಾನವನ್ನು ಹುಡುಗರು ಹಾಗೂ ಹುಡುಗಿಯರ ಬೇಕಿದ್ದರೂ ಬಳಸಬಹುದು. ಮೊದಲನೇ ವಿಧಾನ ಸ್ಕ್ರಬ್ ಮಾಡುವುದು. ತುಟಿಗಳಿಗೆ ಸ್ಕ್ರಬ್ ಮಾಡಲು ಸ್ವಲ್ಪ ಸಕ್ಕರೆ ಜೇನುತುಪ್ಪ ನಿಂಬೆ ರಸ ಮತ್ತು ಆಲಿವ್ ಆಯಿಲ್ ಸೇರಿಸಿ ಮಿಶ್ರಣ ಮಾಡಿಕೊಳ್ಳಬೇಕು. ಆಲೀವ್ ಆಯಿಲ್ ಇಲ್ಲದೆ ಇದ್ದರೆ ತೆಂಗಿನ ಎಣ್ಣೆ ಅಥವಾ ಆಲಮೊಂಡ್ ಆಯಿಲ್ (ಬಾದಾಮಿ ಎಣ್ಣೆ) ಕೂಡಾ ಸೇರಿಸಿಕೊಳ್ಳಬಹುದು. ಇಲ್ಲಿ ಸಕ್ಕರೆಗೆ ತುಟಿಗಳನ್ನು ಮೃದುವಾಗಿಸುವ ಶಕ್ತಿ ಇದ್ದು, ಒಣಗಿದಂತೆ ಕಾಣುವ ತುಟಿಗಳಿಗೆ ಸತ್ವವನ್ನು ತುಂಬುತ್ತದೆ. ನಿಂಬೆ ರಸ ತುಟಿಗಳಿಗೆ ಹೊಳಪನ್ನು ನೀಡುತ್ತದೆ ಆಲಿವ್ ಆಯಿಲ್ ಕೂಡಾ ತುಟಿಗೆ ಹೊಳಪು ನೀಡಲು ಸಹಕಾರಿ ಇನ್ನು ಜೇನುತುಪ್ಪ ಒಂದು ರೀತಿ ಮಾಯಿಶ್ಚರೈಸರ್ ರೀತಿ ಕಾರ್ಯ ಮಾಡುವುದು. ಹಾಗಾಗಿ ಇವೆಲ್ಲವನ್ನೂ ಮಿಶ್ರಣ ಮಾಡಿಕೊಂಡು ಕೈಯ್ಯಿಂದ ತುಟಿಗಳಿಗೆ ಹಚ್ಚಿ ಐದು ನಿಮಿಷಗಳ ಕಾಲ ಮೃದುವಾಗಿ ಸ್ಕ್ರಬ್ ಮಾಡಬೇಕು.

ಈ ಎಲ್ಲಾ ಪದಾರ್ಥಗಳ ಮಿಶ್ರಣವನ್ನು ಒಮ್ಮೆ ಮಾಡಿಟ್ಟುಕೊಂಡು ಗಾಳಿ ಆಡದ ಡಬ್ಬದಲ್ಲಿ ಹಾಕಿ ಫ್ರಿಡ್ಜ್ ನಲ್ಲಿ ಶೇಖರಿಸಿ ಕೂಡಾ ಇಟ್ಟುಕೊಳ್ಳಬಹುದು. ಐದು ನಿಮಿಷ ಸ್ಕ್ರಬ್ ಮಾಡಿದ ನಂತರ ತೊಳೆಯಬೇಕು. ನಂತರ ತುಟಿಗಳ ಬಣ್ಣದಲ್ಲಿ ಬದಲಾವಣೆ ಆಗಿರುವುದನ್ನು ಗಮನಿಸಬಹುದು. ಸ್ಕ್ರಬ್ ಮಾಡುವುದು ಒಂದು ವಿಧಾನ ಆದರೆ ಇನ್ನೊಂದು ವಿಧಾನ ಮಾಯಿಶ್ಚರೈಸರ್ ಹಚ್ಚುವುದು. ಈ ಎರಡು ವಿಧಾನದಲ್ಲಿ ನಿಮಗೆ ಹೊಂದುವ ವಿಧಾನವನ್ನು ಅನುಸರಿಸಿ. ಎರಡನೇ ವಿಧಾನ ಟೂತ್ ಬ್ರಷ್ ಗೆ ಸ್ವಲ್ಪ ಜೇನುತುಪ್ಪವನ್ನು ಹಾಕಿಕೊಂಡು ತುಟಿಗಳಿಗೆ ನಿಧಾನವಾಗಿ ಎರಡರಿಂದ ಮೂರು ನಿಮಿಷಗಳ ಕಾಲ ಸ್ಕ್ರಬ್ ಮಾಡಿ ನಂತರ ತುಟಿಗಳನ್ನು ತೊಳೆಯಬೇಕು. ಇದನ್ನು ಪ್ರತೀ ದಿನ ಅಥವಾ ವಾರಕ್ಕೆ ಎರಡು ಮೂರು ಬಾರಿ ಅನುಸರಿಸಿದರೆ ತುಟಿಗಳು ಹೊಳೆಯುತ್ತವೆ. ಆದರೆ ಈ ಎರಡರಲ್ಲಿ ಯಾವುದೇ ಒಂದು ಸ್ಕ್ರಬ್ ಮಾತ್ರ ಮಾಡಬಹುದು.

ಇನ್ನು ಮಾಯಿಶ್ಚರೈಸರ್ ಆಗಿ ಯಾವುದೇ ದಿನ ನಿತ್ಯ ಬಳಸುವ ಲಿಪ್ ಬಾಮ್ ಅಥವಾ ವ್ಯಾಸಲಿನ್ ಬಳಕೆ ಮಾಡಬಹುದು. ಇದನ್ನು ಪ್ರತೀ ದಿನ ರಾತ್ರಿ ಮಲಗುವ ಮುನ್ನ ತುಟಿಗಳಿಗೆ ಈ ರೀತಿ ಸ್ಕ್ರಬ್ ಮಾಡಿದರೆ ಕೆಲವೇ ದಿನಗಳಲ್ಲಿ ಉತ್ತಮ ಫಲಿತಾಂಶ ಪಡೆಯಬಹುದು. ಇದರ ಜೊತೆಗೆ ತುಟಿಗಳ ಆರೋಗ್ಯವನ್ನು ಕಾಪಾಡಿಕೊಳ್ಳಬೇಕಾಗಿದೆ. ದೇಹದಲ್ಲಿ ನೀರಿನ ಅಂಶ ಕಡಿಮೆ ಆದಾಗ ತುಟಿಗಳು ಶುಷ್ಕತೆಯಿಂದ ಒಡೆಯುವುದು. ಅದೇ ರೀತಿ ರಕ್ತದ ಕೊರತೆ ಉಂಟಾದರೆ ತುಟಿಯು ಬಣ್ಣವನ್ನು ಕಳೆದುಕೊಂಡು ಬಿಳುಚಾಗಿ ಕಾಣಿಸಿಕೊಳ್ಳುತ್ತದೆ. ಹೀಗೆ ಅನೇಕ ಆರೋಗ್ಯ ಸಮಸ್ಯೆಗಳು ಉಂಟಾದಾಗ ಅವು ತುಟಿಗಳ ಮೂಲಕ ವ್ಯಕ್ತವಾಗುತ್ತದೆ.

Leave a Reply

Your email address will not be published. Required fields are marked *