ನಾವು ಏನನ್ನಾದರೂ ಸಾಧಿಸಬೇಕಾದರೆ ಹಿಂದೆ ಗುರು ಇರಬೇಕು, ಮುಂದೆ ಗುರಿ ಇರಬೇಕು ಎಂದು ಹೇಳುತ್ತಾರೆ. ಜ್ಯೋತಿಷ್ಯಶಾಸ್ತ್ರದ ಪ್ರಕಾರ ಗುರುಬಲ ಇದ್ದರೆ ಗುರಿಯತ್ತ ತನ್ನಿಂತಾನೆ ಕರೆದುಕೊಂಡು ಹೋಗುತ್ತಾನೆ ಎಂದು ಹೇಳುತ್ತಾರೆ. ಜ್ಯೋತಿಷ್ಯಶಾಸ್ತ್ರದಲ್ಲಿ ಗುರುವಿಗೆ ಯಾಕೆ ಅಷ್ಟು ಮಹತ್ವ ಕೊಡಲಾಗಿದೆ, 2021ರಲ್ಲಿ ಯಾವ ಯಾವ ರಾಶಿಗೆ ಗುರು ಬಲ ಸಿಗಲಿದೆ ಹಾಗೂ ಗುರುಬಲ ಪಡೆಯಲು ಯಾವ ಪರಿಹಾರ ಮಾಡಿಕೊಳ್ಳಬೇಕು ಎಂಬ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ನೋಡೋಣ.

ಗುರು ಗ್ರಹವು ಒಂದು ರಾಶಿಯಲ್ಲಿ ಒಂದು ವರ್ಷ ಇರುತ್ತಾನೆ. 12 ರಾಶಿ ಸುತ್ತಲೂ ಅವನಿಗೆ 12 ವರ್ಷ ಬೇಕಾಗುತ್ತದೆ. 2021 ಮಾರ್ಚ್ 29 ರಂದು ಗುರು ಗ್ರಹ ಮಕರ ರಾಶಿಯಿಂದ ಕುಂಭ ರಾಶಿಗೆ ಚಲಿಸುತ್ತಾನೆ. ಜೂನ್ 21 ರಂದು ಗುರು ವಕ್ರಗತನಾಗುತ್ತಾನೆ ನಂತರ ಮತ್ತೆ ಮಕರ ರಾಶಿಗೆ ಬರುತ್ತಾನೆ ನವೆಂಬರ್ ವರೆಗೆ ಅಲ್ಲೆ ಇರುತ್ತಾನೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಗುರುವಿಗೆ ಅನೇಕ ಹೆಸರಿದೆ ದೇವಗುರು, ಬ್ರಹಸ್ಪತಿ ಮುಂತಾದ ಹೆಸರುಗಳಿವೆ. ಜಾತಕದಲ್ಲಿ ಲಗ್ನಾಧಿಪತಿ ಬಲಹೀನನಾಗಿದ್ದರೆ ಗುರು ಪಾಪ ಗ್ರಹದಲ್ಲಿ ಇದ್ದರೆ ಅವರಿಗೆ ಅನಾರೋಗ್ಯ ಕಾಡುತ್ತದೆ. ಜಾತಕದಲ್ಲಿ ಗುರು ಪ್ರಬಲನಾಗಿದ್ದರೆ ಅವರು ಭಾಗ್ಯವಂತರಾಗಿರುತ್ತಾರೆ.

ಒಬ್ಬ ವ್ಯಕ್ತಿಯ ಜೀವನದಲ್ಲಿ ವಿದ್ಯೆ, ಮದುವೆ, ಹಣ ಸಂಪಾದನೆ, ಆರೋಗ್ಯ, ಕೌಟುಂಬಿಕ ಜೀವನ ಹೀಗೆ ಎಲ್ಲ ಹಂತಗಳಲ್ಲಿ ಗುರು ಪ್ರಬಲನಾಗಿದ್ದರೆ ಅವನು ಸಂತೋಷವಾಗಿ, ನೆಮ್ಮದಿಯಿಂದಿರುತ್ತಾನೆ. ಗುರು ದುರ್ಬಲನಾಗಿದ್ದರೆ ಅವನು ನೆಮ್ಮದಿಯಿಂದಿರಲು ಸಾಧ್ಯವಿಲ್ಲ. ಗ್ರಹಗಳ ಬದಲಾವಣೆಯಿಂದ ಪ್ರಪಂಚದಾದ್ಯಂತ ಟೂರಿಸಂ ಮತ್ತು ಟ್ರಾವೆಲ್ ಹೊಸ ತಿರುವು ಪಡೆಯುತ್ತದೆ. ದೇಶವಿದೇಶಗಳ ಓಡಾಟ ಹೆಚ್ಚಾಗುತ್ತದೆ, ಫಾರಿನ್ ಪಾಲಿಸಿಯಲ್ಲಿ ಸುಧಾರಣೆಯಾಗುತ್ತದೆ. ವಿಚಿತ್ರ ಸೋಂಕುಗಳು ಮತ್ತೆ ಮತ್ತೆ ಕಾಣಿಸಿಕೊಳ್ಳಲಿದೆ. ಮಹಿಳೆಯರಿಗೆ ಗರ್ಭಕೋಶದ ತೊಂದರೆ ಕಾಣಿಸಿಕೊಳ್ಳುತ್ತದೆ.

ಜೂಜಾಟ, ಕ್ಲಬ್, ಇಸ್ಪೀಟ್ ಇಂಥವುಗಳು ಹೆಚ್ಚಾಗುತ್ತದೆ. ಹೆಚ್ಚಿನ ಮಟ್ಟದಲ್ಲಿ ಡ್ರಗ್ ದಂಧೆಗಳು ಬಯಲಾಗಬಹುದು. ಮದುವೆ ಶುಭಕಾರ್ಯಗಳು ಹೆಚ್ಚಾಗಿ ನಡೆಯಲಿದೆ. ವಿಶ್ವ ಮಟ್ಟದ ಆರ್ಥಿಕ ಪರಿಸ್ಥಿತಿ ಸ್ವಲ್ಪ ಮಟ್ಟಿಗೆ ಸುಧಾರಣೆಯಾಗುತ್ತದೆ. ಐತಿಹಾಸಿಕ ತೀರ್ಪು ಹಾಗೂ ಹೊಸ ಕಾನೂನು ಹೊರಬೀಳಲಿದೆ. ಬಾಹ್ಯಾಕಾಶದಲ್ಲಿ ಭಾರತದ ಹೊಸ ಉಪಗ್ರಹ ಲಾಂಚ್ ಆಗಲಿದೆ. ಮಾಸ್ ಟೆಲಿಕಮ್ಯುನಿಕೇಶನ್, ಚಿತ್ರರಂಗಕ್ಕೆ ಹೊಡೆತ ಬೀಳುವ ಸಾಧ್ಯತೆ ಇದೆ. ವಾಹನ ಅಪಘಾತ ಮತ್ತು ವಿಚ್ಛೇದನಗಳ ಸಂಖ್ಯೆ ಹೆಚ್ಚಾಗಲಿದೆ. ಆಸ್ಟ್ರೇಲಿಯಾ, ನಾರ್ತ್ ಅಮೆರಿಕ, ಟೆಕ್ಸಾಸ್ ಸ್ಟೇಟ್, ನ್ಯೂಜಿಲೆಂಡ್, ಚೈನಾ ದೇಶಗಳಲ್ಲಿ ಭೂಕಂಪ, ಬೆಂಕಿ ಅವಗಡಗಳು ಕಾಣಿಸುತ್ತದೆ. ಭಾರತ ಹಾಗೂ ಅಮೆರಿಕದ ಇಬ್ಬರು ಹಿರಿಯ ರಾಜಕಾರಣಿಗಳಿಗೆ ಕ್ಷೇಮವಲ್ಲ. ತೈಲ ಬೆಲೆಯಲ್ಲಿ ಏರಿಳಿತ ಕಂಡು ಬರುತ್ತಲೆ ಇರುತ್ತದೆ. ಪಾಕಿಸ್ತಾನ ಹಾಗೂ ಗಲ್ಫ್ ದೇಶದ ನಾಯಕನಿಗೆ ಆಪತ್ತು ಎದುರಾಗಲಿದೆ.

ಗುರು ಕುಂಭರಾಶಿಗೆ ಬಂದಿರುವುದರಿಂದ ಪ್ರಯಾಗ, ಉಜ್ಜಯನಿ, ನಾಸಿಕ್, ಹರಿದ್ವಾರಗಳಲ್ಲಿ ಹರಿಯುವ ನದಿಯಲ್ಲಿ ಅಭ್ಯಂಗ ಸ್ನಾನ ಅಥವಾ ನೀರು ಪ್ರೋಕ್ಷಣೆ ಮಾಡಿದರೆ ಕೆಟ್ಟ ಕರ್ಮಗಳು ದೂರವಾಗುತ್ತವೆ. ಗುರು ಸ್ಥಳವು ತಮಿಳುನಾಡಿನ ತಿರುವಾರು ಜಿಲ್ಲೆಯ ಆಲಂಗುಡಿ ಗ್ರಾಮದಲ್ಲಿದೆ ಗುರುವಾರ ಅಲ್ಲಿಗೆ ಹೋಗಿ ಹಳದಿ ವಸ್ತ್ರ ಧರಿಸಿ 24 ತುಪ್ಪದ ಮಣ್ಣಿನ ದೀಪಗಳನ್ನು ಬೆಳಗಿಸಿದರೆ ಗುರು ದೋಷ ನಿವಾರಣೆಯಾಗುತ್ತದೆ ಅಥವಾ ಅಲ್ಲಿಯ ದೇವಸ್ಥಾನಕ್ಕೆ 24 ದಾಳಿಂಬೆ ಹಣ್ಣುಗಳನ್ನು ಕೊಟ್ಟರು ಗುರು ದೋಷ ನಿವಾರಣೆ ಆಗುತ್ತದೆ. ಕೇರಳದ ಗುರುವಾಯುರ್ ನಲ್ಲಿ ಸೇವೆ ಸಲ್ಲಿಸಬಹುದು.

ಗುರುವಿಗೆ ಸಂಬಂಧಿಸಿದ ಮಂತ್ರಗಳನ್ನು ಹೇಳುವ ಮೂಲಕ ಗುರು ದೋಷವನ್ನು ನಿವಾರಿಸಿಕೊಂಡು ಗುರು ಬಲವನ್ನು ಸೃಷ್ಟಿಸಿಕೊಳ್ಳಬಹುದು. ತಂದೆ ತಾಯಿಯ ಆಶೀರ್ವಾದದಿಂದ ಗುರು ಬಲವನ್ನು ಸೃಷ್ಟಿಸಿಕೊಳ್ಳಬಹುದು. ಗುರು ಒಳ್ಳೆಯ ಸ್ಥಾನದಲ್ಲಿದ್ದ ರಾಶಿಯವರಿಗೆ ಕೆಡುಕುಗಳು ಆಗಲು ಬಿಡುವುದಿಲ್ಲ. ಬೇರೆಯವರಿಗೆ ಹಿಂಸೆ ಮಾಡಬಾರದು, ನಮ್ಮ ಮನಸ್ಸನ್ನು ಹತೋಟಿಯಲ್ಲಿಟ್ಟುಕೊಳ್ಳಬೇಕು. ದೇಹವನ್ನು ಕಾಪಾಡಿಕೊಂಡರೆ ಗುರು ಮತ್ತು ಶನಿಯ ಆಶೀರ್ವಾದ ಲಭಿಸುತ್ತದೆ. ಬೇರೆಯವರಿಂದ ನಾವು ನಿರೀಕ್ಷೆ ಮಾಡಿದಾಗ ಅದರಿಂದ ದುಃಖವಾಗುತ್ತದೆ ದುಃಖದ ಸಮಯದಲ್ಲಿ ಗುರುಬಲ ಸೃಷ್ಟಿಯಾಗುವುದಿಲ್ಲ.

ಈ ವರ್ಷ ಮೇಷ ರಾಶಿಯ ರಾಶ್ಯಾಧಿಪತಿ ಕುಜ ರಾಹು ಜೊತೆಯಲ್ಲಿ ಇರುವುದರಿಂದ ಮೇಷ ರಾಶಿಯವರ ಆರೋಗ್ಯದಲ್ಲಿ ಏರುಪೇರಾಗುತ್ತದೆ. ಮೇಷ ರಾಶಿಯವರ ಬುದ್ಧಿ ವಿಚಿತ್ರವಾಗುವುದರಿಂದ ಇನ್ನೊಬ್ಬರಿಗೆ ಬೇಸರ ಉಂಟಾಗಿ ಅದರಿಂದ ಕೆಟ್ಟ ಫಲವನ್ನು ಪಡೆಯಬಹುದು. ಮೇಷ ರಾಶಿಯವರ ತಾಯಿಯ ಆರೋಗ್ಯದಲ್ಲಿ ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ. ಪತಿ ಅಥವಾ ಪತ್ನಿ ಹಾಗೂ ಮಕ್ಕಳ ಆರೋಗ್ಯದಲ್ಲಿ ಏರುಪೇರಾಗುವುದು. ಉದ್ಯೋಗದಲ್ಲಿ ಯಾವುದೇ ರೀತಿಯ ತೊಂದರೆ ಇಲ್ಲ. ಅವಿವಾಹಿತರಿಗೆ ವಿವಾಹ ಆಗುವ ಸಂಭವವಿದೆ. ಮೇಷ ರಾಶಿಯವರು ಉತ್ತರಾಭಿಮುಖವಾಗಿ ಪ್ರತಿದಿನ ಬೆಳಗ್ಗೆ ಸುಬ್ರಹ್ಮಣ್ಯ ಮಂತ್ರವನ್ನು 200 ಬಾರಿ ಪಠಿಸಬೇಕು ಮತ್ತು ಕೆಂಪು ಹವಳವಿರುವ ಬೆಳ್ಳಿ ಉಂಗುರವನ್ನು 7 ತಿಂಗಳುಗಳ ಕಾಲ ಧರಿಸಬೇಕು. ವೃಷಭ ರಾಶಿಯವರಿಗೆ ಆರೋಗ್ಯದಲ್ಲಿ ಏರುಪೇರು ಆಗಬಹುದು. ವೃಷಭ ರಾಶಿಯವರ ದಾಂಪತ್ಯದಲ್ಲಿ ವೈಮನಸ್ಸು ಉಂಟಾಗಬಹುದು.

ಈ ರಾಶಿಯವರಿಗೆ ಅನಿರೀಕ್ಷಿತವಾಗಿ ಮದುವೆಸಂಬಂಧ ಬರಬಹುದು ಆದರೆ ಈ ರೀತಿಯ ಮದುವೆಗೆ ಒಪ್ಪಿಕೊಂಡರೆ ವಂಚನೆಯ ಸಾಧ್ಯತೆ ಹೆಚ್ಚಿದೆ. ಉದ್ಯೋಗದಲ್ಲಿ ವರ್ಗಾವಣೆ ಸಾಧ್ಯತೆ. ತಾಯಿಯವರಿಂದ ಆಸ್ತಿ ಲಭ್ಯ. ಪ್ರತಿದಿನ ದಕ್ಷಿಣಾಭಿಮುಖವಾಗಿ ಸೂರ್ಯಾಸ್ತದ ನಂತರ ರಾಹು ಮಂತ್ರವನ್ನು 28 ಬಾರಿ ಪಠಿಸಬೇಕು. ಮಿಥುನ ರಾಶಿಯವರಿಗೆ ತಂದೆಯಿಂದ ಲಾಭ ಆಗಲಿದೆ. ತಾಯಿಯ ಆರೋಗ್ಯದಲ್ಲಿ ಏರುಪೇರಾಗುತ್ತದೆ. ಈ ರಾಶಿಯವರಿಗೆ ಹಿತ ಶತ್ರುಗಳು ಹೆಚ್ಚಾಗುತ್ತಾರೆ ಹಾಗೂ ರಕ್ತದೊತ್ತಡ ಹೆಚ್ಚಾಗುತ್ತದೆ. ಅನಿರೀಕ್ಷಿತವಾಗಿ ಹಣ ಬರಲಿದೆ. ಈ ರಾಶಿಯವರ ಮಕ್ಕಳ ಸಾಧನೆಗೆ ಒಳ್ಳೆಯದು. ಈ ರಾಶಿಯ ಸರ್ಕಾರಿ ನೌಕರರಿಗೆ ಸರ್ಕಾರದಿಂದ ಪ್ರಶಂಸೆ ಸಿಗಲಿದೆ. ಈ ರಾಶಿಯವರು ಉತ್ತರಾಭಿಮುಖವಾಗಿ 40 ಬಾರಿ ನಾರಾಯಣ ಶ್ಲೋಕವನ್ನು ಪಠಿಸಬೇಕು.

ಕಟಕ ರಾಶಿಯವರು ಬಲಹೀನ ಯೋಚನೆ ಮಾಡುವ ಸಾಧ್ಯತೆಗಳು ಹೆಚ್ಚು, ದೈಹಿಕ ದಣಿವು ಹೆಚ್ಚಾಗುತ್ತದೆ. ಮದುವೆ ಆಗುವ ಸಂಭವ ಇರುತ್ತದೆ. ಕೆಲಸದಲ್ಲಿ ಅಡಚಣೆ ಉಂಟಾಗುತ್ತದೆ. ಒಡಹುಟ್ಟಿದವರಿಂದ ಹಣಕಾಸು, ಆಸ್ತಿ ಲಭ್ಯ. ಇವರು ಹೊಸ ವಾಹನವನ್ನು ಖರೀದಿಸುವ ಸಾಧ್ಯತೆಗಳಿವೆ. ಕಟಕ ರಾಶಿಯವರು ಪ್ರತಿದಿನ ಬೆಳಗ್ಗೆ ಉತ್ತರಾಭಿಮುಖವಾಗಿ ಕುಳಿತು ಗಣಪತಿ ಶ್ಲೋಕವನ್ನು 21 ಬಾರಿ ಪಠಿಸಬೇಕು. ಸಿಂಹ ರಾಶಿಯವರಿಗೆ ಖರ್ಚು ಹೆಚ್ಚಾಗುತ್ತದೆ. ಈ ರಾಶಿಯವರ ತಾಯಿಯೊಂದಿಗಿನ ಸಂಬಂಧ ಕೆಡಬಹುದು, ತಾಯಿಯ ಆರೋಗ್ಯದಲ್ಲಿ ಏರುಪೇರಾಗಬಹುದು. ಉದ್ಯೋಗದಲ್ಲಿ ಒತ್ತಡ ಹೆಚ್ಚಾಗುತ್ತದೆ ಮತ್ತೆ ಸಹದ್ಯೋಗಿಗಳೊಂದಿಗೆ ನಿಂದನೆಗೆ ಒಳಗಾಗಬೇಕಾಗುತ್ತದೆ, ವಾಗ್ವಾದಕ್ಕೆ ಇಳಿಯಬಾರದು.

ಪ್ರತಿನಿತ್ಯ ಸಿಂಹರಾಶಿಯವರು ಪೂರ್ವಾಭಿಮುಖವಾಗಿ ಕುಳಿತು ಆದಿತ್ಯ ಹೃದಯ ಪಾರಾಯಣವನ್ನು ಮಾಡಬೇಕು. ಕನ್ಯಾರಾಶಿಯವರಿಗೆ ರೋಗನಿರೋಧಕ ಶಕ್ತಿ ಕಡಿಮೆಯಾಗುತ್ತದೆ. ಹಣದ ಲಾಭ ಆಗಲಿದೆ. ಒಡಹುಟ್ಟಿದವರೊಂದಿಗೆ ಪುಣ್ಯಕ್ಷೇತ್ರ ಪ್ರಯಾಣ ಸಾಧ್ಯತೆ ಆದರೆ ಅಲ್ಲಿ ವೈಮನಸ್ಸು, ವಾದ ನಡೆಯಬಹುದು. ಈ ರಾಶಿಯವರಿಗೆ ಮದುವೆಯಾಗುವ ಸಂಭವವಿರುತ್ತದೆ. ಈ ರಾಶಿಯವರು ಸರ್ಕಾರಿ ನೌಕರಿಯಲ್ಲಿದ್ದರೆ ಪ್ರಯತ್ನಪಟ್ಟರೆ ಹೆಚ್ಚಿನ ಅನುಕೂಲವಾಗಲಿದೆ. ತಂದೆಯ ಆರೋಗ್ಯದಲ್ಲಿ ಏರುಪೇರಾಗುವುದು. ಪ್ರತಿದಿನ ಸಂಜೆ ಶ್ಲೋಕವನ್ನು 54 ಬಾರಿ ಪೂರ್ವಾಭಿಮುಖವಾಗಿ ಕುಳಿತು ಹೇಳಬೇಕು.

ತುಲಾ ರಾಶಿಯವರಿಗೆ ಹಲ್ಲಿನ ಆರೋಗ್ಯದಲ್ಲಿ ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ. ಈ ರಾಶಿಯವರಿಗೆ ವಿಷ್ಣು ಕ್ಷೇತ್ರದರ್ಶನ ಆಗುವ ಸಾಧ್ಯತೆಗಳಿವೆ. ಆರ್ಥಿಕ ಪರಿಸ್ಥಿತಿಯಲ್ಲಿ ತಕ್ಕಮಟ್ಟಿಗೆ ಸುಧಾರಣೆಯಾಗಲಿದೆ. ತುಲಾ ರಾಶಿಯವರು ಮದುವೆ ಪ್ರಯತ್ನವನ್ನು ಮುಂದೂಡಬೇಕು, ದಾಂಪತ್ಯದಲ್ಲಿ ವ್ಯತ್ಯಾಸಗಳಾಗಬಹುದು. ಈ ರಾಶಿಯವರಿಗೆ ಖರ್ಚು ಹೆಚ್ಚಾಗುತ್ತದೆ. ಇವರು ಉತ್ತರಾಭಿಮುಖವಾಗಿ ಕುಳಿತು ಪ್ರತಿದಿನ 40 ಬಾರಿ ಶ್ಲೋಕವನ್ನು ಪಠಿಸಬೇಕು. ವೃಶ್ಚಿಕ ರಾಶಿಯವರಿಗೆ ಹಿತಶತ್ರುಗಳಿಂದ ಕಾಟ, ಸಣ್ಣಪುಟ್ಟ ಆರೋಗ್ಯದ ತೊಂದರೆ.

ಈ ರಾಶಿಯವರ ಮನೆಯ ವಾತಾವರಣ ನೆಮ್ಮದಿಯಿಂದ ಇರುವುದಿಲ್ಲ. ಈ ರಾಶಿಯವರಿಗೆ ಲಾಭ ಸಿಗಬಹುದು. ಮಕ್ಕಳ ಭಾಗ್ಯ ದೊರೆಯಲಿದೆ. ಈ ರಾಶಿಯವರು ದಿನನಿತ್ಯ ಉತ್ತರಾಭಿಮುಖವಾಗಿ ಕುಳಿತು 40 ಬಾರಿ ಶ್ಲೋಕವನ್ನು ಪಠಿಸಬೇಕು. ಧನು ರಾಶಿಯವರಿಗೆ ಉದ್ಯೋಗದಲ್ಲಿ ತಕ್ಕಮಟ್ಟಿಗೆ ಅನುಕೂಲವಾಗಲಿದೆ. ಇವರ ಕೌಟುಂಬಿಕ ಜೀವನಕ್ಕೆ ಒಳ್ಳೆಯದು. ತಂದೆಯಿಂದ ಲಾಭ ಸಿಗಲಿದೆ. ಈ ರಾಶಿಯವರಿಗೆ ಆರೋಗ್ಯದಲ್ಲಿ ಏರುಪೇರಾಗಬಹುದು. ಈ ರಾಶಿಯವರಿಗೆ ಶತ್ರುಗಳ ಕಾಟ ಹೆಚ್ಚಾಗುತ್ತದೆ. ಈ ರಾಶಿಯ ಹೋಟೆಲ್ ಉದ್ಯಮಿಗಳಿಗೆ ಒಳ್ಳೆಯದು.

ಪ್ರತಿದಿನ ಸಂಜೆ ಉತ್ತರಾಭಿಮುಖವಾಗಿ ಕುಳಿತು ಲಲಿತಾ ಸಹಸ್ರ ಪಾರಾಯಣ ಮಾಡಬೇಕು ಅಥವಾ ಪ್ರತಿದಿನ ಬೆಳಗ್ಗೆ ಚಂಡಿಕಾ ಶ್ಲೋಕವನ್ನು 40 ಬಾರಿ ಪಠಿಸಬೇಕು. ಮಕರ ರಾಶಿಯವರಿಗೆ ಅಕ್ಟೋಬರ್ ತಿಂಗಳು ಶುಭವಲ್ಲ. ತಂದೆಯಿಂದ ಧನಸಹಾಯ ಆಗಲಿದೆ. ಸಣ್ಣಪುಟ್ಟ ವಾಹನ ಅಪಘಾತ ಆಗಲಿದೆ. ಈ ರಾಶಿಯ ಗರ್ಭಿಣಿಯರು ಜಾಗ್ರತೆಯಿಂದಿರಬೇಕು. ಮಕ್ಕಳ ಆರೋಗ್ಯದಲ್ಲಿ ಏರುಪೇರು ಆಗಲಿದೆ. ಈ ರಾಶಿಯವರು ಪ್ರತಿದಿನ ಸಂಜೆ ಶಿವ ಸಹಸ್ರನಾಮ ಪಾರಾಯಣ ಮಾಡಬೇಕು. ಕುಂಭ ರಾಶಿಯವರಿಗೆ ಮಂದತ್ವ ಬುದ್ಧಿ ಬರುತ್ತದೆ, ಚಂಚಲ ಮನಸ್ಸು ಇವರದಾಗುತ್ತದೆ. ಸಂಪಾದನೆಗೆ ಒಳ್ಳೆಯದು. ಈ ರಾಶಿಯವರು ದೂರ ಪ್ರಯಾಣದಲ್ಲಿ ಜಾಗೃತಿ ವಹಿಸಬೇಕು. ಪ್ರತಿದಿನ ಸಂಜೆ ದಕ್ಷಿಣಾಭಿಮುಖವಾಗಿ ಕುಳಿತು 80 ಬಾರಿ ರಾಹು ಗಾಯತ್ರಿ ಮಂತ್ರವನ್ನು ಪಠಿಸಬೇಕು. ಮೀನ ರಾಶಿಯವರ ತಾಯಿಯ ಆರೋಗ್ಯದಲ್ಲಿ ಏರುಪೇರಾಗುತ್ತದೆ. ಒಡಹುಟ್ಟಿದವರೊಂದಿಗೆ ಜಗಳಗಳಾಗಬಹುದು. ಈ ರಾಶಿಯವರಿಗೆ ಪ್ರೇಮ ವಿವಾಹವಾಗಬಹುದು. ಈ ರಾಶಿಯವರ ಮಕ್ಕಳ ವಿಷಯದಲ್ಲಿ ಅಸಮಧಾನ. ವಿಶೇಷ ಆಧ್ಯಾತ್ಮಿಕ ಅನುಭವ ಮತ್ತು ವಿದೇಶ ಪ್ರಯಾಣ ಸಾಧ್ಯತೆ. ಪತಿ ಅಥವಾ ಪತ್ನಿ ಆರೋಗ್ಯದಲ್ಲಿ ಏರುಪೇರು. ಇವರು ದುರ್ಗಾ ಆರಾಧನೆ ಮಾಡುವುದು ಒಳ್ಳೆಯದು.

Leave a Reply

Your email address will not be published. Required fields are marked *