ನೂರು ಮಕ್ಕಳ ತಾಯಿ ಗಾಂಧಾರಿ ಕೃಷ್ಣನಿಗೆ ಏಕೆ ಶಾಪ ಕೊಟ್ಟಳು ನೋಡಿ

0 15

100 ಮಕ್ಕಳ ತಾಯಿ ಗಾಂಧಾರಿ ಕೃಷ್ಣನಿಗೆ ಏಕೆ ಶಾಪ ಕೊಟ್ಟಳು ಎನ್ನುವ ಮಹಾಭಾರತದ ಸ್ವಾರಸ್ಯಕರ ಕಥೆಯನ್ನು ಈ ಲೇಖನದ ಮೂಲಕ ತಿಳಿದುಕೊಳ್ಳೋಣ.

ಪಾಂಡವರಿಗೆ ಧೃತರಾಷ್ಟ್ರ ಹಾಗೂ ಗಾಂಧಾರಿಯ ದರ್ಶನ ಮಾಡಿಸಿ ಇಬ್ಬರು ವೃದ್ಧರನ್ನು ಸಮಾಧಾನಪಡಿಸಿದ ಕೃಷ್ಣ ಗಾಂಧಾರಿಯ ಮುಂದೆ ನಿಂತಿದ್ದ. ಗಾಂಧಾರಿ ಪಾಂಡವರನ್ನು ಕ್ಷಮಿಸಿದಳು. ಗಾಂಧಾರಿ ಮತ್ತು ದ್ರೌಪದಿ ಇಬ್ಬರು ಪುತ್ರರನ್ನು ಕಳೆದುಕೊಂಡು ಶೋಕದಲ್ಲಿದ್ದರು. ತನಗಿಂತ ಹೆಚ್ಚು ಕಷ್ಟವನ್ನು ಪಾಂಚಾಲಿ ಅನುಭವಿಸಿದ್ದಾಳೆ ಎಂದುಕೊಂಡಳು ಗಾಂಧಾರಿ. ಸ್ವಯಂವರದಲ್ಲಿ ಗೆದ್ದುಕೊಂಡು ಬಂದ ಪಾಂಚಾಲಿಯನ್ನು ಐವರು ಹಂಚಿಕೊಂಡರು.

ಮದುವೆಯಾದ ನಂತರ ಬಹುತೇಕ ದಿನಗಳನ್ನು ಅಜ್ಞಾತವಾಸ, ವನವಾಸಗಳಲ್ಲೆ ಕಳೆದಿದ್ದಾಳೆ ಪಾಂಚಾಲಿ, ಅವಳು ಅರಮನೆಯಲ್ಲಿ ಮಲಗಿದ್ದಕ್ಕಿಂತ ಹೆಚ್ಚು ನಾರು ಮಡಿಯನ್ನು ಉಟ್ಟು ದರ್ಬೆಯ ಹಾಸಿಗೆಯಲ್ಲಿ ಮಲಗಿದ್ದೆ ಹೆಚ್ಚು. ಕುರು ಸಭೆಯಲ್ಲಿ ಪಾಂಚಾಲಿಗೆ ಅವಮಾನವಾಯಿತು ತನ್ನ ಮಕ್ಕಳು ಮಾಡಿದ್ದು ತಪ್ಪೆ ಆದರೆ ಧರ್ಮರಾಯ ಹೆಂಡತಿಯನ್ನು ಪಣಕಿಟ್ಟಿದ್ದು ತಪ್ಪು ಈ ಗಂಡು ಸಂತತಿಯವರಿಗೆ ಹೆಣ್ಣಿನ ಭಾವನೆ ಅರ್ಥವಾಗಲು ಸಾಧ್ಯವೇ ಇಲ್ಲ ಎಂದುಕೊಳ್ಳುತ್ತಾಳೆ ಗಾಂಧಾರಿ. ಅವಳ ಎದುರು ಕೃಷ್ಣ ನಿಂತೆ ಇದ್ದ. ಗಾಂಧಾರಿ ವೇದವ್ಯಾಸರು ದಯಪಾಲಿಸಿದ ದಿವ್ಯ ದೃಷ್ಟಿಯನ್ನು ಬಳಸಿಕೊಂಡು ಕುರುಕ್ಷೇತ್ರ ಯುದ್ಧವನ್ನು ಒಮ್ಮೆ ಅವಲೋಕಿಸಿತೊಡಗಿದಳು ಅಲ್ಲಿ ಹೆಣಗಳ ರಾಶಿ ಅವರ ಮುಂದೆ ಗೋಳಾಡುತ್ತಿದ್ದ ಹೆಣ್ಣು ಮಕ್ಕಳು, ವೃದ್ದರು ರಣಹದ್ದುಗಳು ಕಿತ್ತು ತಿನ್ನುತ್ತಿದ್ದ ಶರೀರ, ಅಳಿದುಳಿದ ಭಾಗಗಳನ್ನಾದರೂ ಕಾಪಾಡಿಕೊಳ್ಳಲು ಹೋರಾಡುತ್ತಿದ್ದ ಬಂಧುಗಳು, ಎಲ್ಲಿ ನೋಡಿದರೂ ನೆತ್ತರ ಹೀಗೆ ನೋಡುತ್ತಾ ವೈಶಂಪಾಯನ ಸರೋವರದ ಬಳಿ ಅಂಗಾತ ಮಲಗಿ ಚಿರನಿದ್ರೆಗೆ ಜಾರಿದ ಕುರುಕುಲದ ಸಾರ್ವಭೌಮನ ಕಡೆ ಹೋದಾಗ ಒಂದು ಕಡೆ ಮಗನ ದೇಹ ಇನ್ನೊಂದು ಕಡೆ ಪತಿಯ ದೇಹವನ್ನು ಇಟ್ಟುಕೊಂಡು ದಿಕ್ಕುತೋಚದೆ ಕಣ್ಣೀರು ಹಾಕುತ್ತಿದ್ದ ಭಾನುಮತಿಯನ್ನು ಕಂಡಳು ಗಾಂಧಾರಿ ಅವಳ ಕಣ್ಣಲ್ಲಿ ಅರಿವಿಲ್ಲದಂತೆ ನೀರು ಹರಿಯತೊಡಗಿತ್ತು, ಕೃಷ್ಣ ಅಲ್ಲಿನೋಡು ನನ್ನ ಸೊಸೆ ಭಾನುಮತಿ ಅವಳು ಗಂಡನಿಗಾಗಿ ಶೋಕಿಸಬೇಕಾ, ಹೆತ್ತ ಕರುಳಿಗಾಗಿ ದುಃಖ ಪಡಬೇಕಾ ಗೊತ್ತಾಗದೇ ದಿಗ್ಭ್ರಾಂತಳಾಗಿ ಕುಳಿತಿದ್ದಾಳೆ.

ಭೀಮನ ಗದೆಯ ಅಘಾತಕ್ಕೆ ತೊಡೆ ಮುರಿದುಕೊಂಡ ನನ್ನ ಮಗನ ಕಳೆಬರಹವನ್ನು ನೋಡು ಎನ್ನುತ್ತಾ ಗಾಂಧಾರಿಯ ದುಃಖ ಹೆಚ್ಚಾಯಿತು. ನಂತರ ಹೆಣಗಳ ರಾಶಿಯ ಮಧ್ಯದಲ್ಲಿ ಬಿದ್ದಿದ್ದ ದುಶ್ಯಾಸನನನ್ನು ನೋಡಿದಳು ರಣಹದ್ದುಗಳು ಕುಕ್ಕಿ ತಿಂದಿದ್ದ ಅವನ ಮುಖ ವಿಕರಾಗೊಂಡಿತ್ತು, ಭೀಮ ಬಗೆದು ಹಾಕಿದ್ದ ಅವನ ಎದೆಯಲ್ಲಿ ಗುಳ್ಳೆ ನರಿಗಳು, ತೋಳಗಳು, ನಾಯಿಗಳು ನೆತ್ತರವನ್ನು ಹೀರಿದ್ದವು, ಎದೆ ಬಿರಿದು ಹೋಗಿತ್ತು, ಆ ಶರೀರದ ಪಕ್ಕದಲ್ಲಿ ದುಶ್ಯಾಸನನ ಹೆಂಡತಿ ರೋಧಿಸುತ್ತ ಕುಳಿತಿದ್ದಳು, ಆಗ ಗಾಂಧಾರಿ ಕೃಷ್ಣ ನನ್ನ ಮಗ ದುಶ್ಶಾಸನನನ್ನು ನೋಡು ಕೇವಲ ತನ್ನ ಅಣ್ಣಂದಿರ ಸಂತೋಷಕ್ಕಾಗಿ ಪಾಂಚಾಲಿಯನ್ನು ಎಳೆದುತಂದು ಪಾಂಡವರಂತೆ ನೀನು ನನ್ನ ದಾಸಿ ಎಂದ ಮೂರ್ಖ ದುಶ್ಯಾಸನ ಹೇಗೆ ಹೆಣವಾಗಿ ಬಿದ್ದಿದ್ದಾನೆ ನೋಡು.

ನಂತರ ಕೃಷ್ಣ ಅಲ್ಲಿ ನೋಡು ನನ್ನ ಮಗ ವಿಕರ್ಣ ಅವನು ಯಾವ ತಪ್ಪು ಮಾಡಿದ್ದಾನೆ, ಜ್ಞಾನಿಗಳು ಅವನಿಗೆ ಗೌರವ ಕೊಡುತ್ತಿದ್ದರು, ಪ್ರತಿಬಾರಿಯೂ ಅಣ್ಣಂದಿರ ಕೃತ್ಯಗಳನ್ನು ಖಂಡಿಸುತ್ತ ಬರುತ್ತಿದ್ದವನು, ಅವನು ಕೂಡ ಭೀಮನಿಂದ ಹತನಾಗಿ ಹೇಗೆ ಮಲಗಿದ್ದಾನೆ ನೋಡು ಎಂದು ಯುದ್ಧಭೂಮಿಯನ್ನ ನೋಡುತ್ತಾ ಕೃಷ್ಣನಿಗೆ ಹೇಳುತ್ತಿದ್ದಳು ಭರತ ಕುಲದ ಬಹುತೇಕ ಎಲ್ಲಾ ಕ್ಷತ್ರಿಯರನ್ನು ಬಲಿತೆಗೆದುಕೊಂಡಿತು ಈ ಯುದ್ಧ ಹೀಗೆ ಹೇಳುತ್ತಿದ್ದ ಗಾಂಧಾರಿಗೆ ಅಂಗರಾಜನ ದೇಹದ ಪಕ್ಕದಲ್ಲಿ ಕುಳಿತು ಅಳುತ್ತಿದ್ದ ಅವನ ಹೆಂಡತಿ ಕಾಣಿಸುತ್ತಾಳೆ ಪಾಪ ಕರ್ಣ ಯಾವತ್ತೋ ಸುಯೋಧನ ತೋರಿಸಿದ ಪ್ರೀತಿಗೆ ತನ್ನ ಬದುಕನ್ನೇ ನಮ್ಮ ವಂಶಕ್ಕೆ ಸಮರ್ಪಿಸಿಬಿಟ್ಟ, ಮಹಾ ವಿಶ್ವಾಸಿ ಕರ್ಣನು ಅರ್ಜುನನ ಕಾಂತಿಯ ಮುಂದೆ ಹೇಗೆ ಶರಣಾಗಿ ಮಲಗಿದ್ದಾನೆ ನೋಡು. ಅಭಿಮನ್ಯುವಿನ ಹೆಂಡತಿ ಉತ್ತರೆಯ ಆರ್ತನಾದವನ್ನು ಕೇಳಿಸಿಕೊ ಕೃಷ್ಣ, ಇಷ್ಟು ಸಣ್ಣ ವಯಸ್ಸಿನಲ್ಲಿ ಪತಿಯನ್ನು ಕಳೆದುಕೊಂಡು ದುಃಖಿತಳಾಗಿರುವುದನ್ನು ನೋಡು. ಇದನ್ನೆಲ್ಲಾ ನೋಡಿಕೊಂಡು ನಾನು ಹೇಗೆ ಬದುಕಲಿ ಎನ್ನುತ್ತಾ ಗಾಂಧಾರಿಯ ದೇಹ ಕಂಪಿಸುತ್ತಿತ್ತು. ಕೃಷ್ಣ ಒಂದೇ ಒಂದು ಮಾತು ಆಡದೆ ಸುಮ್ಮನಿದ್ದನು. ಮತ್ತೆ ಗಾಂಧಾರಿ ನನ್ನ ಮಗ ದುರ್ಯೋಧನ ಸಾವಿಗೀಡಾಗಿದ್ದು ನನಗೆ ಬೇಸರವಾಗಲಿಲ್ಲ ಅವನ ಮಾರ್ಗದಿಂದ ದೂರ ಸರಿಯುವಂತೆ ಹೇಳಿದ್ದೆ ಆದರೆ ಅವನು ಕೇಳಲಿಲ್ಲ. ನೀನು ಶಸ್ತ್ರಗಳಿಂದ ಜಯಿಸಲ್ಪಟ್ಟು ಉತ್ತಮ ಲೋಕವನ್ನು ಸೇರುತ್ತೀಯಾ ಎಂದು ಹೇಳಿದ್ದೆ ನನ್ನ ಮಾತು ಸುಳ್ಳಾಗಲಿಲ್ಲ. ನನ್ನ ಮಗ ವೀರಾವೇಶದಿಂದ ಹೋರಾಡಿ ವೀರ ಸ್ವರ್ಗವನ್ನು ಸೇರಿದ್ದಾನೆ. ದ್ರೋಣ ಅಶ್ವತ್ಥಾಮಾದಿಗಳು, ಕರ್ಣ ಇವರೆಲ್ಲ ಮಹಾನ್ ವೀರರು ಇವರಿಂದ ಐದು ಜನ ಪಾಂಡವರನ್ನು ಪರಾಭವಗೊಳಿಸಲು ಆಗಲಿಲ್ಲ, ಅವರಲ್ಲಿ ಒಬ್ಬರನ್ನು ವಧಿಸಲು ಸಾಧ್ಯವಾಗಲಿಲ್ಲ, ಕುರುವಂಶವು ನಾಶವಾದರೂ ಪಾಂಡವರಿಗೆ ಏನೇನು ಆಗಲಿಲ್ಲ ಎನ್ನುತ್ತಾ ಗಾಂಧಾರಿ ಕೃಷ್ಣನಿಗೆ ನಿನ್ನ ರಕ್ಷಣೆ ಇಲ್ಲದೆ ಇದು ಸಾಧ್ಯವಾಗುತ್ತಿರಲಿಲ್ಲ. ಕುಂತಿಗೆ ಕೊಟ್ಟ ಮಾತನ್ನು ನೀನು ಉಳಿಸಿಕೊಂಡು ಬಿಟ್ಟೆ ಅವಳ ಐವರು ಮಕ್ಕಳನ್ನು ಉಳಿಸಿಬಿಟ್ಟೆ ಅಲ್ಲದೆ ಕಡೆಯ ಕ್ಷಣದಲ್ಲಿ ನನ್ನ ದೃತರಾಷ್ಟ್ರನ ಸಿಟ್ಟಿನಿಂದ ಸಹ ಅವರನ್ನು ರಕ್ಷಿಸಿಬಿಟ್ಟೆ. ಈ ದಯೆ ಕೌರವರ ಮೇಲೆ ಏಕೆ ಇರಲಿಲ್ಲ, ನೀನು ಮನಸ್ಸು ಮಾಡಿದ್ದರೆ ಮಹಾಭಾರತ ಯುದ್ಧವನ್ನು ತಡೆಯಬಹುದಿತ್ತು, ಕೌರವರು ಮತ್ತು ಪಾಂಡವರ ನಡುವೆ ನೀನು ಸಂಧಾನ ಮಾಡಿದಿದ್ದರೆ, ಅವರ ನಡುವೆ ದ್ವೇಷ ಬೆಳೆಯದಂತೆ ನೋಡಿಕೊಂಡಿದ್ದರೆ ಈ ಮಹಾ ವಿನಾಶ ನಡೆಯುತ್ತಿರಲಿಲ್ಲ. ಭಯಾನಕ ನರಮೇಧಕ್ಕೆ ಕಾರಣನಾದ ನೀನು ಶಿಕ್ಷಾರ್ಹ ಅಪರಾಧಿ ನೀನು ಸಹ ಶಿಕ್ಷೆಯನ್ನು ಅನುಭವಿಸಬೇಕು. ನನ್ನ ವಂಶವನ್ನು ನಿರ್ವಂಶ ಮಾಡಿದ ನೀನು ಕೂಡ ವಂಶದ ನಾಶದ ನೋವನ್ನು ಅನುಭವಿಸಬೇಕು, ನೀನು ವಂಶದ ನಾಶವನ್ನು ನೋಡುತ್ತಾ ಕಾಡುಗಳಲ್ಲಿ ಅಲೆಯುವಂತಾಗಬೇಕು, ನಿನಗೆ ಕ್ಷತ್ರಿಯ ಸದೃಶ್ಯ ವಿರೋಚಿತ ಮರಣ ಬಾರದಿರಲಿ ಇದು ಸಮಸ್ತ ತಾಯಂದಿರ ಪರವಾಗಿ ಗಾಂಧಾರಿ ಕೊಡುತ್ತಿರುವ ಶಾಪ ಎಂದು ಹೇಳುತ್ತಾ ಕೋಪಾಗ್ನಿಯಲ್ಲಿ ಬೇಯುತ್ತಿದ್ದಳು ಗಾಂಧಾರಿ. ಅಲ್ಲಿವರೆಗೂ ಸುಮ್ಮನಿದ್ದ ಕೃಷ್ಣ ಗಾಂಧಾರಿ ಶಾಪ ಕೊಟ್ಟ ನಂತರ ಮುಖದಲ್ಲಿ ಮುಗುಳ್ನಗೆ ತಂದುಕೊಳ್ಳುತ್ತಾನೆ.

Leave A Reply

Your email address will not be published.