ನಿಮ್ಮಲ್ಲಿ 15 ವರ್ಷಗಳ ಹಳೆಯ ವಾಹನಗಳು ಇದ್ರೆ ಗುಜರಿ ಸೇರೋದು ಪಕ್ಕಾ.!

0 1

ಕರೊನಾ ಸಂಕಷ್ಟದಿಂದ ಕುಸಿದಿರುವ ಆಟೋಮೊಬೈಲ್ ಉದ್ಯಮದ ಚೇತರಿಕೆಗಾಗಿ ಕೇಂದ್ರ ಸರ್ಕಾರ ಸ್ಕ್ರ್ಯಾಪಿಂಗ್​​ ಪಾಲಿಸಿಯನ್ನು ಅಕ್ಟೋಬರ್ ಮೊದಲ ವಾರ ಬಿಡುಗಡೆಗೊಳಿಸುತ್ತಿದೆ. ಈ ನೀತಿ ಸಮರ್ಪಕವಾಗಿ ಜಾರಿಯಾದರೆ, ರಾಜ್ಯದಲ್ಲಿ 48 ಲಕ್ಷಕ್ಕೂ ಹೆಚ್ಚಿನ ವಾಹನಗಳು ಗುಜರಿಗೆ ಸೇರುವ ಸಾಧ್ಯತೆಗಳಿವೆ. ವಾಯುಮಾಲಿನ್ಯ ತಡೆಯುವ ನಿಟ್ಟಿನಲ್ಲಿ ಹಳೆಯ ವಾಹನಗಳನ್ನು ಗುಜರಿಗೆ ( ಸ್ಕ್ರ್ಯಾಪ್​​ ) ಹಾಕುವಂತೆ ರಾಷ್ಟ್ರೀಯ ಹಸಿರು ನ್ಯಾಯಾಧಿಕರಣ ಈ ಹಿಂದೆಯೇ ಆದೇಶಿಸಿದೆ. ಅದಕ್ಕೆ ತಕ್ಕಂತೆ ಕೇಂದ್ರ ಸರ್ಕಾರ ಸ್ಕ್ರ್ಯಾಪಿಂಗ್ ಪಾಲಿಸಿ ರೂಪಿಸುತ್ತಿದ್ದು, ಇನ್ನು 25 ದಿನಗಳಲ್ಲಿ ಅದನ್ನು ಪ್ರಕಟಿಸಲಿದೆ. ಕಾರು ಹಾಗೂ ಅದಕ್ಕಿಂತ ಹೆಚ್ಚಿನ ಸಾಮರ್ಥ್ಯದ ವಾಹನಗಳಷ್ಟೇ ಅಲ್ಲದೆ, ದ್ವಿಚಕ್ರ ಮತ್ತು ತ್ರಿಚಕ್ರದ ವಾಹನಗಳೂ ನೀತಿಗೆ ಒಳಪಡುವ ಸಾಧ್ಯತೆಗಳಿವೆ.ಮಾಲಿನ್ಯ ನಿಯಂತ್ರಣ ಹಾಗೂ ಎಲೆಕ್ಟ್ರಿಕ್ ವಾಹನಗಳಿಗೆ ರಹದಾರಿಯನ್ನು ಸೃಷ್ಟಿಸುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಸ್ಕ್ರ್ಯಾಪೇಜ್ ಪಾಲಿಸಿ(ಗುಜರಿ ನೀತಿ)ಯನ್ನು ಜಾರಿಗೆ ತರಲು ಹೊರಟಿದ್ದು , ಶೀಘ್ರವೇ ಈ ನೀತಿಗೆ ಸರಕಾರದಿಂದ ಒಪ್ಪಿಗೆ ಸಿಗುವ ವಿಶ್ವಾಸವನ್ನು ಕೇಂದ್ರ ಸಚಿವ ನಿತಿನ್ ಗಡ್ಕರಿ ವ್ಯಕ್ತಪಡಿಸಿದ್ದಾರೆ. 15 ವರ್ಷಗಳಿಗಿಂತ ಹಳೆಯ ವಾಹನಗಳ ಫಿಟ್​ನೆಸ್ ಪ್ರಮಾಣಪತ್ರ ರದ್ದು ಮಾಡಿ, ಅವುಗಳನ್ನು ಸರ್ಕಾರದಿಂದಲೇ ಸ್ಕ್ರ್ಯಾಪ್ ಮಾಡಲಾಗುತ್ತದೆ. ಹೀಗೆ ಒಮ್ಮೆ ವಾಹನಗಳ ಸ್ಕ್ರ್ಯಾಪ್ ಮಾಡಲು ಆರಂಭಿಸಿದರೆ ರಾಜ್ಯದಲ್ಲಿನ 48 ಲಕ್ಷಕ್ಕೂ ಹೆಚ್ಚಿನ ವಾಹನಗಳು ಗುಜರಿಗೆ ಸೇರಲಿವೆ.

ಎಲೆಕ್ಟ್ರಿಕ್ ವಾಹನಗಳ ಬಳಕೆಗೆ ದಾರಿ ಮಾಡಿಕೊಡುವ ನಿಟ್ಟಿನಲ್ಲಿ 15 ವರ್ಷಗಳ ಹಳೆಯ ವಾಹನಗಳನ್ನು ಸ್ಕ್ರ್ಯಾಪ್ ಮಾಡಲು ಅನುಮತಿ ನೀಡುವ ತಿದ್ದುಪಡಿಗಳನ್ನು ಮೋಟಾರು ವಾಹನ ಕಾಯ್ದೆಗೆ 2019ರ ಜುಲೈ 15 ರಂದು ಒಪ್ಪಿಗೆ ನೀಡಲಾಗಿತ್ತು. ಈ ಸಂಬಂಧ ನಾವು ಪ್ರಸ್ತಾವನೆಯನ್ನು ಸಲ್ಲಿಸಿದ್ದೇವೆ ಮತ್ತು ಸ್ಕ್ರ್ಯಾಪಿಂಗ್ ಪಾಲಿಸಿಗೆ ಆದಷ್ಟು ಬೇಗನೆ ಒಪ್ಪಿಗೆ ಸಿಗುವ ನಿರೀಕ್ಷೆಯಲ್ಲಿ ನಾನಿದ್ದೇನೆ ಎಂದು ಗಡ್ಕರಿ ತಿಳಿಸಿದ್ದಾರೆ. ರಾಜ್ಯದಲ್ಲಿ ಸಾರಿಗೆ ಇಲಾಖೆ ಗುರುತಿಸಿರುವಂತೆ 2019ರ ಮಾರ್ಚ್​ವರೆಗೆ 47,49,996 ವಾಹನಗಳು 15 ವರ್ಷ ಮೀರಿವೆ. ಅದರಲ್ಲಿ ಸಾರಿಗೆಯೇತರ ವಾಹನಗಳೇ ಹೆಚ್ಚಿದ್ದು, ಆ ಪೈಕಿ 43.20 ಲಕ್ಷ ಬೈಕ್, ಕಾರು, ಜೀಪ್, ಟ್ಯಾ›ಕ್ಟರ್, ಟ್ರೖೆಲರ್ಸ್, ಕಟ್ಟಡ ನಿರ್ಮಾಣ ವಾಹನಗಳು ಸೇರಿವೆ. ಅದರಲ್ಲಿ 34.81 ಲಕ್ಷ ದ್ವಿಚಕ್ರ ವಾಹನಗಳು, 6.52 ಲಕ್ಷ ಕಾರುಗಳಿವೆ. ಈ ಸಂಖ್ಯೆ ಇದೀಗ ಇನ್ನಷ್ಟು ಹೆಚ್ಚಾಗಿದೆ. ಉಳಿದಂತೆ ಮಲ್ಟಿಆಕ್ಸಲ್ ವಾಹನ, ಟ್ರಕ್, ಲಾರಿಗಳು 1.25 ಲಕ್ಷ, ಲಘು ಗೂಡ್ಸ್ ವಾಹನಗಳು 1.54 ಲಕ್ಷ, ಸ್ಟೇಜ್ ಕ್ಯಾರೇಜ್, ಕಾಂಟ್ರ್ಯಾಕ್ಟ್​​ ಕ್ಯಾರೇಜ್, ಶಿಕ್ಷಣ ಸಂಸ್ಥೆಗಳ ಬಸ್​ಗಳು ಸೇರಿ ಇನ್ನಿತರ ವಾಹನಗಳು 29,560, ಮೋಟಾರ್ ಕ್ಯಾಬ್, ಮ್ಯಾಕ್ಸಿ ಕ್ಯಾಬ್​ಗಳು 69,123, ಆಂಬುಲೆನ್ಸ್ 1,706, ಮೂರು ಮತ್ತು ಆರು ಆಸನದ ವಾಹನಗಳು 1.26 ಲಕ್ಷ ಹಾಗೂ ಇನ್ನಿತರ ವಾಹನಗಳು 15,809 ಇವೆ. ಒಟ್ಟಾರೆ 4.83 ಲಕ್ಷ ಸಾರಿಗೆ ವಾಹನಗಳು 15 ವರ್ಷ ಮೀರಿವೆ.

ಇನ್ನೂ ಈ ಪಾಲಿಸಿ ಏನೂ? ಎಂದು ನೋಡುವುದಾದರೆ , 15 ವರ್ಷಕ್ಕಿಂತ ಹಳೆಯ ವಾಹನಗಳನ್ನು ಗುಜರಿಗೆ ಕಡ್ಡಾಯವಾಗಿ ಹಾಕಬೇಕು. ದೇಶದಲ್ಲಿ 15 ವರ್ಷಕ್ಕಿಂತ ಮೇಲ್ಪಟ್ಟ ಲಕ್ಷಾಂತರ ವಾಹನಗಳು ಓಡಾಡುತ್ತಿವೆ. ಇದರಿಂದ ಮಾಲಿನ್ಯ ಹೆಚ್ಚಾಗುತ್ತಿದೆ. ಹೀಗಾಗಿ ಸ್ಕ್ರ್ಯಾಪ್ ಪಾಲಿಸಿ ಮೂಲಕ ಆಯಸ್ಸು ಮೀರಿದ ವಾಹನಗಳನ್ನು ಕಡ್ಡಾಯವಾಗಿ ಗುಜರಿಗೆ ಹಾಕಬೇಕು. ಈ ವೇಳೆ ವಾಹನದ ಬಿಡಿಭಾಗಗಳ ಕಂಡಿಷನ್ ಆಧರಿಸಿ ಸರ್ಕಾರವು ವಾಹನವನ್ನು ಗುಜರಿಗೆ ಹಾಕುವ ಮಾಲೀಕರಿಗೆ ಹಣ ನೀಡುತ್ತದೆ. ಸರ್ಕಾರ ನಿಗದಿ ಪಡಿಸುವ ಹಣ ಹಳೇ ವಾಹನದ ರೀಸೇಲ್ ವ್ಯಾಲ್ಯೂಗಿಂತ ಹೆಚ್ಚಿರಲಿದೆ ಅಥವಾ ಸಮಾನಾಗಿ ಇರಲಿದೆ. ರಾಜ್ಯ ಸರ್ಕಾರವು ಕೇಂದ್ರ ಸರ್ಕಾರ ರೂಪಿಸಲಿರುವ ಸ್ಕ್ರ್ಯಾಪಿಂಗ್​​ ಪಾಲಿಸಿ ಜಾರಿ ಮಾಡಬೇಕೆಂದರೆ ವಾಹನಗಳನ್ನು ಸ್ಕ್ರಾಯಪ್ ಮಾಡಲು ಬೇಕಾಗುವ ಯಂತ್ರಗಳನ್ನು ಅಳವಡಿಸಬೇಕು. ಅದಾದ ನಂತರ 15 ವರ್ಷದ ಹಳೆಯ ವಾಹನಗಳನ್ನು ಗುರುತಿಸಿ, ಅವುಗಳ ಫಿಟ್​ನೆಸ್ ಸರ್ಟಿಫಿಕೇಟ್ ರದ್ದು ಮಾಡಿ ವಶಕ್ಕೆ ಪಡೆಯಬೇಕು. ನಂತರ ಅವುಗಳನ್ನು ಸರ್ಕಾರ ನಿರ್ವಿುಸಿದ ಕೇಂದ್ರಗಳಲ್ಲಿ ಒಂದೊಂದೇ ಬಿಡಿಭಾಗ ಬೇರ್ಪಡಿಸಿ ಸ್ಕ್ರಾಯಪ್ ಮಾಡಬೇಕಿದೆ. ಹೀಗೆ ಸ್ಕ್ರಾಯಪ್ ಮಾಡುವಾಗ ವಾಹನಗಳ ಮೌಲ್ಯಮಾಪನ ಮಾಡಿ, ಆ ಮೊತ್ತವನ್ನು ವಾಹನ ಮಾಲೀಕರಿಗೆ ನೀಡಬೇಕಿದೆ. ಆದರೆ, ರಾಜ್ಯದಲ್ಲಿ ಕೆಲವೆಡೆ ಮಾತ್ರ ಸ್ಕ್ರ್ಯಾಪಿಂಗ್​​ ಕೇಂದ್ರಗಳನ್ನು ಆರಂಭಿಸಲಾಗಿದೆ. ಜತೆಗೆ ವಾಹನಗಳ ಮೌಲ್ಯಮಾಪನ ಸಂಬಂಧ ಸಮರ್ಪಕ ನಿಯಮ ರೂಪಿಸಿಲ್ಲ. ಹೀಗಾಗಿ ನೀತಿ ಪ್ರಕಟಗೊಂಡರೂ, ವಾಹನಗಳನ್ನು ಸ್ಕ್ರಾಯಪ್ ಮಾಡುವ ಪ್ರಕ್ರಿಯೆಗೆ ಸದ್ಯಕ್ಕೆ ಚಾಲನೆ ನೀಡುವುದು ಸಾಧ್ಯವಿಲ್ಲ ಎನ್ನುವುದು ಸಾರಿಗೆ ಇಲಾಖೆ ಅಧಿಕಾರಿಗಳ ಅನಿಸಿಕೆ.

ಈ ನೀತಿಯ ಉಪಯೋಗ ಏನು? ಎಂದು ನೋಡುವುದಾದರೆ , ಪ್ರಮುಖವಾಗಿ ವಾಯು ಮಾಲಿನ್ಯ ಹಾಗೂ ಶಬ್ದ ಮಾಲಿನ್ಯ ಕಡಿಮೆಯಾಗಲಿದೆ. ಇಷ್ಟೇ ಅಲ್ಲ, ಹಳೇ ವಾಹನಗಳು ಗುಜರಿಗೆ ಸೇರುವುದರಿಂದ ಹೊಸ ವಾಹನಗಳಿಗೆ ಬೇಡಿಕೆ ಹೆಚ್ಚಾಗಲಿದೆ. ಇದರಿಂದ ಆಟೋಮೊಬೈಲ್ ಕ್ಷೇತ್ರಕ್ಕೆ ಹೆಚ್ಚಿನ ಉತ್ತೇಜನ ಸಿಗಲಿದೆ. ಗುಜರಿಗೆ ಹಾಕುವ ಮೊದಲು ಉತ್ತಮ ಸ್ಥಿತಿಯಲ್ಲಿರುವ ಬಿಡಿಭಾಗಗಳನ್ನು ಪುನರ್ ಬಳಕೆಗೂ ಅವಕಾಶ ಕಲ್ಪಿಸಲಾಗುತ್ತದೆ. ಹಾಗೆಯೇ ಈ ನೀತಿಗೆ ವಿರೋಧ ಕೂಡಾ ಹೆಚ್ಚುತ್ತಿದ್ದು , ಆರ್ಥಿಕ ಶಸಕ್ತರಲ್ಲದವರು ಹಳೇ ವಾಹನದಲ್ಲೇ ಜೀವನ ನಡೆಸುತ್ತಾರೆ. ಈ ವೇಳೆ ಅವರ ವಾಹನ ಗುಜರಿಗೆ ತಳ್ಳಿದರೆ ಬದುಕು ದುಸ್ತರವಾಗಲಿದೆ ಹೊಸ ವಾಹನ ಖರೀದಿ ಸಾಮರ್ಥ್ಯ ಕೂಡ ಕಡಿಮೆ. ಹೀಗಾಗಿ ಬಡ ವರ್ಗವೂ ವಿರೋಧ ವ್ಯಕ್ತಪಡಿಸುತ್ತಿದೆ. ಸ್ಕ್ರ್ಯಾಪ್ ಪಾಲಿಸಿ ಪ್ರಕಾರ 15 ವರ್ಷಕ್ಕಿಂತ ಮೇಲ್ಪಟ್ಟ ಹಲವು ವಾಹನಗಳು ಉತ್ತಮ ಸ್ಥಿತಿಯಲ್ಲಿವೆ. ಇಷ್ಟೇ ಅಲ್ಲ ಪ್ರತಿ ವಾಹನ ಆರು ತಿಂಗಳಿಗೊಮ್ಮೆ ಎಮಿಷನ್ ಟೆಸ್ಟ್ ಮಾಡಿಸಬೇಕು. ಎಮಿಷನ್ ಟೆಸ್ಟ್ ಪಾಸಾದ ವಾಹನವನ್ನು ಗುಜರಿಗೆ ಹಾಕುವುದು ಎಷ್ಟು ಸರಿ? ಎಮಿಶನ್ ಸರಿ ಇಲ್ಲ ಎಂದರ್ಥವೇ? ಇದರ ಜೊತೆಗೆ 10 ವರ್ಷ ಮೇಲ್ಪಟ್ಟ ವಾಹನಗಳಿಗೆ ಫಿಟ್ನೆಸ್ ಸರ್ಟಿಫಿಕೇಟ್ ಮಾಡಿಸಬೇಕು. ಸ್ಕ್ರ್ಯಾಪ್ ಪಾಲಸಿ ಜಾರಿಗೆ  ಬಂದರೆ ಫಿಟ್ನೆಸ್ ಸರ್ಟಿಫಿಕೇಟ್ ಅವಶ್ಯಕತೆ ಏನು? ಹೀಗೆ ಹಲವು ಗೊಂದಲಗಳು ಈ ಪಾಲಿಸಿಯಲ್ಲಿವೆ.

ಅಷ್ಟೇ ಅಲ್ಲದೆ ಮುಂದಿನ ತಿಂಗಳು ಮಂಡನೆಯಾಗಲಿರುವ  ಬಜೆಟ್‌ನಲ್ಲಿ ಸ್ಕ್ರ್ಯಾಪಿಂಗ್ ಪಾಲಿಸಿ ಉಲ್ಲೇಖವಾಗುವ ಸಾಧ್ಯತೆ ಇದೆ. ಒಂದೊಮ್ಮೆ ಈ ನೀತಿಯನ್ನು ಜಾರಿಗೆ ತಂದರೆ ಆಟೋಮೊಬೈಲ್ ಕ್ಷೇತ್ರಕ್ಕೆ ಲಾಭವಾಗಲಿದ್ದು, ಹೊಸ ವಾಹನಗಳಿಗೆ ಬೇಡಿಕೆ ಸೃಷ್ಟಿಯಾಗಲಿದೆ ಎಂಬ ವಿಶ್ಲೇಷಣೆ ಮಾಡಲಾಗುತ್ತಿದೆ. ಹೀಗಿದ್ದೂ, ಈ ಬಗ್ಗೆ ಅಂತಿಮ ನಿರ್ಧಾರವನ್ನು ಪ್ರಧಾನಿ ಕಾರ್ಯಾಲಯವು ತೆಗೆದುಕೊಳ್ಳಬೇಕಿದೆ. ಈ ಮೊದಲು ಸಂಬಂಧಿಸಿದವರೊಂದಿಗೆ ಮತ್ತೆ ಮಾತುಕತೆ ನಡೆಸಿ ನೀತಿಯನ್ನು ರೂಪಿಸುವಂತೆ ಅವರು ಪ್ರಧಾನಿ ಕಾರ್ಯಾಲಯ ಸೂಚಿಸಿತ್ತು. ಒಂದೊಮ್ಮೆ ಈ ನೀತಿ ಜಾರಿಯಾದರೆ ಭಾರತವು ಆಟೋಮೊಬೈಲ್ ಹಬ್ ಆಗಲಿದ್ದು, ವಾಹನಗಳ ಬೆಲೆಯಲ್ಲಿ ಇಳಿಕೆಯಾಗಬಹುದು.

Leave A Reply

Your email address will not be published.