ಹಳ್ಳಿಯಲ್ಲಿ ಇದ್ದುಕೊಂಡು ಏನ್ ಮಾಡೋಕೆ ಆಗುತ್ತೆ, ಅನ್ನೋರು ಇವರ ಸಾಧನೆಯನ್ನು ನೋಡಲೇಬೇಕು

0 1

ಯೂಟೂಬ್ ಇಂದು ಜಾಗತಿಕ ವೇದಿಕೆಯಾಗಿ ಹೊರಹೊಮ್ಮಿದೆ. ಅಡುಗೆಗೆ ಸಂಬಂಧಿಸಿದಂತೆ ಭಾರತದ ಅತ್ಯಂತ ಪಾಪ್ಯುಲರ್ 10 ಯೂಟ್ಯೂಬ್ ಚಾನೆಲ್ ಗಳಲ್ಲಿ ತಮಿಳಿನ ವಿಲೇಜ್ ಕುಕ್ಕಿಂಗ್ ಚಾನೆಲ್ ಅಗ್ರಸ್ಥಾನ ಪಡೆದುಕೊಂಡಿದೆ. ಈ ಚಾನೆಲ್ ಹೇಗೆ ಪ್ರಾರಂಭವಾಯಿತು, ಎಲ್ಲಿ ಪ್ರಾರಂಭವಾಯಿತು ಎಂಬಿತ್ಯಾದಿ ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿದುಕೊಳ್ಳೋಣ.

ಈ ಚಾನೆಲ್ ಶುರುವಾಗಿ ಮೂರು ವರ್ಷಗಳಲ್ಲಿ ಒಂದು ಕೋಟಿಗಿಂತ ಹೆಚ್ಚು ಚಂದಾದಾರರನ್ನು ಹೊಂದಿದೆ. ಇದು ದಕ್ಷಿಣ ಭಾರತದಲ್ಲಿ ಅತಿ ಹೆಚ್ಚು ಚಂದಾದಾರರನ್ನು ಹೊಂದಿರುವ ಟ್ರೆಂಡಿ ಅಡುಗೆ ರೆಸಿಪಿಯ ವಾಹಿನಿಯಾಗಿದೆ. ಈ ವಾಹಿನಿ ಅಂತರರಾಷ್ಟ್ರೀಯ ಮನ್ನಣೆಯನ್ನು ಪಡೆದಿದೆ. ಈ ಚಾನೆಲ್ ಒಂದು ಕುಟುಂಬದ ಐದಾರು ಸದಸ್ಯರು ಸೇರಿ ಒಂದು ಸಣ್ಣ ಪ್ರಯತ್ನದಿಂದ ಅನಿರೀಕ್ಷಿತವಾಗಿ ಪ್ರಾರಂಭವಾಗಿ ಇಂದು ಯೂಟ್ಯೂಬ್ ಲೋಕದಲ್ಲಿ ತನ್ನದೇ ಛಾಪು ಮೂಡಿಸಿದೆ. ಈ ವಾಹಿನಿಯ ಟೀಮ್ ನ ಒಗ್ಗಟ್ಟು, ಅವರು ಸಂಭ್ರಮದಿಂದ ಅಡುಗೆ ಮಾಡುವ ಬಗೆ, ಎಲ್ಲರನ್ನೂ ಆತ್ಮೀಯವಾಗಿ ಆಹ್ವಾನಿಸುವ ರೀತಿ ವೀಕ್ಷಕರಿಗೆ ಮುದನೀಡುತ್ತದೆ. ಇವರು ತಯಾರಿಸುವ ರುಚಿಕಟ್ಟಾದ, ಸ್ವಾದಿಷ್ಟವಾದ ರೆಸಿಪಿಗಳಿಗೆ ಮನಸೋಲದವರೇ ಇಲ್ಲ. ದೇಶಿಯ, ಹಳ್ಳಿ ಸೊಗಡಿನ ಸಾಂಪ್ರದಾಯಿಕ ಅಡುಗೆಗಳಿಗೆ ಈ ಚಾನೆಲ್ ಹೆಸರುವಾಸಿಯಾಗಿದೆ.

ಈ ವಾಹಿನಿ ತಮಿಳುನಾಡಿನ ಪುದುಕೋಟೆ ಎಂಬ ನಗರದ ಚಿನ್ನವೀರಮಂಗಲಂ ಎಂಬ ಪುಟ್ಟ ಗ್ರಾಮದಲ್ಲಿ 2018 ರಲ್ಲಿ ಪ್ರಾರಂಭವಾಯಿತು. ಪ್ರಾರಂಭದಲ್ಲಿ ಈ ವಾಹಿನಿಯ ಚಂದಾದಾರರ ಸಂಖ್ಯೆ 2,000 ಇತ್ತು. ಈ ವಾಹಿನಿಯನ್ನು ಒಂದೇ ಕುಟುಂಬದ ಆರು ಜನ ಸದಸ್ಯರು ಪ್ರಾರಂಭಿಸಿದರು. ಕುಟುಂಬದ ಹಿರಿಯ ತಾತನಿಂದ ಮಾರ್ಗದರ್ಶನ ಪಡೆದು ಉಳಿದವರು ಈ ವಾಹಿನಿಯನ್ನು ನಡೆಸಿಕೊಂಡು ಬರುತ್ತಿದ್ದಾರೆ. ತಾತ ಅಡುಗೆ ಮಾಡುವ ವೃತ್ತಿಯಲ್ಲಿ ತೊಡಗಿದ್ದರು ಮದುವೆ ಸಮಾರಂಭಗಳಿಗೆ ಅಡುಗೆ ಮಾಡುತ್ತಿದ್ದರು. ಉಳಿದ ಯುವಕರು ಹಳ್ಳಿಯಲ್ಲಿ ಕೃಷಿ ಮಾಡುತ್ತಿದ್ದರು ಆರು ತಿಂಗಳು ಕೃಷಿ ಕೆಲಸವಿದ್ದರೆ ಇನ್ನೂ ಆರು ತಿಂಗಳು ಕೆಲಸ ಇರುತ್ತಿರಲಿಲ್ಲ. ಕೆಲಸ ಇಲ್ಲದ ಸಮಯದಲ್ಲಿ ರಚನಾತ್ಮಕವಾಗಿ ಏನಾದರೂ ಮಾಡಬೇಕು ಎಂದು ಯುವಕರಿಗೆ ಅನಿಸಿತು. ತಾತನ ಮಾರ್ಗದರ್ಶನದಲ್ಲಿ ಅಡುಗೆಯ ಯೂಟ್ಯೂಬ್ ಚಾನೆಲ್ ಪ್ರಾರಂಭಿಸುವ ಯೋಚನೆ ಶ್ರೀ ಸುಬ್ರಹ್ಮಣ್ಯಂ ಎಂಬ ಯುವಕನಿಗೆ ಬಂದಿತು. ಯುಟ್ಯೂಬ್ ಚಾನೆಲ್ ಮಾಡಲು ಉತ್ತಮ ಕ್ಯಾಮೆರಾ ಎಡಿಟಿಂಗ್ ಈ ಎಲ್ಲಾ ಪ್ರೊಸೆಸ್ ಅನ್ನು ಸುಬ್ರಹ್ಮಣ್ಯಂ ಅವರು ತಾಳ್ಮೆಯಿಂದ ಮಾಡುತ್ತಾ ಬರುತ್ತಿದ್ದಾರೆ.

ಮೊದಲು ತಮಗೆ ಇಷ್ಟವಾದ ರೆಸಿಪಿ ಹಾಗೂ ತಮಗಷ್ಟೇ ಬೇಕಾದ ಸಾಮಾಗ್ರಿಗಳನ್ನು ಬಳಸಿ ಅಡುಗೆ ಮಾಡಿ ವಿಡಿಯೋಗಳನ್ನು ಪ್ರಕಟಿಸಲಾಗುತ್ತಿತ್ತು. ಈ ವಾಹಿನಿಯ ಕುಕ್ಕಿಂಗ್ ವಿಡಿಯೋಗಳು ದಿನೇ ದಿನೇ ಹೆಚ್ಚೆಚ್ಚು ಪಾಪ್ಯುಲರ್ ಆದಂತೆ ಅದರ ಚಂದಾದಾರರು ಕೇಳಿದ ಅಡುಗೆ ಮಾಡಲು ಈ ತಂಡ ಪ್ರಾರಂಭಿಸಿತು. ವೆಜ್, ನಾನ್ ವೆಜ್ ಅಡುಗೆಗಳು ಹೆಚ್ಚು ಫೇಮಸ್ ಆದವು. ಇವರು ಅಡುಗೆಗೆ ಬೇಕಾಗುವ ಮಸಾಲೆಯನ್ನು ಮನೆಯಲ್ಲೇ ಯಾವುದೇ ಆಧುನಿಕ ಉಪಕರಣಗಳನ್ನು ಬಳಸದೆ ಅರೆಯುವ ಕಲ್ಲಿನಲ್ಲಿ ತಯಾರಿಸುತ್ತಾರೆ ಅಲ್ಲದೆ ಕಟ್ಟಿಗೆ ಒಲೆಯಲ್ಲಿ ಇವರು ಖಾದ್ಯ ತಯಾರಿಸುತ್ತಾರೆ. ತಾವು ಅಡುಗೆಗೆ ಬಳಸುತ್ತಿರುವ ಸಾಮಗ್ರಿಗಳ ಹೆಸರುಗಳನ್ನು ವೀಕ್ಷಕರಿಗೆ ತಿಳಿಸುತ್ತಾ ತಾವು ಮಾಡುವ ಅಡುಗೆಯನ್ನು ಸ್ಟೆಪ್ ಬೈ ಸ್ಟೆಪ್ ವಿವರಿಸುತ್ತಾ ರೆಸಿಪಿ ತಯಾರಿಸುವ ಇವರು ಪ್ರಾರಂಭದಿಂದ ಅಡುಗೆ ಮುಗಿಯುವವರೆಗೂ ವೀಕ್ಷಕರ ಆಸಕ್ತಿಯನ್ನು ಹಿಡಿದಿಟ್ಟುಕೊಳ್ಳುತ್ತಾರೆ. ಪ್ರತಿ ವಿಡಿಯೋ ಆರಂಭದಲ್ಲಿ ಇವರೆಲ್ಲರೂ ಅಡುಗೆ ಸಾಮಾಗ್ರಿಗಳ ಮುಂದೆ ಕುಳಿತು ಆ ದಿನ ತಾವು ಮಾಡುತ್ತಿರುವ ಅಡುಗೆ ಹೆಸರನ್ನು ತಿಳಿಸಿ ಎಲ್ಲರೂ ಬನ್ನಿ ನಿಮಗೆಲ್ಲರಿಗೂ ಸ್ವಾಗತ ಎಂಬ ಘೋಷವಾಕ್ಯವನ್ನು ಎಲ್ಲರೂ ಒಟ್ಟಿಗೆ ಕೂಗಿ ವೀಕ್ಷಕರನ್ನು ಆಹ್ವಾನಿಸುತ್ತಾರೆ.

ವಿಡಿಯೋ ಮಾಡಲು ಹೆಚ್ಚಿನ ಪ್ರಮಾಣದಲ್ಲಿ ಅಡುಗೆ ಮಾಡಬೇಕಾಗುವುದರಿಂದ ಉಳಿದ ಅಡುಗೆಯನ್ನು ಊರಿನ ಗ್ರಾಮಸ್ಥರಿಗೆ ಹಾಗೂ ನಿರ್ಗತಿಕರಿಗೆ ಕೊಡುತ್ತಾರೆ ಅಲ್ಲದೆ ಅನಾಥಾಶ್ರಮಗಳಿಗೆ, ಸ್ಥಳೀಯ ವೃದ್ಧಾಶ್ರಮಗಳಿಗೆ ಉಚಿತವಾಗಿ ಅಡುಗೆ ನೀಡಿ ಮಾನವೀಯತೆ ಮೆರೆದಿದ್ದಾರೆ. ಇತ್ತೀಚೆಗೆ ಕಾಂಗ್ರೆಸ್ ಯುವ ನಾಯಕ ರಾಹುಲ್ ಗಾಂಧಿ ಎಲೆಕ್ಷನ್ ಕ್ಯಾಂಪೇನ್ ಸಮಯದಲ್ಲಿ ವಾಹಿನಿಯ ಟೀಮ್ ಅವರ ಊರಿಗೆ ಬರುವ ಸುದ್ದಿಯನ್ನು ಅವರು ನಂಬಿರಲಿಲ್ಲ ನಂತರ ಎದುರಿಗೆ ರಾಹುಲ್ ಗಾಂಧಿಯವರನ್ನು ನೋಡಿ ಅವರಿಗೆ ಆಶ್ಚರ್ಯವಾಯಿತು. ನಂತರ ರಾಹುಲ್ ಗಾಂಧಿ ಅವರು ಇವರು ತಯಾರಿಸಿದ ಅಡುಗೆಯನ್ನು ಸೇವಿಸಿ ಇವರನ್ನು ಹೊಗಳಿದರು. ರಾಹುಲ್ ಗಾಂಧಿಯವರು ಈ ಟೀಮ್ ನೊಂದಿಗೆ ಊಟ ಮಾಡುತ್ತಿರುವ ವಿಡಿಯೋ ಹೆಚ್ಚು ವೈರಲ್ ಆಗಿತ್ತು. ತಮಿಳುನಾಡಿನ ಮುಖ್ಯಮಂತ್ರಿಯಾದ ಎಮ್ ಕೆ ಸ್ಟಾಲಿನ್ ಅವರನ್ನು ಭೇಟಿ ಮಾಡಿದ ಈ ವಾಹಿನಿ ಕೋವಿಡ್ ಫಂಡಿಗೆ 10 ಲಕ್ಷ ರೂಪಾಯಿ ಚೆಕ್ ನೀಡಿದೆ. ಇಲ್ಲಿಯವರೆಗೆ ಈ ಚಾನೆಲ್ ಗೆ ಅನೇಕ ಡಿಜಿಟಲ್ ಅವಾರ್ಡ್ ಗಳು ಸಿಕ್ಕಿದೆ. ಈ ವಾಹಿನಿಯ ಟೀಮ್ ಹಳ್ಳಿಯಲ್ಲಿ ಏನಿದೆ ಎಂದು ಹುಟ್ಟಿದ ಊರನ್ನು ಬಿಟ್ಟು ದೂರದ ಪಟ್ಟಣಕ್ಕೆ ಹೋಗಿ ಕೆಲಸ ಮಾಡುವ ಇಂದಿನ ಯುವಕರಿಗೆ ಮಾದರಿಯಾಗಿದೆ. ಮನಸೊಂದಿದ್ದರೆ ಎಲ್ಲಾ ಸಮಸ್ಯೆಗಳನ್ನು ನಿವಾರಿಸಿ ಒಂದು ಸಾಮಾನ್ಯ ಹಳ್ಳಿಯಲ್ಲಿಯೂ ಸಾಧನೆ ಮಾಡಬಹುದು ಎಂಬುದನ್ನು ಜಗತ್ತಿಗೆ ತೋರಿಸಿಕೊಟ್ಟಿದೆ. ಈ ಚಾನೆಲ್ ಇನ್ನೂ ಎತ್ತರಕ್ಕೆ ಬೆಳೆಯಲಿ ಎಂದು ಆಶಿಸೋಣ.

Leave A Reply

Your email address will not be published.