ಕರ್ನಾಟಕದಲ್ಲಿ ಶಾಲೆಗಳ ಆರಂಭ ಯಾವಾಗ?

0 1

ಕೊರೋನ ಕಾರಣದಿಂದ ಶಾಲೆಯಲ್ಲಿ ವಿದ್ಯಾರ್ಥಿಗಳಿಲ್ಲದೇ ಹಲವು ತಿಂಗಳುಗಳೇ ಕಳೆಯಿತು. ಈಗ ಕೊರೋನ ಸ್ವಲ್ಪ ಮಟ್ಟಿಗೆ ಕಡಿಮೆಯಾಗಿದ್ದು ಶಾಲೆಯಲ್ಲಿ ತರಗತಿ ಆರಂಭಿಸುವ ಬಗ್ಗೆ ಸರ್ಕಾರ ಯೋಚಿಸುತ್ತಿದೆ. ಅದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿಯೋಣ.

ಕರ್ನಾಟಕದಲ್ಲಿ ಶಾಲೆಗಳ ಪ್ರಾರಂಭಿಸುವ ದಿನಾಂಕವನ್ನು ಸರ್ಕಾರ ಘೋಷಣೆ ಮಾಡಿದೆ. 2021ರ ಜನವರಿ 1 ರಿಂದ 10ನೇ ತರಗತಿ ಮತ್ತು ದ್ವಿತೀಯ ಪಿಯುಸಿ ತರಗತಿ ಹಾಗೂ 6 ರಿಂದ 9ನೇ ತರಗತಿಗೆ ವಿದ್ಯಾಗಮ ಪ್ರಾರಂಭವಾಗಲಿದೆ. ಹದಿನೈದು ದಿನಗಳವರೆಗೆ ಪರಿಸ್ಥಿತಿಯನ್ನು ಅವಲೋಕಿಸಿ ಇತರೆ ತರಗತಿಗಳನ್ನು ಪ್ರಾರಂಭಿಸುವ ಕುರಿತು ನಿರ್ಧಾರ ತೆಗೆದುಕೊಳ್ಳಲಾಗುತ್ತದೆ ಎಂದು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ತಿಳಿಸಿದ್ದಾರೆ. ಪ್ರಥಮ ಪಿಯುಸಿ ತರಗತಿ ಆರಂಭಿಸುವ ಬಗ್ಗೆ 15 ದಿನಗಳ ನಂತರ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ ಹಾಗೂ ಒಂದು ತರಗತಿಯಲ್ಲಿ 15 ವಿದ್ಯಾರ್ಥಿಗಳಿಗೆ ಮಾತ್ರ ಅವಕಾಶವಿರುತ್ತದೆ ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಹೇಳಿಕೆ ನೀಡಿದ್ದಾರೆ.

ಶಾಲೆಗಳಲ್ಲಿ ಕೆಲವು ಬದಲಾವಣೆಗಳನ್ನು ತಂದಿದ್ದು ಬಿಸಿಯೂಟ ಇರುವುದಿಲ್ಲ ಬದಲಿಗೆ ಮನೆಗೇ ಸಾಮಾನುಗಳನ್ನು ಒದಗಿಸಿ, ಮಧ್ಯಾಹ್ನಕ್ಕೆ ತರಗತಿ ಮುಗಿದುಹೋಗುತ್ತದೆ. ಶಾಲೆಗೆ ದಾಖಲಾತಿ ಕಡ್ಡಾಯವಾಗಿರುತ್ತದೆ ಮತ್ತು ಆನ್‌ಲೈನ್ ಮತ್ತು ಆಫ್‌ಲೈನ್ ಮೂಲಕ ತರಗತಿ ನಡೆಯಲಿದೆ. ವಿದ್ಯಾಗಮಕ್ಕೆ ಪೋಷಕರ ಅನುಮತಿ ಪತ್ರ ಕಡ್ಡಾಯವಾಗಿರುತ್ತದೆ. ಪ್ರತಿ ವಿದ್ಯಾರ್ಥಿಗೆ ಕೊರೋನ ಇಲ್ಲವೆಂಬ ದೃಢೀಕರಣ ಪತ್ರ ಕಡ್ಡಾಯ ಮಾಡಲಾಗಿದ್ದು, ಹಾಸ್ಟೆಲ್ ತೆರೆಯಲು ಅನುಮತಿ ನೀಡಲಾಗಿದೆ, ಹಾಸ್ಟೆಲ್ ವಿದ್ಯಾರ್ಥಿಗಳಿಗೆ ಕೋವಿಡ್ ಪರೀಕ್ಷೆ ಮಾಡಿಸಬೇಕು, ಹಾಗೆಯೇ ನೆಗೆಟಿವ್ ವರದಿ ಇದ್ದರೆ ಮಾತ್ರ ಹಾಸ್ಟೆಲ್‌ಗೆ ಸೇರಿಸಬೇಕು. ಶಾಲಾ ಆವರಣಗಳಲ್ಲಿ ವಾರಕ್ಕೆ ಮೂರು ದಿನ ಮಾತ್ರ ವಿದ್ಯಾಗಮ ತರಗತಿಗಳನ್ನು ನಡೆಸಲಾಗುತ್ತದೆ.

SSLC ಮತ್ತು ದ್ವಿತೀಯ ಪಿಯುಸಿ ಬೋರ್ಡ್ ಪರೀಕ್ಷೆಯಾಗಿರುವುದರಿಂದ ಸಭೆಯಲ್ಲಿ ಸರ್ವಾನುಮತದಿಂದ ನಿರ್ಧಾರ ತೆಗೆದುಕೊಳ್ಳಲಾಯಿತು. ಕೋವಿಡ್ ಕಾರಣದಿಂದ ತರಗತಿಗೆ ಬರಲೇಬೇಕು ಎಂಬ ಒತ್ತಡವಿಲ್ಲ, ಆನ್‌ಲೈನ್ ಮೂಲಕವೇ ಕಲಿಯುತ್ತೇವೆ ಎಂದು ಬಯಸುವವರಿಗೆ ಅವಕಾಶ ನೀಡಲಾಗುವುದು ಎಂದು ಸುರೇಶ್ ಕುಮಾರ್ ತಿಳಿಸಿದ್ದಾರೆ. ಪರೀಕ್ಷೆ ಯಾವಾಗ ನಡೆಸಬೇಕು ಎಂಬುದರ ಬಗ್ಗೆ ಮುಂದಿನ ದಿನಗಳಲ್ಲಿ ತೀರ್ಮಾನ ತೆಗೆದುಕೊಳ್ಳಲಾಗುತ್ತದೆ. ಪಠ್ಯವನ್ನು ಕಡಿಮೆ ಮಾಡಲಾಗುವುದು, ಪರಿಸ್ಥಿತಿ ನೋಡಿಕೊಂಡು ಉಳಿದ ತರಗತಿಗಳನ್ನು ಆರಂಭಿಸುವ ಬಗ್ಗೆ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಮಾಹಿತಿ ನೀಡಿದ್ದಾರೆ. ಒಟ್ಟಿನಲ್ಲಿ ಕೊರೋನದಿಂದ ಶಿಕ್ಷಣ ಕ್ಷೇತ್ರದಲ್ಲಿ ಅಡೆ ತಡೆಯಾಗಿ ಇದೀಗ ಶಾಲೆಗಳು ಮತ್ತೆ ಪ್ರಾರಂಭವಾಗುತ್ತಿದೆ.

Leave A Reply

Your email address will not be published.