1863ರಲ್ಲಿ ಜನಿಸಿ ಕಲ್ಕತ್ತದ ದತ್ತ ಮನೆತನದ ಕಣ್ಮಣಿಯಾಗಿದ್ದ ನರೇಂದ್ರನಾಥ ದತ್ತ ಸ್ವಾಮಿ ವಿವೇಕಾನಂದ ಎಂದೇ ಎಲ್ಲರಿಗೂ ಚಿರಪರಿಚಿತ. ಯುವಜನರಿಗೆ ವಿವೇಕಾನಂದರು ಆದರ್ಶಪ್ರಾಯರಷ್ಟೇ ಅಲ್ಲ, ಅವರ ವ್ಯಕ್ತಿತ್ವ ಎಲ್ಲ ಯುವಕ–ಯುವತಿಯರನ್ನು ಸೂಜಿಗಲ್ಲಿನಂತೆ ಆಕರ್ಷಿಸುತ್ತದೆ. ಇದಕ್ಕೆ ಅನೇಕ ಕಾರಣಗಳಿವೆ. ಅದರಲ್ಲಿ ಮುಖ್ಯವಾದದ್ದು ಅವರು ಸಾರಿದ್ದು ಶಕ್ತಿಯ ಸಂದೇಶವನ್ನು. ಅವರ ಬೋಧನೆಗಳಲ್ಲಿ ನಾವು ಮತ್ತೆ ಮತ್ತೆ ಕಾಣುವ ಸಂದೇಶ: ‘ಶಕ್ತಿಯೇ ಜೀವನ, ದೌರ್ಬಲ್ಯವೇ ಮರಣ’. ಯುವಜನರಿಗೆ ಶಕ್ತಿಸಂಜೀವಿನಿಯನ್ನು ಬೋಧಿಸಿದರು: ‘ಫುಟ್ಬಾಲ್ ಆಡಿ ಬಲಿಷ್ಠವಾದ ಸ್ನಾಯುಗಳನ್ನು ಪಡೆದಿರೆಂದರೆ ನಿಮಗೆ ಭಗವದ್ಗೀತೆ ಸ್ಪಷ್ಟವಾಗಿ ಅರ್ಥವಾಗುವುದು’ ಎಂದರು. ನಿಮ್ಮಂತಹ ಯುವಕರಿಗಾಗಿ ನಾನು ಸಾವಿರ ಸಲ ಬೇಕಾದರೂ ಹುಟ್ಟಿಬಂದೇನು. ಈ ಕಾಯವಳಿದರೇನು, ನಾನು ನಿಮ್ಮೆಲ್ಲರಲ್ಲಿ ಸೂಕ್ಷ್ಮರೂಪದಲ್ಲಿದ್ದು ಸಾಧಿಸಬೇಕಾದುದನ್ನು ಸಾಧಿಸುವವರೆಗೆ ವಿಶ್ರಾಂತಿ ಪಡೆಯುವುದಿಲ್ಲ ಎಂದೂ ಆಶ್ವಾಸನೆ ನೀಡಿದರು.

ವಿವೇಕಾನಂದರ ಚಿಕಾಗೋ ವಿಶ್ವ ಧರ್ಮಸಮ್ಮೇಳನದ ಭಾಷಣ ಭಾರತದ ಪುನರ್ನವಕ್ಕೆ ಕಾರಣವಾಯಿತು. ಮುಂದೆ1902ರಲ್ಲಿ ಅವರು ಕಾಲವಾಗುವವರೆಗೂ ಈ ದೇಶದ ಜನರ ಉನ್ನತಿಗಾಗಿ ಶ್ರಮಿಸಿದರು. ಕೇವಲ 39 ವರ್ಷ ವಯಸ್ಸಿನಲ್ಲಿ ಅವರು ಸಾಧಿಸಿದ್ದನ್ನು ಜಗತ್ತು ಮತ್ತು ಭಾರತ ಗೌರಾವದರಗಳಿಂದ ನೆನೆಸುತ್ತದೆ. ಅವರ ಜನ್ಮದಿನವನ್ನು ಯುವದಿನಾಚರಣೆ ಎಂದು ಸರ್ಕಾರ ಘೋಷಿಸಿದೆ. ಸ್ವಾಮಿ ವಿವೇಕಾನಂದರ ಎಲ್ಲರಿಗೂ ಜೀವನದಲ್ಲಿ ಸ್ಫೂರ್ತಿ ತುಂಬುವ ಕೆಲವು ವಿಚಾರ ಧಾರೆಗಳನ್ನು ನಾವು ಈ ಲೇಖನದ ಮೂಲಕ ತಿಳಿದುಕೊಳ್ಳೋಣ.

ಉನ್ನತ ಆಲೋಚನೆಗಳು ಅತ್ಯುನ್ನತ ಆಲೋಚನೆಗಳನ್ನು ನಮ್ಮ ಮೆದುಳಿಗೆ ನೀಡಬೇಕು ಹಾಗೂ ಅವುಗಳನ್ನು ಹಗಲಿರುಳು ನಮ್ಮ ಮುಂದಿರಿಸಿಕೊಳ್ಳಬೇಕು. ಇದರಿಂದ ಮಹತ್ಕಾರ್ಯ ಉದ್ಭವಿಸುತ್ತದೆ. ಶಕ್ತಿ ಎಲ್ಲಾ ನಮ್ಮೊಳಗೆ ಇರುವಾಗ ನಾವು ಎನು ಬೇಕಾದರೂ ಮಾಡಬಹುದು ಹಾಗೂ ಎಲ್ಲಾ ಕೆಲಸಗಳನ್ನೂ ಮಾಡಬಹುದು ಎಂದು ಹೇಳಿದ್ದಾರೆ ವಿವೇಕಾನಂದರು. ಆದರ್ಶ ಹೊಂದಿರುವ ವ್ಯಕ್ತಿಯು ಒಂದು ಸಾವಿರ ತಪ್ಪುಗಳನ್ನು ಮಾಡಿದರೆ ಯಾವುದೇ ಆದರ್ಶ ಇಲ್ಲದ ವ್ಯಕ್ತಿಯೂ ಐವತ್ತು ಸಾವಿರ ತಪ್ಪುಗಳನ್ನು ಮಾಡಿರುತ್ತಾನೆ. ನಮ್ಮನ್ನು ನಾವು ಮೊದಲು ಜಯಿಸಿಕೊಳ್ಳಬೇಕು ಆಗ ಇಡೀ ಜಗತ್ತೇ ನಮ್ಮದಾಗುತ್ತದೆ. ಜ್ಞಾನಿಗಳು ಮೊದಲು ತಮ್ಮಲ್ಲಿರುವ ದೋಷವನ್ನು ಕಂಡುಕೊಳ್ಳುತ್ತಾರೆ. ಆತ್ಮ ವಿಶ್ವಾಸಕ್ಕಿಂತ ದೊಡ್ಡ ಮಿತ್ರ ಬೇರೆ ಯಾರಿಲ್ಲ ಎಂದು ಹೇಳಿದ್ದಾರೆ. ಏಕೆಂದರೆ ಇದು ಉನ್ನತಿಯ ಮೊದಲ ಮೆಟ್ಟಿಲು ಆಗಿರುವುದರಿಂದ ಮೊದಲು ಆತ್ಮ ವಿಶ್ವಾಸವನ್ನು ಗಳಿಸಬೇಕು.

ವಿವೇಕಿ ಆದವನು ಬೇರೆಯವರ ತಪ್ಪನ್ನು ಕಂಡು ತನ್ನಲ್ಲಿರುವ ತಪ್ಪನ್ನು ತಿದ್ದಿಕೊಳ್ಳುತ್ತಾನೆ. ಸರಿಮಾಡಿಕೊಳ್ಳದೆ ಹಾಗೆಯೇ ಬಿಟ್ಟ ತಪ್ಪುಗಳಿಗಿಂತ ಬೇರೆ ಆಪತ್ತು ಬೇರೆ ಇಲ್ಲ. ಒಂದು ಆದರ್ಶದ ಗುರಿಯನ್ನು ಕೈಗೆತ್ತಿಕೊಳ್ಳಬೇಕು ಹಾಗೂ ಆ ಗುರಿಯ ಬಗ್ಗೆ ಮಾತ್ರ ಯೋಚನೆ ಚಿಂತನೆ ಮಾಡಬೇಕು. ತಮ್ಮನ್ನು ಸರಿಪಡಿಸಿಕೊಂಡವರು ಪ್ರಪಂಚವನ್ನು ಸರಿಪಡಿಸುತ್ತಾರೆ. ಬೇರೆ ಯಾರಿಂದಲೂ ನಿಮ್ಮನ್ನು ಆಧ್ಯಾತ್ಮಿಕ ಗೊಳಿಸಲು ಸಾಧ್ಯವಿಲ್ಲ ಅದು ನಿಮ್ಮ ಆತ್ಮ ವಿಶ್ವಾಸದಿಂದ ಆಗಬೇಕು. ನಿಮ್ಮ ಮನಸ್ಸನ್ನು ಆಲೋಚನೆಗಳು ಆಕ್ರಮಿಸಿಕೊಂಡಾಗ ಅದು ನಿಮ್ಮ ನಿಜವಾದ ದೈಹಿಕ ಅಥವಾ ಮಾನಸಿಕ ಸ್ಥಿತಿ ಆಗುತ್ತದೆ. ಒಂದು ದಿನದಲ್ಲಿ ನೀವು ಯಾವುದೇ ಸಮಸ್ಯೆಗಳನ್ನು ಎದುರಿಸದೆ ಇದ್ದಾಗ ನೀವು ತಪ್ಪಾದ ದಾರಿಯಲ್ಲಿ ನಡೆಯುತ್ತಿದ್ದಿರಿ ಎಂದು ತಿಳಿಯಬಹುದು. ನೀವು ನಿಮ್ಮನ್ನು ನಿಮ್ಮಷ್ಟಕ್ಕೆ ನೀವು ದುರ್ಬಲರು ಎಂದು ಭಾವಿಸಿದರೆ ನೀವು ದುರ್ಬಲರು ಹಾಗೂ ಬಲಶಾಲಿ ಎಂದುಕೊಂಡರೆ ಬಲಶಾಲಿ. ಪ್ರತಿಯೊಂದು ಕೆಲಸಗಳೂ ಆಯಾ ಸಮಯಕ್ಕೆ ತಕ್ಕಂತೆ ಆಗಬೇಕು. ಇಲ್ಲವಾದಲ್ಲಿ ತನ್ನ ಸಮಯಕ್ಕಿಂತ ಮುಂಚೆಯೇ ಯೋಚಿಸುವ ಜನರು ತಪ್ಪಾಗಿ ಅರ್ಥೈಸಿಕೊಳ್ಳುವ ಸಾಧ್ಯತೆ ಹೆಚ್ಚು. ನಾವು ನಮ್ಮ ಸ್ವಾ ಅನುಭವದಿಂದ ಒಳ್ಳೆಯನ್ನು ಕಲಿಯಬೇಕಾಗಿದೆ. ಜೀವನದಲ್ಲಿ ಎಲ್ಲವನ್ನೂ ಯಾರೂ ಕಲಿಸಲು ಸಾಧ್ಯವಿಲ್ಲ. ಎಲ್ಲರ ಜೀವನದಲ್ಲಿಯೂ ಅನುಭವಗಳೇ ಉತ್ತಮ ಶಿಕ್ಷಕ.

Leave a Reply

Your email address will not be published. Required fields are marked *