ಬೆಂಗಳೂರಿನ ಕಂಪನಿಯಲ್ಲಿ ಸೆಕ್ಯೂರಿಟಿ ಗಾರ್ಡ್ ಕೆಲಸ ಮಾಡ್ತಿದ್ದ ಈ ಹುಡುಗ ಉತ್ತರ ಕರ್ನಾಟಕದ ಸ್ಟಾರ್ ಆಗಿ ಬೆಳೆದಿದ್ದು ಹೇಗೆ ಗೊತ್ತಾ? ತೆರೆ ಹಿಂದಿನ ರಿಯಲ್ ಕಹಾನಿ

0 1

ಹಸಿವು, ಬಡತನ ಕಲಿಸುವ ಜೀವನದ ಪಾಠವನ್ನು ಜಗತ್ತಿನ ಯಾವುದೆ ವಿಶ್ವವಿದ್ಯಾಲಯಗಳು ಕಲಿಸುವುದಿಲ್ಲ ಎಂಬ ಹಿರಿಯರ ಮಾತು ಅಕ್ಷರಶಃ ಸತ್ಯ. ಬಡತನದಲ್ಲಿ ಹುಟ್ಟಿ ಪ್ರತಿಭೆಯನ್ನು ಹೊಂದಿದ ಅನೇಕರ ಬಗ್ಗೆ ನಾವು ಕೇಳಿರುತ್ತೇವೆ ಅದರಂತೆ ಟಿಕ್ ಟಾಕ್ ನಲ್ಲಿ ಫೇಮಸ್ ಆದ ಶಿವಪುತ್ರ ಅವರ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಈ ಲೇಖನದಲ್ಲಿ ನೋಡೋಣ.

ಬಡತನವನ್ನು ಯಾರು ಕೂಡ ಬಯಸುವುದಿಲ್ಲ ಆದರೆ ಬಡತನ ನಮ್ಮನ್ನು ಸಕ್ರೀಯರನ್ನಾಗಿ ಚಟುವಟಿಕೆಯಿಂದ ಇಡುತ್ತದೆ. ಬಡತನದ ಹಿನ್ನೆಲೆಯಿಂದ ಬಂದ ಅನೇಕರು ತಮ್ಮ ಭವಿಷ್ಯವನ್ನು ಮಾದರಿಯಾಗಿ ರೂಪಿಸಿಕೊಂಡ ಅನೇಕರ ಬಗ್ಗೆ ನಾವು ಈಗಾಗಲೆ ಕೇಳಿದ್ದೇವೆ. ಬಡತನದ ಬೇಗೆಯಲ್ಲಿ ಅರಳಿದ ಪ್ರತಿಭೆಯಾದ ಶಿವಪುತ್ರ ಯಶಾರದಾ ಅವರ ಬಗ್ಗೆ ತಿಳಿಯಬೇಕು. ಶಿವಪುತ್ರ ಅವರು ಟಿಕ್ ಟಾಕ್ ಮೂಲಕ ಜನರಿಗೆ ಪರಿಚಿತರಾಗಿದ್ದಾರೆ.

ಶಿವಪುತ್ರ ಅವರು ತಮ್ಮ ಶಾರ್ಟ್ ಕಾಮಿಡಿ ವಿಡಿಯೋಗಳ ಮೂಲಕ ಯೂಟ್ಯೂಬ್, ಫೇಸ್ಬುಕ್ ಸೋಶಿಯಲ್ ಮೀಡಿಯಾಗಳಲ್ಲಿ ಭಾರಿ ಸದ್ದು ಮಾಡುತ್ತಿರುವ ಕಲಾವಿದ. ಮೊದಲಿನ ಕಾಲದಲ್ಲಿ ಪ್ರತಿಭೆ ಇದ್ದರೂ ಕೆಲವರಿಗೆ ಮಾತ್ರ ಸಿನಿಮಾ ಹಾಗೂ ಡ್ರಾಮಾಗಳಲ್ಲಿ ಅವಕಾಶ ಸಿಕ್ಕಿ ಬೆಳೆಯುತ್ತಿದ್ದರು. ಇಂದು ಪ್ರತಿಭೆ ಇದ್ದವರಿಗೆ ಬೆಳೆಯಲು ಅನೇಕ ಸ್ವತಂತ್ರ ವೇದಿಕೆಗಳಿವೆ.

ಶಿವಪುತ್ರ ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ಗ್ರಾಮದವರು. ಬಡತನ ಕುಟುಂಬದಲ್ಲಿ ಜನಿಸಿದ ಅವರಿಗೆ ಅಕ್ಕ ಹಾಗೂ ತಮ್ಮನಿದ್ದಾನೆ. ತಂದೆ ಯಮುನಪ್ಪ ಕೂಲಿ ಕೆಲಸ ಮಾಡಿದರೆ, ತಾಯಿ ಶಾರದಾ ಸಣ್ಣಮಟ್ಟದ ಹಣ್ಣಿನ ವ್ಯಾಪಾರ ಮಾಡುತ್ತಾರೆ. ಶಾರದಾ ಅವರು ಹಣ್ಣಿನ ಬುಟ್ಟಿಯನ್ನು ತಲೆಮೇಲೆ ಹೊತ್ತು ಬೀದಿಬೀದಿಗಳಲ್ಲಿ ತಿರುಗಿ ಹಣ ಸಂಪಾದನೆ ಮಾಡುತ್ತಿದ್ದರು. ತಂದೆ ಕೂಲಿ ಕೆಲಸ ಮಾಡುತ್ತಾ ಕಲೆಯಲ್ಲಿ ಅವರಿಗೆ ಆಸಕ್ತಿ ಇತ್ತು.

ಅವರ ಎರಡನೆ ಮಗನಾಗಿ ಶಿವಪುತ್ರ ಜನಿಸುತ್ತಾನೆ, ಶಿವ ಪುತ್ರನಿಗೆ ಚಿಕ್ಕಂದಿನಿಂದಲೂ ಸಿನಿಮಾ ಬಗ್ಗೆ ಹುಚ್ಚು. ಹೆಚ್ಚು ಸಿನಿಮಾಗಳನ್ನು ನೋಡುತ್ತಿದ್ದ ಶಿವಪುತ್ರ ತಾನು ಕೂಡ ಸಿನಿಮಾದಲ್ಲಿ ನಟಿಸಬೇಕೆಂಬ ಕನಸು ಕಾಣುತ್ತಾನೆ. ಶಿವಪುತ್ರ ಸಿನಿಮಾದಲ್ಲಿ ನಟಿಸಬೇಕೆಂದು ಮನೆಬಿಟ್ಟು ಅನೇಕ ಶೂಟಿಂಗ್ ಸೆಟ್ ಗಳಲ್ಲಿ ಕೆಲವರ ಹಿಂದೆ ಅವಕಾಶಕ್ಕಾಗಿ ಬೇಡುತ್ತಿದ್ದನು ಆದರೆ ಅವನಿಗೆ ಎಲ್ಲಿಯೂ ಅವಕಾಶ ಸಿಗಲಿಲ್ಲ.

ನಂತರ ತನ್ನ ಪ್ರತಿಭೆಯನ್ನು ತೋರಿಸಿದರೆ ನನಗೆ ಯಾರಾದರೂ ಅವಕಾಶ ಕೊಡಬಹುದು ಎಂದು ಯೋಚಿಸಿದ ಶಿವಪುತ್ರ ತನ್ನ ಪ್ರತಿಭೆಯನ್ನು ತೋರಿಸಲು ಆಯ್ಕೆಮಾಡಿಕೊಂಡ ಮೊದಲ ವೇದಿಕೆ ಟಿಕ್ ಟಾಕ್. ಹಾಸ್ಯಭರಿತ ನೈತಿಕ ಮೌಲ್ಯವನ್ನು ಸಾರುವ ಸ್ಕ್ರಿಪ್ಟ್ ರಚಿಸಿ ನಟಿಸಲು ನಿರ್ಧರಿಸಿದನು. ಶಿವಪುತ್ರ ಅವರಿಗೆ ಹಲವು ಅಡೆತಡೆಗಳು ಎದುರಾದವು. ವಿಡಿಯೊ ಮಾಡಬೇಕಾದರೆ ಮೊಬೈಲ್ ಬೇಕು ಆದರೆ ಅವರ ಬಳಿ ಸ್ವಂತ ಮೊಬೈಲ್ ಕೂಡ ಇರಲಿಲ್ಲ. ಶಿವಪುತ್ರ ಅವರು ಮನೆಯಲ್ಲಿ ಮೊಬೈಲ್ ಬಗ್ಗೆ ಕೇಳಿದಾಗ ಬರುವ ಅಲ್ಪ ಆದಾಯದಲ್ಲಿ ಊಟ ಮಾಡುವುದೆ ಕಷ್ಟ ಹೋಗಿ ದುಡಿದು ಮೊಬೈಲ್ ಖರೀದಿಸು ಎಂದು ಹೇಳಿದರು.

ನಂತರ ಶಿವಪುತ್ರ ಅವರು ವಿಜಯಪುರದಿಂದ ಬೆಂಗಳೂರಿಗೆ ಬರುತ್ತಾರೆ. ಬೆಂಗಳೂರಿನ ಇನ್ಫೋಸಿಸ್ ನಲ್ಲಿ ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸಕ್ಕೆ ಸೇರಿಕೊಳ್ಳುತ್ತಾರೆ, ಒಂದು ತಿಂಗಳಿಗೆ 16,000 ರೂಪಾಯಿ ಸಂಬಳ ಇರುತ್ತದೆ. ಶಿವಪುತ್ರ ಮೂರು ತಿಂಗಳು ಅಲ್ಲಿ ಕೆಲಸ ಮಾಡುತ್ತಾನೆ. ಮೂರು ತಿಂಗಳ ಸಂಬಳದಲ್ಲಿ ಊಟ ಇನ್ನಿತರೆ ಖರ್ಚನ್ನು ಕಳೆದು 25 ಸಾವಿರ ರೂಪಾಯಿಯನ್ನು ತೆಗೆದುಕೊಂಡು ವಿಜಯಪುರಕ್ಕೆ ಬರುತ್ತಾರೆ. ಮೊದಲು ಅವರು ಒಂದು ಮೊಬೈಲ್ ಅನ್ನು ಖರೀದಿ ಮಾಡುತ್ತಾರೆ, ಆಗ ಅವರ ಮನೆಯವರು ಇಷ್ಟು ದುಬಾರಿಯ ಮೊಬೈಲ್ ಯಾಕೆ ಬೇಕಿತ್ತು, ಕಿತ್ತುತಿನ್ನುವ ಬಡತನದ ನಡುವೆ ಇದು ಬೇಕಾಗಿರಲಿಲ್ಲ ಎಂದು ಅಸಮಾಧಾನವನ್ನು ವ್ಯಕ್ತಪಡಿಸುತ್ತಾರೆ.

ಇದರಿಂದ ಶಿವಪುತ್ರ ಅವರಿಗೂ ಒಂದು ಸಲ ಈ ಬಡತನದ ನಡುವೆ ಮೊಬೈಲ್ ಖರೀದಿಸಿ ತಪ್ಪು ಮಾಡಿದನಾ ಎಂಬ ಪ್ರಶ್ನೆ ಕಾಡುತ್ತದೆ. ಶಿವಪುತ್ರ ಅವರು ತಮ್ಮ ಪ್ರಯತ್ನವನ್ನು ಬಿಡದೆ ಟಿಕ್ ಟಾಕ್ ನಲ್ಲಿ ವಿಡಿಯೊ ಮಾಡಲು ಪ್ರಾರಂಭಿಸಿದರು. ಅನೇಕ ತಂಡಗಳಿಂದ, ಅನೇಕ ಜನರಿಂದ ಪ್ರಭಾವಿತರಾದರು. ಆರಂಭದಲ್ಲಿ ಸಣ್ಣದಾಗಿ ಪ್ರಾರಂಭಿಸಿ ಹಂತಹಂತವಾಗಿ ಬೆಳೆದರು. ಪ್ರಾರಂಭದಲ್ಲಿ ಅವರ ವೀಡಿಯೋಗಳನ್ನು ನೋಡುವವರೆ ಇರಲಿಲ್ಲ, ಇದರ ನಡುವೆ ಮನೆಯವರ ನಿಂದನೆ ಬೈಗುಳ ಕೇಳಬೇಕಾಗುತ್ತಿತ್ತು.

ಇದರ ನಡುವೆಯೂ ಶಿವಪುತ್ರ ತಮ್ಮ ಪ್ರಯತ್ನವನ್ನು ಮುಂದುವರಿಸಿದರು. ನಂತರದ ದಿನಗಳಲ್ಲಿ ಶಿವಪುತ್ರ ಅವರ ವಿಡಿಯೊ ವೈರಲ್ ಆಗುತ್ತದೆ ಆಗ ಅವರ ಫಾಲೋವರ್ಸ್ ಸಂಖ್ಯೆಯೂ ಹೆಚ್ಚಾಗುತ್ತದೆ. ನಂತರ ಟಿಕ್ ಟಾಕ್ ನಲ್ಲಿ ಒಂದು ಮಿಲಿಯನ್ ಅನುಯಾಯಿಗಳನ್ನು ಪಡೆಯುತ್ತಾರೆ. ಟಿಕ್ ಟಾಕ್ ಬ್ಯಾನ್ ಆದಾಗ ಶಿವಪುತ್ರ ಅವರು ಕೂಡ ದುಃಖಿತರಾದರು. ನಂತರ ಫೇಸ್ಬುಕ್ ಯುಟ್ಯೂಬ್ ಗಳಲ್ಲಿ ತಮ್ಮ ಪ್ರಯತ್ನವನ್ನು ಮಾಡುತ್ತಾರೆ ಇದರಿಂದ ಲಕ್ಷಕ್ಕೂ ಹೆಚ್ಚು ಅಭಿಮಾನಿಗಳನ್ನು ಅವರು ಹೊಂದಿದ್ದಾರೆ.

ಅಂದು ಗಲ್ಲಿಗಲ್ಲಿಯಲ್ಲಿ ಏಕಾಂಗಿಯಾಗಿ ಓಡಾಡುತ್ತಿರುವಾಗ ಗುರುತಿಸದ ಜನ ಇಂದು ಶಿವಪುತ್ರ ಅವರನ್ನು ಗುರುತಿಸುತ್ತಿದ್ದಾರೆ. ಸೋಶಿಯಲ್ ಮೀಡಿಯಾ ಬಗ್ಗೆ ಶಿವಪುತ್ರ ಅವರು ಅದು ತನಗೆ ಕೇವಲ ಹಣ, ಪ್ರೀತಿಯನ್ನು ಕೊಟ್ಟಿದೆ, ಅದಕ್ಕೆ ನಾನು ಋಣಿಯಾಗಿರುತ್ತೇನೆ ಎಂದು ಹೇಳುತ್ತಾ ತಮ್ಮ ಕಷ್ಟಕಾಲದಲ್ಲಿ ಸಹಾಯ ಮಾಡಿದ ಪ್ರತಿಯೊಬ್ಬರಿಗೂ ಧನ್ಯತಾಭಾವವನ್ನು ಅರ್ಪಿಸುತ್ತಾರೆ. ಇಂದು ಶಿವಪುತ್ರ ಅವರದೆ ಒಂದು ತಂಡವಿದೆ. ಶಿವಪುತ್ರ ಅವರ ಪ್ರಯತ್ನಗಳು ಹೆಚ್ಚಿನ ಯಶಸ್ಸು ಕೊಡಲಿ ಎಂದು ಆಶಿಸೋಣ.

Leave A Reply

Your email address will not be published.