ಇವತ್ತಿನ ಈ ಲೇಖನದಲ್ಲಿ ಹಳ್ಳಿ ಶೈಲಿಯಲ್ಲಿ ರಾಗಿ ಮುದ್ದೆ, ಹೀರೆಕಾಯಿ ಬಸ್ಸಾರು ಊಟವನ್ನ ಕಡಿಮೆ ಸಮಯದಲ್ಲಿ ಅಂದ್ರೆ ಕೇವಲ ಅರ್ಧ ಗಂಟೆಯಲ್ಲಿ ಹೇಗೆ ಮಾಡೋದು ಅನ್ನೋದನ್ನ ತಿಳಿಸಿಕೊಡ್ತಾ ಇದ್ದೀವಿ.

ಮೊದಲು ಒಂದು ಕಪ್ ಬೇಳೆಯನ್ನು ಚೆನ್ನಾಗಿ ತೊಳೆದು ಕುಕ್ಕರಿಗೆ ಹಾಕಿಕೊಂಡು, ಅದಕ್ಕೆ ಚಿಕ್ಕದಾಗಿ ಕಟ್ ಮಾಡಿಕೊಂಡ ಹೀರೆಕಾಯಿ ಕೂಡಾ ಸೇರಿಸಬೇಕು. ಇದಕ್ಕೆ ಎರಡು ಮೂರು ಲೋಟ ನೀರು ಸೇರಿಸಿ, ಕುಕ್ಕರ್ ಲಿ ಕ್ಲೋಸ್ ಮಾಡಿ ೬/೭ ವಿಸಿಲ್ ಕೂಗಿಸಿಕೊಳ್ಳಬೇಕು.

ನಂತರ ಒಂದು ಪ್ಯಾನ್ ಗೆ ಎರಡು ಟೀ ಸ್ಪೂನ್ ಎಣ್ಣೆ, ಎರಡು ಗೆಡ್ಡೆ ಬಿಡಿಸಿಟ್ಟ ಬೆಳ್ಳುಳ್ಳಿ ಹಾಗೂ ಮಾಧ್ಯಮ ಗಾತ್ರದ ಚಿಕ್ಕದಾಗಿ ಕತ್ತರಿಸಿದ ಎರಡು ಈರುಳ್ಳಿ ಇಷ್ಟು ಹಾಕಿ ಚೆನ್ನಾಗಿ ಹೊರಿದುಕೊಳ್ಳಬೇಕು. ಇವು ಅರ್ಧ ಫ್ರೈ ಆಗ್ತಾ ಇದ್ದಹಾಗೆ ಒಂದು ಟಿ ಸ್ಪೂನ್ ಜೀರಿಗೆಯನ್ನು ಸೇರಿಸಬೇಕು. ಚೆನ್ನಾಗಿ ಫ್ರೈ ಮಾಡಿಕೊಂಡು ಸ್ಟೋವ್ ಆಫ್ ಮಾಡಿ ನಂತರ ಎರಡು ಹುಳಿ ಟೊಮೆಟೊ, ಒಂದು ಭಾಗ ತೆಂಗಿನಕಾಯಿ, ಸ್ವಲ್ಪ ಕೊತ್ತಂಬರಿ ಸೊಪ್ಪು, ಬೇಳೆ ಸಾಂಬಾರ್ ಪುಡಿ ಹಾಗೂ ಖಾರಕ್ಕೆ ತಕ್ಕಷ್ಟು ಖಾರದ ಪುಡಿ ಸ್ವಲ್ಪ ಹುಣಸೆ ಹಣ್ಣು ಸೇರಿಸಿ ಸ್ವಲ್ಪ ನೀರು ಸೇರಿಸಿ ಮಿಕ್ಸಿಯಲ್ಲಿ ನುಣ್ಣಗೆ ರುಬ್ಬಿಕೊಳ್ಳಬೇಕು.

ನಂತರ ಕುಕ್ಕರಿನಲ್ಲಿ ಇದ್ದ ಬೇಳೆ ಮತ್ತೆ ಹೀರೆಕಾಯಿ ಎರಡನ್ನೂ ಒಮ್ಮೆ ಮಿಕ್ಸ್ ಮಾಡಿ, ಅದನ್ನ ಸೋಸಿಕೊಳ್ಳಬೇಕು. ಸೋಸಿಕೊಂಡು ತಣ್ಣಗಾಗಲು ಬಿಡಬೇಕು. ಇದರಲ್ಲಿಯೇ ಪಲ್ಯ ಕೂಡಾ ಮಾಡಬಹುದು. ಪಲ್ಯಕ್ಕೆ ಒಂದು ಪ್ಯಾ ಗೆ ಎರಡರಿಂದ ಮೂರು ಸ್ಪೂನ್ ಅಷ್ಟು ಎಣ್ಣೆ ಹಾಕಿಕೊಂಡು ಕಾದ ನಂತರ ಸಾಸಿವೆ ಕಾಲು ಟೀ ಸ್ಪೂನ್, ಮುರಿದಿಟ್ಟ ಬ್ಯಾಡಗಿ ಮೆಣಸಿನಕಾಯಿ ಅಥವಾ ಹಸಿಮೆಣಸಿನಕಾಯಿ ಹಾಕಿಕೊಂಡು ಅದಕ್ಕೆ ೬/೭ ಜಜ್ಜಿದ ಬೆಳ್ಳುಳ್ಳಿ ಹಾಗೇ ಒಂದು ಹಿಡಿ ಅಷ್ಟು ಕರಿಬೇವಿನ ಸೊಪ್ಪು ಹಾಕಿ ಸ್ವಲ್ಪ ಬಾಡಿಸಿಕೊಂಡು ನಂತರ ಕಟ್ ಮಾಡಿದ ಈರುಳ್ಳಿ ಹಾಕಿಕೊಂಡು ( ಈರುಳ್ಳಿಯನ್ನು ಸ್ವಲ್ಪ ಜಾಸ್ತಿ ಹಾಕಿಕೊಳ್ಳಬಹುದು) ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಬಾಡಿಸಿಕೊಳ್ಳಬೇಕು. ನಂತರ ಅದಕ್ಕೆ ಬೇಯಿಸಿ ಬಸಿದು ಇಟ್ಟುಕೊಂಡ ಹೀರೆಕಾಯಿ ಮತ್ತು ಬೇಳೆಯನ್ನು ಸೇರಿಸಿಕೊಂಡು ಚೆನ್ನಾಗಿ ಮಿಕ್ಸ್ ಮಾಡಿಕೊಂಡರೆ ಹೀರೆಕಾಯಿ ಬಸ್ಸಾರಿನ ಜೊತೆಗೆ ಹೀರೆಕಾಯಿ ಪಲ್ಯ ಕೂಡಾ ರೆಡಿ ಆಗತ್ತೆ.

ಬಸ್ಸಾರು ಮಾಡೋಕೆ ಒಂದು ಪಾತ್ರೆಗೆ ಎಣ್ಣೆ ಹಾಕಿಕೊಂಡು ಕಾದ ನಂತರ ಸಾಸಿವೆ ಹಾಕಿ ಜಜ್ಜಿಕೊಂಡ ಬೆಳ್ಳುಳ್ಳಿ ಹಾಗೇ ಎರಡು ಕಡ್ಡಿ ಅಷ್ಟು ಕರಿಬೇವಿನ ಸೊಪ್ಪು ಹಾಕಿ ಬಾಡಿಸಿಕೊಂಡು ರುಬ್ಬಿಟ್ಟುಕೊಂಡ ಮಸಾಲೆಯನ್ನು ಸೇರಿಸಿ ಅರ್ಧ ಕಪ್ ನೀರು ಸೇರಿಸಿ ಚೆನ್ನಾಗಿ ಕುದಿಸಬೇಕು. ಕುದಿ ಬಂದ ನಂತರ ಬಸಿದಿಟ್ಟುಕೊಂಡ ಬೇಳೆ ಕಟ್ಟನ್ನು ಸೇರಿಸಿ ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಇನ್ನೊಂದು ಕುದಿ ಕುದಿಸಬೇಕು. ಬಸ್ಸಾರು ಕುದಿಸಿದಷ್ಟು ರುಚಿ ಚೆನ್ನಾಗಿ ಇರತ್ತೆ. ಬಸ್ಸಾರು ಕೂಡಾ ರೆಡಿ ಆಗತ್ತೆ ಅದರ ಜೊತೆಗೆ ಅನ್ನವನ್ನ ನಿಮಗೆ ಹೇಗೆ ಬೇಕೋ ಹಾಗೆ ಮಾಡಿಕೊಳ್ಳಬಹುದು.

ಹಾಗೇ ರಾಗಿ ಮುದ್ದೆ ಹೇಗೆ ಮಾಡೋದು ಅನ್ನೋದನ್ನ ನೋಡೋಣ. ಒಂದು ಪಾತ್ರೆಯನ್ನು ಸ್ಟೋವ್ ಮೇಲೆ ಇಟ್ಟುಕೊಂಡು ಅದಕ್ಕೆ ಎರಡು ಲೋಟ ನೀರು ಹಾಕಿ ಸ್ವಲ್ಪ ಬಿಸಿ ಆದ ಮೇಲೆ ಸ್ವಲ್ಪ ಉಪ್ಪು ಹಾಕಿಕೊಂಡು ಬೇಕಿದ್ರೆ ಒಂದು ಟೀ ಸ್ಪೂನ್ ಎಣ್ಣೆ ಅಥವಾ ತುಪ್ಪ ಸೇರಿಸಿ ನಂತರ ಎರಡು ಸ್ಪೂನ್ ಹಿಟ್ಟನ್ನು ಸೇರಿಸಿ ಗಂಟು ಆಗದ ಹಾಗೆ ಮಿಕ್ಸ್ ಮಾಡಿಕೊಳ್ಳಬೇಕು. ಮೊದಲೇ ಹೀಗೆ ಮಾಡುವುದರಿಂದ ನಂತರ ಮತ್ತೆ ಹಿಟ್ಟು ಹಾಕುವುದರಿಂದ ಮುದ್ದೆ ಗಂಟು ಗಂಟಾಗಿ ಬರಲ್ಲ. ನೀರು ಕುದಿ ಬಂದು ಹಿಟ್ಟು ಸೇರಿಸಿದಾಗ ಅಂಬಲಿ ಹದಕ್ಕೆ ಬರತ್ತೆ ಸ ಸಮಯದಲ್ಲಿ ಒಂದು ಕಪ್ ರಾಗಿ ಹಿಟ್ಟನ್ನು ಹಾಕಿ ತಿರುಗಿಸಬೇಕು. ಮುದ್ದೆ ಮಾಡುವ ಹುಟ್ಟು ಇಲ್ಲದವರು ಲಟ್ಟಣಿಗೆ ಕೋಲನ್ನು ಬಳಸಬಹುದು. ಚೆನ್ನಾಗಿ ಮಿಕ್ಸ್ ಮಾಡಿಕೊಂಡ ಹಾಗೇ ಮುದ್ದೆ ಕೂಡಾ ಚೆನ್ನಾಗಿ ಬರತ್ತೆ. ಹಿಟ್ಟು ತೆಳುವಾಗಿ ಇದೆ ಅಂತ ಅನಿಸಿದ್ರೆ ಮತ್ತೆ ಸ್ವಲ್ಪ ಹಿಟ್ಟನ್ನು ಸೇರಿಸಿ ಗಂಟು ಆಗದ ಹಾಗೆ ಬೇಯಿಸಿ ತಿರುಗಿಸಿಕೊಳ್ಳಬೇಕು. ಈ ಪ್ರಮಾಣ ಇಬ್ಬರಿಗೆ ಸಾಕಗತ್ತೆ. ಜಾಸ್ತಿ ಮಾಡಬೇಕು ಅಂದ್ರೆ ಇದೇ ಪ್ರಮಾಣವನ್ನು ಡಬಲ್ ಮಾಡಿಕೊಳ್ಳಬೇಕು. ಸುಮಾರು ಹತ್ತು ನಿಮಿಷಗಳ ಕಾಲ ಸಣ್ಣ ಉರಿಯಲ್ಲಿ ಬೇಯಿಸಿಕೊಳ್ಳಬೇಕು. ನಂತರ ಸ್ಟೋವ್ ಆಫ್ ಮಾಡಿ ಇನ್ನೊಮ್ಮೆ ಚೆನ್ನಾಗಿ ಮಿಕ್ಸ್ ಮಾಡಿಕೊಂಡು ಬೇಕಿದ್ರೆ ಇನ್ನೊಮ್ಮೆ ಮಾಡಿಕೊಳ್ಳಬಹುದು. ನಂತರ ಒಂದು ತಟ್ಟೆಗೆ ನೀರು ಹಚ್ಚಿಕೊಂಡು ಬಿಸಿ ಇರುವಾಗಲೇ ಕೈ ಗೆ ನೀರು ಹಚ್ಚಿಕೊಳ್ಳುತ್ತ ಮುದ್ದೆ ಕಟ್ಟಬೇಕು. ಹಳ್ಳಿ ಶೈಲಿಯಲ್ಲಿ ಹೀರೆಕಾಯಿ ಬೇಳೆ ಪಲ್ಯ, ಹೀರೆಕಾಯಿ ಬಸ್ಸಾರು, ಅನ್ನ ಜೊತೆಗೆ ರಾಗಿ ಮುದ್ದೆ ಊಟ ರೆಡಿ.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!