ಶಿವತಾಂಡವ ಸ್ತೋತ್ರ, ಈ ಮಹಾಮಂತ್ರ ಹುಟ್ಟುಕೊಂಡಿದ್ದು ಹೇಗೆ ಗೊತ್ತೇ

0 1

ಶಿವನನ್ನು ಸ್ತುತಿಸುವ ಶಿವತಾಂಡವ ಸ್ತೋತ್ರವನ್ನು ಕೇಳಿದರೆ ಮೈ ಮತ್ತು ಮನಸ್ಸು ರೋಮಾಂಚನ ಆಗುತ್ತದೆ.ಹೃದಯದ ಬಡಿತ ಇನ್ನಷ್ಟು ಜಾಸ್ತಿಯಾಗುತ್ತದೆ.ಇದನ್ನು ಕೇಳಿದರೆ ಸಾಕ್ಷಾತ್ ಪರಶಿವ ನಮ್ಮ ಕಣ್ಣ ಮುಂದೆ ನೃತ್ಯ ಮಾಡುತ್ತಿರುವನೋ ಎನ್ನುವ ಭಾವ ಮನದಲ್ಲಿ ಮೂಡುತ್ತದೆ. ಈ ಸ್ತೋತ್ರವನ್ನು ಒಂದಲ್ಲಾ ಒಂದು ಬಾರಿ ಎಲ್ಲರೂ ಕೇಳಿರುತ್ತಾರೆ.ಇದರ ಬಗ್ಗೆ ನಾವು ಇಲ್ಲಿ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.

ಈ ಶಿವತಾಂಡವ ಸ್ತೋತ್ರವನ್ನು ಬರೆದಿದ್ದು ಶಿವನ ಮಹಾನ್ ಭಕ್ತ ದಶಕಂಠ ರಾವಣ. ಕುಬೇರರನ್ನು ಗೆದ್ದು ತನಗಿಂತ ಶಕ್ತಿಶಾಲಿಗಳು ಈ ಲೋಕದಲ್ಲಿ ಇಲ್ಲ ಎಂದು ಬೀಗುತ್ತಿದ್ದ ರಾವಣ ಒಂದು ಬಾರಿ ಪುಷ್ಪಕವಿಮಾನದಲ್ಲಿ ಲಂಕೆಗೆ ಹೊರಟಿದ್ದ. ಲಂಕೆಗೆ ಹೋಗುವಾಗ ಆತ ಹಲವು ಗಿರಿ ಶಿಖರಗಳನ್ನು ಏರಿ ಹೋಗುತ್ತಿದ್ದ. ಹೀಗೆ ಮುಗಿಲನ್ನೇ ಹಾರಿ ಹೋಗುತ್ತಿದ್ದ ರಾವಣನಿಗೆ ಶ್ವೇತ ಪರ್ವತವೊಂದು ಎದುರಾಯಿತು. ಅದರ ತುದಿಗೆ ಹೋಗುವ ಆಸೆಯಿಂದ ತನ್ನ ಪುಷ್ಪಕವಿಮಾನವನ್ನು ಅಲ್ಲಿಗೆ ತಿರುಗಿಸಿದ. ಆದರೆ ಅದೆಷ್ಟು ಬಾರಿ ಪ್ರಯತ್ನಿಸಿದರೂ ಶ್ವೇತಗಿರಿಯ ತುದಿಗೆ ಏರಲು ಸಾಧ್ಯವಾಗಲಿಲ್ಲ.

ಅವನು ಪಾರ್ವತಿ ಪರಮೇಶ್ವರರು ನೆಲೆಸಿದ ಕೈಲಾಸಗಿರಿಯನ್ನು ದಾಟಲು ಹೊರಟಿದ್ದ. ಇದನ್ನರಿಯದ ರಾವಣನಿಗೆ ಕೋಪ ನೆತ್ತಿಗೇರಲು ಆರಂಭವಾಯಿತು.ಇದು ರಾವಣನ ಅಹಂಕಾರವನ್ನು ಬಡಿದೆಬ್ಬಿಸಿಬಿಟ್ಟಿತು. ಕುಬೇರರನ್ನು ಸೋಲಿಸಿದ ನನಗೆ ಸೋಲೇ ಎಂದು ಮತ್ತೆ ತನ್ನ ಪುಷ್ಪಕವಿಮಾನವನ್ನು ಗಿರಿಯತ್ತ ಸಾಗಿಸಿದ.ಈ ಬಾರಿ ಈ ಪರ್ವತವನ್ನು ಏರಲೇಬೇಕು ಅಂದುಕೊಂಡ ರಾವಣನಿಗೆ ನಂದಿ ಕಂಡ. ಆಗ ರಾವಣ ನಂದೀಶ್ವರನನ್ನು ಪ್ರಶ್ನಿಸಿದ “ಇದು ಯಾವ ಪರ್ವತ? ” ಎಂದು. ಆಗ ನಂದಿ ” ಇದು ಸಾಕ್ಷಾತ್ ಶಿವಪಾರ್ವತಿ ನೆಲೆಸಿರುವ ಕೈಲಾಸ ಪರ್ವತ. ಅಪ್ಪಿತಪ್ಪಿಯೂ ನೀನು ಇದನ್ನು ಏರಲು ಸಾಧ್ಯವಿಲ್ಲ. ಹೀಗಾಗಿ ನೀನು ಲಂಕೆಗೆ ಹೊರಡು ” ಎಂದ.

ಆತನ ಸಲಹೆಯನ್ನು ತಿರಸ್ಕರಿಸಿ ಮತ್ತೆ ಕೈಲಾಸದೆಡೆಗೆ ಸಾಗಿದ. ಇನ್ನೇನು ರಾವಣ ತುದಿಗೆ ಹೋಗಬೇಕು ಎನ್ನುವಷ್ಟರಲ್ಲಿ ಒಂದು ಸಾಮಾನ್ಯ ಕೋತಿ ಅವನ ಪ್ರಯತ್ನವನ್ನು ವಿಫಲಗೊಳಿಸಿತು. ಆದರೆ ರಾವಣ ತನ್ನ ಎರಡು ಕೈಗಳಿಂದ ಇಡೀ ಪರ್ವತವನ್ನು ಎತ್ತಿ ಬುಡಮೇಲು ಮಾಡಲು ಮುಂದಾದ. ಈತನ ಸಾಹಸಕ್ಕೆ ಕೆಲವೇ ಕ್ಷಣಗಳಲ್ಲಿ ಕೈಲಾಸಪರ್ವತವು ಅಲುಗಾಡಲು ಶುರುವಾಯಿತು.ಅದೇ ವೇಳೆ ಧ್ಯಾನಮಗ್ನನಾಗಿದ್ದ ಶಿವ ಎಚ್ಚರಗೊಂಡು ರಾವಣನ ಅಹಂಕಾರ ಮುರಿಯಲು ಮುಂದಾದ. ಕುಳಿತಲ್ಲೇ ಶಿವ ತನ್ನ ಕಾಲುಬೆರಳು ತುದಿಯಿಂದ ಪರ್ವತವನ್ನು ಕೆಳಗಿರಿಸಿದ.

ಆಗ ಜೀವಉಳಿಸಿಕೊಳ್ಳಲು ಜೀವಭಯದಿಂದ ಚೀರಾಡಲು ಶುರು ಮಾಡಿದ. ತನಗಿನ್ನು ಉಳಿಗಾಲವಿಲ್ಲ ಎಂದು ಶಿವನನ್ನು ಸ್ತುತಿಸಲು ಶುರು ಮಾಡಿದ.ಆಗ ಹುಟ್ಟಿಕೊಂಡಿದ್ದೇ ಈ ಶಿವತಾಂಡವ ಸ್ತೋತ್ರ. ತನ್ನ ದೇಹದ ನರಗಳನ್ನೇ ತಂತಿಗಳಂತೆ ಕಟ್ಟಿ ರುದ್ರವೀಣೆಯನ್ನು ತಯಾರಿಸಿದ ರಾವಣ ಶಿವತಾಂಡವ ಸ್ತೋತ್ರವನ್ನು ಹೇಳಲು ಶುರು ಮಾಡಿದ. ಸ್ತೋತ್ರಗಳಲ್ಲೇ ಅತ್ಯಂತ ಶಕ್ತಿಶಾಲಿ ಸ್ತೋತ್ರ ಇದಾಗಿದ್ದು ಶಿವನ ಶಕ್ತಿ ಹಾಗೂ ಸೌಂದರ್ಯವನ್ನು ವರ್ಣಿಸಿದೆ. ಈ ಸ್ತೋತ್ರದ ಮೊದಲ ಹಾಗೂ ಮೂರನೇ ಸಾಲಿನಲ್ಲಿ 16 ಅಕ್ಷರಗಳಿದ್ದು. ಎರಡು ಹಾಗೂ ನಾಲ್ಕನೇ ಸಾಲುಗಳು 17 ಅಕ್ಷರಗಳಿಂದ ಕೂಡಿದೆ.

ಈ ಸಮಯದಲ್ಲಿ ಅವನಿಗೆ ತನ್ನ ಅಹಂಕಾರ, ಕೋಪ ಎಲ್ಲಾ ದೂರ ಹೋಗಿದ್ದವು.ಇವನಿಗೆ ರಾವಣ ಎಂಬ ಹೆಸರು ಬಂದಿದ್ದು ಇದರಿಂದಲೇ.ರಾವಣ ಎಂಬ ಶಬ್ದದ ಅರ್ಥ ಕೈಲಾಸವನ್ನು ಎತ್ತಿದವನು ಎಂದು. ಇವನ ಭಕ್ತಿಗೆ ಮೆಚ್ಚಿ ಶಿವನು ಪ್ರತ್ಯಕ್ಷನಾಗಿ ಚಂದ್ರಹಾಸ ಅಸ್ತ್ರವನ್ನು ನೀಡಿ ಆಶೀರ್ವಾದ ಮಾಡುತ್ತಾನೆ

ನಾವು ಪ್ರಕಟ ಮಾಡುವ ಯಾವುದೇ ಲೇಖನದಲ್ಲಿನ ಮಾಹಿತಿ ನಮ್ಮ ಸ್ವಂತದ್ದಾಗಿರುವುದಿಲ್ಲ. ಸಂಗ್ರಹಿತ ಮಾಹಿತಿಯನ್ನು ನಿಮ್ಮ ಮುಂದೆ ಇಡುತ್ತೇವೆ‌. ಇವುಗಳಿಂದ ಮೂಡುವ ಯಾವುದೇ ರೀತಿಯ ಭಿನ್ನಾಭಿಪ್ರಾಯ, ಗೊಂದಲಗಳಿಗೆ ನಾವು ಹೊಣೆಗಾರರಾಗಿರುವುದಿಲ್ಲ

Leave A Reply

Your email address will not be published.