ಸರ್ವಜ್ಞ ಎನ್ನುತ್ತಲೆ ನಮಗೆ ನಮ್ಮ ತುಂಬಾ ಸಮಸ್ಯೆಗಳ ಪರಿಹಾರ ಹಾಗೂ ಬದುಕು ಹೇಗಿರಬೇಕೆಂಬ ಅರಿವು ಮೂಡುತ್ತದೆ. ಅಷ್ಟು ಚೆನ್ನಾಗಿ ಬದುಕು ಹಾಗೂ ಹೇಗೆ ಬದುಕಬೇಕು ಎಂದು ವಚನಗಳ ಮೂಲಕ ಹೇಳಿಕೊಟ್ಟವನು ಸರ್ವಜ್ಞ. ಸರ್ವಜ್ಞ ಎಂದರೆ ಎಲ್ಲವನ್ನೂ ಬಲ್ಲವನೂ ಎಂದು ಅರ್ಥ. ಇಂತಹ ವಚನಗಾರ ಸರ್ವಜ್ಞನ ಕೆಲವು ವಚನಗಳ ಅರಿವು ನಾವು ಪಡೆದುಕೊಳ್ಳೊಣ.

ಸರ್ವಜ್ಞ ನ ಕೆಲವು ವಚನಗಳು ಇಂತಿವೆ.
ಕೆಲವಂ ಬಲ್ಲವರಿಂದ ಕಲ್ತು ಕೆಲವಂ ಮಾಳ್ಪವರಿಂದ ಕಂಡು ಮತ್ತೆ ಹಲವಂ ತಾನೆ ಸ್ವತಃ ಮಾಡಿ ತಿಳಿ ಎಂದ ಸರ್ವಜ್ಞಇಲ್ಲಿ ಕೆಲವು ಕೆಲಸಗಳನ್ನು ಗೊತ್ತಿರುವವರ ಬಳಿ ಕೇಳಿ, ಮಾಡುವವರನ್ನು ನೋಡಿ, ಕೆಲವುಗಳನ್ನು ನಾವೆ ಮಾಡಿ ಅರಿವನ್ನು ಪಡೆಯಬೇಕು ಎಂದು ಸರ್ವಜ್ಞ ಹೇಳುತ್ತಾನೆ.

ಎಲ್ಲ ಬಲ್ಲವರಿಲ್ಲ ಬಲ್ಲವರು ಬಹಳಿಲ್ಲ, ಬಲವಿಲ್ಲ ಬಲ್ಲವರಿದ್ದು, ಸಾಹಿತ್ಯ ಎಲ್ಲರಿಗಲ್ಲ ಇಲ್ಲಿ ಎಲ್ಲವನ್ನು ತಿಳಿದಿದ್ದಾರೆ ಎನ್ನುವಂತವರು ಯಾರೂ ಇಲ್ಲ. ಎಲ್ಲರೂ ಎಲ್ಲವನ್ನು ಕಲಿಯಲು ಸಾಧ್ಯವಿಲ್ಲ. ಅರಿವಿರುವವರನ್ನು ಗೌರವಿಸುವುದಿಲ್ಲ. ಗೊತ್ತಿರುವ ವಿಷಯಗಳನ್ನು ಬರಹದ ರೂಪದಲ್ಲಿ ನೀಡಿದರೆ ಓದುವವರಿಲ್ಲ ಎಂದು ಸರ್ವಜ್ಞ ಹೇಳುತ್ತಾರೆ. ಹಾಗಾಗಿ ಅರಿವಿಗೆ ಪುಸ್ತಕಗಳನ್ನು ಓದಬೇಕು. ಮೂರ್ಖನಿಗೆ ಬುದ್ದಿಯನು ನೂರ್ಕಾಲ ಪೆಳಿದರು, ಗೊರ್ಕಲ್ಲ ಮೇಲೆ ಮಳೆಗರೆದರೆ ಆಕಲ್ಲು ನೀರು ಕುಡಿಯುವುದೆ ಸರ್ವಜ್ಞ

ಮೂರ್ಖರಿಗೆ ಬುದ್ದಿ ಹೇಳಿದರೆ ನಮ್ಮ ಸಮಯ ವ್ಯರ್ಥವಾಗುವುದೇ ಹೊರತು ಮೂರ್ಖನು ನಮ್ಮ ಮಾತುಗಳನ್ನು ಅರ್ಥಮಾಡಿಕೊಳ್ಳುವುದಿಲ್ಲ. ಕಲ್ಲ ಮೇಲೆ ಸುರಿದ ನೀರು ಹರಿದು ಹೋಗುವ ರೀತಿ ಮೂರ್ಖನಿಗೆ ಮಾಡಿದ ಉಪದೇಶವು ಅವನ ತಲೆಯಮೇಲಿಂದ ಹರಿದು ಹೋಗುತ್ತದೆ ಅಷ್ಟೆ ಎಂದು ಸರ್ವಜ್ಞ ಹೇಳುತ್ತಾರೆ.

ಆರು ಬೆಟ್ಟವ ಹಾರಿದೆನೆಂದರೆ ಹಾರಿದನೆಂದೆನಬೇಕು ಮೂರ್ಖರೊಳು ಕಲಹ ಸಲ್ಲ ಸರ್ವಜ್ಞ ಇಲ್ಲಿ ಯಾವುದೇ ರೀತಿಯ ವಾದ ಹಾಗೂ ಜಗಳವನ್ನು ಮೂರ್ಖರ ಹತ್ತಿರ ಮಾಡಬಾರದು. ತಾವು ಹೇಳುವುದೆ ಸರಿ ಎನ್ನುವುದನ್ನು ಬಿಟ್ಟು ಅವರು ಬೇರೆ ಏನನ್ನು ನಂಬುವುದಿಲ್ಲ. ಅವರೊಟ್ಟಿಗೆ ವ್ಯರ್ಥಾಲಾಪ ಮಾಡದೆ ಅವರು ಹೇಳಿದ್ದೆ ಸರಿ ಎಂದು ಸುಮ್ಮನಾಗಬೇಕು ಎಂದು ಸರ್ವಜ್ಞ ಹೇಳುತ್ತಾರೆ. ಊರಿಂಗೆ ದಾರಿಯನು ಆರು ತೋರಿದೊಡೇನು ಸಾರಾಯದ ನಿಜವ ತೋರುವ ಗುರುವು ತಾನಾದರೇನು ಸರ್ವಜ್ಞ

ನಮಗೆ ಬೇಕಾದ, ನಾವು ಹೋಗಬೇಕಾದ ಮಾರ್ಗ ಯಾರು ತೋರಿದರೆ ಏನು, ಅವನೆ ಗುರುವಾದರೂ ಏನು ವ್ಯತ್ಯಾಸವಿಲ್ಲ. ಹಾಗೆಯೆ ಸತ್ಯದ ದಾರಿ ಯಾರೆ ತೋರಿದರು ನಾವು ಒಪ್ಪಿಕೊಳ್ಳಬೇಕು. ಕಲಿಯಲು ಪ್ರತಿಷ್ಟೆ ಬೇಕಿಲ್ಲ ಎಂಬುದು ಸರ್ವಜ್ಞನ ಕಿವಿಮಾತುಗಳಲ್ಲಿ ಒಂದು. ಸಾಲವನು ಕೊಂಬಾಗ ಹಾಲೋಗರುಂಡಂತೆ, ಸಾಲಿಗರು ಕೊಂಡು ಎಳೆವಾಗ, ಕಿಬ್ಬದಿಯ ಕೀಲು ಮುರಿದಂತೆ ಸರ್ವಜ್ಞ

ಇಲ್ಲಿ ಸಾಲವು ತೆಗೆದುಕೊಳ್ಳುವಾಗ ಸುಂದರವಾಗಿ ಕಾಣುತ್ತದೆ. ತಿರುಗಿ ಕೊಡುವಾಗ ಕಷ್ಟ ಎಂಬುದನ್ನು ತನ್ನ ವಚನದ ಮೂರು ಸಾಲುಗಳಲ್ಲಿ ವರ್ಣಿಸಿದ್ದಾರೆ. ಸಾಲ ತೆಗೆದುಕೊಳ್ಳುವಾಗ ಕೈಗೆ ಬಂದ ಹಣದ ಖುಷಿಯಲ್ಲಿ ಇರುತ್ತೇವೆ ಆದರೆ ಸಾಲಗಾರ ಮನೆ ಎದುರು ಬಂದಾಗ ಆಗುವ ಅವಮಾನ ಸಣ್ಣದಲ್ಲ ಎನ್ನುತ್ತಾನೆ ಸರ್ವಜ್ಞ.

ಒಂದೊಂದು ಹನಿಬಿದ್ದು ನಿಂದಲ್ಲಿ ಮಡವಕ್ಕು, ಸಂದ ಸತ್ಪುರುಷ ನೋಡಲಾಗಿ ಪರಬೊಮ್ಮ ಮುಂದೆ ಬಂದಕ್ಕು ಸರ್ವಜ್ಞ ಹನಿ ಹನಿ ಸೇರಿ ದೊಡ್ಡ ಸಮುದ್ರವಾಗುವಂತೆ ಒಳ್ಳೆಯ ವ್ಯಕ್ತಿಗಳಿಂದ ಕಲಿತ ಒಂದೊಂದು ಒಳ್ಳೆಯ ವಿಚಾರಗಳು ನಮ್ಮ ಜ್ಞಾನವನ್ನು ಸಾಗರವನ್ನಾಗಿಸುತ್ತದೆ. ನಮಗಿಂತ ಕಲಿತವರು ಕಂಡಾಗ ಒಂದೊಂದು ವಿಚಾರಗಳನ್ನು ಕೇಳಿ ಕಲಿಯುವುದು ಉತ್ತಮ ಎಂದು ಸರ್ವಜ್ಞ ಕಿವಿಮಾತು ಹೇಳುತ್ತಾರೆ. ಆಡದೆಲೆ ಕೊಡುವವನು ರೂಢಿಯೊಳಗುತ್ತಮನು, ಆಡಿ ಕೊಡುವವನು ಮಧ್ಯಮನು ಅಧಮ ತಾನಾಡಿ ಕೊಡದವನು ಸರ್ವಜ್ಞ

ಇಲ್ಲಿ ಆಡುವ ಮಾತು ಯೋಚಿಸಿ ಮಾತಾಡಬೇಕು. ಆಡುವ ಮಾತಿಗೆ ಬದ್ಧರಾಗಿರಬೇಕು. ಮಾತು ಕೊಟ್ಟು ನಡೆಸದೆ ಇರುವವನು ಅಧಮನಿಗಿಂತ ಕಡೆ ಎಂದು ಸರ್ವಜ್ಞ ಹೇಳುತ್ತಾರೆ.
ಅಂಕದರ್ಜುನ ಹೇಡಿ, ಶಂಕರನು ತಿರಿದುಂಡ ಪಂಕಜನಾಭ ದನಕಾಯ್ದ, ಇನ್ನುಳಿದವರ ಬಿಂಕಬೇನೆಂದ ಸರ್ವಜ್ಞ

ಶ್ರೇಷ್ಠ ಯೋಧ ಅರ್ಜುನ ಹೇಡಿಯಾಗುವ ಸಂದರ್ಭ ಬಂದಿತ್ತು. ಬೇಡಿ ತಿಂದನು ದೇವರ ದೇವ ಮಹಾದೇವ. ಕ್ಷೀರ ಸಾಗರದಲಿ ಶೇಷನಾಗನ ಹಾಸಿಗೆಯ ಮೇಲೆ ಮಲಗಿದ ವಿಷ್ಣು ದನಕಾಯುವ ಗೊಲ್ಲನಾದ. ದೇವರಿಗೆ ಕಷ್ಟ ತಪ್ಪಿಲ್ಲ ಎಂದ ಮೇಲೆ ಹುಲು ಮಾನವರು ನಾವು ಬಿಂಕ ಏಕೆ ಎಂದು ಸರ್ವಜ್ಞ ಹೇಳುತ್ತಾರೆ.

ಸಜ್ಜನರ ಸಂಗವದು ಹೆಜ್ಜೇನ ಸವಿದಂತೆ ದುರ್ಜನರ ಸಂಗ ಬಚ್ಚಲ ಕೊಚ್ಚೆಯಂತಿಹದು ಸರ್ವಜ್ಞ ಸದ್ಗುಣ ಸಂಸ್ಕಾರಗಳನ್ನು ಹೊಂದಿದ ಜನರೊಂದಿಗೆ ಬೆರೆತಾಗ ಬಹಳ ಸುಂದರವಾದ ಜ್ಞಾನ ನಾವು ಪಡೆಯಬಹುದು. ಅದೇ ರೀತಿಯಲ್ಲಿ ದುರ್ಗುಣ ಹೊಂದಿದ ಜನರ ಜೊತೆ ಸೇರಿದರೆ ನಮ್ಮಲ್ಲಿರುವ ಅಲ್ಪ ಸ್ವಲ್ಪ ಒಳ್ಳೆಯ ಗುಣಗಳು ನಾಶವಾಗುತ್ತದೆ. ಮತ್ತೆ ನಮಗೆ ಕೆಡುಕು ಕಟ್ಟಿಟ್ಟ ಬುಟ್ಟಿ ಎನ್ನುತ್ತಾರೆ ಸರ್ವಜ್ಞ.

ಇಲ್ಲಿ ನೀಡಿರುವ ಸರ್ವಜ್ಞನ ಕೆಲವು ವಚನಗಳು ಬದುಕಿನ ದಾರಿ ದೀಪಗಳಾಗಿವೆ. ಬದುಕು ಹೇಗಿರಬೇಕು, ನಾವು ಹೇಗೆ ರೂಪಿಸಿಕೊಳ್ಳಬೇಕು, ನಮ್ಮ ಸಂಗ ಎಂಥವರ ಜೊತೆಯಲ್ಲಿ ಇರಬೇಕು ಎಂಬುದನ್ನು ತನ್ನ ವಚನದ ಮೂರು ಸಾಲುಗಳಲ್ಲಿ ಅರ್ಥವತ್ತಾಗಿ ಸರ್ವಜ್ಞ ತಿಳಿಸಿದ್ದಾನೆ.

Leave a Reply

Your email address will not be published. Required fields are marked *