ಕುಕ್ಕೆ ಸುಬ್ರಮಣ್ಯದಲ್ಲಿದೆ ಈ ನಿಗೂಢ ಗುಹೆ

0 144

ನಮ್ಮ ಕರ್ನಾಟಕ ರಾಜ್ಯವು ಹಲವು ದೇವಾಲಯಗಳ ಆಗರವಾಗಿದೆ. ಇಲ್ಲಿರುವ ದೇವಾಲಯಗಳ ಬಗ್ಗೆ ಪೌರಾಣಿಕ ಕಥೆಗಳಿರುತ್ತದೆ. ಅದೆ ರೀತಿ ಕುಕ್ಕೆ ಸುಬ್ರಹ್ಮಣ್ಯ ದೇವಾಲಯದ ಬಗ್ಗೆ ಪೌರಾಣಿಕ ಹಿನ್ನಲೆಯನ್ನು ಈ ಲೇಖನದಲ್ಲಿ ನೋಡೋಣ.

ನಮ್ಮ ಜೀವನದಲ್ಲಿ ಕಾಡುವ ಸಂತಾನ ಹೀನತೆ, ವಿವಾಹದಲ್ಲಿ ವಿಳಂಬ, ಚರ್ಮ ವ್ಯಾಧಿ ಇಂತಹ ಸಮಸ್ಯೆಗಳಿಗೆ ಸರ್ಪದೋಷ ಕಾರಣ ಎಂದು ನಂಬಲಾಗಿದೆ. ಸರ್ಪದೋಷ ನಿವಾರಣಾ ಕ್ಷೇತ್ರಗಳಲ್ಲಿ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರವು ಪ್ರಮುಖವಾಗಿದೆ. ಸ್ಕಂದ ಪುರಾಣದ ಪ್ರಕಾರ ಪರಶಿವ ಮತ್ತು ಪಾರ್ವತಿ ದೇವಿಯ ಮಗನಾಗಿ ಸುಬ್ರಮಣ್ಯ ದೇವರು ಅವತಾರ ತಾಳಿದ್ದಾರೆ. ಜನರಿಗೆ ತೊಂದರೆ ಕೊಡುತ್ತಿದ್ದ ತಾರಕಾಸುರ ಎಂಬ ರಾಕ್ಷಸನ ಸಂಹಾರ ಮಾಡಿ, ಸರ್ಪರಾಜ ವಾಸುಕಿಯ ಪ್ರಾರ್ಥನೆಗೆ ಮನ್ನಣೆ ನೀಡಿ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ವಾಸುಕಿಯ ಜೊತೆ ನೆಲೆ ನಿಲ್ಲುತ್ತಾರೆ. ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಆಶ್ಲೇಷಬಲಿ, ನಾಗಪ್ರತಿಷ್ಠೆ, ಸರ್ಪಸಂಸ್ಕಾರ ಪೂಜೆಗಳು ನಡೆಯುತ್ತದೆ. ಕುಕ್ಕೆ ಸುಬ್ರಹ್ಮಣ್ಯ ದೇವಾಲಯದಿಂದ ಕುಮಾರದಾರಾ ನದಿಗೆ ತೆರಳುವ ಮಾರ್ಗ ಮಧ್ಯೆ ಬಿಲದ್ವಾರ ಎಂಬ ಪವಿತ್ರ ಗುಹೆ ಇದೆ. ಕಶ್ಯಪ ಮಹಾಮುನಿಗಳಿಗೆ ವಿನುತ ಮತ್ತು ಕದ್ರು ಎಂಬ ಇಬ್ಬರು ಹೆಂಡತಿಯರು ಇರುತ್ತಾರೆ. ವಿನುತನ ಮಗ ಗರುಡ, ಕದ್ರುವಿನ ಮಕ್ಕಳೆ ಸರ್ಪಗಳು. ಒಮ್ಮೆ ಗರುಡನಿಗೂ ಸರ್ಪಗಳಿಗೂ ದ್ವೇಷ ಉಂಟಾಗಿ ಸಹಸ್ರಾರು ಸರ್ಪಗಳನ್ನು ಗರುಡನು ಕೊಲ್ಲುತ್ತಾನೆ. ಸರ್ಪಗಳು ಗರುಡನಿಂದ ತಪ್ಪಿಸಿಕೊಳ್ಳಲು ಸಿಕ್ಕಸಿಕ್ಕಲ್ಲಿ ಅಡಗಿಕೊಳ್ಳುತ್ತವೆ.

ಸರ್ಪರಾಜ ವಾಸುಕಿಯು ಸಹ್ಯಾದ್ರಿ ಮಡಿಲಿನ ದಾರಾ ನದಿಯ ಪಕ್ಕದಲ್ಲಿನ ಬಿಲದ್ವಾರ ಗುಹೆಯಲ್ಲಿ ಅಡಗಿ ಕೊಳ್ಳುತ್ತಾನೆ. ಇದನ್ನು ತಿಳಿದ ಗರುಡನು ವಾಸುಕಿಯನ್ನು ಕೊಲ್ಲಲು ಬಿಲದ್ವಾರದ ಬಳಿ ಹೋಗುತ್ತಾನೆ. ಗರುಡ ಮತ್ತು ವಾಸುಕಿಯ ಕಾಳಗದ ವಿಷಯ ತಿಳಿದ ಇವರ ತಂದೆಯಾದ ಕಶ್ಯಪ ಮಹಾಮುನಿ ಇವರಿಬ್ಬರ ನಡುವೆ ಪ್ರವೇಶಿಸುತ್ತಾನೆ. ವಾಸುಕಿ ಶಿವಭಕ್ತನಾಗಿದ್ದ, ಆತನಿಂದ ಅನೇಕ ಲೋಕಕಲ್ಯಾಣ ಕಾರ್ಯಗಳು ಆಗಬೇಕಾಗಿರುವುದರಿಂದ ಆತನನ್ನು ಕೊಲ್ಲದಂತೆ ಕಶ್ಯಪ ಮಹಾಮುನಿಗಳು ಗರುಡನಿಗೆ ಮನವಿ ಮಾಡುತ್ತಾರೆ. ಗರುಡನಿಂದ ತಪ್ಪಿಸಿಕೊಂಡ ವಾಸುಕಿಯು ಸರ್ಪಗಳನ್ನು ಗರುಡನಿಂದ ರಕ್ಷಿಸಲು ಕುಕ್ಕೆ ಸುಬ್ರಹ್ಮಣ್ಯ ದೇವಾಲಯ ಇರುವ ಜಾಗದಲ್ಲಿ ಶಿವನನ್ನು ಕುರಿತು ತಪಸ್ಸು ಮಾಡುತ್ತಾನೆ.

ವಾಸುಕಿಯ ತಪಸ್ಸಿಗೆ ಶಿವನು ಪ್ರತ್ಯಕ್ಷನಾಗಿ ತನ್ನ ಮಗ ಸುಬ್ರಹ್ಮಣ್ಯನು ಸರ್ಪಗಳ ರಕ್ಷಕನಾಗಿ ಇದೆ ಕ್ಷೇತ್ರದಲ್ಲಿ ನೆಲೆ ನಿಲ್ಲುತ್ತಾನೆ ಎಂದು ಹೇಳಿದನು. ಅದರಂತೆ ಕುಕ್ಕೆ ಸುಬ್ರಹ್ಮಣ್ಯ ದೇವಾಲಯದಲ್ಲಿ ವಾಸುಕಿಯ ಜೊತೆಗೆ ಸುಬ್ರಮಣ್ಯ ದೇವರು ನೆಲೆ ನಿಲ್ಲುತ್ತಾರೆ. ಇಲ್ಲಿ ಸುಬ್ರಹ್ಮಣ್ಯ ಸ್ವಾಮಿಯನ್ನು ನಾಗ ಸ್ವರೂಪಿಯಾಗಿ ಪೂಜಿಸಲಾಗುತ್ತದೆ. ಸುಬ್ರಮಣ್ಯ ದೇವರನ್ನು ಧರೆಗೆ ಇಳಿಸಿದ ವಾಸುಕಿಯನ್ನು ದೈವ ಸ್ವರೂಪದಲ್ಲಿ ಪೂಜಿಸಲಾಗುತ್ತದೆ. ಸುಬ್ರಹ್ಮಣ್ಯ ಸ್ವಾಮಿಯು ಧರೆಗಿಳಿಯಲು ಕಾರಣಿಕರ್ತನಾದ ಗರುಡ ಬರದೆ ಸುಬ್ರಮಣ್ಯ ಕ್ಷೇತ್ರದಲ್ಲಿ ರಥವನ್ನು ಎಳೆಯುವುದಿಲ್ಲ. ಗರುಡನ ಭಯದಿಂದ ವಾಸುಕಿಯು ಅಡಗಿ ಕುಳಿತಿದ್ದ ಬಿಲದ್ವಾರ ಗುಹೆಗೆ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಮಹತ್ವವಿದೆ. ವಾಸುಕಿಯ ಅನುಗ್ರಹ ಪಡೆಯಲು ಭಕ್ತಾದಿಗಳು ಬಿಲದ್ವಾರ ಗುಹೆಗೆ ಆಗಮಿಸುತ್ತಾರೆ.

ಈ ಗುಹೆಗೆ ಎರಡು ದಾರಿಗಳಿವೆ ಒಂದು ದಾರಿ ದಕ್ಷಿಣಕ್ಕೆ ಸಾಗಿದೆ, ಇನ್ನೊಂದು ದಾರಿ ಉತ್ತರಕ್ಕೆ ಸಾಗುತ್ತದೆ. ಉತ್ತರಕ್ಕೆ ಸಾಗುವ ದಾರಿಯು ಕಾಶಿಗೆ ಹೋಗುತ್ತದೆ ಎಂಬ ನಂಬಿಕೆ ಇದೆ. ಪ್ರಾಚೀನ ಕಾಲದಲ್ಲಿ ಈ ದಾರಿಯ ಮೂಲಕ ಹಲವಾರು ಮಂದಿ ಕಾಶಿಗೆ ತೆರಳಿದ್ದಾರೆ, ಆದರೆ ಇತ್ತೀಚಿನ ದಿನಗಳಲ್ಲಿ ಮಣ್ಣು ಜರಿದು ಹೋಗಿದ್ದರಿಂದ ಹೋಗಲು ಆಗುತ್ತಿಲ್ಲ. ಈ ಗುಹೆಯು ಕತ್ತಲಿನಿಂದ ಆವರಿಸಿದೆ. ಬಿಲದ್ವಾರ ಗುಹೆ ಪವಿತ್ರ ಗುಹೆ ಆಗಿರುವುದರಿಂದ ಭಕ್ತಾದಿಗಳು ಚಪ್ಪಲಿಯನ್ನು ಹಾಕಿಕೊಂಡು ಹೋಗುವಂತಿಲ್ಲ. ಮಳೆಗಾಲದಲ್ಲಿ ಕೆಸರಿನಿಂದ ಮುಚ್ಚಿಹೋಗುತ್ತದೆ ಆದ್ದರಿಂದ ಬೇಸಿಗೆಯಲ್ಲಿ ಗುಹೆಯ ಒಳಗೆ ಹೋಗಬಹುದು. ಬಿಲದ್ವಾರ ಗುಹೆಯ ಎದುರಿಗೆ ವಾಸುಕಿ ಉದ್ಯಾನವನವಿದೆ. ಉದ್ಯಾನವನದಲ್ಲಿ ಸುಂದರ ನಾಗ ಶಿಲ್ಪವಿದೆ, ವಾಸುಕಿ ಮತ್ತು ಗರುಡ ಕಾದಾಡುವ ಸನ್ನಿವೇಶವನ್ನು ಬಿಂಬಿಸುವ ಶಿಲ್ಪಗಳಿವೆ. ಸುಬ್ರಮಣ್ಯ ದೇವಾಲಯಕ್ಕೆ ಹೋದರೆ ತಪ್ಪದೇ ಬಿಲದ್ವಾರ ಗುಹೆಗೆ ಹೋಗಿ ಬರಬೇಕು.

Leave A Reply

Your email address will not be published.