ಬೆಲ್ಲ ಇದರ ಆರೋಗ್ಯಕರ ಗುಣಗಳ ಬಗ್ಗೆ ಎರಡು ಮಾತೇ ಇಲ್ಲ, ಅಷ್ಟೊಂದು ಅದ್ಭುತ ಗುಣಗಳನ್ನು ಹೊಂದಿರುವಂಥ ಸಿಹಿ ವಸ್ತುವಾಗಿದೆ. ಯಾವುದೇ ಕಾಲವಾಗಿರಲಿ ಬೆಲ್ಲ ಬಳಸುವುದು ದೇಹಕ್ಕೆ ತುಂಬಾನೇ ಒಳ್ಳೆಯದು. ಬೆಲ್ಲ ಬಾಯಿಗೆ ಮಾತ್ರ ಸಿಹಿ ಅಲ್ಲ, ಆರೋಗ್ಯಕ್ಕೂ ಸಿಹಿ ಎಂಬುದು ನಿಮಗೆ ಗೊತ್ತೆ. ಸಕ್ಕರೆಗೆ ಬದಲಾಗಿಗಿ ಬೆಲ್ಲ ಉಪಯೋಗಿಸುವುದು ಹಣ ಹಾಗೂ ಆರೋಗ್ಯ ಎರಡೂ ದೃಷ್ಟಿಯಿಂದಲೂ ಉತ್ತಮ. ಖನಿಜಾಂಶ, ಅದರಲ್ಲೂ ಕಬ್ಬಿಣಾಂಶವನ್ನು ಹೊಂದಿರುವ ಬೆಲ್ಲವನ್ನು ಹಿತವಾಗಿ, ಮಿತವಾಗಿ ಪ್ರತಿದಿನ ಬೆಲ್ಲ ತಿನ್ನುವುದು ನಿಜಕ್ಕೂ ಆರೋಗ್ಯದ ಮೇಲೆ ಸಾಕಷ್ಟು ಅದ್ಭುತ ಪರಿಣಾಮ ಬೀರಬಲ್ಲದು. ಈ ಹಿನ್ನೆಲೆಯಲ್ಲಿ ಪೂರ್ವಜರು ಬೆಲ್ಲ ತಿಂದು ನೀರು ಕುಡಿಯುತ್ತಿದ್ದರು. ಆರೋಗ್ಯಕ್ಕಾಗಿ ಸಕ್ಕರೆಯನ್ನು ದೂರವಿಟ್ಟು ಬೆಲ್ಲವನ್ನು ಸವಿಯುವಂತೆ ಆರೋಗ್ಯ ತಜ್ಞರು, ನ್ಯೂಟ್ರಿಷಿಯನಿಸ್ಟ್ ಸಲಹೆ ನೀಡುತ್ತಾರೆ. ಆರೋಗ್ಯದ ಬಗ್ಗೆ, ದೇಹದ ಫಿಟ್ನೆಸ್‌ ಬಗ್ಗೆ ಕಾಳಜಿ ಇರುವವರು ಕೂಡ ಬೆಲ್ಲವನ್ನೇ ಬಳಸುತ್ತಿದ್ದಾರೆ. ಚಿಕ್ಕ ಮಕ್ಕಳಿಂದ ಹಿಡಿದು ದೊಡ್ಡವವರೆಗೆ ಆರೋಗ್ಯವನ್ನು ಕಾಪಾಡುವ ಗುಣವಿರುವ ಬೆಲ್ಲವನ್ನು ಕೆಲವರು ತಮ್ಮ ಸ್ವಾರ್ಥಕ್ಕಾಗಿ ಅದರ ಗುಣಮಟ್ಟ ಕಳಪೆ ಮಾಡುತ್ತಿದ್ದಾರೆ. ಬೆಲ್ಲ ಮಾಡುವಾಗ ರಾಸಾಯನಿಕ ಬಣ್ಣಗಳನ್ನು ಸೇರಿಸಲಾಗುತ್ತದೆ ಎಂಬ ಆರೋಪವು ಕೇಳಿ ಬರುತ್ತಿರುವುದರಿಂದ ನಾವು ಬಳಸುವ ಬೆಲ್ಲ ಎಷ್ಟರ ಮಟ್ಟಿಗೆ ಶುದ್ಧವಾಗಿದೆ ಎಂಬ ಸಂಶಯ ಬಾರದೇ ಇರುವುದಿಲ್ಲ. ಹಾಗಿದ್ದರೆ ಬೆಲ್ಲ ಶುದ್ಧವಾಗಿ ಇದೆಯೋ ಇಲ್ಲವೋ ಎಂದು ತಿಳಿಯುವುದು ಹೇಗೆ? ಎನ್ನುವುದನ್ನು ನಾವು ಈ ಲೇಖನದ ಮೂಲಕ ತಿಳಿದುಕೊಳ್ಳೋಣ.

ಬೆಲ್ಲ ತಯಾರಿಸುವ ಜಾಗಕ್ಕೆ “ಆಲೆಮನೆ” ಎನ್ನುತ್ತಾರೆ. ಹೊಲದಿಂದ ತಂದು ತುಂಡರಿಸಿದ ಮೊದಲ ಕಬ್ಬನ್ನು ರಸ ಪಡೆಯಲು ಕಬ್ಬು ಹಿಂಡುವ ಕಣೆಯ (ಕ್ರಷರ್) ಒಳಗೆ ಹಾಕುವುದು.
ನಂತರ ಕಬ್ಬಿನ ಹಾಲನ್ನು ಶೋದಿಸಿ ದೊಡ್ಡ ಕುದಿಯುವ ಕಬ್ಬಿಣದ ಬಾನಿಯಲ್ಲಿ (ದೊಡ್ಡಕಡಾಯಿ) ಹಾಕಿ ಅಡಿಯಲ್ಲಿ ಬೆಂಕಿಹಾಕಿ ಕುದಿಸಲಾಗುತ್ತದೆ. ಶಾಖ ವ್ಯರ್ಥವಾಗದಂತೆ ಗೂಡು ಕುಲುಮೆಯನ್ನು ನೆಲದಲ್ಲಿ ನಿರ್ಮಿಸಲಾಗಿರುತ್ತದೆ.

ಆಲೆಮನೆಯಲ್ಲಿ ಕಬ್ಬಿನಹಾಲನ್ನು ಕುದಿಸಿ ಬೆಲ್ಲ ತಯಾರಿಸುತ್ತಿರುವುದು. ಇತ್ತೀಚೆಗೆ ಒಂದು ಬಾನಿಯ (ಕಡಾಯಿ) ಬದಲು 3 ರಿಂದ 4 ಬಾನಿಗಳನ್ನು ಸಾಲಿನಲ್ಲಿ ಇಟ್ಟು ಕಬ್ಬಿನ ಹಾಲು ಕುದಿಯುವ ವ್ಯವಸ್ಥೆ ಮಾಡಲಾಗುವುದು ಮತ್ತು ಹೊಗೆ ಕೊಳವೆಯ ಮೂಲಕ ಅನಿಲಗಳು ಎಲ್ಲಾ ನಾಲ್ಕು ಕುದಿಯುವ ಕಡಾಯಿಗಳಿಗೆ ಒಂದರ ನಂತರ ಮತ್ತೊಂದು,ಮತ್ತೆ ಒಂದು; ನಂತರಲ್ಲಿ ಚಿಮಣಿ ಮೂಲಕ ಅಡಿಯಲ್ಲಿ ಬೆಂಕಿಯ ಸುಳಿ ಹೋಗಲು ವ್ಯವಸ್ಥೆ ಮಾಡುವರು. ಆಲೆಮನೆಯ ಒಲೆ ಮತ್ತು ಬಾನಿಯಲ್ಲಿ ಕಬ್ಬಿನ ಹಾಲು ಕಾಯಿಸುವುದು.

ಕುದಿಯುವ ಸಮಯದಲ್ಲಿ ಮೇಲಕ್ಕೆ ಬಂದ ಎಲ್ಲ ಕಶ್ಮಲಗಳನ್ನು ಉದ್ದ ಕೋಲಿಗೆ ಕಟ್ಟಿದ ಜರಡಿ ಅಥವಾ ಬಟ್ಟೆಯ ಮೂಲಕ ತೆಗೆದುಹಾಕಲಾಗುತ್ತದೆ.ಕುದಿಯುವುದರಿಂದ ಎಲ್ಲಾ ನೀರಿನ ಅಂಶ ಆವಿಯಾಗಿ ನಂತರ ಕಬ್ಬಿನ ಹಾಲು ಗಟ್ಟಿಯಾಗುತ್ತದೆ. ಮಂದವಾದ ಹಳದಿ ವಸ್ತುವು ಎತ್ತಿ ಬಿಟ್ಟಾಗ ದಾರವಾಗುವ ಹದ ಬಂದಾಗ ಕುದಿಯುವ ಬೆಲ್ಲವನ್ನು ತಂಪಾಗಿಸುವ ಅಗಲದ ಸಿಮೆಂಟಿನ ಕಟ್ಟೆಯಿರುವ ಹೊಂಡಕ್ಕೆ ಬಿಡಲಾಗುವುದು ಅಥವಾ ಬೋಗುಣಿಗೆ ಬಿಡಲಾಗುತ್ತದೆ. ಅದನ್ನು ಸ್ವಲ್ಪ ಆರಿದ ನಂತರ ಬೇಕಾದ ಗಾತ್ರಕ್ಕೆ ಬೇಕಾದ ಆಕಾರದ ಅಚ್ಚುಗಳನ್ನು ಮಾಡಲಾಗುವುದು.

ಇದರಲ್ಲಿ ನ್ಯೂಟ್ರಿಷಿಯನ್‌ ಅಂಶ ಇರುವುದರಿಂದ ಸಕ್ಕರೆಗಿಂತ ಬೆಲ್ಲ ಆರೋಗ್ಯಕರ. ಆದರೆ ಬೆಲ್ಲವನ್ನು ಹೀಗೆ ತಯಾರಿಸುವಾಗ ಕೆಲವರು ಗುಣಮಟ್ಟದ ಕಬ್ಬಿನ ರಸ ಬಳಸದೆ, ಅದಕ್ಕೆ ಉತ್ತಮ ಬಣ್ಣ ಸಿಗಲು ರಾಸಾಯನಿಕಗಳನ್ನು ಬಳಸುವುದುಂಟು. ಆದ್ದರಿಂದ ನಾವು ಬಳಸುವ ಬೆಲ್ಲದ ಗುಣ ಮಟ್ಟ ಪರೀಕ್ಷಿಸಿ ಬಳಸುವುದು ಒಳ್ಳೆಯದು. ಇನ್ನು ಬೆಲ್ಲದ ಗುಣಮಟ್ಟವನ್ನು ಪರೀಕ್ಷಿಸುವುದು ಹೇಗೆ? ಎಂದು ನೋಡುವುದಾದರೆ , ಸಾಮಾನ್ಯವಾಗಿ ಗುಣಮಟ್ಟದ ಬೆಲ್ಲ ಅದರ ಬಣ್ಣ ಹಾಗೂ ಗಟ್ಟಿಯನ್ನು ನೋಡಿದರೆ ತಿಳಿಯುತ್ತದೆ. ಇವುಗಳ ಜೊತೆಗೆ ಈ ಕೆಳಗಿನ ಅಂಶಗಳಿಂದಲೂ ತಿಳಿಯಬಹುದು. ನಾವು ಬೆಲ್ಲವನ್ನು ಕೊಂಡಿಕೊಳ್ಳುವಾಗ ಈ ಕೆಳಗಿನ ಅಂಶಗಳನ್ನು ನೋಡಬೇಕು. ಸ್ವಲ್ಪ ಬೆಲ್ಲ ತೆಗೆದು ಬಾಯಿಗೆ ಹಾಕಿ, ಬೆಲ್ಲದ ರುಚಿ ಸಿಹಿ ಮಾತ್ರವಲ್ಲ ಸ್ವಲ್ಪ ಉಪ್ಪು ಕೂಡ ಇರಬೇಕು. ಏಕೆಂದರೆ ಬೆಲ್ಲದಲ್ಲಿರುವ ಪೋಷಕಾಂಶ ಬೆಲ್ಲಕ್ಕೆ ಉಪ್ಪಿನ ರುಚಿ ನೀಡುತ್ತದೆ, ಅಲ್ಲದೆ ಆ ರುಚಿಯೇ ಅದು ಒಳ್ಳೆಯ ಬೆಲ್ಲ ಹೌದೋ ಅಲ್ಲವೋ ಎಂಬುದನ್ನು ಹೇಳುತ್ತದೆ. ಒಂದು ವೇಳೆ ಬೆಲ್ಲದಲ್ಲಿ ಏನಾದರೂ ಸ್ವಲ್ಪ ಕಹಿ ರುಚಿ ಇದ್ದರೆ ಅದು ಶುದ್ಧವಾದ ಬೆಲ್ಲ ಅಲ್ಲವೆಂದು ಹೇಳಬಹುದು. ಬೆಲ್ಲದ ಮೇಲೆ ಹರಳು-ಹರಳು ರೀತಿ ಇದ್ದರೆ ತಯಾರಿಸುವಾಗ ಬೇರೆ ಏನೋ ಮಿಶ್ರ ಮಾಡಿದ್ದಾರೆ ಎಂದು ಹೇಳಬಹುದು. ಬೆಲ್ಲದ ಬಣ್ಣ ಕೂಡ ಅದರ ಗುಣಮಟ್ಟ ತಿಳಿಯಲು ಸಹಾಯ ಮಾಡುತ್ತೆ. ಬೆಲ್ಲದ ಬಣ್ಣ ಕಪ್ಪು ಬಣ್ಣದಲ್ಲಿ ಇರುತ್ತದೆ, ಅದರಲ್ಲಿ ಸ್ವಲ್ಪ ಹಳದಿ ಬಣ್ಣ ಇದ್ದರೆ ಅದು ಶುದ್ಧವಾದ ಬೆಲ್ಲವಲ್ಲ.

ಬೆಲ್ಲ ಕೊಂಡ ಬಳಿಕ ಗಮನಿಸಬೇಕಾದ ಅಂಶಗಳು ಏನು? ಎಂದು ನೋಡುವುದಾದರೆ , ನೀವು ಒಂದು ಪಾರದರ್ಶಕ ಬೌಲ್‌ ತೆಗೆದುಕೊಂದು ಅದರಲ್ಲಿ ನೀರು ಹಾಕಿ, ಬೆಲ್ಲವನ್ನು ಕರಗಿಸಿ, ಆಗ ತಳದಲ್ಲಿ ಪುಡಿ ನಿಂತರೆ ಅದು ಕಲಬೆರಿಕೆಯ ಬೆಲ್ಲವಾಗಿದೆ. ಇನ್ನು ಬೆಲ್ಲಕ್ಕೆ ನೈಸರ್ಗಿಕ ಬೆಲ್ಲದ ಬಣ್ನದ ಸಿಗಲು ಕೆಲವರು ರಾಸಾಯನಿಕ ಸೇರಿಸುತ್ತಾರೆ. ಇದನ್ನುನೀವು ಲ್ಯಾಬ್ ಪರೀಕ್ಷೆ ಮನೆಯಲ್ಲಿಯೇ ಮಾಡಿ ತಿಳಿಯಬಹುದು. ಅರ್ಧ ಚಮಚ ಬೆಲ್ಲವನ್ನು ಕರಗಿಸಿ, ಅದಕ್ಕೆ 6 ಮಿ. ಲೀಟರ್ ಮದ್ಯ ಸೇರಿಸಿ, ನಂತರ 20 ಹನಿ ಹೈಡ್ರೋಕ್ಲೋರಿಕ್ ಆಮ್ಲ ಮಿಕ್ಸ್ ಮಾಡಿ. ಕೃತಕ ಬಣ್ಣ ಸೇರಿಸಿದರೆ ಅದು ಪಿಂಕ್ ಬಣ್ಣಕ್ಕೆ ತಿರುಗುತ್ತದೆ.

Leave a Reply

Your email address will not be published. Required fields are marked *