ಗ್ರಾಮ ಪಂಚಾಯತ್ ಎಲೆಕ್ಷನ್ ನಲ್ಲಿ ಯಾರೆಲ್ಲ ಸ್ಪರ್ದಿಸಬಹುದು? ದಾಖಲೆಗಳು ಹೀಗಿರಬೇಕು

0 3

ನಾವು ರಾಜ್ಯ ಸರ್ಕಾರದಲ್ಲಿ ಮತ್ತು ಕೇಂದ್ರ ಸರ್ಕಾರದಲ್ಲಿ ಪ್ರತಿ 5 ವರ್ಷಕ್ಕೊಮ್ಮೆ ಚುನಾವಣೆ ನಡೆಯುವುದನ್ನು ನೋಡುತ್ತೇವೆ. ಅದೇ ರೀತಿ ಪ್ರತಿ ಗ್ರಾಮ ಪಂಚಾಯತಗೂ ಚುನಾವಣೆ ನಡೆಯುತ್ತದೆ. ಚುನಾವಣೆಯಲ್ಲಿ ಯಾರು ಮತದಾನ ಮಾಡಬಹುದು, ಚುನಾವಣೆಯಲ್ಲಿ ಸ್ಪರ್ಧಿಸಲು ಯಾವ ಅರ್ಹತೆ ಇರಬೇಕು ಹಾಗೂ ನಾಮಪತ್ರದ ಜೊತೆಗೆ ಯಾವೆಲ್ಲಾ ದಾಖಲಾತಿಗಳನ್ನು ಸಲ್ಲಿಸಬೇಕು ಎಂಬ ಸಂಪೂರ್ಣ ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿಯೋಣ.

ವಿಧಾನಸಭೆ, ವಿಧಾಪರಿಷತ್ತಿಗೆ ಚುನಾವಣೆ ನಡೆಸಿದಂತೆ ಗ್ರಾಮ ಪಂಚಾಯತಿಗೆ ಚುನಾವಣೆ ನಡೆಸುತ್ತಾರೆ. ಗ್ರಾಮ ಪಂಚಾಯತಿಗಳಿಗೆ ಪಕ್ಷ ರಹಿತವಾಗಿ ಚುನಾವಣೆಯನ್ನು ನಡೆಸಲಾಗುತ್ತದೆ. ಚುನಾವಣೆ ನಂತರ ಮತ ಎಣಿಕೆಯಲ್ಲಿ ವಿಜೇತರಾದ ಅಭ್ಯರ್ಥಿಗಳ ಹೆಸರನ್ನು ಜಿಲ್ಲಾಧಿಕಾರಿಗಳು ವಿಶೇಷ ರಾಜ್ಯ ಪತ್ರದಲ್ಲಿ ಪ್ರಕಟಿಸಿದ ಒಂದು ತಿಂಗಳ ಒಳಗಾಗಿ ಅಧ್ಯಕ್ಷರನ್ನು, ಉಪಾಧ್ಯಕ್ಷರನ್ನು ಆಯ್ಕೆ ಮಾಡಲಾಗುತ್ತದೆ. ಗ್ರಾಮ ಪಂಚಾಯತಿ ಚುನಾವಣೆಗೆ ಸ್ಪರ್ಧಿಸಲು 21 ವರ್ಷ ವಯಸ್ಸಾಗಿರಬೇಕು ಒಂದು ಗ್ರಾಮ ಪಂಚಾಯತಿಯ ಯಾವುದಾದರೂ ಕ್ಷೇತ್ರ ಅಥವಾ ವಾರ್ಡ್ ನಿಂದ ಸ್ಪರ್ಧಿಸಬೇಕಾದರೆ ಅವರ ಹೆಸರು ಆ ಗ್ರಾಮ ಪಂಚಾಯತಿ ವ್ಯಾಪ್ತಿಯ ಮತದಾರರ ಪಟ್ಟಿಯಲ್ಲಿ ಇರಬೇಕು.

ಮೀಸಲು ಸ್ಥಾನದಲ್ಲಿ ಸ್ಪರ್ಧಿಸುವವರು ಆಯಾ ಪ್ರವರ್ಗಕ್ಕೆ ಸೇರಿದ ಬಗ್ಗೆ ಸಕ್ಷಮ ಪ್ರಾಧಿಕಾರದಿಂದ ದೃಢೀಕರಣ ಪ್ರಮಾಣಪತ್ರವನ್ನು ನಾಮಪತ್ರದೊಂದಿಗೆ ಸಲ್ಲಿಸಬೇಕು. ಚುನಾವಣೆಯಲ್ಲಿ ಸ್ಪರ್ಧಿಸುವ ವ್ಯಕ್ತಿ ಯಾವುದೇ ನ್ಯಾಯಲಯದಿಂದ ಕ್ರಿಮಿನಲ್ ಪ್ರಕರಣದಲ್ಲಿ 3 ತಿಂಗಳಿಗೂ ಮೀರಿದ ಜೈಲು ಶಿಕ್ಷೆಗೆ ಒಳಗಾಗಿದ್ದರೆ ಆ ಶಿಕ್ಷೆಯೂ ಮೇಲಿನ ನ್ಯಾಯಾಲಯದಲ್ಲಿ ವಜಾ ಆಗಿರದಿದ್ದರೆ ಅಂಥಹವರು ಚುನಾವಣೆಗೆ ಸ್ಪರ್ಧಿಸಲು ಅರ್ಹವಿರುವುದಿಲ್ಲ ಆದರೆ ವಿಚಾರಣಾಧೀನ ಕೈದಿಗಳಿಗೆ ಸ್ಪರ್ಧಿಸಲು ಅವಕಾಶವಿದೆ. ಹಿಂದಿನ ಯಾವುದೇ ಅವಧಿಯಲ್ಲಿ ಹಣ, ಅಧಿಕಾರದ ದುರ್ಬಳಕೆ, ಸೇವಾ ದುರ್ವರ್ತನೆ ಪ್ರಕರಣದಲ್ಲಿ ಸದಸ್ಯ ಸ್ಥಾನದಿಂದ 6 ವರ್ಷದ ಅವಧಿಗೆ ಅನರ್ಹಗೊಂಡ ಆ ಅನರ್ಹತೆಯ ಅವಧಿ ಮುಗಿಯದೆ ಇದ್ದರೆ ಅಥವಾ ಅನರ್ಹತೆ ಪ್ರಕರಣಕ್ಕೆ ನ್ಯಾಯಾಲಯದಲ್ಲಿ ತಡೆ ಇಲ್ಲದೆ ಇದ್ದರೆ ಅಂತಹವರು ಚುನಾವಣೆಗೆ ಸ್ಪರ್ಧಿಸಲು ಅವಕಾಶ ಇರುವುದಿಲ್ಲ.

ಕಾಯಿದೆಯಲ್ಲಿ ವಿವರಿಸಿರುವ ಯಾವುದೇ ಲಾಭದಾಯಕ ಹುದ್ದೆಯಲ್ಲಿ ಇದ್ದುಕೊಂಡೇ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶವಿಲ್ಲ. ಪಂಚಾಯತಿ ಚುನಾವಣೆಗೆ ಮತದಾನ ಮಾಡಲು 18 ವರ್ಷ ತುಂಬಿರಬೇಕು. ಹೆಸರು ಇರುವ ಪ್ರತಿಯೊಬ್ಬರು ಮತ ಚಲಾವಣೆಯ ಹಕ್ಕನ್ನು ಹೊಂದಿರುತ್ತಾರೆ. ನಾಮಪತ್ರ ಸಲ್ಲಿಸುವ ಕೊನೆಯ ದಿನಾಂಕದವರೆಗೂ ಮತದಾನದ ಪಟ್ಟಿಯಲ್ಲಿ ಹೆಸರು ಸೇರ್ಪಡೆ, ತಿದ್ದುಪಡಿ ಮುಂತಾದ ತಪ್ಪುಗಳನ್ನು ಸರಿಪಡಿಸಿಕೊಳ್ಳಲು ಅವಕಾಶವಿರುತ್ತದೆ.

ಗ್ರಾಮ ಪಂಚಾಯತ ಚುನಾವಣೆ 2020 ನಾಮಪತ್ರದೊಂದಿಗೆ ಜಾತಿ ಪ್ರಮಾಣ ಪತ್ರ, 20 ರೂಪಾಯಿ ಮೌಲ್ಯದ ಎರಡು ಪ್ರತಿಯಲ್ಲಿ ಸ್ಟಾಂಪ ಪೇಪರಿನಲ್ಲಿ ಘೋಷಣಾ ಪತ್ರದ ಅಪಿಡೇವಿಟ್ ಅನ್ನು ಸಲ್ಲಿಸಬೇಕು. ಸಾಮಾನ್ಯ ಸ್ಥಾನಕ್ಕೆ 200 ರೂಪಾಯಿ, ಮೀಸಲಾತಿ ಸ್ಥಾನಗಳು ಅಂದರೆ ಎಸ್ಸಿ, ಎಸ್ಟಿ, ಪ್ರವರ್ಗ 1 ಮತ್ತು ಮಹಿಳೆಯರಿಗೆ 100 ರೂಪಾಯಿ ಠೇವಣಿ ಹಣವನ್ನು ನಿಗದಿಪಡಿಸಲಾಗಿದೆ ಅಷ್ಟು ಹಣವನ್ನು ಕಟ್ಟಬೇಕು.

ಮತಪತ್ರದಲ್ಲಿ ಮುದ್ರಿಸಬೇಕಾದ ಹೆಸರಿನ ಬಗ್ಗೆ ಲಿಖಿತ ಪತ್ರವನ್ನು ಸಲ್ಲಿಸಬೇಕು. ಅಭ್ಯರ್ಥಿಗಳು ಚುನಾವಣಾಧಿಕಾರಿಗಳಿಗೆ ಹೆಚ್ಚುವರಿ ಮಾಹಿತಿಯನ್ನು ಸಲ್ಲಿಸಬೇಕು. ಗ್ರಾಮ ಪಂಚಾಯಿತಿಯಿಂದ ಪಡೆದ ಬೇಬಾಕಿ ಪ್ರಮಾಣ ಪತ್ರವನ್ನು ಸಲ್ಲಿಸಬೇಕಾಗುತ್ತದೆ. ಗ್ರಾಮ ಪಂಚಾಯತ್ ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಗಳ ಇತ್ತೀಚಿನ 3 ಪಾಸ್ಪೋರ್ಟ್ ಸೈಜ್ ಫೋಟೋಗಳನ್ನು ಸಲ್ಲಿಸಬೇಕು ಹಾಗೂ ಮತದಾರರ ಗುರುತಿನ ಚೀಟಿ ಹಾಗೂ ಆಧಾರ ಕಾರ್ಡ್ ಝೆರಾಕ್ಸ್ ಪ್ರತಿಯನ್ನು ಸಲ್ಲಿಸಬೇಕು. ಒಟ್ಟಿನಲ್ಲಿ ಗ್ರಾಮ ಪಂಚಾಯಿತಿ ಚುನಾವಣೆಗೆ ಈ ಎಲ್ಲ ದಾಖಲಾತಿಯನ್ನು ಸಲ್ಲಿಸಿ ಚುನಾವಣೆಯಲ್ಲಿ ಸ್ಪರ್ಧಿಸಬಹುದು. ಈ ಮಾಹಿತಿಯನ್ನು ತಪ್ಪದೇ ಎಲ್ಲ ಗ್ರಾಮದವರೆಗೂ ತಿಳಿಸಿ.

Leave A Reply

Your email address will not be published.