ಕಳೆದ ವರ್ಷದಿಂದ ಕೊರೋನ ವೈರಸ್ ನಮ್ಮನ್ನು ಬಿಡದೆ ಕಾಡುತ್ತಿದೆ ಇದು ಎಲ್ಲರಿಗೂ ಗೊತ್ತಿದೆ. ನಮ್ಮ ದೇಶದಲ್ಲಂತೂ ಕೊರೋನ ವೈರಸ್ ಹಾವಳಿ ಹೆಚ್ಚಾಗಿದೆ. ಬಹಳಷ್ಟು ಜನರು ಸಾವನ್ನಪ್ಪಿದರು, ಇನ್ನು ಕೆಲವರು ತಮ್ಮವರನ್ನು ಕಳೆದುಕೊಂಡು ಬೀದಿಗೆ ಬಿದ್ದರು. ಮತ್ತೆ ಕೆಲವರಿಗೆ ಲಾಕ್ ಡೌನ್ ಆಗಿರುವುದರಿಂದ ಕೆಲಸ ಇಲ್ಲದೆ ಊಟಕ್ಕೆ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಕೆಲವು ಕಡೆ ಕೊರೋನ ವೈರಸ್ ತೊಲಗಿಸುವ ನೆಪದಲ್ಲಿ ಮೌಢ್ಯಾಚರಣೆಯನ್ನು ಮಾಡುತ್ತಿದ್ದಾರೆ. ಹಾಗಾದರೆ ಎಲ್ಲಿ, ಯಾವ ರೀತಿ ಮೌಢ್ಯಾಚರಣೆ ನಡೆಯುತ್ತಿದೆ ಎಂಬುದನ್ನು ಈ ಲೇಖನದ ಮೂಲಕ ತಿಳಿದುಕೊಳ್ಳೋಣ.

ಪ್ರತಿನಿತ್ಯ ಕೊರೋನ ವೈರಸ್ ತೊಲಗಬೇಕೆಂದು ಮೌಢ್ಯಾಚರಣೆ ನಡೆಯುತ್ತಿದೆ. ಒಂದು ಕಡೆ ಕೊರೋನ ವೈರಸ್ ತೊಲಗಬೇಕೆಂದು ಹೋಮ-ಹವನಗಳು ನಡೆದರೆ, ಇನ್ನೊಂದು ಕಡೆ ಕುರಿ, ಕೋಳಿ ಬಲಿ ನಡೆಯುತ್ತಿದೆ. ಮತ್ತೊಂದು ಕಡೆ ಬಳ್ಳಾರಿಯಲ್ಲಿ ರಾಶಿರಾಶಿ ನೂರು ಕೆಜಿ ಅನ್ನವನ್ನು ಟ್ರ್ಯಾಕ್ಟರ್ ನಲ್ಲಿ ತುಂಬಿಕೊಂಡು ಊರಾಚೆ ಚೆಲ್ಲುತ್ತಿದ್ದಾರೆ. ಬಹಳಷ್ಟು ಜನರು ಕೊರೋನ, ಲಾಕ್ ಡೌನ್ ನಿಂದ ಕೆಲಸವಿಲ್ಲದೆ, ಅನ್ನವಿಲ್ಲದೆ ಪರದಾಡುತ್ತಿದ್ದಾರೆ ಇಂತಹ ಸಮಯದಲ್ಲಿ ಅನ್ನವನ್ನು ಊರಾಚೆ ಚೆಲ್ಲುತ್ತಿರುವುದು ವಿಷಾದನೀಯ. ನಂಬಿಕೆ ಇರಬೇಕು ಆದರೆ ಮೂಢನಂಬಿಕೆ ಇರಬಾರದು ಆದರೆ ಕೆಲವು ದಿನಗಳಿಂದ ಹಲವು ಕಡೆ ಕೊರೋನ ವೈರಸ್ ತೊಲಗಬೇಕೆಂದು ಮೌಢ್ಯಾಚರಣೆ ಆಚರಿಸುತ್ತಿದ್ದಾರೆ. ಮೊದಲಿಗಿಂತ ಇಂದಿನ ನಾಲ್ಕೈದು ದಿನಗಳಲ್ಲಿ ಕೊರೋನ ವೈರಸ್ ಸ್ವಲ್ಪಮಟ್ಟಿಗೆ ಕಡಿಮೆಯಾಗುತ್ತಿದೆ ಇದರಿಂದ ಜಿಲ್ಲಾಡಳಿತ ಸ್ವಲ್ಪಮಟ್ಟಿಗೆ ಉಸಿರಾಡುತ್ತಿದೆ ಇಂತಹ ಸಮಯದಲ್ಲಿ ಜನರ ಮೌಢ್ಯಾಚರಣೆಗಳು ಬೆಳಕಿಗೆ ಬರುತ್ತಿವೆ ಇದು ಜಿಲ್ಲಾಡಳಿತಕ್ಕೆ ತಲೆನೋವಾಗಿದೆ.

ವಿಜಯನಗರದ ಜಿಕೊಟ್ಟೂರು ತಾಲೂಕಿನ ಸುಮಾರು ನಾಲ್ಕು ನೂರು ಜನ ವಾಸಿಸುವ ಗಂಗಮ್ಮನಹಳ್ಳಿ ಎಂಬ ಗ್ರಾಮದಲ್ಲಿ ಗ್ರಾಮಸ್ಥರು ಕೊರೋನಾಗೆ ದೇವರ ಸ್ಥಾನ ಕೊಟ್ಟಿದ್ದಾರೆ. ಕೊರೋನಮ್ಮ ದೇವಿಗೆ ಪ್ರತಿಯೊಬ್ಬರ ಮನೆಯಲ್ಲಿ ವಿಶೇಷ ಪೂಜೆ, ಪುನಸ್ಕಾರ, ನೈವೇದ್ಯ ನಡೆಯುತ್ತಿದೆ. ಕೊರೋನಮ್ಮದೇವಿ ಎಂಬ ಹೆಸರಿನಲ್ಲಿ ಊರಿನ ಗಂಡಸರು ಸ್ನಾನ ಮಾಡಿಕೊಂಡು ಒದ್ದೆ ಬಟ್ಟೆಯಲ್ಲಿ ಊರಾಚೆ ಗ್ರಾಮದಿಂದ ಎರಡು ಕಿಲೋಮೀಟರ್ ದೂರ ಬರಿಗಾಲಲ್ಲಿ ನಡೆದುಕೊಂಡು ಹೋಗಿ ತಮ್ಮ ಸಂಪ್ರದಾಯದಂತೆ ಅರಿಶಿಣ, ಕುಂಕುಮ, ಬಳೆಗಳ ಸಮೇತ ಎಡೆಯಿಟ್ಟು, ಹೋಳಿಗೆ ನೈವೇದ್ಯ ಇಟ್ಟಿದ್ದಾರೆ. ಕೊರೋನ ವೈರಸ್ ಊರಿಗೆ ಬರಬಾರದು, ಕೊರೋನ ವೈರಸ್ ನಿಂದ ಊರಿನ ಯಾರೂ ಸಾಯಬಾರದು ಎಂದು ಈ ರೀತಿ ಮೌಢ್ಯಾಚರಣೆ ಮಾಡುತ್ತಿದ್ದಾರೆ. ಈ ಮೌಢ್ಯಾಚರಣೆಯನ್ನು ನೋಡಿ ಗ್ರಾಮಪಂಚಾಯತಿಯ ಪಿಡಿಓ ಅವರು ಈ ರೀತಿ ಮೌಢ್ಯಾಚರಣೆ ಆಚರಿಸಿದವರ ವಿರುದ್ಧ ನಾವು ಕ್ರಮವನ್ನು ಕೈಗೊಳ್ಳುತ್ತೇವೆ ಎಂದು ಹೇಳಿದ್ದಾರೆ.

ದೇವರ ಮೇಲೆ ನಂಬಿಕೆ ಇರಬೇಕು ಆದರೆ ಕೊರೋನ ವೈರಸ್ ಅನ್ನು ದೇವರ ಸ್ಥಾನದಲ್ಲಿ ಇಡುವುದು ಹಾಸ್ಯಸ್ಪದವಾಗಿದೆ. ಈ ರೀತಿಯ ಮೌಢ್ಯ ಆಚರಣೆಯನ್ನು ಆಚರಿಸುವುದು ಎಷ್ಟರಮಟ್ಟಿಗೆ ಸರಿ ಎನ್ನುವುದು ಕಾಡುತ್ತಿರುವ ಪ್ರಶ್ನೆಯಾಗಿದೆ. ಒಂದು ಕಡೆ ಕೊರೋನ ವೈರಸ್ ನಿಂದ ತಮ್ಮವರನ್ನು ಕಳೆದುಕೊಂಡು ಬೀದಿಗೆ ಬಿದ್ದಿದ್ದಾರೆ, ಮತ್ತೆಲ್ಲೊ ಲಾಕ್ ಡೌನ್ ಕಾರಣದಿಂದ ಕೆಲಸವಿಲ್ಲದೆ ದಿನಗೂಲಿ ಕೆಲಸಗಾರರು ಊಟಕ್ಕೆ ಅನ್ನವಿಲ್ಲದೆ ಪರದಾಡುತ್ತಿದ್ದಾರೆ ಆದರೆ ಬಳ್ಳಾರಿ ವಿಜಯನಗರ ಜಿಲ್ಲೆಗಳಲ್ಲಿ ಅನ್ನವನ್ನು ಚೆಲ್ಲುವುದು, ಊರಾಚೆ ನೈವೇದ್ಯ ಮಾಡಿ ಎಡೆ ಇಡುವುದನ್ನು ನೋಡಿದರೆ ಚೆಲ್ಲುವ ಅನ್ನವನ್ನು ಹಸಿದವರಿಗೆ ಕೊಟ್ಟರೆ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದರು ಎಂದು ಅನಿಸುತ್ತದೆ. ಇಂತಹ ಮೌಢ್ಯಾಚರಣೆಯಿಂದ ಜನರು ಹೊರ ಬರಬೇಕಾಗಿದೆ.

Leave a Reply

Your email address will not be published. Required fields are marked *