ವಿನೋದ್ ರಾಜ್ ಗೆ ಅವಕಾಶ ಕಡಿಮೆ ಆಗಲು ಕಾರಣ ಯಾರು

0 1

ಕನ್ನಡ ಚಿತ್ರರಂಗ ಮರೆತ ಹಲವು ನಟರಲ್ಲಿ ವಿನೋದ್ ರಾಜ್ ಕೂಡಾ ಒಬ್ಬರು. ಅವಕಾಶಗಳ ಕೊರತೆಯಿಂದ ಚಿತ್ರರಂಗದಿಂದ ದೂರ ಉಳಿದಿದ್ದಾರೆ. ವಿನೋದ್ ರಾಜ್ ಬಗ್ಗೆ ಈ ಲೇಖನದಲ್ಲಿ ತಿಳಿಯೋಣ.

ನಟ ವಿನೋದ್ ರಾಜ್ ಅವರು ಸ್ವಂತ ಪ್ರತಿಭೆಯಿಂದ ಕನ್ನಡ ಸಿನಿರಂಗದಲ್ಲಿ ಗುರುತಿಸಿಕೊಂಡಿದ್ದ ಕಲಾವಿದ. ವಿನೋದ್ ರಾಜ್ ವಿಶಿಷ್ಟ ರೀತಿಯ ಬ್ರೇಕ್ ಡ್ಯಾನ್ಸ್ ಹಾಗೂ ಸ್ಟೆಪ್ ಗಳನ್ನು ಕನ್ನಡಕ್ಕೆ ಪರಿಚಯಿಸಿದರು. ನೃತ್ಯದಲ್ಲಿ ಉತ್ತಮಿಕೆ ಸಾಧಿಸಿದ್ದ ಇವರನ್ನು ಅಭಿಮಾನಿಗಳು ಕನ್ನಡದ ಮೈಕಲ್ ಜಾಕ್ಸನ್ ಎಂದು ಕರೆಯುತ್ತಾರೆ. ಪ್ರತಿಭೆ ಇದ್ದರೂ ಕೂಡ ಕನ್ನಡ ಚಿತ್ರರಂಗ ಇವರನ್ನು ದೂರ ಉಳಿಸಿದೆ. ಯಾಕೆ ದೂರ ಉಳಿಸಿದೆ ಎನ್ನುವುದಕ್ಕೆ ಸರಿಯಾಗಿ ಉತ್ತರವಿಲ್ಲ. ಒಬ್ಬರ ಯಶಸ್ಸಿಗೆ ಹಲವು ಕಾರಣಗಳಿದ್ದರೂ ಸೋಲಿಗೆ ನಿರ್ದಿಷ್ಟ ಕಾರಣಗಳು ಇರುವುದಿಲ್ಲ.

ಒಂದು ಕಾಲದ ಕನ್ನಡದ ಪ್ರಮುಖ ನಟರಾದ ವಿನೋದ್ ರಾಜ್ ಸುಪ್ರಸಿದ್ದ ಹಿರಿಯ ನಟಿಯಾದ ಲೀಲಾವತಿಯ ಒಬ್ಬರೇ ಮಗ. ನಟ ವಿನೋದ್ ರಾಜ್ ಅವರು 1967 ಜುಲೈ 5 ರಂದು ಚೆನ್ನೈ ನಗರದಲ್ಲಿ ಜನಿಸಿದರು. ಲೀಲಾವತಿಯವರು ದಕ್ಷಿಣ ಭಾರತದ ಸುಪ್ರಸಿದ್ಧ ನಟಿಯಾಗಿದ್ದರು. ಲೀಲಾವತಿಯವರು ಬಾಲ್ಯದಲ್ಲಿ ಬತ್ತದ ಹೊರೆಯ ಮೇಲೆ ಕುಣಿಯುವುದು ಹಾಗೂ ಗದ್ದೆಯ ಬದುವಿನಲ್ಲಿ ನಡೆದುಕೊಂಡು ಹೋಗುವುದು ಬಹಳ ಖುಷಿ ನೀಡುತ್ತಿದ್ದವು ಎಂದು ಬಹಳ ಸಾರಿ ಮಾಧ್ಯಮದಲ್ಲಿ ಹೇಳಿಕೊಂಡಿದ್ದಾರೆ. ಒಂದು ಬಾರಿ ಜಯಲಲಿತಾ ಹಾಗೂ ಲೀಲಾವತಿಯವರು ದೆಹಲಿಗೆ ಪ್ರಶಸ್ತಿಯನ್ನು ಪಡೆಯಲು ಹೋಗಿದ್ದರು. ಮದುವೆ ಮಾಡಿ ನೋಡು ಎಂಬ ಸಿನಿಮಾಕ್ಕೆ ಇಂದಿರಾ ಗಾಂಧಿಯವರು ಪ್ರಶಸ್ತಿಯನ್ನು ನೀಡಿದ್ದರು. ಲೀಲಾವತಿಯವರು ಕಾಂಚಿಪುರಂ ಸೀರೆ ಉಟ್ಟು ಪ್ರಶಸ್ತಿ ಪ್ರಧಾನ ಸಮಾರಂಭಕ್ಕೆ ತೆರಳಿದ್ದರು. ಇದನ್ನು ಪತ್ರಿಕೆಗಳಲ್ಲಿ ಹೊಗಳಿದ್ದು ಘಟನೆಗಳನ್ನು ಲೀಲಾವತಿಯವರು ಇಂದಿಗೂ ನೆನಪಿಸಿಕೊಳ್ಳುತ್ತಾರೆ. ದಕ್ಷಿಣ ಭಾರತದ ಹಲವಾರು ಪ್ರಸಿದ್ಧ ನಟರೊಂದಿಗೆ ನಟಿಸಿದ್ದ ಲೀಲಾವತಿ ಅವರು ಗರ್ಭಿಣಿಯಾದ ಮೇಲೆ ಎಲ್ಲಾ ಅವಕಾಶಗಳು ಬರುವುದು ನಿಂತು ಹೋದವು.

ಕಾಲ್ ಶೀಟ್ ಗೆ ಕಾಯ್ತಾ ಇದ್ದ ನಿರ್ದೇಶಕರು ದೂರ ಸರಿದರು, ಅವಕಾಶಕ್ಕಾಗಿ ಪರದಾಡಬೇಕಾದ ಪರಿಸ್ಥಿತಿ ಲೀಲಾವತಿಯವರಿಗೆ ಬಂದೊದಗಿತು. ಸಿನಿಮಾನೇ ಜೀವನ ಎಂದುಕೊಂಡಿದ್ದ ಲೀಲಾವತಿಯವರನ್ನು ಸಿನಿಮಾರಂಗ ದೂರವಿಟ್ಟಿತ್ತು. ಜೀವನಕ್ಕೆ ಏನು ಇಲ್ಲದೆ ಆಸ್ತಿ ಪಾಸ್ತಿಗಳನ್ನು ಮಾರಿ ಅವರಿವರ ಮನೆಯಲ್ಲಿ ಕೆಲಸ ಮಾಡಿ ಜೀವನ ಸಾಗಿಸುವಂತಹ ಪರಿಸ್ಥಿತಿ ಲೀಲಾವತಿಯವರಿಗೆ ಬಂದೊದಗಿತ್ತು. ಆ ಕಷ್ಟದ ಸಮಯದಲ್ಲಿ ಮಗನನ್ನು ಸಾಕಿದರು. ವಿನೋದ್ ರಾಜ್ ಅವರ ಬಾಲ್ಯ ಅಷ್ಟು ಸುಮಧುರವಾಗಿ ಇರಲಿಲ್ಲ. ಅನೇಕ ಕಷ್ಟ, ನಷ್ಟ, ನೋವುಗಳಲ್ಲಿ ಬೆಳೆದ ವಿನೋದ್ ರಾಜ್ ಆರಂಭದಿಂದಲೂ ನೃತ್ಯದಲ್ಲಿ ಆಸಕ್ತಿ ಬೆಳೆಸಿಕೊಂಡಿದ್ದರು. ಲೀಲಾವತಿಯವರಿಗೆ ವಿನೋದ್ ರಾಜ್ ಅವರನ್ನು ಸಿನಿಮಾ ನಟನನ್ನಾಗಿ ಮಾಡುವ ಆಸೆ ಮೊದಲಿನಿಂದಲೂ ಇತ್ತು. ತನ್ನ ಮಗ ಈ ಕ್ಷೇತ್ರದಲ್ಲಿ ತನಗಿಂತ ಹೆಚ್ಚು ಹೆಸರು ಮಾಡಬೇಕು ಎಂದು ಬಯಸಿದ್ದರು.

1987 ರಲ್ಲಿ ವಿನೋದ್ ರಾಜ್ ಅವರ ಮೊದಲ ಸಿನಿಮಾ ಡಾನ್ಸ್ ರಾಜ ಡಾನ್ಸ್ ತೆರೆಕಂಡಿತು. ಇದು ಕನ್ನಡದ ಪ್ರಮುಖ ನಟ, ನಿರ್ದೇಶಕ, ನಿರ್ಮಾಪಕ ದ್ವಾರಕೀಶ್ ಅವರ ನಿರ್ಮಾಣದಲ್ಲಿ ತೆರೆಕಂಡ ಸಿನಿಮಾ. ಇದು ಕಮರ್ಷಿಯಲ್ ಯಶಸ್ಸನ್ನು ಕಂಡಿತು. ಸಿನಿಮಾ ಕಥೆ ಹಾಗೂ ನಟನೆ, ಡ್ಯಾನ್ಸ್ ಗಳ ಮೂಲಕ ವಿನೋದ ರಾಜ್ ಒಳ್ಳೆಯ ಹೆಸರು ಪಡೆದರು. ಕನ್ನಡದ ಹೊಸ ಪ್ರತಿಭೆಗೆ ಜನ ಮಾರು ಹೋಗಿದ್ದರು. 1998 ರಲ್ಲಿ ಶ್ರೀ ವೆಂಕಟೇಶ್ವರ ಮಹಿಮೆ, ಮರುವರ್ಷ ಕೃಷ್ಣ ನೀ ಕುಣಿದಾಗ ಎಂಬ ಸಿನಿಮಾದಲ್ಲಿ ನಟಿಸಿದರು. 1990 ರಲ್ಲಿ ಲೀಲಾವತಿಯವರು ಕಾಲೇಜ್ ಹೀರೋ ಚಿತ್ರವನ್ನು ಮಗನಿಗಾಗಿ ನಿರ್ಮಾಣ ಮಾಡುತ್ತಾರೆ ಇದರಲ್ಲಿ ವಿನೋದ್ ರಾಜ್ ದ್ವಿಪಾತ್ರದಲ್ಲಿ ನಟಿಸಿ ಜನರ ಮೆಚ್ಚುಗೆ ಗಳಿಸುತ್ತಾರೆ. ಮುಂದೆ ಸುಮಾರು 25 ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. ‘ಯಾರದು’ ವಿನೋದ್ ರಾಜ್ ಅವರು ನಾಯಕ ನಟನಾಗಿ ಅಭಿನಯಿಸಿದ ಕೊನೆಯ ಚಿತ್ರವಾಗಿದೆ.

ವಿನೋದ್ ರಾಜ್ ಹಾಗೂ ಲೀಲಾವತಿಯವರ ಕಷ್ಟದ ದಿನಗಳಲ್ಲಿ ಬೇಸಾಯ ಹಾಗೂ ತೋಟಗಾರಿಕೆ ಅವರ ಕೈಹಿಡಿಯಿತು. ಬೆಂಗಳೂರಿನ ಹೊರವಲಯದ ನೆಲಮಂಗಲದ ಹತ್ತಿರ ಸೋಮ ದೇವನಹಳ್ಳಿಯಲ್ಲಿ ಒಂದು ಫಾರ್ಮ್ ಹೌಸ್ ಹಾಗೂ ತೋಟವಿದೆ. ವಿನೋದ್ ರಾಜ್ ಕೂಡ ತಾಯಿ ಜೊತೆ ಇದ್ದು ವ್ಯವಸಾಯದಲ್ಲಿ ತೊಡಗಿಕೊಂಡಿದ್ದಾರೆ. ಹಲವು ಬಗೆಯ ತರಕಾರಿ ಹಾಗೂ ಹಣ್ಣುಗಳನ್ನು ಬೆಳೆಯುತ್ತಿದ್ದಾರೆ. ವಿನೋದ್ ರಾಜ್ ಗಾಯನದಲ್ಲಿ ಆಸಕ್ತಿ ಹೊಂದಿದ್ದು 2009 ರಲ್ಲಿ ತಮ್ಮ ಭಕ್ತಾಂಜಲಿ ಎಂಬ ಹಾಡಿನ ಆಲ್ಬಮ್ ಅನ್ನು ಬಿಡುಗಡೆ ಮಾಡಿದರು. ಗಾಯನದಲ್ಲಿ ಡಾ. ರಾಜಕುಮಾರ್ ಹಾಗೂ ನೃತ್ಯದಲ್ಲಿ ಮೈಕಲ್ ಜಾಕ್ಸನ್ ಗುರುಗಳು ಎಂದು ಹೇಳಿಕೊಂಡಿದ್ದರು. ಇಂತಹ ಮಾನವೀಯ ಗುಣವಿರುವ ವಿನೋದ್ ರಾಜ್ ನಿಜ ಜೀವನದಲ್ಲಿ ಅತ್ಯಂತ ಸಾಧು ಹಾಗೂ ಸರಳಜೀವಿ. ನೃತ್ಯದಲ್ಲಿ ಇಷ್ಟೊಂದು ಪರಿಣಿತಿ ಸಾಧಿಸಿದ ವಿನೋದ್ ರಾಜ್ ಅವರನ್ನು ಕನ್ನಡದ ಡಾನ್ಸ್ ರಿಯಾಲಿಟಿ ಶೋಗಳಲ್ಲಿ ಜಡ್ಜ್ ಆಗಿ ಆಹ್ವಾನಿಸುವ ಕನಿಷ್ಠ ಸೌಜನ್ಯವೂ ಕೂಡ ಕನ್ನಡದ ಆಯೋಜಕರಿಗೆ ಇರದೇ ಹೋಗಿರುವುದು ಕೂಡ ಅತ್ಯಂತ ವಿಷಾದನೀಯ.

ಆರಂಭದಿಂದಲೂ ಚಿತ್ರರಂಗ ವಿನೋದ್ ರಾಜ್ ಕಡೆಗೆ ದಿವ್ಯ ನಿರ್ಲಕ್ಷ ಹಾಗೂ ಜಾಣ ಕುರುಡುತನ ಪ್ರದರ್ಶನ ಮಾಡುತ್ತಲೇ ಬರುತ್ತಿದೆ. ವಿನೋದ್ ರಾಜ್ ಅವರಿಗೆ ಒಳ್ಳೆಯ ಪ್ರತಿಭೆ ಇದ್ದರೂ ಕೂಡ ಯಾರೊಬ್ಬರೂ ಅವರಿಗೆ ಪ್ರೋತ್ಸಾಹ ನೀಡಲಿಲ್ಲ, ಪ್ರಶಸ್ತಿಗಳನ್ನು ನೀಡಿ ಗೌರವಿಸಿಲ್ಲ ಎಂಬುದು ತಾಯಿ ಲೀಲಾವತಿಯವರ ನೋವಿನ ಮಾತಾಗಿದೆ. ಮುಂದಿನ ದಿನಗಳಲ್ಲಾದರೂ ಅವರಿಗೆ ಉತ್ತಮ ಅವಕಾಶಗಳು ಸಿಗಲಿ ಎಂದು ಆಶಿಸೋಣ.

Leave A Reply

Your email address will not be published.