ತೆಂಗಿನ ಮರಗಳ ರೋಗ ನಿವಾರಣೆ ಮಾಡುವ ಜೊತೆಗೆ ಹೆಚ್ಚು ಇಳುವರಿ ಬರುವಂತೆ ಮಾಡುವ ವಿಧಾನ

0 68

ಕಲ್ಪವೃಕ್ಷವನ್ನು ನಾವು ದೇವರೆಂದು ಪೂಜಿಸುತ್ತೇವೆ. ಕಲ್ಪವೃಕ್ಷ ವೆಂದರೆ ತೆಂಗಿನಮರ.ತಾಯಿ ಮರದಿಂದ ತೆಂಗಿನ ಕಾಯಿಗಳನ್ನು ಆಯ್ದು ಅದರಿಂದ ಸಸಿಗಳನ್ನು ಮಾಡಿದರೆ ಮಾತ್ರ ಉತ್ತಮ ಇಳುವರಿ ಸಿಗುತ್ತದೆ. ಅಲ್ಲದೇ ರೋಗರಹಿತ ದೀರ್ಘಕಾಲ ಜೀವತಾವಧಿಯ ತೆಂಗಿನ ಮರವಾಗಲು ಸಾಧ್ಯ.ಒಂದು ತೆಂಗಿನ ಮರ ತಾಯಿ ಮರವಾಗಲು ಸುಮಾರು 40 ರಿಂದ 50 ವರ್ಷಗಳಾಗಿರಬೇಕು. ತೆಂಗು ಬೆಳೆಗೆ ಬಂದಿರುವ ನುಸಿ ಬಾಧೆ, ಸೊರಗು ರೋಗ, ಹರಳು ಉದುರುವ ರೋಗ ಹಾಗೂ ಇಲಿಗಳ ಕಾಟ ನಿಯಂತ್ರಣಗೊಂಡರೆ ಸಾಕು. ಆದ್ದರಿಂದ ಇದರ ಬಗ್ಗೆ ನಾವು ಇಲ್ಲಿ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.

ತೆಂಗಿನ ಮರದ ಬುಡದಿಂದ ಅರ್ಧ ಮಾರು ದೂರದಲ್ಲಿ ಸುತ್ತಲೂ ಕಾಲುವೆಯ ರೂಪದಲ್ಲಿ ಮಣ್ಣನ್ನು ತೆಗೆದುಕೊಳ್ಳಬೇಕು. ಮೊದಲನೆಯದಾಗಿ ಅಡುಗೆ ಉಪ್ಪನ್ನು ಆ ಕಾಲುವೆಯಲ್ಲಿ ಸುತ್ತಲೂ ಹಾಕಬೇಕು. ಉಪ್ಪನ್ನು ಹಾಕಿದ ನಂತರ ಕಾತಾಳೆ ಎಂಬ ಒಂದು ಬಗೆಯ ಎಲೆಯನ್ನು ಸುತ್ತಲೂ ಹಾಕುತ್ತಾ ಹೋಗಬೇಕು. ನಂತರ ಬೇವಿನ ಎಲೆಯ ಟೊಂಗೆಯನ್ನು ಸುತ್ತಲೂ ಸರಿಯಾಗಿ ಮುಚ್ಚುತ್ತಾ ಹೋಗಬೇಕು. ಬೇವಿನ ಸೊಪ್ಪಿನಲ್ಲಿರುವ ಕಹಿ ಅಂಶ ತೆಂಗಿನ ಮರಕ್ಕೆ ಪೂರಕವಾಗಿ ಕೆಲಸ ಮಾಡುತ್ತದೆ. ನಂತರ ಹೊಂಗೆ ಸೊಪ್ಪನ್ನು ಬೇವಿನಸೊಪ್ಪಿನ ಮೇಲೆ ಮುಚ್ಚಬೇಕು. ನಂತರ ಎಕ್ಕೆ ಸೊಪ್ಪನ್ನು ಹಾಕಿ ಮುಚ್ಚಬೇಕು. ಎಕ್ಕೆ ಸೊಪ್ಪಿನಲ್ಲಿರುವ ಹಾಲಿನ ಅಂಶ ತೆಂಗಿನಕಾಯಿಗೆ ಹೆಚ್ಚಿನ ಪೌಷ್ಠಿಕತೆಯನ್ನು ಕೊಡುತ್ತದೆ.

ಬೇವಿನ ಹಿಂಡಿಯನ್ನು ತೆಗೆದುಕೊಂಡು ಎಲ್ಲಾ ಸೊಪ್ಪನ್ನು ಮುಚ್ಚಿದ ಮೇಲೆ ಅದರ ಮೇಲೆ ಸುತ್ತಲೂ ಹಾಕುತ್ತಾ ಹೋಗಬೇಕು. ಬೇವಿನ ಹಿಂಡಿಯಲ್ಲಿರುವ ಕಹಿ ಅಂಶ ನುಶಿ ಬಾದೆ, ಕೀಟ ಬಾಧೆಗಳನ್ನು ತಡೆಯಲು ಸಹಕಾರಿಯಾಗುತ್ತದೆ. ಇದನ್ನು ಹಾಕಿದ ನಂತರ 2ಕೆಜಿ ಕೃಷಿ ಸುಣ್ಣವನ್ನು 15 ಲೀಟರ್ ನೀರಿನಲ್ಲಿ ಬೆರೆಸಿ ಸಮವಾಗಿ ಕರಡಿಕೊಂಡು ಅದರ ಮೇಲೆ ಸುತ್ತಲೂ ಹಾಕಬೇಕು. ಈ ತರದ ಸುಣ್ಣದ ನೀರನ್ನು ಹಾಕುವುದರಿಂದ ಕ್ರಿಮಿ ಕೀಟಗಳನ್ನು ನಾಶ ಮಾಡಲು ಸಹಕಾರಿಯಾಗುತ್ತದೆ. ನಂತರ ಸುತ್ತಲೂ ಸಗಣಿಯನ್ನು ಹಾಕಬೇಕು. ಇದಾದನಂತರ ಸುತ್ತಲು ಅದರ ಮೇಲೆ ನೀರನ್ನು ತುಂಬಿಸಬೇಕು. ಇವೆಲ್ಲವನ್ನು ಹಾಕಿದ ನಂತರ ಆ ಕುಳಿಯಲ್ಲಿ ಸುತ್ತಲು ಮಣ್ಣನ್ನು ಮೇಲಿನಿಂದ ಹಾಕಿ ಮುಚ್ಚಬೇಕು.

ಈ ತರಹ ಮಾಡುವುದರಿಂದ ನುಶಿ ಪೀಡೆ ರೋಗಗಳು, ಗಡ್ಡೆ ರೋಗಗಳು, ಯಾವುದೇ ತರಹದ ರೋಗಗಳು ತೆಂಗಿನಮರಕ್ಕೆ ಬಾಧಿಸುವುದಿಲ್ಲ. ಮತ್ತು ಹೆಚ್ಚಿನ ಇಳುವರಿಯನ್ನು ಪಡೆಯಬಹುದು. ಒಂದು ತೆಂಗಿನ ಮರದಲ್ಲಿ 100 ರಿಂದ 125 ಕಾಯಿಗಳನ್ನು ಪಡೆಯಬಹುದಾಗಿದೆ ಹಾಗೂ ತೆಂಗಿನ ಮಿಳ್ಳೆ ಉದುರುವುದನ್ನು ನಿವಾರಿಸಬಹುದಾಗಿದೆ. ಈ ರೀತಿ ಮಾಡಿ ತೆಂಗಿನ ಮರದ ಸಮಸ್ಯೆಗಳನ್ನು ನಿವಾರಿಸಿ ಹೆಚ್ಚಿನ ಇಳುವರಿಯನ್ನು ಪಡೆಯಲು ಈ ಔಷಧವು ಸಹಕಾರಿಯಾಗಿದೆ.

Leave A Reply

Your email address will not be published.