ಭಾರತೀಯರಿಗೆ ಕ್ರಿಪ್ಟೋಕರೆನ್ಸಿ ಬಗ್ಗೆ ಈಗಿನ್ನೂ ಮಾಹಿತಿ ಸಿಗಲಾರಂಭಿಸಿದೆ. ಆದರೆ ಅದಾಗಲೇ ಕ್ರಿಪ್ಟೋಕರೆನ್ಸಿಯ ಸಂಪೂರ್ಣ ಮಾಹಿತಿಯನ್ನು ಪಡೆದಿರುವ ಭಾರತೀಯ-ಅಮೆರಿಕನ್‌ ಅಣ್ಣ ತಂಗಿ ಜೋಡಿಯೊಂದು ಕ್ರಿಪ್ಟೋಕರೆನ್ಸಿ ಮೈನಿಂಗ್‌ ಮಾಡಿ ಲಕ್ಷಾಂತರ ರೂಪಾಯಿ ಸಂಪಾದನೆಯನ್ನೂ ಮಾಡಲಾರಂಭಿಸಿದ್ದಾರೆ. ಕ್ರಿಪ್ಟೋ ಮೈನಿಂಗ್‌ ಅಂದರೆ ಏನು? ಅದರಿಂದೆನು ಲಾಭ ಮತ್ತು ಅದರಿಂದ ಲಕ್ಷ ರೂಪಾಯಿ ಸಂಪಾದನೆ ಮಾಡುತ್ತಿರುವ ಆ ಅಣ್ಣ ತಂಗಿ ಯಾರೂ ಎನ್ನುವುದರ ಬಗ್ಗೆ ಈ ಲೇಖನದ ಮೂಲಕ ತಿಳಿದುಕೊಳ್ಳೋಣ.

ಮೊದಲು ಕ್ರಿಪ್ಟೋಕರೆನ್ಸಿ ಅಂದ್ರೆ ಏನು? ಅನ್ನೋದನ್ನ ನೋಡೋಣ. ಈ ಕ್ರಿಪ್ಟೋಕರೆನ್ಸಿ ವಿಶ್ವಾದ್ಯಂತ ಹೊಸ ಟ್ರೆಂಡ್‌ ಸೃಷ್ಟಿ ಮಾಡಿದೆ. ಇತ್ತೀಚೆಗಂತೂ ಕ್ರಿಪ್ಟೋಕರೆನ್ಸಿಗೆ ಭಾರೀ ಬೇಡಿಕೆ ಸೃಷ್ಟಿಯಾಗಿದೆ. ಈ ಬೆನ್ನಲ್ಲೇ ಹಲವು ಎಕ್ಸ್‌ಚೇಂಜ್‌ಗಳಲ್ಲಿ ಕ್ರಿಪ್ಟೋಕರೆನ್ಸಿ ಟ್ರೇಡಿಂಗ್‌ ಚುರುಕಾಗಿದೆ. ಬಿಟ್‌ಕಾಯಿನ್‌ ಅಂತೂ ಲಕ್ಷಾಂತರ ರೂಪಾಯಿ ಬೆಲೆಯಲ್ಲಿ ವಹಿವಾಟು ನಡೆಸುತ್ತಿದೆ. ಇಷ್ಟು ದುಬಾರಿ ಕ್ರಿಪ್ಟೋಕರೆನ್ಸಿಯನ್ನು ಮನೆಯಲ್ಲೇ ಕಂಪ್ಯೂಟರ್‌ ಬಳಸಿ, ನಾವೇ ಸೃಷ್ಟಿ ಮಾಡಬಹುದು ಎಂದರೆ ಅಚ್ಚರಿಯಾಗುತ್ತದಲ್ಲವೇ? ಪ್ರತಿ ಕ್ರಿಪ್ಟೋಕರೆನ್ಸಿಯ ವರ್ಗಾವಣೆಯನ್ನು ಪ್ರೊಸೆಸ್‌ ಮಾಡುವುದಕ್ಕೆ ಮೈನಿಂಗ್‌ ಎನ್ನಲಾಗುತ್ತದೆ.

ಇದಕ್ಕೆ ಉತ್ತಮ ತಂತ್ರಜ್ಞಾನವಿರುವ ಕಂಪ್ಯೂಟರ್‌ ಸೇರಿ ಕೆಲ ತಂತ್ರಜ್ಞಾನ ಬೇಕಾಗುತ್ತದೆ. ಬಿಟ್‌ಕಾಯಿನ್‌ ಸೇರಿದಂತೆ ಎಲ್ಲ ಕ್ರಿಪ್ಟೋಕರೆನ್ಸಿಗಳು ಕೂಡ ಯಾವುದೋ ಒಂದು ಕಂಪ್ಯೂಟರ್‌ನಲ್ಲಿ ನಿರ್ದಿಷ್ಟ ತಂತ್ರಜ್ಞಾನ ಬಳಸಿ ಗಣಿಗಾರಿಕೆ (ಮೈನಿಂಗ್‌) ಮಾಡುವ ಮೂಲಕ ಪಡೆದಂಥವೇ ಆಗಿವೆ. ಹೀಗೆ ಮೈನಿಂಗ್‌ ಮಾಡಿದ ಟೋಕನ್‌ಗಳನ್ನೇ ಕ್ರಿಪ್ಟೋ ಎಕ್ಸ್‌ಚೇಂಜ್‌ಗಳು ಮಾರಾಟ ಮಾಡುತ್ತವೆ. ಕೆಲವು ದೇಶಗಳು ಕ್ರಿಪ್ಟೋಕರೆನ್ಸಿ ಮೈನಿಂಗ್‌ ಮಾಡುವುದನ್ನೇ ಒಂದು ಉದ್ಯಮವಾಗಿಸಿಕೊಂಡಿವೆ.

ಹೀಗಿರುವಾಗ ಒಂದು ಬಿಡಿಗಾಸನ್ನೂ ಖರ್ಚು ಮಾಡದೇ ಕೇವಲ ನಿಮ್ಮ ಕಂಪ್ಯೂಟರ್‌ ಬಳಸಿ, ನೀವೇ ಕ್ರಿಪ್ಟೋಕರೆನ್ಸಿ ಮೈನಿಂಗ್‌ ಮಾಡಬಹುದಾದರೆ, ಹಣ ಗಳಿಕೆಗೆ ಅದಕ್ಕಿಂತ ಉತ್ತಮ ಮಾರ್ಗ ಮತ್ತೊಂದಿದೆಯೇ. ಕಳೆದ ಒಂದು ವರ್ಷದಲ್ಲಿ ಬಿಟ್‌ಕಾಯಿನ್, ಈಥರ್ ಮತ್ತು ಡೊಜಿಕಾಯಿನ್‌ನಂತಹ ಕ್ರಿಪ್ಟೋ ನಾಣ್ಯಗಳ ಬೆಲೆಯಲ್ಲಿ ತ್ವರಿತ ಹೆಚ್ಚಳ ಕಂಡಿತು. ಹೀಗಾಗಿ ಕೆಲವರು ಎಕ್ಸ್‌ಚೇಂಜ್‌ಗಳಲ್ಲಿ ಕ್ರಿಪ್ಟೋ ನಾಣ್ಯ ಕೊಳ್ಳುವ ಬದಲು, ತಮ್ಮದೇ ಕಂಪ್ಯೂಟರ್ ಬಳಸಿ ಕ್ರಿಪ್ಟೋನಾಣ್ಯಗಳ ಮೈನಿಂಗ್‌ನಲ್ಲಿ ತೊಡಗಿದ್ದಾರೆ.

ಅದೇ ರೀತಿ ಅಮೆರಿಕದಲ್ಲಿರುವ 14 ವರ್ಷದ ಇಶಾನ್‌ ಮತ್ತು 9 ವರ್ಷದ ಆನ್ಯಾ ಈ ಸಾಧನೆ ಮಾಡಿರುವ ಅಣ್ಣ ತಂಗಿ ಜೋಡಿ. ಇಶಾನ್‌ ಗೆ ಫೆಬ್ರವರಿಯಲ್ಲಿ ಕ್ರಿಪ್ಟೋಕರೆನ್ಸಿ ಬೆಲೆ ಹೆಚ್ಚುತ್ತಿದ್ದುದ್ದನು ಕಂಡು ತನಗೂ ಅದನ್ನು ಖರೀದಿಸುವ ಮನಸ್ಸಾಯಿತಂತೆ. ಆದರೆ ಅಷ್ಟು ಹಣವಿಲ್ಲದ ಕಾರಣ ಆತ ಅದರ ಮೈನಿಂಗ್‌ ಕೆಲಸ ಆರಂಭಿಸಿದ್ದಾನೆ. ಅದಕ್ಕೆ ತಂಗಿ ಆನ್ಯಾಳೂ ಕೈ ಜೋಡಿಸಿದ್ದಾಳೆ.

ಮನೆಯಲ್ಲಿದ್ದ ಗೇಮಿಂಗ್‌ ಕಂಪ್ಯೂಟರ್‌ ನೆಲ್ಲಿ ಮೈನಿಂಗ್‌ ಕಂಪ್ಯೂಟರ್‌ ಮಾಡಿಕೊಳ್ಳಲಾಗಿದೆ. ದಿನಕ್ಕೆ 3 ಡಾಲರ್‌ ದುಡಿಮೆ ಯೊಂದಿಗೆ ಆರಂಭವಾದ ಕೆಲಸ ಈಗ ತಿಂಗಳಿಗೆ 22 ಲಕ್ಷ ರೂ. ದುಡಿಯುವ ಮಟ್ಟಿಗೆ ಬೆಳೆದಿದೆ. ಯೂಟ್ಯೂಬ್‌ ನೋಡಿ, ಲೇಖನಗಳನ್ನು ಓದಿ ತಂತ್ರಜ್ಞಾನ ಕಲಿತಿದ್ದಾಗಿ ಅವರು ಹೇಳಿಕೊಂಡಿದ್ದಾರೆ.

ಕಂಪ್ಯೂಟರ್‌ನಲ್ಲಿ ಗಣಿಗಾರಿಕೆ (ಮೈನಿಂಗ್‌) ಮಾಡುವುದಾದರೂ ಹೇಗೆ ಎಂಬ ಪ್ರಶ್ನೆ ಮೂಡಬಹದು. ನಿಮ್ಮೆಲ್ಲರಿಗೂ ಚಿನ್ನದ ಗಣಿಗಾರಿಕೆ ಬಗ್ಗೆ ತಿಳಿಸಿರಬಹದು. ಚಿನ್ನದ ಅದಿರನ್ನು ಸಾವಿರಾರು ಅಡಿ ಆಳದಿಂದ ಗಣಿಗಾರಿಕೆ ಮಾಡಿ, ಅದನ್ನು ಶೋಧಿಸಿ ಚಿನ್ನ ತೆಗೆಯುತ್ತಾರೆ. ಇಲ್ಲಿ ಚಿನ್ನ ಭೌತಿಕ ರೂಪದಲ್ಲಿ ಲಭ್ಯ. ಹಾಗಾಗಿಯೇ ಇದನ್ನು ಭೌತಿಕವಾಗಿಯೇ ಗಣಿಗಾರಿಕೆ ಮಾಡಬೇಕು.

ಆದರೆ, ಕ್ರಿಪ್ಟೋಕರೆನ್ಸಿಗಳಿಗೆ ಭೌತಿಕ ಅಸ್ಥಿತ್ವವಿಲ್ಲ. ಇವೇನಿದ್ದರೂ ಅಮೂರ್ತ (ಕಣ್ಣಿಗೆ ಕಾಣದ) ಸ್ವರೂಪದಲ್ಲಿರುವವು. ಹೀಗಾಗಿ ವಿಶೇಷ ತಂತ್ರಜ್ಞಾನ ಬಳಸಿ ಕಂಪ್ಯೂಟರ್ ಮೂಲಕ ಗಣಿಗಾರಿಕೆ ಮಾಡಲಾಗುತ್ತದೆ. ಇಲ್ಲಿ ಸಂಕೀರ್ಣ ಗಣಿತದ ಸಮೀಕರಣಗಳನ್ನು ಬಗೆಹರಿಸುವ ಮೂಲಕ ಕ್ರಿಪ್ಟೋಕರೆನ್ಸಿಗಳನ್ನು ಗಣಿಗಾರಿಕೆ ಮಾಡುತ್ತಾರೆ.

Leave a Reply

Your email address will not be published. Required fields are marked *