Ultimate magazine theme for WordPress.

ಗಾಳಿಯಲ್ಲಿ ತೇಲುವ ಸ್ತಂಭ ದೇವಾಲಯ! ಇಲ್ಲಿನ ವಿಶೇಷತೆಯನೊಮ್ಮೆ ನೋಡಿ

0 0

ದಕ್ಷಿಣ ಭಾರತದಲ್ಲಿ ಸಾಕಷ್ಟು ದೇವಾಲಯಗಳು ಇವೆ. ಇಲ್ಲಿನ ಪ್ರತಿಯೊಂದು ದೇವಾಲಯವು ತನ್ನದೇ ಆದ ಐತಿಹಾಸಿಕ ಹಿನ್ನಲೆಯನ್ನು ಹೊಂದಿದೆ. ದೇವಾಲಯದ ಬಗ್ಗೆ ಕಥೆ ಕೇಳಲು ಸ್ವಾರಸ್ಯವಾಗಿರುತ್ತದೆ ಹೀಗಿರುವಾಗ ನೇತಾಡುವ ಕಂಬವನ್ನು ಹೊಂದಿರುವ ಆಂಧ್ರಪ್ರದೇಶದ ದೇವಾಲಯದ ಬಗ್ಗೆ ಈ ಲೇಖನದ ಮೂಲಕ ತಿಳಿಯೋಣ.

ಆಂಧ್ರ ಪ್ರದೇಶದ ನೇತಾಡುವ ಸ್ತಂಭ ದೇವಾಲಯ ಎಂದೇ ಪ್ರಸಿದ್ಧಿಯಾದ ಲೇಪಾಕ್ಷಿ ವೀರಭದ್ರ ದೇವಾಲಯ. ಇದು ಆಂಧ್ರ ಪ್ರದೇಶದ ಅನಂತಪುರ ಜಿಲ್ಲೆಯ ಹಿಂದುಪುರದಿಂದ 15 ಕಿ.ಮೀ ದೂರದಲ್ಲಿದೆ ಹಾಗೂ ಬೆಂಗಳೂರಿನಿಂದ 120 ಕಿ.ಮೀ ದೂರದಲ್ಲಿದೆ. ಪುಟ್ಟ ಗ್ರಾಮವಾದ ಇದು ಹಿಂದೆ ಕರ್ನಾಟಕದ ಭಾಗವಾಗಿತ್ತು ಈಗಲೂ ಅಲ್ಲಿಯವರು ತಕ್ಕಮಟ್ಟಿಗೆ ಕನ್ನಡ ಮಾತನಾಡುತ್ತಾರೆ. ಈ ದೇವಾಲಯವನ್ನು ವಿಜಯನಗರ ಅರಸರ ಕಾಲದಲ್ಲಿ 15 ನೇ ಶತಮಾನದಲ್ಲಿ ಆಗಿನ ಅಧಿಕಾರಿಗಳಾದ ವಿರೂಪಣ್ಣ ಮತ್ತು ವೀರಣ್ಣ ಎಂಬ ಸಹೋದರರಿಂದ ನಿರ್ಮಿಸಲಾಗಿದೆ. ಇದು ಶಿಲ್ಪಕಲೆ, ಚಿತ್ರಕಲೆಗೆ ಪ್ರಸಿದ್ದಿಯಾಗಿದೆ. ವಿರೂಪಣ್ಣ ಅವರ ಕನಸಿನಲ್ಲಿ ವೀರಭದ್ರ ಸ್ವಾಮಿಯೇ ದೇವಸ್ಥಾನವನ್ನು ಕಟ್ಟಿಸುವಂತೆ ಪ್ರೇರೇಪಿಸುತ್ತಾರೆ ಅದರಂತೆ ವಿರೂಪಣ್ಣ ಅವರು ಈ ದೇವಾಲಯವನ್ನು ನಿರ್ಮಿಸಿದ್ದಾರೆ.

ಈ ದೇವಾಲಯದಲ್ಲಿ ಶಿವ ಮತ್ತು ವಿಷ್ಣುವನ್ನು ಪೂಜಿಸುತ್ತಾರೆ. ಈ ದೇವಾಲಯ 70 ಸ್ತಂಭಗಳ ಮೇಲೆ ನಿಂತಿದೆ. ಇದರಲ್ಲಿ ಒಂದು ಸ್ತಂಭ ನೆಲವನ್ನು ಸ್ಪರ್ಶಿಸಲಿಲ್ಲ ಇದು ಗಾಳಿಯಲ್ಲಿ ನೇತಾಡುತ್ತಿರುವಂತೆ ಕಾಣುತ್ತದೆ. ಬ್ರಿಟಿಷ ಅಧಿಕಾರಿಯೊಬ್ಬ ಈ ಸ್ತಂಭದ ರಹಸ್ಯವನ್ನು ತಿಳಿಯಲು ಈ ಸ್ತಂಭಕ್ಕೆ ಸುತ್ತಿಗೆಯಿಂದ ಹೊಡೆಸುತ್ತಾನೆ ಆಗ ಈ ಸ್ತಂಭಕ್ಕೆ ಏನು ಆಗುವುದಿಲ್ಲ ಬದಲಿಗೆ ದೂರದಲ್ಲಿರುವ ಕಂಭಗಳ ಮೇಲೆ ಬಿರುಕು ಮೂಡುತ್ತದೆ. ಆಗ ಇಡೀ ದೇವಾಲಯಕ್ಕೆ ಈ ನೇತಾಡುವ ಸ್ತಂಭವೇ ಆಧಾರ ಎಂದು ತಿಳಿಯುತ್ತದೆ.

ಪುರಾಣಗಳ ಪ್ರಕಾರ ರಾವಣನು ಸೀತೆಯನ್ನು ಅಪಹರಿಸಿಕೊಂಡು ಈ ಪ್ರದೇಶದ ಮೂಲಕ ಹೋಗುತ್ತಿದ್ದಾಗ ಜಟಾಯು ಪಕ್ಷಿ ರಾವಣನಿಗೆ ಅಡ್ಡಿ ಮಾಡುತ್ತದೆ ಆಗ ರಾವಣನು ಸಿಟ್ಟಿನಿಂದ ಪಕ್ಷಿಯ ರೆಕ್ಕೆಗಳನ್ನು ಕತ್ತರಿಸಿ ಮುಂದೆ ಹೋಗುತ್ತಾನೆ. ರಾಮನು ಸೀತೆಯನ್ನು ಹುಡುಕುತ್ತಾ ಈ ಪ್ರದೇಶಕ್ಕೆ ಬಂದಾಗ ಜಟಾಯು ಪಕ್ಷಿ ನೋವಿನಿಂದ ನರಳಾಡುತ್ತಿರುತ್ತದೆ. ಆಗ ರಾಮನು ಲೇಪಕ್ಷಿ ಎಂದು ಕೂಗುತ್ತಾನೆ ಲೇಪಕ್ಷಿ ಎಂದರೆ ಎದ್ದೇಳು ಪಕ್ಷಿ ಎಂದರ್ಥ. ಇದರಿಂದಲೇ ಈ ಸ್ಥಳಕ್ಕೆ ಲೇಪಾಕ್ಷಿ ಎಂಬ ಹೆಸರು ಬಂದಿದೆ. ಶ್ರೀರಾಮನು ಜಟಾಯು ಪಕ್ಷಿಗೆ ಇಲ್ಲಿಯೇ ಮೋಕ್ಷವನ್ನು ನೀಡಿದನು ಆದ್ದರಿಂದಲೇ ಈ ಸ್ಥಳದ ಬೆಟ್ಟದಲ್ಲಿ ಜಟಾಯು ಪಕ್ಷಿಯ ಶಿಲ್ಪವನ್ನು ನಿರ್ಮಿಸಲಾಗಿದೆ.

ಇಲ್ಲಿಯ ನಂದಿ ವಿಗ್ರಹವು ಎಲ್ಲರ ಮನಸೆಳೆಯುತ್ತದೆ. ಈ ಸ್ಥಳದಲ್ಲಿ ಒಂದು ಕಲ್ಲಿನ ಮೇಲೆ ದೊಡ್ಡದಾದ ಪಾದದ ಗುರುತು ಕಂಡುಬರುತ್ತದೆ ಅದು ಸೀತಾ ಮಾತೆಯ ಪಾದದ ಗುರುತು ಎಂಬ ಪ್ರತೀತಿ ಇದೆ, ಇಲ್ಲಿ ಸದಾಕಾಲ ನೀರು ಜಿನುಗುತ್ತಿರುತ್ತದೆ. ವೀರಭದ್ರ ದೇವಾಲಯದ ಹಿಂದುಗಡೆ ಒಂದು ನಾಗ ಲಿಂಗವಿದೆ. ಈ ಲಿಂಗದ ಪ್ರಧಾನ ಶಿಲ್ಪಿಗಳು ಊಟ ಮಾಡಲು ಬಂದಾಗ ಅವರ ತಾಯಿ ಅಡುಗೆ ಮಾಡುತ್ತಿರುತ್ತಾಳೆ ಆಗ ಶಿಲ್ಪಿ ಅಡುಗೆ ಮಾಡುವಷ್ಟರಲ್ಲಿ ನಾಗಲಿಂಗವನ್ನು ಕೆತ್ತಿದರಂತೆ ಇದನ್ನು ನೋಡಿದ ಅವರ ತಾಯಿ ಆಶ್ಚರ್ಯಗೊಳ್ಳುತ್ತಾರೆ.

ನಾಗ ಲಿಂಗದ ಹಿಂಭಾಗದಲ್ಲಿ ಒಂದು ದೊಡ್ಡ ಗಣಪತಿಯ ವಿಗ್ರಹವಿದೆ. ಈ ಸ್ಥಳದಲ್ಲಿ ಪಾರ್ವತಿ-ಪರಮೇಶ್ವರರ ಕಲ್ಯಾಣ ಮಂಟಪವಿದೆ ಇದು ಪೂರ್ಣವಾಗಿ ನಿರ್ಮಾಣಗೊಂಡಿಲ್ಲ. ಏಕೆಂದರೆ ವಿರೂಪಣ್ಣನಿಗೆ ಆಗದೆ ಇದ್ದ ಕೆಲವರು ಅವರು ಖಜಾನೆಯ ಹಣವನ್ನೆಲ್ಲಾ ಲೂಟಿ ಮಾಡುತ್ತಿದ್ದಾರೆ ಎಂದು ವಿಜಯನಗರದ ಅರಸರಿಗೆ ತಿಳಿಸುತ್ತಾರೆ ಇದರಿಂದ ಅರಸರು ವಿರೂಪಣ್ಣನ ಕಣ್ಣನ್ನು ಕೀಳಲು ಆಜ್ಞೆ ಮಾಡುತ್ತಾರೆ ಇದನ್ನು ತಿಳಿದ ವಿರೂಪಣ್ಣ ತನ್ನ ಕಣ್ಣನ್ನು ತಾನೇ ಕಿತ್ತು ಗರ್ಭಗುಡಿಯ ಹಿಂಭಾಗಕ್ಕೆ ಲೇಪಿಸುತ್ತಾರೆ. ನಂತರ ವಿರೂಪಣ್ಣನು ಶಿವನಪಾದ ಸೇರಿದ್ದರಿಂದ ಕಲ್ಯಾಣ ಮಂಟಪ ಅಪೂರ್ಣಾವಾಯಿತು. ಈ ಪ್ರದೇಶಕ್ಕೆ ಹೋಗಲು ವಾಹನ ವ್ಯವಸ್ಥೆಯಿದೆ.

Leave A Reply

Your email address will not be published.