Ultimate magazine theme for WordPress.

ದಿನಕ್ಕೆ 50 ಲೀಟರ್ ಹಾಲು ಕೊಡುವುದರ ಜೊತೆಗೆ ಬಡ ಕುಟುಂಬಕ್ಕೆ ಆಸರೆಯಾಗಿರುವ ಸೀಮೆ ಹಸು

0 15

ಪ್ರಾಣಿಗಳ ಗುಣವೇ ನಿಯತ್ತು. ಮನುಷ್ಯ ಎಷ್ಟು ಅವುಗಳನ್ನು ಪ್ರೀತಿಸುತ್ತಾನೊ ಅಷ್ಟೇ ಎನ್ನುವುದಕ್ಕಿಂತ ಅದಕ್ಕಿಂತ ಹೆಚ್ಚಾಗಿ ಮನುಷ್ಯನನ್ನು ಪ್ರೀತಿಸುತ್ತವೆ. ಕಷ್ಟಕಾಲದಲ್ಲಿ ಬಂಧುಗಳು ಕೈಹಿಡಿಯುತ್ತಾರೊ ಇಲ್ಲವೋ ಆದರೆ ಪ್ರಾಣಿಗಳು ನಮ್ಮನ್ನು ಬಿಟ್ಟು ಹೋಗುವುದಿಲ್ಲ. ಇಷ್ಟು ಪ್ರೀತಿಸುವ ಪ್ರಾಣಿಗಳಿಗೆ ಸರಿಸಾಟಿಯೆ ಇಲ್ಲ. ಒಂದು ಮೂಕ ಪ್ರಾಣಿ ಒಂದು ಬಡ ಕುಟುಂಬಕ್ಕೆ ಆಸರೆಯಾಗಿ ನಿಂತ ಕಥೆ ಇದಾಗಿದೆ. ಸದಾ ಆ ಕುಟುಂಬಕ್ಕೆ ಸಾವಿರಾರು ರೂಪಾಯಿಗಳ ಆದಾಯ ತಂದು ಕೊಡುವುದಲ್ಲದೆ ಹೆಸರು, ಪ್ರತಿಷ್ಠೆಯನ್ನು ತಂದುಕೊಟ್ಟಿದೆ. ತನ್ನ ಒಡೆಯನಿಗೆ ಪ್ರಶಸ್ತಿಗಳನ್ನು ತಂದು ಕೊಟ್ಟಿರುವ ಇದು ಊರಿಗೆ ಮಾದರಿಯಾಗಿದೆ. ಕೋಲಾರ ಜಿಲ್ಲೆಯ ಮಾಲೂರು ಪಟ್ಟಣದ ಗೊಲ್ಡ್ ರಂಗಪ್ಪ ಬೀದಿ ನಿವಾಸಿ ಸುರೇಂದ್ರಪ್ಪನ ಮಗ ಶ್ರೀನಿವಾಸ್ ಸಾಕಿರುವ ಸೀಮೆ ಹಸು ದಿನಕ್ಕೆ 50 ಲೀಟರ್ ಹಾಲು ಕೊಟ್ಟು ರಾಜ್ಯದಲ್ಲಿ ದಾಖಲೆ ಬರೆದಿದೆ.

ಕಳೆದ ವಾರ ಬೆಂಗಳೂರು ಗ್ರಾಮಾಂತರದ ಗುಂಜನೂರಿನಲ್ಲಿ ನಡೆದ ಅತಿ ಹೆಚ್ಚು ಹಾಲು ಕರೆಯುವ ಸ್ಪರ್ಧೆಯಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಿಂದ ಬಂದಿದ್ದ ಹತ್ತೊಂಬತ್ತು ಹಸುಗಳನ್ನು ಹಿಂದಿಕ್ಕಿ 49.70 ಲೀಟರ್ ಹಾಲು ನೀಡಿ ಹಿಂದಿನ ದಾಖಲೆಯಾಗಿದ್ದ 47 ಲೀಟರ್ ಹಾಲು ನೀಡಿದ ಹಸುವಿನ ಹೆಸರನ್ನು ಅಳಿಸಿ ಹಾಕಿದೆ. ಹಸುಗಳ ವ್ಯಾಪಾರಿಯಾಗಿದ್ದ ಶ್ರೀನಿವಾಸ್ ಕಳೆದ ಆರು ತಿಂಗಳಿನ ಹಿಂದಷ್ಟೇ ಈ ಸೀಮೆ ಹಸುವಿಗೆ ಒಂದುವರೆ ಲಕ್ಷ ರೂಪಾಯಿ ಕೊಟ್ಟು ಕೊಂಡಿದ್ದರು. ಸೀಮೆ ಹಸುವನ್ನು ಖರೀದಿಸಿ ಲಾಭಕ್ಕೆ ಮಾರುವ ಕಸುಬಿನ ಶ್ರೀನಿವಾಸ್ ಈ ಹಸುವಿನ ಮೇಲೆ ಹೆಚ್ಚು ಪ್ರೀತಿ ಆದ್ದರಿಂದಲೇ ಆರೇಳು ಲಕ್ಷಗಳಿಗೆ ಖರೀದಿದಾರರು ಬಂದರು ಇವರು ಕೊಟ್ಟಿಲ್ಲ. ಈ ಹಸು ಕುಟುಂಬ ಪೋಷಿಸುತ್ತಿದ್ದು ಎಷ್ಟು ದುಡ್ಡು ಕೊಟ್ಟರೂ ಹಸುವನ್ನು ಮಾರುವುದಿಲ್ಲ ಎಂದಿದ್ದಾರೆ. ಈ ಹಸುವನ್ನು ಮಗುವಂತೆ ಮೂರು ಜನರು ಸಾಕುತ್ತಿದ್ದಾರೆ. ದಿನಕ್ಕೆ ಐವತ್ತು ಲೀಟರ್ ಹಾಲು ಡೈರಿಗೆ ನೀಡಿದರೆ ತಿಂಗಳಿಗೆ 45,000 ಹಣ ಬರುತ್ತದೆ ದಿನಕ್ಕೆ ಹಸುವಿನ ಮೇಲಾಗುವ ಖರ್ಚು 1000ರೂಪಾಯಿಯಾದರೆ ತಿಂಗಳಿಗೆ 30,000 ಲಾಭ ತಂದುಕೊಡುತ್ತದೆ. ತಮ್ಮ ಕುಟುಂಬದ ಕಾಮಧೇನು ಈ ಹಸು ಎನ್ನುವುದು ಅವರ ಅಭಿಪ್ರಾಯ.

ಈ ಹಸುವಿಗೆ ದಿನಕ್ಕೆ 24 ಕೆಜಿ ಹಸಿರು ಹುಲ್ಲು, 12 ಕೆಜಿ ಕೃತಕ ಆಹಾರ ನೀಡುತ್ತಾರೆ. ಒಂದು ಲೀಟರ್ ಹಾಲಿಗೆ ಅರ್ಧ ಕೆಜಿ ಪ್ರಮಾಣದಲ್ಲಿ ಆಹಾರ ನೀಡುವ ಕ್ರಮ ಅನುಸರಿಸಿದ್ದಾರೆ. ಹಸುವಿನ ದೇಹಕ್ಕೆ ಅಗತ್ಯವಾದ ಪೋಷಕಾಂಶಗಳನ್ನು ಒದಗಿಸುವ ನಿಟ್ಟಿನಲ್ಲಿ ಪ್ರತ್ಯೇಕವಾಗಿ ಒಂದು ಕೆಜಿ ಬೂಸಾ, ಹಿಂಡಿ, ಕಡಲೆ ಹೊಟ್ಟನ್ನು ನೀಡಲಾಗುತ್ತದೆ. ಹಸುವಿರುವ ಜಾಗವೂ ನಾವು ಇರುವ ಜಾಗದಂತೆ ಸ್ವಚ್ಚವಾಗಿರಬೇಕು. ಯಾವ ಸೊಂಕು ತಗುಲದಂತೆ ನೋಡಿಕೊಂಡರೆ ಎಲ್ಲಾ ಹಸುಗಳು ಹೆಚ್ಚು ಹಾಲು ನೀಡುವುದರಲ್ಲಿ ಅನುಮಾನವಿಲ್ಲ ಎನ್ನುತ್ತಾರೆ. ಒಡೆಯನಿಗೆ ಹೆಚ್ಚು ಹಾಲು ಕೊಟ್ಟು ಲಾಭವನ್ನು ತಂದುಕೊಡುವುದಲ್ಲದೆ ಸ್ಪರ್ಧೆಗಳಲ್ಲಿಯೂ ಗೆದ್ದು ಪ್ರಶಸ್ತಿ, ಪ್ರತಿಷ್ಠೆ ತಂದುಕೊಟ್ಟಿದೆ. ಕರ್ನಾಟಕದಲ್ಲಿಯೆ ಅತಿ ಹೆಚ್ಚು ಹಾಲು ಕರೆದ ಹಸು ಎಂದು ಹೆಸರು ಪಡೆದಿದೆ. ಪ್ರತಿಯೊಬ್ಬರು ಹಸುಗಳಿಗೆ ಈ ರೀತಿಯಲ್ಲಿಯೇ ಆರೈಕೆ ಮಾಡಿದಲ್ಲಿ ಎಲ್ಲರಿಗೂ ಸಂಪಾದನೆಯಲ್ಲಿ ಲಾಭ ಬರುವುದು ಖಚಿತ.

Leave A Reply

Your email address will not be published.