16 ವರ್ಷದ ಹುಡುಗಿ ಅಕೌಂಟ್ ನಲ್ಲಿ 10 ಕೋಟಿ ಜಮಾ ಆದ ಘಟನೆಯ ಬಗ್ಗೆ ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿಯೋಣ.

ಉತ್ತರ ಪ್ರದೇಶದ ಬಲ್ಲಿಯಾ ಜಿಲ್ಲೆಯಲ್ಲಿ 16 ವರ್ಷದ ಸರೋಜಾ ಎಂಬಾಕೆಯ ಅಕೌಂಟ್‍ಗೆ ಬರೋಬ್ಬರಿ 10 ಕೋಟಿ ರೂಪಾಯಿ ಹಣ ಜಮೆಯಾಗಿದೆ. ಸರೋಜಾ ಅನಕ್ಷರಸ್ಥಳಾಗಿದ್ದು, 2018 ರಿಂದ ಅಲಹಾಬಾದ್ ಬ್ಯಾಂಕಿನಲ್ಲಿ ಖಾತೆಯನ್ನು ಹೊಂದಿದ್ದಾಳೆ. ಆದರೆ ಸರೋಜಾ ಸೋಮವಾರ ಬ್ಯಾಂಕಿಗೆ ಹಣ ಡ್ರಾ ಮಾಡಲು ಹೋದಾಗ ಅಲ್ಲಿನ ಅಧಿಕಾರಿಗಳು ಆಕೆಯ ಖಾತೆಯಲ್ಲಿ 9.99 ಕೋಟಿ ರೂಪಾಯಿ ಇರುವುದನ್ನು ತಿಳಿಸಿದ್ದಾರೆ. ಇದರಿಂದ ಗಾಬರಿಯಾದ ಸರೋಜಾ ತಕ್ಷಣ ಪೊಲೀಸ್ ಠಾಣೆಗೆ ಹೋಗಿ ಈ ಬಗ್ಗೆ ದೂರು ನೀಡಿದ್ದಾಳೆ. ಸರೋಜ ಹಲವಾರು ಬಾರಿ 10,000 ರೂ ದಿಂದ 20,000 ರೂಪಾಯಿಯನ್ನು ಬ್ಯಾಂಕಿನಲ್ಲಿಟ್ಟಿದ್ದಳು ಆಗಾಗ ಬಂದು ಆ ಹಣವನ್ನು ವಾಪಸ್ ಪಡೆಯುತ್ತಿದ್ದಳು.

ಕಾನ್ಪುರ್ ದೇಹತ್ ಜಿಲ್ಲೆಯ ನೀಲೇಶ್ ಕುಮಾರ್ ಎಂಬಾತ ಎರಡು ವರ್ಷಗಳ ಹಿಂದೆ ಸರೋಜಾ ಬಳಿ ವೈಯಕ್ತಿಕ ವಿವರಗಳನ್ನು ಕೇಳಿದ್ದನು. ಪ್ರಧಾನ್ ಮಂತ್ರಿ ಆವಾಸ್ ಯೋಜನೆಯಡಿ ಮನೆ ಇಲ್ಲದವರಿಗೆ ಹಣ ನೀಡಲು ಆಧಾರ್ ಕಾರ್ಡ್ ಮತ್ತು ಫೋಟೋ ಬೇಕು ಎಂದು ಕೇಳಿದ್ದನು. ಆತನನ್ನು ನಂಬಿದ ಸರೋಜಾ ಎಲ್ಲ ವಿವರಗಳನ್ನು ನೀಡಿದ್ದಾಳೆ ಎಂಬುದು ವಿಚಾರಣೆ ವೇಳೆ ತಿಳಿದು ಬಂದಿದೆ. ಸರೋಜ ನೀಲೇಶ್ ಕುಮಾರ್‌ನ ನಂಬರನ್ನು ನೀಡಿದ್ದಾಳೆ ಆದರೆ ಆ ನಂಬರಿಗೆ ಫೋನ್ ಮಾಡಿದರೆ ಸ್ವಿಚ್ ಆಫ್ ಎಂದು ಬರುತ್ತಿದೆ. ಸದ್ಯಕ್ಕೆ ಈ ಬಗ್ಗೆ ತನಿಖೆ ನಡೆಯುತ್ತಿದೆ.

Leave a Reply

Your email address will not be published. Required fields are marked *