ಹಿತ್ತಲ ಗಿಡ ಮದ್ದಲ್ಲ ಎನ್ನುವ ಮಾತಿದೆ. ಆದರೆ ನಮ್ಮ ಪ್ರಕೃತಿಯಲ್ಲಿ ಸಿಗುವಂತಹ ಪ್ರತಿಯೊಂದು ಸಸ್ಯ ಮನುಷ್ಯನಿಗೆ ಅಗತ್ಯವಾಗಿರುವ ಔಷಧೀಯ ಗುಣಗಳನ್ನು ಹೊಂದಿದೆ. ಅಂತಹವುಗಳಲ್ಲಿ ಈ ಸಸ್ಯವು ಒಂದು. ಸಾಮಾನ್ಯವಾಗಿ ಹೊಲಗಳಲ್ಲಿ ಕಳೆಗಳಂತೆ ಬೆಳೆಯುವ ಈ ಸಸ್ಯವನ್ನು ನಮ್ಮ ಜನರು ಸಾಕಷ್ಟು ಬೈದುಕೊಳ್ಳುತ್ತಾರೆ ಆದರೆ ಈ ಗಿಡಗಳಲ್ಲಿರುವಂತ ಔಷಧೀಯ ಗುಣಗಳಿಗೆ ಸಾಟಿಯೇ ಇಲ್ಲ. ಅಂತಹುದೇ ಔಷಧೀಯ ಗುಣಗಳನ್ನು ಹೊಂದಿರುವ ಪ್ರಮುಖ ಮೂಲಿಕೆಯ ಬಗ್ಗೆ ಇಲ್ಲಿ ಪರಿಚಯ ಮಾಡಿಕೊಳ್ಳೋಣ.

ಹೊಲಗದ್ದೆಗಳ ಬದುಗಳಲ್ಲಿ ಕಾಣುವಂತಹ ಈ ಸಸ್ಯ ಸಾಮಾನ್ಯವಾಗಿ ಕಳೆಗಳಂತೆ ಕಾಣುತ್ತದೆ. ಈ ಗಿಡಕ್ಕೆ ಬಂಜರು ಭೂಮಿ ಬೆಟ್ಟ ಕಣಿವೆ ಎನ್ನುವ ಬೇಧಭಾವವಿಲ್ಲ. ಇದು ಎಲ್ಲೆಂದರಲ್ಲಿ ಬೆಳೆಯುವ ಸಸ್ಯವಾಗಿದ್ದು ಇದನ್ನು ಉತ್ತರಾಣಿ ಗಿಡ ಎಂದು ಕರೆಯುತ್ತಾರೆ. ಇದರಲ್ಲಿ ನಾವು ಎರಡು ರೀತಿಯ ಗಿಡಗಳನ್ನು ಕಾಣಬಹುದು. ಒಂದು ಕೆಂಪು ಬಣ್ಣದ ಕಾಂಡವನ್ನು ಹೊಂದಿದ್ದರೆ ಇನ್ನೊಂದು ಬಿಳಿಬಣ್ಣದ ಕಾಂಡವನ್ನು ಹೊಂದಿರುತ್ತದೆ. ಈ ಗಿಡದಲ್ಲಿ ಕಾಣಸಿಗುವಂತಹ ಬೀಜವನ್ನು ಉತ್ತರಾಣಿ ಅಕ್ಕಿ ಎಂದು ಕರೆಯುವುದುಂಟು. ಸಂಸ್ಕೃತದಲ್ಲಿ ಉತ್ತರಾಣಿ ಗಿಡಕ್ಕೆ ಅಪಮಾರ್ಗ ಎಂದು ಕರೆಯಲಾಗುತ್ತದೆ. ಗಿಡ ಒಂದು ಅಡಿಯಿಂದ ಮೂರು ಅಡಿಯವರೆಗೂ ಬೆಳೆದಿರುತ್ತದೆ. ಗಿಡದ ಕಾಂಡ ಬೇರು ಎಲೆ ಹಾಗೂ ಬೀಜಗಳು ಸಹ ಔಷಧೀಯ ಗುಣವನ್ನು ಹೊಂದಿರುತ್ತದೆ. ಹಾಗೆಂದ ಮಾತ್ರಕ್ಕೆ ಈ ಗಿಡದ ಔಷಧೀಯ ಉಪಯೋಗವನ್ನು ಎಲ್ಲರೂ ಪಡೆದುಕೊಳ್ಳುವ ಹಾಗಿಲ್ಲ. ಗರ್ಭಿಣಿಯರಿಗೆ ಈ ಗಿಡದ ಔಷಧಿಗಳು ನಿಷೇಧವಾಗಿರುತ್ತದೆ. ಒಂದು ವೇಳೆ ಈ ಗಿಡದ ಸೊಪ್ಪನ್ನು ಗರ್ಭಿಣಿಯರು ಹೆಚ್ಚಾಗಿ ಸೇವಿಸಿದರೆ ಗರ್ಭಪಾತವಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ. ಹಾಗಾಗಿ ಮನೆಯಲ್ಲಿನ ಹಿರಿಯರು ಉತ್ತರಾಣಿ ಸೊಪ್ಪಿನಿಂದ ಯಾವುದೇ ಪದಾರ್ಥಗಳನ್ನು ಮಾಡಿದರೂ ಸಹ ಔಷಧಿಯನ್ನು ತಯಾರಿಸಿ ಅದನ್ನು ಗರ್ಭಿಣಿ ಸ್ತ್ರೀಯರಿಗೆ ನೀಡುವುದಿಲ್ಲ.

ಉತ್ತರಾಣಿ ಗಿಡದ ಉಪಯೋಗವನ್ನು ನೋಡುವುದಾದರೆ ಈ ಗಿಡದ ಬೇರು ಬಹಳ ಉಪಯುಕ್ತಕಾರಿ. ಈ ಗಿಡದ ಬೇರನ್ನು ಜಜ್ಜಿ ಅದರಲ್ಲಿರುವ ರಸವನ್ನು ತೆಗೆದು ನೀರಿನಲ್ಲಿ ಹಾಕಿ ಕುದಿಸಿ ನೀರು ಆರಿದ ನಂತರ ಅದನ್ನು ಸೇವನೆ ಮಾಡುವುದರಿಂದ ನಿದ್ರಾಹೀನತೆ ಮಾಯವಾಗುತ್ತದೆ. ಇನ್ನು ಇದರ ಎಲೆಗಳು ಬಹು ಉಪಯೋಗಕಾರಿಯಾಗಿದೆ. ಇದರ ಎಲೆಗಳನ್ನು ಕಷಾಯ ಮಾಡಿಕೊಂಡು ಕುಡಿಯುವುದರಿಂದ ಮೂತ್ರವಿಸರ್ಜನೆಗೆ ಸಂಬಂಧಿಸಿದಂತಹ ಸಮಸ್ಯೆಗಳಿದ್ದರೆ ದೂರವಾಗುವುದು.ಅಷ್ಟೇ ಅಲ್ಲ ಉತ್ತರಾಣಿ ಗಿಡದ ಎಲೆಯನ್ನು ಮೊಸರಿನ ಜೊತೆ ಸೇರಿಸಿ ಸೇವಿಸುವುದರಿಂದ ಬೇಧಿ ಸಮಸ್ಯೆ ನಿವಾರಣೆ ಆಗುತ್ತದೆ. ಉತ್ತರಾಣಿ ಗಿಡದ ಎಲೆ ರಸವನ್ನು ಸುಟ್ಟಗಾಯಗಳಿಗೆ ಹಚ್ಚುವುದರಿಂದ ಗಾಯ ಬೇಗ ವಾಸಿಯಾಗುತ್ತದೆ. ರಕ್ತಹೀನತೆಯಿಂದ ಬಳಲುತ್ತಿರುವವರು ಎಲೆಯ ರಸವನ್ನು ಬೆಲ್ಲದ ಜೊತೆ ಖಾಲಿ ಹೊಟ್ಟೆಯಲ್ಲಿ ತೆಗೆದುಕೊಂಡರೆ ಆ ಸಮಸ್ಯೆಯಿಂದನು ಸಹ ಹೊರಬರಬಹುದು. ಇವೆಲ್ಲಕ್ಕಿಂತ ಹೆಚ್ಚಾಗಿ ಉತ್ತರಾಣಿ ಗಿಡದ ಎಲೆಯನ್ನು ಕಾಲಿಗೆ ಆಣಿ ಆಗಿರುವವರು ಕಟ್ಟಿದರೆ ಅದು ವಾಸಿಯಾಗುವುದು.

ಉತ್ತರಾಣಿ ಗಿಡದ ಎಲೆ ಮಹತ್ವ ಇಷ್ಟಕ್ಕೆ ಮುಗಿಯುವುದಿಲ್ಲ. ಒಂದು ವೇಳೆ ಜೇನು ಕಚ್ಚಿದರೆ ಅಥವಾ ಚೇಳು ಕುಟುಕಿದರೆ ಉತ್ತರಾಣಿ ಗಿಡದ ಎಲೆಯನ್ನು ಅರೆದು ಕಟ್ಟುವುದರಿಂದ ನೋವು ಬೇಗ ಕಡಿಮೆಯಾಗುತ್ತದೆ. ಈ ಗಿಡದ ಕಷಾಯವನ್ನು ನಿಯಮಿತವಾಗಿ ಸ್ನಾನ ಮಾಡುವಾಗ ನೀರಿಗೆ ಬೆರೆಸಿ ಸ್ನಾನ ಮಾಡುವುದರಿಂದ ಕ್ರಮೇಣವಾಗಿ ಚರ್ಮರೋಗಗಳು ಸಹ ನಿವಾರಣೆಯಾಗುವುದು. ಉತ್ತರಾಣಿ ಗಿಡದ ಕಾಂಡವು ಸಹ ಸಾಕಷ್ಟು ಔಷಧೀಯ ಗುಣಗಳನ್ನು ಹೊಂದಿದೆ. ಉತ್ತರಾಣಿ ಗಿಡದ ಕಾಂಡವನ್ನು ಸುಟ್ಟು ಭಸ್ಮ ರೂಪದಲ್ಲಿ ಮಾಡಿಕೊಂಡು ಅದಕ್ಕೆ ಜೇನುತುಪ್ಪ ಸೇರಿಸಿ ತಿನ್ನುವುದರಿಂದ ನೆಗಡಿ ಕೆಮ್ಮು ಅಸ್ತಮಾ ಹೃದಯ ಸಂಬಂಧಿ ಕಾಯಿಲೆಗಳಿಂದ ದೂರವಿರಬಹುದು. ಇನ್ನು ಈ ಕಾಂಡವನ್ನು ಚೆನ್ನಾಗಿ ಅಗೆಯುವುದರಿಂದ ಹಲ್ಲುಗಳು ಆರೋಗ್ಯಕರವಾಗಿರುತ್ತವೆ. ಇನ್ನು ಇದರ ಬೀಜಗಳನ್ನು ಕುಟ್ಟಿ ನಷ್ಯದ ರೂಪದಲ್ಲಿ ಬಳಕೆ ಮಾಡಬಹುದು ಇದು ಅರೆತಲೆನೋವನ್ನು ನಿವಾರಣೆ ಮಾಡುವ ಶಕ್ತಿಯನ್ನು ಹೊಂದಿದೆ. ಇನ್ನು ಈ ಗಿಡವನ್ನು ಸೋಪಿನ ರೀತಿಯಲ್ಲಿ ಬಳಸಬಹುದು ಎಂದು ಹೇಳಲಾಗುತ್ತದೆ. ಈ ಗಿಡದಲ್ಲಿ ಉತ್ಪತಿಯಾಗುವ ರಸ ಸೋಪಿನಂತೆ ಕೆಲಸ ನಿರ್ವಹಿಸುತ್ತದೆ. ಹಾಗಾಗಿ ಇದನ್ನು ಬಟ್ಟೆ ಒಗೆಯಲು ಸಹ ಬಳಕೆ ಮಾಡಬಹುದಾಗಿದೆ. ಇಷ್ಟು ಉಪಯೋಗಕಾರಿ ಆಗಿರುವಂತಹ ಸಸ್ಯ ಮಳೆಗಾಲದಲ್ಲಿ ಹೆಚ್ಚು ಕಾಣಿಸಿಕೊಳ್ಳುತ್ತದೆ. ಇದರ ಹೂವಿನಲ್ಲಿರುವ ಬೀಜಗಳು ನಮ್ಮ ಬಟ್ಟೆಗಳಿಗೆ ಅಂಟಿಕೊಂಡರೆ ಹಾಗೆಯೇ ಇರುತ್ತವೆ ಅದನ್ನು ನೋಡಿ ನಾವು ಇದ್ಯಾವುದೋ ಮುಳ್ಳಿನ ಗಿಡ ಅಂದುಕೊಂಡು ಸುಮ್ಮನೆ ಬರುತ್ತೇವೆ. ಇನ್ನು ಮುಂದೆ ಈ ರೀತಿಯ ನಿರ್ಲಕ್ಷ್ಯ ವಹಿಸದೆ ನಮ್ಮ ಸುತ್ತಮುತ್ತಲೂ ಉತ್ತರಾಣಿ ಗಿಡ ಇದ್ದರೆ ಅದನ್ನು ಕಿತ್ತೆಸೆಯದೆ ಹತ್ತಿರದ ಆಯುರ್ವೇದ ವೈದ್ಯರನ್ನು ಸಂಪರ್ಕಿಸಿ ಅದರ ಔಷಧೀಯ ಗುಣಗಳ ಪ್ರಯೋಜನವನ್ನು ಪಡೆದುಕೊಳ್ಳೋಣ.

Leave a Reply

Your email address will not be published. Required fields are marked *