ಸ್ಯಾಂಡಲ್ ವುಡ್ ಕರ್ಣ ರೆಬಲ್ ಸ್ಟಾರ್ ಅಂಬರೀಶ್ ಮಂಡ್ಯ ಜಿಲ್ಲೆ ದೊಡ್ಡರಸನ ಕೆರೆ ಗ್ರಾಮದಲ್ಲಿ 1952 ಮೇ 29ರಂದು ತಂದೆ ಹುಚ್ಚೇಗೌಡ, ತಾಯಿ ಪದ್ಮಮ್ಮ ಅವರ ಮಗನಾಗಿ ಮಳವಳ್ಳಿ ಹುಚ್ಚೇಗೌಡ ಅಮರನಾಥ್ ಅವರು ಅಂಬರೀಶ್ ಜನಿಸಿದರು. ಅವರಿಗೆ 70ನೇ ಜನ್ಮದಿನ. ಇಂದು ನಮ್ಮೊಂದಿಗೆ ಇಲ್ಲವಾದರೂ ಅವರ ನೆನಪುಗಳು ಮಾತ್ರ ಅಮರವಾಗಿ ಉಳಿದಿದೆ.

ಸ್ಯಾಂಡಲ್​ವುಡ್ ನ ಕರ್ಣನಾಗಿ, ಅಭಿಮಾನಿಗಳ ಪಾಲಿನ ರೆಬಲ್ ಸ್ಟಾರ್ ಆಗಿ ಅಂಬರೀಶ್ ಜನಮಾನಸದಲ್ಲಿ ಉಳಿದಿದ್ದಾರೆ. ಕೇವಲ ನಟನಾಗಿ ಮಾತ್ರವಲ್ಲದೇ ರಾಜಕಾರಿಣಿಯಾಗೂ ಅನೇಕ ಜನಪರ ಕೆಲಸ ಮಾಡುವ ಮೂಲಕ ಜನಪ್ರಿಯರಾದವರು ಅಂಬಿ. ಕನ್ನಡ ಚಲನಚಿತ್ರ ರಂಗಕ್ಕೆ 1972ರಲ್ಲಿ ಪುಟ್ಟಣ್ಣ ಕಣಗಾಲ್ ನಿರ್ದೇಶನದ “ನಾಗರಹಾವು” ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ಈ ಚಿತ್ರದಲ್ಲಿ ಜಲೀಲನ ಪಾತ್ರ ಮೂಲಕ ಪರಿಚಿತರಾದರು. ಇದರಲ್ಲಿನ ಹೆ ಬುಲ್ ಬುಲ್ ಮಾತಾಡಕಿಲ್ವಾ ಡೈಲಾಗ್ ಇಂದಿಗೂ ಜನಪ್ರೀಯ ಡೈಲಾಗ್ ಆಗಿ ಉಳಿದಿದೆ.

ಅಂಬರೀಶ್ ಸುಮಲತಾ ತಾರಾಜೋಡಿ. ಇವರ ಲವ್ ಸ್ಟೋರಿ ಕೂಡ ಯಾವುದೇ ಸಿನಿಮಾ ಕಥೆಗಿಂತ ಕಡಿಮೆಯಾಗಿರಲಿಲ್ಲ. ಸುಮಲತಾ ಅವರು ಮೊದಲ ಬಾರಿಗೆ ಅಂಬಿಯನ್ನು ಭೇಟಿ ಮಾಡಿದ್ದು ಆಹುತಿ ಚಿತ್ರದ ಶೂಟಿಂಗ್ ಸಮಯದಲ್ಲಿ. ಅವರೇ ಹೇಳಿದಂತೆ ಅದಕ್ಕೂ ಮೊದಲು ಅಂಬರೀಶ್ ಅವರನ್ನು ನೋಡಿದ್ದರು.

ಒಂದು ಫಂಕ್ಷನ್ನಲ್ಲಿದ್ದ ಅಂಬಿ ಅವರು ತಮ್ಮದೇ ಖದರ್ನಲ್ಲಿ ಎಲ್ಲರೊಂದಿಗೆ ಬೆರೆತಿದ್ದರು. ದೂರದಿಂದ ನಾನು ಅವರನ್ನು ನೋಡಿದ್ದೆ. ಆವಾಗ ಚಿತ್ರರಂಗದಲ್ಲಿ ಅವರ ಬಗ್ಗೆ ಏನೋನೊ ರೂಮರ್ಸು, ಗಾಸಿಪ್ಸ್ ಹರಿದಾಡುತ್ತಿತ್ತು. ಇದೇ ವೇಳೆ ಚಿತ್ರರಂಗದಲ್ಲಿ ನಾನು ಹೊಸಬಳಾಗಿದ್ದೆ. ಹಾಗಾಗಿ ಅವರೊಂದಿಗೆ ಅಭಿನಯಿಸಲು ನಂಗೆ ಭಯ ಇತ್ತು. ಆದರೆ ಶೂಟಿಂಗ್ ಆರಂಭವಾಗುತ್ತಿದ್ದಂತೆ ನನ್ನ ಊಹೆಗಳು ತಪ್ಪು ಎಂಬುದು ಅರಿವಾಗಿತ್ತು ಎನ್ನುತ್ತಾರೆ ಸುಮಲತಾ ಅಂಬರೀಶ್.

ನಾವಿಬ್ಬರು ಮೊದಲ ಬಾರಿ ಭೇಟಿಯಾಗಿದ್ದು 1984ರಲ್ಲಿ ಅನಿಸುತ್ತೆ. ಆರಂಭದಲ್ಲಿ ನಮ್ಮಿಬ್ಬರ ನಡುವೆ ಅಂತಹ ಆತ್ಮೀಯತೆ ಏನೂ ಇರಲಿಲ್ಲ. ನಾನು ಹೆಚ್ಚಾಗಿ ಚೆನ್ನೈನಲ್ಲಿರುತ್ತಿದ್ದೆ. ಅಂಬಿ ಬೆಂಗಳೂರಿನಲ್ಲಿ. ಹೀಗಾಗಿ ಮಾತುಕತೆ, ಭೇಟಿ ಕೂಡ ಅಷ್ಟಕಷ್ಟೇ. ಅಂದಿನ ಕಾಲದಲ್ಲಿ ಈಗಿನ ರೀತಿಯಲ್ಲಿ ಮೊಬೈಲ್ ಫೋನ್​ಗಳೇನು ಇರಲಿಲ್ವಲ್ಲ. ಬೆಂಗಳೂರಿಗೆ ಬಂದಾಗ ಯಾವುದಾದರು ಪಾರ್ಟಿಯಲ್ಲಿ ಸಿಕ್ಕರೆ ಅಥವಾ ಪಕ್ಕದಲ್ಲಿ ಶೂಟಿಂಗ್​ ಇದ್ದಾಗ ಹೋಗಿ ಹಲೋ ಹೇಳಿ ಬರುತ್ತಿದ್ದೆ. ನಿಧಾನಕ್ಕೆ ಸ್ಪಲ್ಪ ಆತ್ಮೀಯತೆ ಬೆಳೆಯಿತು.

ಅದಾಗಲೇ ನನಗೆ ಅವರು ಹೃದಯವಂತ ಎಂಬುದು ಅರಿವಾಗಿತ್ತು. ಇಂತಹ ವ್ಯಕ್ತಿತ್ವ ಹೊಂದಿರುವವರು ತುಂಬಾ ಅಪರೂಪ. ಹೀಗಾಗಿ ನಾನು ಅವರನ್ನು ಇಷ್ಟಪಡತೊಡಗಿದೆ. ಅವರು ಕೂಡ ನನ್ನನ್ನು ಇಷ್ಟಪಡೋಕೆ ಪ್ರಾರಂಭಿಸಿದರು. ನಾನು ತುಂಬಾ ಸೈಲೆಂಟ್ ಆಗಿದ್ದೆ. ಸಾಮಾನ್ಯವಾಗಿ ಚಿತ್ರರಂಗದಲ್ಲಿದವರಿಗೆ ಅವರದೇ ನಡತೆ, ಸ್ವಭಾವ ಹವ್ಯಾಸಗಳಿರುತ್ತೆ. ನಾನು ಅವರೆಲ್ಲರಿಗಿಂತ ಭಿನ್ನವಾಗಿದ್ದೆ. ಇದನ್ನೇ ಅವರು ಹೆಚ್ಚು ಇಷ್ಟ ಪಟ್ಟಿದ್ದರು.

ಅವರು ಸೆಟ್​ನಲ್ಲಿ ಎಷ್ಟು ಗಲಾಟೆ ಮಾಡುತ್ತಿದ್ದರೋ, ನಾನು ಅದಕ್ಕೆ ಅಪವಾದ ಎಂಬಂತೆ ಸೈಲೆಂಟ್​ಗಾಗಿ ಸೆಟ್​ನಲ್ಲಿ ಕಾಣಿಸಿಕೊಳ್ಳುತ್ತಿದ್ದೆ. ನನ್ನಷ್ಟಕ್ಕೆ ಕೂತು ಪುಸ್ತಕ ಓದುವುದು ಹವ್ಯಾಸವಾಗಿತ್ತು. ಯಾರೊಂದಿಗೂ ನಾನು ಹೆಚ್ಚು ಬೆರೆಯುತ್ತಿರಲಿಲ್ಲ. ಆದರೆ ಅಂಬಿ ಒಂದು ಕ್ಷಣವೂ ಸೈಲೆಂಟ್ ಆಗಿರುವುದೇ ಇಲ್ಲ. ಎಲ್ಲರ ಜೊತೆ ಹರಟೆ ಹೊಡೆಯುತ್ತಾ ಎಂಜಾಯ್ ಮಾಡುತ್ತಿದ್ದರು. ನಮ್ಮಿಬ್ಬರ ಸ್ವಭಾವಗಳೇ ವಿರುದ್ಧವಾಗಿದ್ದವು. ಇದು ಆಕರ್ಷಣೆಗೆ ಮುಖ್ಯ ಕಾರಣ. ಅದರಲ್ಲೂ ನಾನು ಏನು ಇಷ್ಟಪಡುತ್ತೀನೊ, ಅಂತಹ ಯಾವುದೇ ಹವ್ಯಾಸಗಳು ಅಂಬಿಯರಲಿಲ್ಲ. ಇಬ್ಬರದ್ದೂ ತದ್ವಿರುದ್ಧ ಅಭಿರುಚಿ.

ನನ್ನ ಗೆಳೆಯ ಗೆಳೆತಿಯರಿಗೆ ಮಾತ್ರ ನಾನೆಷ್ಟು ಸ್ನೇಹಜೀವಿ ಎಂಬುದು ಗೊತ್ತಿದೆ. ಇದನ್ನು ನೋಡಿ ಅವರಿಗೂ ಅನಿಸಿರಬಹುದು. ಹೀಗಾಗಿ ಬೇಗನೇ ನಾವಿಬ್ಬರು ತುಂಬಾ ಆತ್ಮೀಯರಾದೆವು. ನಮ್ಮಿಬ್ಬರ ಪ್ರೀತಿ ಯಾವಾಗ ಮೊಳಕೆ ಒಡೆಯಿತು ಎಂಬುದು ನೆನಪಿಲ್ಲ. ಎಂಟ್ಹತ್ತು ಸಿನಿಮಾಗಳಲ್ಲಿ ನಾವು ಜೊತೆಯಾಗಿ ಮಾಡಿದೆವು. ಇದೇ ವೇಳೆ ‘ನ್ಯೂ ಡೆಲ್ಲಿ’ ಸಿನಿಮಾ ಸಂದರ್ಭದಲ್ಲಿ ತುಂಬಾನೇ ಆತ್ಮೀಯರಾದೆವು. ಈ ವೇಳೆ ಒಂದೆರೆಡು ವರ್ಷ ಬಿಟ್ಟು ಮದುವೆ ಮಾಡ್ಕೋಳೋಣ ಅಂತ ಮಾತನಾಡಿದ್ವಿ. ಪ್ರೊಪೋಸಲ್ ಅಂತೇನೂ ಮಾಡಿದ್ದಾರೆ ಎಂಬ ವಿಷಯ ನನಗೆ ನೆನಪಿಲ್ಲ.

ನಮ್ಮ ಮದುವೆ ನಡೆದಾಗ ಅಂಬರೀಶ್ ಅವರಿಗೆ 39 ವರ್ಷ. ಅವರ ಮನೆಯಲ್ಲಿ ರೆಬೆಲ್ ಸ್ಟಾರ್​ಗೆ ಒಮ್ಮೆ ಮದುವೆ ಆಗಿ ಬಿಡಲಿ ಅಂತ ಕಾಯ್ತಿದ್ದರು. ಅವರಮ್ಮನಿಗೆ ಅಂಬರೀಶ್ ಮದುವೆ ನೋಡಬೇಕು ಎಂಬ ತುಂಬಾ ಆಸೆಯಿತ್ತು. ಅದರಂತೆ ಆಯಿತು. ನಮ್ಮ ಮದುವೆಯಾದ ಮೇಲೆ ಗಂಡು ಮಗುವನ್ನು ನೋಡಿ ಜಗತ್ತನ್ನು ತೊರೆಯಬೇಕು ಅನ್ನೋ ಆಸೆಯಿತ್ತು. ಅದೂ ಕೂಡ ನಡೆಯಿತು. ನಮ್ಮಿಬ್ಬರ ಪ್ರೀತಿಯ ಸಂಕೇತವಾಗಿ ಅಭಿಷೇಕ್ ಹುಟ್ಟಿದ್ದ.

ಕೆಲವೊಂದು ಬಾರಿ ಅವರ ಸ್ವಭಾವವೇ ವಿಚಿತ್ರ ಅನಿಸಿಬಿಡುತ್ತೆ. ಇವರಿಗೆ ಯಾರೇ ಕೆಟ್ಟದ್ದು ಮಾಡಿದ್ದರೂ, ಇಲ್ಲ ದ್ರೋಹ ಬಗೆದಿದ್ದರೂ ಅವರನ್ನು ಕ್ಷಮಿಸಿ ಬಿಡುತ್ತಿದ್ದರು. ಮುಂದೆ ಅವರೇ ಬಂದು ಸಹಾಯ ಬೇಡಿದಾಗ ಹಿಂದೆ ಮುಂದೆ ನೋಡದೇ ಸಹಾಯಹಸ್ತ ಚಾಚುತ್ತಿದ್ದರು. ಇದುವೇ ನಂಗೆ ಅವರ ತುಂಬಾ ಇಷ್ಟವಾದ ಗುಣ. ನಮ್ಮ ಬಗ್ಗೆ ಕೆಟ್ಟದನ್ನು ಬಯಸಿದವರಿಗೂ ಇವರು ಸಹಾಯ ಮಾಡಿದ್ದಾರೆ. ನನಗೆ ಅದೆಷ್ಟೊ ಬಾರಿ ಆಶ್ಚರ್ಯ ಅನಿಸಿದೆ. ದೇವರು ಇವರಿಗೆ ಅಂತದ್ದೇನೊ ಒಂದು ವಿಶೇಷ ಸ್ವಭಾವ ಕೊಟ್ಟಿದ್ದಾರೆ ಎಂದು ಖುಷಿ ಪಡುತ್ತಿದ್ದೆ.

ಅಂಬಿ ಯಾರು ಮಾತು ಕೇಳುತ್ತಾರೊ, ಬಿಡುತ್ತಾರೊ ಗೊತ್ತಿಲ್ಲ. ಆದರೆ ನನ್ನ ಅಭಿಪ್ರಾಯಕ್ಕೆ ತುಂಬಾನೇ ಗೌರವ ಕೊಡುತ್ತಿದ್ದರು. ಅದನ್ನು ಪಾಲಿಸುವುದು ಬಿಡುವುದು ಅವರಿಗೆ ಬಿಟ್ಟ ವಿಷಯ. ಆದರೆ ನಾನು ಅವರಿಗಿಂತ ಚೆನ್ನಾಗಿ ಯೋಚನೆ ಮಾಡ್ತೀನಿ, ನನ್ನ ನಿರ್ಧಾರಗಳು ಸರಿಯಾಗಿರುತ್ತದೆ ಎಂಬುದು ಅವರಿಗೆ ತುಂಬಾ ಚೆನ್ನಾಗಿ ಗೊತ್ತಿತ್ತು.

ಎಲ್ಲರಿಗೂ ತಿಳಿದಿರುವಂತೆ ಅಂಬರೀಶ್ ತುಂಬಾ ಕೋಪಿಷ್ಠ. ಈ ಕೋಪ ಐದು, ಹತ್ತು ನಿಮಿಷ ಮಾತ್ರ. ಆಮೇಲೆ ಪಶ್ಚಾತ್ತಾಪ ಪಡುತ್ತಾರೆ. ಆದರೂ ಅವರೊಂದಿಗೆ ಕ್ಷಮೆ ಕೇಳುವುದಿಲ್ಲ. ತಪ್ಪು ಮಾಡಿದ್ದೇನೇ ಎಂದು ಅರಿವಿಗೆ ಬಂದರೂ ಕ್ಷಮಾಪಣೆ ಯಾಚಿಸಲ್ಲ. ಅವರ ಸ್ವಭಾವೇ ಅದಾಗಿತ್ತು. ಆದರೆ ನಮ್ಮೊಂದಿಗೆ ಅದರ ಬಗ್ಗೆ ಮಾತನಾಡುತ್ತಿದ್ದರು. ಈ ವೇಳೆ ಅವರೊಳಗೆ ತಾನು ತಪ್ಪು ಮಾಡಿದ್ದೇನೆ ಎಂಬ ಅಪರಾಧಿ ಭಾವನೆ ಆವರಿಸಿರುತ್ತಿತ್ತು. ಒಟ್ಟಿನಲ್ಲಿ ಅಂಬಿಗೆ ಅಂಬಿಯೇ ಸಾಟಿ.

ನಟ ಅಂಬರೀಶ್ ಮತ್ತು ಡಾ. ವಿಷ್ಣುವರ್ಧನ್ ಅವರ ಸ್ನೇಹ ಚಿತ್ರರಂಗದಲ್ಲಿ ಒಂದು ಮಾದರಿಯಾಗಿತ್ತು. ಇವರಿಬ್ಬರ ನಡುವಿನ ಸ್ನೇಹ ಅದೆಷ್ಟೊ ಅಭಿಮಾನಿಗಳಿಗೆ ಮೆಚ್ಚುಗೆಯಾಗಿತ್ತು. ಇವರಿಬ್ಬರೂ ಇಂದು ನಮ್ಮನ್ನು ಅಗಲಿದ್ದರೂ ಇಂದು ಎಲ್ಲರ ಮನದಲ್ಲಿ ಇದ್ದಾರೆ. ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದಿಂದ ಮತ್ತು ಜನತಾದಳ ಪಕ್ಷದಿಂದ ಸ್ಪರ್ದಿಸಿ ಲೋಕಸಭೆ ಸದಸ್ಯ ಮತ್ತು ಶಾಸಕರಾಗಿದ್ದರು, ಅವರು ಮೇ 2013 ರಿಂದ ಜೂನ್ 2016 ರ ವರೆಗೆ ಸಿದ್ದರಾಮಯ್ಯ ಅವರ ಸಂಪುಟದಲ್ಲಿ ಕರ್ನಾಟಕ ಸರಕಾರದ ವಸತಿ ಸಚಿವರಾಗಿ ಕಾರ್ಯನಿರ್ವಹಿಸಿದರು.

1982ರಲ್ಲಿ ಅಂತ ಚಿತ್ರಕ್ಕಾಗಿ ಅತ್ಯುತ್ತಮ ನಟನಿಗಾಗಿರುವ ಕರ್ನಾಟಕ ರಾಜ್ಯ ವಿಶೇಷ ಪ್ರಶಸ್ತಿ, ಫಿಲ್ಮ್ ಫೇರ್ ಅತ್ಯುತ್ತಮ ನಟ, ಫಿಲ್ಮ್ ಫೇರ್ ಜೀವಮಾನ ಸಾಧನೆ, ಆಂಧ್ರ ಸರ್ಕಾರವು ನಂದಿ ಪ್ರಶಸ್ತಿ ಸೇರಿದಂತೆ ಅನೇಕ ಪ್ರಶಸ್ತಿಗಳಿ ಲಭಿಸಿವೆ. ಅಂಬಿ ಸುಮಾರು 200ಕ್ಕೂ ಹೆಚ್ಚಿನ ಸಿನಿಮಾಗಳಲ್ಲಿ ನಟಿಸಿದ್ದಾರೆ. ಇನ್ನು, ಅಂಬರೀಶ್ ಅವರ ಪತ್ನಿ ಸುಮಲತಾ ಅಂಬರೀಶ್ ಸಹ ಚಲನಚಿತ್ರ ಮತ್ತು ರಾಜಕೀಯದಲ್ಲಿ ಸಕ್ರೀಯರಾಗಿದ್ದಾರೆ. ಅಲ್ಲದೇ ಇದೀಗ ಮಗ ಅಭಿಷೇಕ್ ಅಂಬರೀಶ್ ಸಹ ಸ್ಯಾಂಡಲ್​ವುಡ್ ನಲ್ಲಿ ಮಿಂಚುತ್ತಿದ್ದು, ಅಂಬಿ ಅಭಿಮಾನಿಗಳು ಅಭಿಷೇಕ್ ಅವರಲ್ಲಿ ತಮ್ಮ ಮೆಚ್ಚಿನ ನಟನನ್ನು ಕಾಣುತ್ತಿದ್ದಾರೆ. ಹೀಗಾಗಿ ಅವರಿಗೆ ಜೂನಿಯರ್ ರೆಬಲ್ ಸ್ಟಾರ್ ಎನ್ನುತ್ತಾರೆ.

Leave a Reply

Your email address will not be published. Required fields are marked *