ಹಸಿವು ಅಂತ ಬಂದಾಗ , ಕೈಲಾದರೆ ಏನನ್ನಾದರೂ ಕೊಡಿ. ಹಾಗೆ ಕಳುಹಿಸಬೇಡಿ ಯಾಕಂದ್ರೆ ಹಸಿವು ಎನ್ನುವುದು ನರಕಕ್ಕಿಂತಲೂ ಕೆಟ್ಟದ್ದು. ಧರ್ಮಸ್ಥಳ ಯಾರಿಗೆ ತಾನೇ ತಿಳಿದಿಲ್ಲ? ಇಲ್ಲಿ ನಡೆಯುವ ಧರ್ಮದಿಂದ ಇದು ಇಡೀ ವಿಶ್ವಕ್ಕೆ ಹೆಸರುವಾಸಿ ಆಗಿದೆ. ದೇಶ ವಿದೇಶಗಳಿಂದ ಭಕ್ತಿ ಪೂರ್ವಕ ಭಾವನೆಯಿಂದ ಶ್ರೀ ಮಂಜುನಾಥ ಸ್ವಾಮಿಯನ್ನು ಆರಾಧಿಸಲು ಅಸಂಖ್ಯಾತ ಭಕ್ತರು ಇಲ್ಲಿಗೆ ಆಗಮಿಸುತ್ತಾರೆ. ಬಂದಂತಹ ಭಕ್ತಾದಿಗಳು ಧರ್ಮಸ್ಥಳದ ಮಂಜುನಾಥ ಸ್ವಾಮಿಯ ಅನ್ನಪೂರ್ಣೇಶ್ವರಿ ಭೋಜನ ಶಾಲೆಗೆ ಹೋಗಿ ಪ್ರಸಾದ ಸ್ವೀಕರಿಸುವುದು ಎಲ್ಲರಿಗೂ ತಿಳಿದೇ ಇದೆ. ಆದರೆ ಇಲ್ಲಿರುವ ಅನ್ನಪೂರ್ಣೇಶ್ವರಿ ಭೋಜನ ಶಾಲೆಯಲ್ಲಿ ದಿನಕ್ಕೆ ಎಷ್ಟು ಸಾವಿರ ಜನ ಊಟ ಮಾಡುತ್ತಾರೆ ಎಷ್ಟು ಅಕ್ಕಿ ಬಳಕೆ ಆಗುತ್ತದೆ ಇಲ್ಲಿ ಅಡುಗೆ ತಯಾರಿ ಆಗುವ ಬಗೆ, ಕೆಲಸ ಮಾಡುವವರ ಸಂಖ್ಯೆ ಹೀಗೆ ಹಲವಾರು ಕುತೂಹಲಕಾರಿ ವಿಷಯಗಳು ಇವೆ . ಇವುಗಳ ಬಗ್ಗೆ ಈ ಲೇಖನದ ಮೂಲಕ ತಿಳಿದುಕೊಳ್ಳೋಣ.
ಅನ್ನದೇವರಿಗಿಂತ ಅನ್ಯದೇವರಿಲ್ಲ ಅಂತ ಹೇಳುತ್ತಾರೆ. ಹಸಿದು ಬಂದವರಿಗೆ ಊಟ ಹಾಕುವುದಕ್ಕಿಂತ ದೊಡ್ಡದು ಬೇರೆ ಇಲ್ಲ. ಸುಮಾರು ನಾನೂರು ವರ್ಷಗಳ ಹಿಂದಿನಿಂದ ಧರ್ಮಸ್ಥಳದಲ್ಲಿ ಅನ್ನದಾನ ಶುರು ಆಗಿತ್ತು. ಅಲ್ಲಿಂದ ಇಲ್ಲಿಯವರೆಗೂ ಒಂದು ದಿನವೂ ಸಹ ಅನ್ನದಾನ ನಿಂತಿಲ್ಲ. ಎರಡನೇ ಮಹಾಯುದ್ದದ ಸಮಯದಲ್ಲಿ ಕೂಡಾ ತುಂಬಾ ಸಮಸ್ಯೆ ಇದ್ದಾಗಲೂ ಇಲ್ಲಿ ಅನ್ನದಾಸೋಹ ನಿಲ್ಲಿಸದೆ ಮುಂದುವರೆಸಲಾಗಿತ್ತು. ಅಲ್ಲಿ ಬರುವಂತಹ ಭಕ್ತಾದಿಗಳು ತಮ್ಮ ಅತಿಥಿಗಳು ಎಂದು ಪ್ರಸಾದ ವಿನಿಯೋಗ ಮಾಡಲಾಗುತ್ತದೆ. ಇಲ್ಲಿ ನಡೆಯುವ ದಾಸೋಹ ಭಕ್ತಾದಿಗಳಿಗೆ ತೃಪ್ತಿ ನೀಡಿದರೆ ಶ್ರೀ ಮಂಜುನಾಥ ಸ್ವಾಮಿ ಕೂಡ ತೃಪ್ತಿ ಹೊಂದುತ್ತಾನೆ ಎಂದು ಅಪಾರ ನಂಬಿಕೆ ಇದೆ. ಇದೆ ರೀತಿ ಇಲ್ಲಿಗೆ ಬಂದಂತಹ ಭಕ್ತಾದಿಗಳು ಉಪವಾಸ ಹೋದ ಇತಿಹಾಸವೇ ಇಲ್ಲ. ಈ ಪರಂಪರೆಯನ್ನು ಮುಂದುವರೆಸಲು 1955 ರಲ್ಲಿ ವೀರೇಂದ್ರ ಹೆಗ್ಗಡೆ ಅವರ ತಂದೆ ಧರ್ಮಸ್ಥಳದಲ್ಲಿ ಅನ್ನಪೂರ್ಣ ಭೋಜನಶಾಲೆಯನ್ನು ಕಟ್ಟಿಸಲು ನಿರ್ಧಾರ ಮಾಡುತ್ತಾರೆ. ಈಗ ಇರುವ ಭೋಜನ ಶಾಲೆಯ ವಿಸ್ತೀರ್ಣ 19,800 ಅಡಿ ಇದೆ. ಇಲ್ಲಿ ಬರುವ ಭಕ್ತಾದಿಗಳ ಸಂಖ್ಯೆ ಅಪಾರವಾಗಿ ಇರುವುದರಿಂದ ಈ ಭೋಜನಶಾಲೇ ಇಷ್ಟು ವಿಶಾಲವಾಗಿ ಇದೆ. ಇಲ್ಲಿ ಪ್ರತೀ ದಿನ 40 ರಿಂದ 60 ಸಾವಿರ ಜನರು ಸ್ವಾಮಿಯ ದರ್ಶನವನ್ನು ಪಡೆದು ಊಟದ ಪ್ರಸಾದವನ್ನು ಸ್ವೀಕಾರ ಮಾಡುತ್ತಾರೆ.
ಧರ್ಮಸ್ಥಳದ ಭೋಜನ ಶಾಲೆಯಲ್ಲಿ ಒಮ್ಮೆ 3 ಸಾವಿರ ಜನ ಊಟಕ್ಕೆ ಕುಳಿತುಕೊಳ್ಳಬಹುದು. ಪ್ರತೀ 20 ನಿಮಿಷಕ್ಕೆ ಮತ್ತೊಂದು ಪಂಕ್ತಿ ಊಟ ಮುಗಿದು ಆರಂಭ ಆಗುತ್ತದೆ. ಮಧ್ಯಾನ್ಹ ಮತ್ತು ರಾತ್ರಿ ಭಕ್ತಾದಿಗಳಿಗೆ ಪ್ರಸಾದ ವಿತರಣೆ ಮಾಡಲಾಗುವುದು. ಇಲ್ಲಿ ಒಂದು ದಿನಕ್ಕೆ ಕನಿಷ್ಠ ಪಕ್ಷ 80 ರಿಂದ 90 ಕ್ವಿನ್ಟಲ್ ಅಕ್ಕಿಯನ್ನು ಅನ್ನ ಮಾಡಲು ಬಳಸಲಾಗುತ್ತದೆ. ಭಕ್ತಾದಿಗಳ ಊಟದ ವ್ಯವಸ್ಥೆಯಲ್ಲಿ ಶುಚಿ ಮತ್ತು ರುಚಿಗೆ ಮೊದಲು ಆದ್ಯತೆ ನೀಡಲಾಗುತ್ತದೆ. ತರಕಾರಿ ಕತ್ತರಿಸುವುದರಿಂದ ಹಿಡಿದು ಪ್ರಸಾದವನ್ನು ತಟ್ಟೆಗೆ ಹಾಕುವವರೆಗೂ ಯಾರೊಬ್ಬರೂ ಅದನ್ನು ಬರೀ ಕೈಯಲ್ಲಿ ಮುಟ್ಟುವುದಿಲ್ಲ. ಸುಮಾರು 300 ಕ್ಕೂ ಹೆಚ್ಚು ಜನರು ಇಲ್ಲಿ ಕೆಲಸ ಮಾಡುತ್ತಾರೆ. ಒಂದು ವರ್ಷದಲ್ಲಿ ಧರ್ಮಸ್ಥಳದಲ್ಲಿ ಎಷ್ಟು ಜನರು ಊಟ ಮಾಡಬಹುದು ಎಂದು ಅನ್ನಿಸಬಹುದು. ಕಳೆದ ವರ್ಷದವರ್ಷದವರೆಗೆ ಪ್ರತೀ ವರ್ಷದಂತೆ ಈ ಕ್ಷೇತ್ರದಲ್ಲಿ 80,45,000ಜನರು ಪ್ರಸಾದ ಸ್ವೀಕರಿಸಿದ್ದಾರೆ. ಈ ಮೂಲಕ ಪ್ರತೀ ವರ್ಷವೂ ಸಂಖ್ಯೆ ಹೆಚ್ಚುತ್ತಲೇ ಇದೆ. ಇಷ್ಟೋಂದು ಜನರಿಗೆ ಅನ್ನದಾಸೋಹ ಮಾಡುತ್ತಿರುವ ಕೀರ್ತಿ ಧರ್ಮಸ್ಥಳಕ್ಕೆ ಇದೆ.
ಇನ್ನು ಲಕ್ಷ ದೀಪೋತ್ಸವದ ಸಮಯದಲ್ಲಿ ಕೇಳುವ ಹಾಗೆ ಇರಲ್ಲ. ಏನಿಲ್ಲ ಅಂದರೂ 3 ಲಕ್ಷಕ್ಕಿಂತಲೂ ಅಧಿಕ ಜನರು ಇಲ್ಲಿ ಭೇಟಿ ನೀಡುತ್ತಾರೆ. ಈ ಕಾರಣಕ್ಕೆ ಭೋಜನ ಶಾಲೆಯನ್ನು ವಿಸ್ತಾರವಾಗಿ ಕಟ್ಟಲಾಗಿದೆ. ಇಲ್ಲಿಯ ಅಡುಗೆ ಮಾಡುವ ವಿಧಾನ ಕೂಡಾ ಬಹಳ ಸ್ವಚ್ಛವಾಗಿ ಇರುತ್ತದೆ ಹಾಗೂ ಆಧುನಿಕ ಯಂತ್ರಗಳನ್ನು ಬಳಸಿ ಅಡುಗೆ ತಯಾರಿಸಲಾಗುತ್ತದೆ. ಇಲ್ಲಿ ಲಕ್ಷ ದ್ವೀಪದ ಸಂದರ್ಭದಲ್ಲಿ ಸುಮಾರು 95,000 ಕೆಜಿ ಅಕ್ಕಿಯನ್ನು ಭಕ್ತಾದಿಗಳ ಅಡುಗೆಗೆ ಬಳಸಲಾಗುತ್ತದೆ. ಈ ಕಾರಣದಿಂದಾಗಿ ಧರ್ಮಸ್ಥಳ ಕ್ಷೇತ್ರ ಅಷ್ಟು ಹೆಸರುವಾಸಿ ಆಗಿದೆ. ಅನ್ನಪೂರ್ಣೇಶ್ವರಿ ಭೋಜನ ಶಾಲೆಯಲ್ಲಿ ಒಟ್ಟೂ 9 ಸಾಲುಗಳಿದ್ದು ಒಂದೊಂದು ಸಾಲಿನಲ್ಲಿಯೂ ಸುಮಾರು 400 ಜನರು ಕುಳಿತುಕೊಳ್ಳಬಹುದಾಗಿದೆ. ತೆಂಗಿನಕಾಯಿ ವಿಚಾರಕ್ಕೆ ಬಂದ್ರೆ ಪ್ರತೀ ದಿನ ಅಡುಗೆಗೆ 1000 ದಿಂದ 1200 ತೆಂಗಿನಕಾಯಿ ಬಳಕೆ ಮಾಡಲಾಗುತ್ತದೆ. ಇಲ್ಲಿ ಮಾಡುವ ಒಂದು ದಿನದ ಅಡುಗೆ ಸುಮಾರು 400 ಮದುವೆ ಅಡುಗೆಯ ಸಮಾನವಾಗಿದೆ. ಇಲ್ಲಿ ಸೌಟಿನಲ್ಲಿ ಸಾಂಬಾರು ಪುಡಿಗಳನ್ನ ಹಾಕುವುದಿಲ್ಲ ಬದಲಿಗೆ ಬಕೇಟುಗಟ್ಟಲೇ ಸಾಂಬಾರು ಪುಡಿಗಳನ್ನ ಅಡುಗೆಗೆ ಸುರಿಯಲಾಗುತ್ತದೆ. ಪ್ರತೀ ದಿನ ಇಲ್ಲಿ ಅಡುಗೆಯ ಕೆಲಸ ಬೆಳಗ್ಗೆ 4 ಗಂಟೆಯಿಂದಲೇ ಆರಂಭ ಆಗುತ್ತದೆ. ಇಲ್ಲಿ ದಿನ ಇಂದಕ್ಕೆ ಸುಮಾರು 4ಸಾವಿರ ಲೀಟರ್ ರಸಂ ತಯಾರಿಸುತ್ತಾರೆ. ಇದು ರಾತ್ರಿವರೆಗೂ ನಿರಂತರವಾಗಿ ನಡೆಯುತ್ತಲೇ ಇರುತ್ತದೆ. ರಾತ್ರಿ 11:30ಕ್ಕೆ ಅನ್ನಪೂರ್ಣೇಶ್ವರಿ ಅಡುಗೆ ಕೋಣೆಯನ್ನು ಮುಚ್ಚಲಾಗುತ್ತದೆ. ಸುಮಾರು 50 ರಿಂದ 60 ಸಾವಿರ ಜನರಿಗೆ ಪ್ರಸಾದದ ರೂಪದಲ್ಲಿ ಊಟವನ್ನು ನೀಡಲಾಗುತ್ತದೆ.