ಕರ್ನಾಟಕ ಸರಕಾರದ ಬಸವ ಪುರಸ್ಕಾರಕ್ಕೆ ಪಾತ್ರರಾಗಿರುವ ‘ಮಹಾರಾಷ್ಟ್ರದ ಮಹಾಮಾತೆ’ ಸಿಂಧೂತಾಯಿ ಸಪ್ಕಾಳ್‌ ಒಂದು ಕಾಲದಲ್ಲಿ ಭಿಕ್ಷೆ ಬೇಡುತ್ತಿದ್ದರು. ಅವರು ಸಾವಿರಾರು ಮಕ್ಕಳಿಗೆ ಅಮ್ಮನಾಗಿದ್ದಾರೆರೈಲುಗಳಲ್ಲಿ ಸುಮಧುರ ಕಂಠದಿಂದ ಮರಾಠಿ ಗೀತೆಗಳನ್ನು ಹಾಡುತ್ತಾ ಭಿಕ್ಷೆ ಬೇಡುತ್ತಿದ್ದ ಆ 20 ವರ್ಷದ ಮಹಿಳೆ ತನಗೆ ಸಿಕ್ಕಿದ ಆಹಾರವನ್ನು ಹಸಿದವರಿಗೂ ಹಂಚುತ್ತಿದ್ದಳು.

ಟಿಕೆಟ್‌ ಇಲ್ಲದ ಕಾರಣ ರೈಲಿಂದ ಇಳಿಸಿದರೆ, ಇನ್ನೊಂದು ರೈಲು ಹತ್ತುತ್ತಿದ್ದಳು. ಕೆಲವು ಸಲ ಬದುಕಿನ ಬಗ್ಗೆ ಜುಗುಪ್ಸೆಗೊಂಡು ಆತ್ಮಹತ್ಯೆ ಮಾಡಿಕೊಳ್ಳಬೇಕು ಎಂದೂ ಅನಿಸುತ್ತಿತ್ತು. ಈ ತಾಯಿಯ ಬಗ್ಗೆ ಈ ಲೇಖನದಲ್ಲಿ ನೋಡೋಣ.

ಅದೊಂದು ರಾತ್ರಿ ತುಂಬಾ ದಣಿದಿದ್ದ ಆ ಮಹಿಳೆ ರೈಲಿನಿಂದ ಇಳಿದು ಪ್ಲಾಟ್‌ಫಾರಂ ಮೇಲೆ ಕುಳಿತಳು. ಕೈಯಲ್ಲಿ ರೊಟ್ಟಿಯ ತುಣುಕು. ಅದೇ ಹೊತ್ತಿಗೆ ಭಿಕ್ಷುಕನೊಬ್ಬನ ಧ್ವನಿ ಕೇಳಿಸಿತು. ಅನಾರೋಗ್ಯದಿಂದ ಸೊರಗಿದ್ದ ಆತನಿಗೆ ತನ್ನವರೆನ್ನುವ ಯಾರೊಬ್ಬರೂ ಇರಲಿಲ್ಲ.

ನನ್ನ ಬಾಯಿಗೆ ಎರಡು ತೊಟ್ಟು ನೀರು ಹಾಕಿ ಇಲ್ಲದಿದ್ದರೆ ಸತ್ತೇ ಹೋಗ್ತೀನಿ ದಯವಿಟ್ಟು ನೀರು ಕೊಟ್ಟು ಜೀವ ಕಾಪಾಡಿ ಎಂದು ಬೇಡುತ್ತಿದ್ದ. ಆತನ ಬಳಿಗೆ ತೆರಳಿದ ಮಹಿಳೆ ಕೇವಲ ನೀರಿಗಾಗಿ ಏಕೆ ಸಾಯುವಿರಿ ನನ್ನ ಬಳಿ ರೊಟ್ಟಿಯೂ ಇದೆ. ರೊಟ್ಟಿ ತಿಂದು ನೀರನ್ನು ಕುಡಿಯಿರಿ ಎಂದಳು.

ಭಿಕ್ಷುಕನ ಪ್ರಾಣ ಉಳಿಯಿತು ನಾನು ಕೊಟ್ಟ ಒಂದೆರಡು ಹನಿ ನೀರು ಒಬ್ಬ ವ್ಯಕ್ತಿಯ ಜೀವ ಉಳಿಸುತ್ತೆ ಅನ್ನೋದಾದರೆ, ನಾನೇಕೆ ಸಾಯಬೇಕು ಜನರನ್ನು ಉಳಿಸಲು ಅವರಿಗೆ ನೆರವಾಗಲು ಏಕೆ ಬದುಕಬಾರದು ಹೀಗೆ ಯೋಚಿಸಿದ ಆ ಮಹಿಳೆಯ ಬದುಕು ರೂಪಾಂತರಗೊಂಡಿತು. ೧೪೦೦ಕ್ಕೂ ಅಧಿಕ ಅನಾಥ ಮಕ್ಕಳ ಪಾಲಿಗೆ ಮಹಾತಾಯಿಯಾದ ಸಿಂಧುತಾಯಿ ಸಪ್ಕಾಳ್‌, ಇಂದು ತಾಯಿ ಎನ್ನುವ ಪದದ ಘನತೆಯನ್ನು ಹೆಚ್ಚಿಸಿದ್ದಾರೆ.

ಕಳೆದ ೪೨ವರ್ಷಗಳಲ್ಲಿ ಅವರ ಮಡಿಲು ಸೇರಿದ ಅನಾಥ ಮಕ್ಕಳ ಸಂಖ್ಯೆ ದೊಡ್ಡದು. ತನ್ನ ಬದುಕಿನ ದುರಂತ ಕತೆಯನ್ನು ಹೇಳಲು ಈಗಲೂ ಸುತ್ತಾಡುತ್ತಿರುವ ಅವರು ಮಾತಿನ ಕೊನೆಯಲ್ಲಿ ನನ್ನ ಮಕ್ಕಳ ಅನ್ನ ಮತ್ತು ಶಿಕ್ಷಣಕ್ಕಾಗಿ ನೆರವು ನೀಡಿ ಎಂದು ಜನರನ್ನು ಸೆರಗೊಡ್ಡಿ ಬೇಡುತ್ತಾರೆ. ಹೀಗೆ ಬೇಡುತ್ತಲೇ ತನ್ನನ್ನು ನಂಬಿದ ಮಕ್ಕಳನ್ನು ದಡ ಮುಟ್ಟಿಸಿದ್ದಾರೆ.

ಆ ಅನಾಥ ಮಕ್ಕಳು ಲಾಯರ್‌ಗಳು, ಡಾಕ್ಟರುಗಳು, ಎಂಜಿನಿಯರ್‌ಗಳಾಗಿ ಖ್ಯಾತರಾಗಿದ್ದಾರೆ. ಆಕೆಯ ಬದುಕು ಅನೇಕರಿಗೆ ಸ್ಫೂರ್ತಿ ನೀಡಿದೆ. ಸಿಂಧೂತಾಯಿ ಬರೆದ ಆತ್ಮಕತೆ, ಸಿನಿಮಾ ಆಗಿಯೂ ನಿರ್ಮಾಣಗೊಂಡಿದೆ. ರಾಷ್ಟ್ರಪತಿ ಪ್ರಣಬ್‌ ಮುಖರ್ಜಿ ಸೇರಿದಂತೆ ದೇಶದ ಗಣ್ಯರಿಂದ ಸುಮಾರು ಸಾವಿರಕ್ಕೂ ಅಧಿಕ ಪ್ರಶಸ್ತಿ ಪುರಸ್ಕಾರಗಳನ್ನು ಸ್ವೀಕರಿಸಿರುವ ಸಿಂಧೂತಾಯಿ, ಈಗಲೂ ಹಳ್ಳಿಹಳ್ಳಿಗೆ ಹೋಗುತ್ತಾರೆ. ತಮ್ಮ ಬದುಕಿನ ಕತೆ ಹೇಳಿ ಜನ ಕೊಟ್ಟದ್ದನ್ನು ತಂದು ಮಕ್ಕಳ ಕ್ಷೇಮಕ್ಕಾಗಿ ಖರ್ಚು ಮಾಡುತ್ತಾಳೆ. ಭಾಷಣದಿಂದಲೇ ರೇಷನ್‌ ಬರುತ್ತೇ, ಅನ್ನುತ್ತಾಳೆ 69 ವರ್ಷದ ಜಾಣ ಅಜ್ಜಿ.

Leave a Reply

Your email address will not be published. Required fields are marked *