ನಾವು ಸಾಮಾನ್ಯವಾಗಿ ದೇವರಿಗೆ ಮಹತ್ವ ಕೊಡುತ್ತೇವೆ ಆದರೆ ಅವರ ವಾಹನಗಳಿಗೆ ಮಹತ್ವ ಕೊಡುವುದು ಕಡಿಮೆ ಆದರೆ ಗರುಡದೇವ ಹುಟ್ಟಿದ ಕ್ಷೇತ್ರದಲ್ಲಿ ಗರುಡದೇವರು ಮುಖ್ಯವಾಗಿರುವ ದೇವಾಲಯವನ್ನು ನೋಡಬಹುದು ಹಾಗೂ ಇದೇ ದೇವಾಲಯದಲ್ಲಿರುವ ಲಕ್ಷ್ಮೀ ನರಸಿಂಹ ದೇವರ ನಿಂತ ಭಂಗಿಯ ವಿಗ್ರಹದ ಬಗ್ಗೆ ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿಯೋಣ

ಮಹಾವಿಷ್ಣುವಿನ ವಾಹನವಾದ ಗರುಡನಿಗೆ ಮಹಾವಿಷ್ಣುವಿನಷ್ಟೆ ಮಹತ್ವವನ್ನು ಕೊಡಲಾಗುತ್ತದೆ. ಗರುಡದೇವನು ಸುಬ್ರಮಣ್ಯ ದೇವರಂತೆ ಸರ್ಪದೋಷವನ್ನು ನಿವಾರಣೆ ಮಾಡುವ ದೇವರಾಗಿದ್ದಾರೆ. ಗರುಡಕಂಬವಿಲ್ಲದ ದೇವಾಲಯಗಳಿರುವುದಿಲ್ಲ ಹಾಗೆ ಗರುಡೋತ್ಸವವಿಲ್ಲದೆ ವಿಶೇಷ ಉತ್ಸವಗಳು ನಡೆಯುವುದಿಲ್ಲ. ಗರುಡ ದೇವರಿಗೆ ಮೀಸಲಾಗಿರುವ ದೇವಾಲಯವಿರುವುದು ಕಡಿಮೆ ಆದರೆ ರಾಮನಗರ ಜಿಲ್ಲೆಯ ಮಾಗಡಿ ತಾಲೂಕಿನ ಕುದುರು ಹೋಬಳಿಯ ಸುಗ್ಗನಹಳ್ಳಿ ಗ್ರಾಮದಲ್ಲಿ ಲಕ್ಷ್ಮೀ ನರಸಿಂಹ ದೇವಸ್ಥಾನವಿದೆ. ಇದು ಗರುಡದೇವರು ಹುಟ್ಟಿದ ಸ್ಥಳವಾಗಿದೆ.

ಈ ದೇವಾಲಯದಲ್ಲಿ ಗರುಡದೇವರನ್ನು, ನರಸಿಂಹ ದೇವರನ್ನು ಮುಖ್ಯ ದೇವರಾಗಿ ಪೂಜಿಸಲಾಗುತ್ತದೆ. ಈ ದೇವಾಲಯ ಅತಿ ಶಕ್ತಿಶಾಲಿ ದೇವಾಲಯವಾಗಿದೆ ಅಲ್ಲದೆ ಧಾರ್ಮಿಕ ಮಹತ್ವವನ್ನು ಹೊಂದಿದೆ. ಅನೇಕ ದೋಷಗಳ ನಿವಾರಣೆಗೆ ಈ ದೇವಾಲಯಕ್ಕೆ ಬಹಳಷ್ಟು ಜನರು ಬರುತ್ತಾರೆ. ಈ ದೇವಾಲಯದ ವಿಶೇಷವೆಂದರೆ ಇಲ್ಲಿ ದೈವಿಕ ಕಂಪನಗಳನ್ನು ಅನುಭವಿಸಬಹುದಾಗಿದೆ. ಇಲ್ಲಿ ವೇದವ್ಯಾಸರ ಪುತ್ರರಾದ ಶುಕಮುನಿಗಳು ತಪಸ್ಸನ್ನು ಮಾಡಿದ್ದಾರೆ. ಶುಕಮುನಿಗಳು ದೇಶ ಪರ್ಯಟನೆ ಮಾಡುತ್ತಾ ತನ್ನ ಶಿಷ್ಯರೊಂದಿಗೆ ಈ ಪ್ರದೇಶಕ್ಕೆ ಆಗಮಿಸಿದಾಗ ತನ್ನ ತಪಸ್ಸಿಗೆ ಇದೇ ಸರಿಯಾದ ಜಾಗವೆಂದು ಭಾವಿಸಿ ಇಲ್ಲಿಯೇ ತಮ್ಮ ಋಷ್ಯಾಶ್ರಮವನ್ನು ಸ್ಥಾಪಿಸುತ್ತಾರೆ.

ಇದರಿಂದ ಈ ಜಾಗಕ್ಕೆ ಶುಕಪುರಿ ಎಂಬ ಹೆಸರು ಕೂಡ ಇದೆ. ಶುಕಪುರ ಜನರ ಆಡುಭಾಷೆಯಲ್ಲಿ ಸುಗ್ಗನಹಳ್ಳಿ ಎಂದು ಕರೆಯಿಸಿಕೊಳ್ಳುತ್ತದೆ. ಶುಕಮುನಿಯ ತಪಸ್ಸಿಗೆ ಮೆಚ್ಚಿ ನರಸಿಂಹಸ್ವಾಮಿ ನಿಂತಿರುವ ಭಂಗಿಯಲ್ಲಿ ಶುಕಮುನಿಗೆ ದರ್ಶನ ನೀಡುತ್ತಾರೆ. ನಂತರ ಶುಕ ಮುನಿಗಳು ನರಸಿಂಹ ದೇವರ ನಿಂತಿರುವ ಭಂಗಿಯ ವಿಗ್ರಹವನ್ನು ಪ್ರತಿಷ್ಠಾಪಿಸುತ್ತಾರೆ. ಸಾಮಾನ್ಯವಾಗಿ ಲಕ್ಷ್ಮೀ ನರಸಿಂಹ ದೇವಸ್ಥಾನದಲ್ಲಿ ನರಸಿಂಹನು ಕುಳಿತಿರುವ ಭಂಗಿಯಲ್ಲಿ ದರ್ಶನ ನೀಡುತ್ತಾನೆ ಆದರೆ ಸುಗ್ಗನಹಳ್ಳಿ ಶ್ರೀ ಲಕ್ಷ್ಮೀ ನರಸಿಂಹ ದೇವರು ನಿಂತಿರುವ ಭಂಗಿಯಲ್ಲಿ ದರ್ಶನ ನೀಡಿದ್ದಾರೆ‌ ಆದ್ದರಿಂದ ಅಪರೂಪವಾಗಿದೆ.

ಈ ದೇವಾಲಯದಲ್ಲಿ ಗರುಡ ದೇವರ ಸನ್ನಿಧಿಯು ಇದೆ, ಗರುಡ ದೇವನ ಕಂಚಿನ ಪ್ರತಿಮೆಯನ್ನು ನೋಡಬಹುದಾಗಿದೆ. ಇಲ್ಲಿ ಪ್ರತಿ ನಿತ್ಯವೂ ಪೂಜೆ ಮಾಡಲಾಗುತ್ತದೆ. ಇಲ್ಲಿರುವ ಗರುಡ ದೇವನನ್ನು ಆರಾಧಿಸಿದರೆ ಚರ್ಮರೋಗಗಳು ಗುಣವಾಗುತ್ತವೆ ಎಂಬ ನಂಬಿಕೆ ಇದೆ ಅಲ್ಲದೆ ಮಕ್ಕಳಿಲ್ಲದವರು ಗರುಡ ದೇವರಿಗೆ ಹರಕೆ ಹೇಳಿಕೊಂಡರೆ ಮಕ್ಕಳಾಗುತ್ತದೆ. ಈ ದೇವಾಲಯದ ಹಿತ್ತಲಿನಲ್ಲಿ ಬದರಿ ವೃಕ್ಷವಿದೆ ಇದು ಯಾವಾಗಲೂ ಹಸಿರಾಗಿರುತ್ತದೆ, ಇದೇ ವೃಕ್ಷದ ಕೆಳಗೆ ಶುಕಮುನಿಗಳು ತಪಸ್ಸು ಮಾಡಿದ್ದರು ಎಂದು ಹೇಳಲಾಗುತ್ತದೆ. ವೃಕ್ಷಕ್ಕೆ ವಿಶೇಷ ಪೂಜೆಗಳು ನಡೆಯುತ್ತದೆ. ಈ ವೃಕ್ಷದ ಸ್ವಲ್ಪ ದೂರದಲ್ಲಿ ಶುಕಮುನಿಗಳ ಬೃಂದಾವನವಿದೆ ಇಲ್ಲಿ ಅವರು ಸಿದ್ಧಿಯನ್ನು ಪಡೆದಿದ್ದರು. ಈ ಕ್ಷೇತ್ರದಲ್ಲಿ ಕಠಾರಿ ಶ್ರೀ ವೀರಾಂಜನೆಯ ಎಂದು ಕರೆಸಿಕೊಳ್ಳುವ ಆಂಜನೇಯ ಸ್ವಾಮಿ ಸನ್ನಿಧಿಯು ಇದೆ.

ಅಪರೂಪವಾದ ಪಶ್ಚಿಮಾಭಿಮುಖವಾಗಿ ನೋಡುತ್ತಿರುವ ಆಂಜನೇಯನ ವಿಗ್ರಹವನ್ನು ನೋಡಬಹುದಾಗಿದೆ. ಪ್ರತಿವರ್ಷ ಮಾರ್ಚ್ ತಿಂಗಳಿನಲ್ಲಿ ವಿಜೃಂಭಣೆಯಿಂದ ರಥೋತ್ಸವ ನಡೆಯುತ್ತದೆ. ರಥೋತ್ಸವದಂದು ಗರುಡ ಪಕ್ಷಿಯು ರಥವನ್ನು ಪ್ರದಕ್ಷಿಣೆ ಹಾಕಿದ ನಂತರವೇ ರಥ ಮುಂದೆ ಚಲಿಸುತ್ತದೆ. ಈ ದೇವಾಲಯ ಮುಜರಾಯಿ ಇಲಾಖೆಯಿಂದ ನಿರ್ವಹಿಸಲ್ಪಡುತ್ತಿದೆ. ಈ ದೇವಾಲಯಕ್ಕಿಂತ2 ಕಿಲೋ ಮೀಟರ್ ದೂರದಲ್ಲಿ ಕಂಬದ ನರಸಿಂಹ ಸ್ವಾಮಿ ಎಂಬ ಮತ್ತೊಂದು ದೇವಾಲಯವಿದೆ. ಇಲ್ಲಿ ಕಂಬದ ರೂಪದಲ್ಲಿ ನರಸಿಂಹ ದೇವರು ಉದ್ಭವಿಸಿದ್ದಾನೆ‌. ಕಂಬದ ಮೇಲೆ ಶಂಖ, ಚಕ್ರ ಹಾಗೂ ಆತ್ಮಲಿಂಗ ಉದ್ಭವಿಸಿದ್ದು ಅಪರೂಪವಾದ ದೃಶ್ಯವಾಗಿದೆ. ಸುಗ್ಗನಹಳ್ಳಿ ಬೆಂಗಳೂರಿನಿಂದ 70 ಕಿ.ಮೀ, ತುಮಕೂರಿನಿಂದ 30 ಕಿ.ಮೀ ದೂರದಲ್ಲಿದೆ. ಈ ಕ್ಷೇತ್ರಕ್ಕೆ ಒಮ್ಮೆಯಾದರೂ ಭೇಟಿ ಮಾಡಬೇಕು.

Leave a Reply

Your email address will not be published. Required fields are marked *