ಪಡ್ಡು ಎಂಬ ತಿಂಡಿಯ ಬಗ್ಗೆ ಯಾರಿಗೆ ತಿಳಿದಿಲ್ಲ. ಇದನ್ನು ಹೆಚ್ಚಾಗಿ ಎಲ್ಲರೂ ಇಷ್ಟಪಡುತ್ತಾರೆ. ಇದನ್ನು ಹೋಟೆಲ್ ಗಳಲ್ಲಿ ಮಾಡುವುದು ಸ್ವಲ್ಪ ಕಡಿಮೆ. ಹೆಚ್ಚಾಗಿ ಮನೆಯಲ್ಲಿ ಮಾಡಿ ತಿನ್ನುವವರೇ ಜಾಸ್ತಿ. ಪಡ್ಡಿನಲ್ಲಿ ಇನ್ನೊಂದು ವಿಧವಾದ ಮಸಾಲಾ ಪಡ್ಡಿನ ಬಗ್ಗೆ ನಾವು ಇಲ್ಲಿ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.
ಮಸಾಲಾ ಪಡ್ಡು ಮಾಡಲು ಸುಮಾರು ಸಾಮಗ್ರಿಗಳು ಬೇಕು. ಅವುಗಳೆಂದರೆ ಅಕ್ಕಿ, ಉದ್ದಿನಬೇಳೆ, ಕಡಲೆಬೇಳೆ, ಮೆಂತೆ, ಅವಲಕ್ಕಿ. ಮೊದಲು ಒಂದೂವರೆ ಕಪ್ ಅಕ್ಕಿ, ಅರ್ಧ ಕಪ್ ಉದ್ದಿನಬೇಳೆ, ಒಂದು ಚಮಚ ಕಡಲೆಬೇಳೆ, ಒಂದು ಚಮಚ ಮೆಂತೆ ಇವುಗಳನ್ನು ಒಟ್ಟಿಗೆ ಒಂದು ಪಾತ್ರೆಯಲ್ಲಿ ಹಾಕಿ ಚೆನ್ನಾಗಿ ತೊಳೆದು 5 ರಿಂದ 6ತಾಸು ನೆನೆಸಿಡಬೇಕು. ರೇಷನ್ ಅಕ್ಕಿಯನ್ನು ತೆಗೆದುಕೊಂಡರೆ ಬಹಳ ಒಳ್ಳೆಯದು. ಪಡ್ಡು ತುಂಬಾ ಚೆನ್ನಾಗಿ ಆಗುತ್ತದೆ. 5 ತಾಸು ಆದ ನಂತರ ಎಲ್ಲವನ್ನು ಮಿಕ್ಸಿ ಜಾರಿಗೆ ಹಾಕಿ ಬೀಸಬೇಕು. ಅದರ ಜೊತೆಗೆ ಕಾಲು ಕಪ್ ಅವಲಕ್ಕಿಯನ್ನು ಕೂಡ ಹಾಕಬೇಕು.
ಹಸಿಮೆಣಸು, ಈರುಳ್ಳಿ ಮತ್ತು ಕರಿಬೇವನ್ನು ಸಣ್ಣದಾಗಿ ಹೆಚ್ಚಿಕೊಂಡು ನಂತರ ಒಂದು ಪಾತ್ರೆಗೆ ಎಣ್ಣೆ ಹಾಕಿ ಸ್ವಲ್ಪ ಹುರಿದು ಅದು ತಣ್ಣಗಾದ ಮೇಲೆ ಬೀಸಿದ ಹಿಟ್ಟಿಗೆ ಹಾಕಬೇಕು. ನಂತರ ಅದಕ್ಕೆ ಉಪ್ಪು ಹಾಕಬೇಕು. ಈಗ ಪಡ್ಡಿನ ಬಂಡಿಗೆ ಎಣ್ಣೆ ಹಾಕಿ ಹಿಟ್ಟನ್ನು ಹಾಕಬೇಕು. ಅದು ಒಂದು ಪಕ್ಕ ಬೆಂದ ಮೇಲೆ ತಿರುಗಿಸಿ ಹಾಕಬೇಕು. ಹೀಗೆ ಮಾಡಿದರೆ ರುಚಿ ರುಚಿಯಾದ ಪಡ್ಡು ತಿನ್ನಲು ರೆಡಿಯಾಗುತ್ತದೆ. ಈಗ ಅದಕ್ಕೆ ಹಚ್ಚಿಕೊಳ್ಳಲು ರುಚಿಯಾದ ಶೇಂಗಾ ಚಟ್ನಿಯನ್ನು ಮಾಡುವ ಬಗ್ಗೆ ತಿಳಿಯೋಣ.
ಒಂದುವರೆ ಕಪ್ ನಷ್ಟು ಶೇಂಗಾವನ್ನು ಚೆನ್ನಾಗಿ ಹುರಿದುಕೊಂಡು ಸಿಪ್ಪೆಯನ್ನು ತೆಗೆದುಕೊಳ್ಳಬೇಕು. ನಂತರ ಒಂದು ಪಾತ್ರೆಗೆ ಎಣ್ಣೆ ಹಾಕಿ ಅದಕ್ಕೆ ಹಸಿಮೆಣಸು, ಬೆಳ್ಳುಳ್ಳಿ ಮತ್ತು ಕರಿಬೇವನ್ನು ಸ್ವಲ್ಪ ಹುರಿದುಕೊಂಡು ಮಿಕ್ಸಿ ಜಾರಿಗೆ ಹಾಕಿ ಅದಕ್ಕೆ ಹುರಿದ ಶೇಂಗಾ ಮತ್ತು ಕುತ್ತುಂಬರಿಸೊಪ್ಪು ಮತ್ತು ಹುಣಸೇಹಣ್ಣು ಹಾಕಬೇಕು. ಅದಕ್ಕೆ ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಚೆನ್ನಾಗಿ ಬೀಸಬೇಕು. ಅದಕ್ಕೆ ಎಣ್ಣೆ, ಉದ್ದಿನಬೇಳೆ, ಒಣಮೆಣಸು, ಕಹಿಬೇವು ಹಾಕಿ ಒಂದು ಒಗ್ಗರಣೆಯನ್ನು ಕೊಡಬೇಕು. ಇದು ಪಡ್ಡಿಗೆ ತುಂಬಾ ರುಚಿಕರವಾಗಿರುತ್ತದೆ.