ಅಫಜಲ್ಪುರ್ ದಲ್ಲಿ ಚಿಕ್ಕ ವಯಸ್ಸಿನಲ್ಲಿ ಪಿ.ಎಸ್.ಐ ಆದ ಹಳ್ಳಿ ಪ್ರತಿಭೆಯ ಕಥೆಯನ್ನು ಈ ಲೇಖನದ ಮೂಲಕ ತಿಳಿಯೋಣ.
ಅಫಜಲ್ಪುರ ತಾಲೂಕಿನ ಕುಗ್ರಾಮ ಭೋಸ್ಗಾದಲ್ಲಿ 1996 ರಲ್ಲಿ ಶಿವಣ್ಣ ಹಾಗೂ ಕಮಲಾಬಾಯಿ ದೇಗಿನಾಳ ಅವರ ಪುತ್ರಿಯಾಗಿ ಜನಿಸಿದ ಲಕ್ಷ್ಮಿ 2 ವರ್ಷದವಳಿದ್ದಾಗ ತಂದೆಯನ್ನು ಕಳೆದುಕೊಳ್ಳುತ್ತಾಳೆ. ನಂತರ ಸೋದರ ಮಾವ ಲಕ್ಷ್ಮಿಯನ್ನು ಅವರ ಜೊತೆ ವಿಜಯಪುರಕ್ಕೆ ಕರೆದುಕೊಂಡು ಹೋಗಿ ಬೆಳೆಸಿ ವಿದ್ಯಾಭ್ಯಾಸ ಕೊಡಿಸುತ್ತಾರೆ. ಒಂದನೇ ತರಗತಿ ಹಾಗೂ ಎರಡನೇ ತರಗತಿ ವಿಜಯಪುರದ ಸತ್ಯ ಸಾಯಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ, 3-7 ನೇ ತರಗತಿ ಆದರ್ಶ ವಿದ್ಯಾ ಮಂದಿರ ವಿಜಯಪುರ. 8 ರಿಂದ 10 ನೇ ತರಗತಿ ಹಾಗೂ ಪ್ರಥಮ ಮತ್ತು ದ್ವಿತೀಯ ಪಿಯುಸಿಯನ್ನು ಬಿ.ಎಲ್.ಡಿ ಕಾಲೇಜಿನಲ್ಲಿ. ಬ್ಯಾಚುಲರ್ ಆಫ್ ಫಾರ್ಮಸಿಯನ್ನು ವಿಜಯಪುರದ ಬಿ.ಎಲ್.ಡಿ ಫಾರ್ಮಸಿ ಕಾಲೇಜಿನಲ್ಲಿ ಮುಗಿಸಿದ್ದಾರೆ.
ಪೊಲೀಸ್ ಇಲಾಖೆಗೆ ಸೇರಿದರೆ ಸಮಾಜದಲ್ಲಿ ನಾಲ್ಕು ಜನರಿಗೆ ಸಹಾಯ ಮಾಡಬಹುದು ಎಂಬ ಉದ್ದೇಶದಿಂದ ಪಿ.ಎಸ್.ಐ ಪರೀಕ್ಷೆಗೆ ಸಿದ್ಧತೆ ನಡೆಸುತ್ತಾಳೆ. ಬೆಂಗಳೂರಿನಲ್ಲಿ ಕೋಚಿಂಗ್ ಪಡೆದುಕೊಂಡು ಮೊದಲ ಬಾರಿಗೆ ಪರೀಕ್ಷೆ ಬರೆದಾಗ ಯಶಸ್ಸು ಸಿಗಲಿಲ್ಲ.
ಅಸಾಧ್ಯವಾದುದು ಯಾವುದು ಇಲ್ಲ ಸಾಧಿಸುವ ಛಲ ಬೇಕು ಎನ್ನುವ ಮಾತಿನಂತೆ ಎರಡನೇ ಬಾರಿ ಬರೆದು 28ನೇ ಶ್ರೇಣಿಯಲ್ಲಿ ಪಿ.ಎಸ್.ಐ ಹುದ್ದೆಗೆ ಆಯ್ಕೆಯಾಗುತ್ತಾಳೆ. ಲಕ್ಷ್ಮಿಗೆ ಒಬ್ಬಳು ತಂಗಿಯಿದ್ದು ಅವಳ ವಿಧ್ಯಾಭ್ಯಾಸದ ಜವಾಬ್ದಾರಿ ಇದೆ. ಭವಿಷ್ಯದಲ್ಲಿ ಕೆ.ಎ.ಎಸ್ ಪರೀಕ್ಷೆ ಬರೆದು ಸಹಾಯಕ ಆಯುಕ್ತ (ಎ.ಸಿ) ಅಥವಾ ಡಿವೈಎಸ್ ಪಿ ಆಗುವ ಕನಸನ್ನು ಹೊಂದಿದ್ದು ಬಡವರಿಗೆ, ಸಾರ್ವಜನಿಕರಿಗೆ ತನ್ನ ವ್ಯಾಪ್ತಿಯಲ್ಲಿ ಸಹಾಯ ಮಾಡುತ್ತೇನೆ ಎಂದು ಲಕ್ಷ್ಮಿ ದೇಗಿನಾಳ ಹೇಳುತ್ತಾರೆ. ಲಕ್ಷ್ಮಿ ಅವರು ಎಲ್ಲ ಹೆಣ್ಣುಮಕ್ಕಳಿಗೆ ಮಾದರಿಯಾಗಿದ್ದಾರೆ.