ನಾಗಾಲೋಟದಲ್ಲಿ ಮೇಲೇರುತ್ತಿರುವ ಪೆಟ್ರೋಲ್‌ ಮತ್ತು ಡೀಸೆಲ್‌ ಬೆಲೆಗಳು ತಕ್ಷಣಕ್ಕೆ ನಿಲ್ಲುವಂತೆ ಕಾಣುತ್ತಿಲ್ಲ. ಕೇವಲ ಒಂದೇ ವಾರದಲ್ಲಿ ನಾಲ್ಕು ಬಾರಿ ತೈಲ ದರ ಏರಿಕೆಯಾಗಿದ್ದು, ಪೆಟ್ರೋಲ್‌ ಮತ್ತು ಡೀಸೆಲ್‌ ಬೆಲೆಗಳು ಸಾರ್ವಕಾಲಿಕ ದಾಖಲೆ ಮಟ್ಟಕ್ಕೆ ಏರಿಕೆಯಾಗಿವೆ. ದೇಶದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಗಗನಮುಖಿಯಾಗಿ ಸಾಗುತ್ತಲೇ ಇದೆ. ಈ ಹಿಂದಿನ ಎಲ್ಲಾ ದಾಖಲೆಗಳನ್ನು ಮುರಿಯುತ್ತಾ, ಇನ್ನಷ್ಟು ದುಬಾರಿಯಾಗುವ ಸೂಚನೆಯೂ ದೊರೆತಿದೆ. ಮಧ್ಯಪ್ರದೇಶದ ಭೋಪಾಲದಲ್ಲಿ ಶನಿವಾರ ಪೆಟ್ರೋಲ್ ಬೆಲೆ ಲೀಟರಿಗೆ ನೂರು ರೂಪಾಯಿ ಮುಟ್ಟಿದೆ. ಈ ಸಂದರ್ಭದಲ್ಲಿ ಪೆಟ್ರೋಲ್ ಬೆಲೆ ಏರಿಕೆಗೆ ಸಂಬಂಧಿಸಿ ಯುವಕನೊಬ್ಬನ ಫೋಟೋ ಸಾಕಷ್ಟು ವೈರಲ್ ಆಗಿದ್ದು ಇದರ ಕುರಿತಾಗಿ ಹೆಚ್ಚಿನ ಮಾಹಿತಿಯನ್ನು ನಾವು ಈ ಲೇಖನದ ಮೂಲಕ ತಿಳಿದುಕೊಳ್ಳೋಣ.

ಕೊರೊನಾ ಸೋಂಕಿನ ನಡುವೆ ಜನ ಸಾಮಾನ್ಯರಿಗೆ ಇನ್ನಷ್ಟು ಹೊರೆ ತಂದಿರುವ ಇಂಧನ ಬೆಲೆ ಏರಿಕೆಗೆ ಕೇಂದ್ರ ಸರ್ಕಾರದ ವಿರುದ್ಧ ದೇಶದ ಹಲವೆಡೆ ಪ್ರತಿಭಟನೆಗಳು ನಡೆಯುತ್ತಿವೆ. ಹಾಗೆಯೇ ಮಧ್ಯ ಪ್ರದೇಶದ ಭೋಪಾಲ್‌ನಲ್ಲಿಯೂ ವ್ಯಕ್ತಿಯೊಬ್ಬರು ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ವಿರುದ್ಧ ಭಿನ್ನ ರೀತಿಯಲ್ಲಿ ಪ್ರತಿಭಟನೆ ನಡೆಸಿದ್ದಾರೆ. ಅವರ ಈ ಪ್ರತಿಭಟನಾ ವೈಖರಿ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಭೋಪಾಲದಲ್ಲಿ ಪೆಟ್ರೋಲ್ ಬಂಕ್ ಎದುರು ವ್ಯಕ್ತಿಯೊಬ್ಬರು ಕ್ರಿಕೆಟ್ ಬ್ಯಾಟ್ ಹಾಗೂ ಹೆಲ್ಮೆಟ್ ಎತ್ತಿಹಿಡಿದು ಪೋಸ್ ಕೊಟ್ಟಿದ್ದಾರೆ. ಇದು ಇಂಧನ ಬೆಲೆ ಕೊನೆಗೂ ಶತಕ ಬಾರಿಸಿತು ಎಂಬುದನ್ನು ಬಿಂಬಿಸುತ್ತಿದ್ದು ಭಿನ್ನ ರೀತಿ ಪ್ರತಿಭಟನೆ ನಡೆಸಿದ್ದಾರೆ. ಬ್ಯಾಟ್ ಹಾಗೂ ಹೆಲ್ಮೆಟ್ ಎತ್ತಿ ಹಿಡಿದಿರುವುದು ದೇಶದಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಏರಿಕೆ ಗಗನಮುಖಿ ಆಗುತ್ತಿರುವುದನ್ನು ಪ್ರತಿನಿಧಿಸಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರೊಬ್ಬರು ಟ್ವೀಟ್ ಮಾಡಿದ್ದಾರೆ.

ವ್ಯಾಟ್‌ನಿಂದಾಗಿ ರಾಜ್ಯದಿಂದ ರಾಜ್ಯಕ್ಕೆ ಪೆಟ್ರೋಲ್‌ ಮತ್ತು ಡೀಸೆಲ್‌ ದರಗಳು ಬದಲಾಗುತ್ತವೆ. ಆದರೆ ಸತತ ಏರಿಕೆಯಿಂದಾಗಿ ಹೆಚ್ಚು ಕಡಿಮೆ ಎಲ್ಲಾ ರಾಜ್ಯಗಳಲ್ಲೂ ಸಾರ್ವಕಾಲಿಕ ಗರಿಷ್ಠ ಮಟ್ಟ ತಲುಪಿದೆ. ಈ ಹಿನ್ನೆಲೆಯಲ್ಲಿ ಪೆಟ್ರೋಲ್‌, ಡೀಸೆಲ್‌ ಮೇಲಿನ ಸುಂಕ ಇಳಿಸಬೇಕು ಎಂಬ ಕೂಗು ಬಲವಾಗುತ್ತಿದೆ. ಆದರೆ ಸರಕಾರ ಮಾತ್ರ ಇದನ್ನು ಕಿವಿಗೆ ಹಾಕಿಕೊಳ್ಳುತ್ತಿಲ್ಲ. ದೆಹಲಿಯಲ್ಲಿ ಲೀಟರ್ ಪೆಟ್ರೋಲಿಗೆ 89.29 ರೂ ಬೆಲೆ ಇದ್ದರೆ, ಮುಂಬೈನಲ್ಲಿ ಲೀಟರ್ ಪೆಟ್ರೋಲ್ ಗೆ 95.75 ರೂ ನೀಡಬೇಕಿದೆ. ದೇಶದ ಇನ್ನೆಲ್ಲಾ ರಾಜ್ಯಗಳಿಗಿಂತ ಮಧ್ಯಪ್ರದೇಶದಲ್ಲಿ ಹೆಚ್ಚಿನ ಇಂಧನ ತೆರಿಗೆಯನ್ನು ವಿಧಿಸಲಾಗುತ್ತಿದೆ. ಹೀಗಾಗಿ ಮಧ್ಯಪ್ರದೇಶದಲ್ಲಿ ದೇಶದ ಎಲ್ಲೆಡೆಗಿಂತ ಹೆಚ್ಚಿಗೆ ಇಂಧನ ಬೆಲೆ ವಿಧಿಸಲಾಗಿದೆ.

ಬೆಲೆ ಏರಿಕೆ ವಿರುದ್ಧ ಭಿನ್ನ ಪ್ರತಿಭಟನೆಯ ಈ ಫೋಟೊ ಇದೀಗ ವೈರಲ್ ಆಗಿದ್ದು, ಕೇಂದ್ರ ಸರ್ಕಾರದ ಬೆಲೆ ಏರಿಕೆಗೆ ನೆಟಿಜನ್ ಗಳು ವಿರೋಧ ವ್ಯಕ್ತಪಡಿಸಿದ್ದಾರೆ. ಈ ಫೋಟೊವನ್ನು ಹಲವರು ಹಂಚಿಕೊಂಡಿದ್ದಾರೆ. “ಸಾಕಷ್ಟು ಪರಿಶ್ರಮ ಹಾಗೂ ಹೋರಾಟದ ನಂತರ ಕೊನೆಗೂ ಸಾಧ್ಯವಾಗಿದೆ” ಎಂದು ಅಡಿಬರಹದೊಂದಿಗೆ ಕೇಂದ್ರ ಸರ್ಕಾರದ ಕಾರ್ಯವೈಖರಿ ಬಗ್ಗೆಯೂ ವ್ಯಂಗ್ಯ ಮಾಡಿದ್ದಾರೆ.2021ರಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ 19 ಬಾರಿ ಏರಿಕೆಯಾಗಿದೆ. ಇದುವರೆಗೂ ಪೆಟ್ರೋಲ್ ಗೆ 5.28 ರೂ ಏರಿಕೆಯಾದ್ದರೆ, ಡೀಸೆಲ್‌ಗೆ 5.48 ರೂ ಆಗಿದೆ. ಕೊನೆಯ ಎರಡು ಏರಿಕೆಗಳು ಇಂಧನ ಬೆಲೆಯನ್ನು ದಾಖಲೆ ಮಟ್ಟವನ್ನು ತಲುಪಿಸಿವೆ. ಈ ಹಿಂದೆ 2018ರ ಅಕ್ಟೋಬರ್‌ 4 ರಂದು ಪೆಟ್ರೋಲ್‌ ಮತ್ತು ಡೀಸೆಲ್‌ ಬೆಲೆಗಳು ಗರಿಷ್ಠ ಮಟ್ಟ ತಲುಪಿದ್ದವು. ಇದೀಗ ಈ ದಾಖಲೆಯನ್ನೂ ಮೀರಿ ದರ ಏರಿಕೆಯಾಗಿದೆ ಮುಂದಿನ ದಿನಗಳಲ್ಲಿ ಇನ್ನಷ್ಟು ಬೆಲೆ ಏರಿಕೆಯಾಗಲಿವೆ ಎಂದು ತೈಲ ಉತ್ಪಾದನಾ ತಜ್ಞರು ಮಾಹಿತಿ ನೀಡಿದ್ದಾರೆ.

Leave a Reply

Your email address will not be published. Required fields are marked *