ಪ್ರತಿಯೊಂದು ಗ್ರಾಮ ಪಂಚಾಯತ್ ಗೆ ಒಬ್ಬ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಇರುತ್ತಾರೆ. ಸರ್ಕಾರದ ಯೋಜನೆಗಳು ಗ್ರಾಮದ ಎಲ್ಲಾ ಜನರಿಗೂ ತಲುಪಬೇಕಾದರೆ ಗ್ರಾಮಪಂಚಾಯತಿಯ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಅವರ ಪಾತ್ರ ಮುಖ್ಯವಾಗಿರುತ್ತದೆ. ಪಂಚಾಯತ್ ಅಭಿವೃದ್ಧಿ ಅಧಿಕಾರಿ ಅವರ ಕರ್ತವ್ಯಗಳನ್ನು ಈ ಲೇಖನದ ಮೂಲಕ ತಿಳಿಯೋಣ.

ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಅವರು ಸರ್ಕಾರದಿಂದ ನೇಮಕಗೊಂಡ ಪೂರ್ಣಾವಧಿ ಸರ್ಕಾರಿ ನೌಕರರಾಗಿರುತ್ತಾರೆ. ಇವರು ಗ್ರಾಮ ಪಂಚಾಯತ್ ಮಟ್ಟದ ಅಧಿಕಾರಿಗಳಾಗಿರುತ್ತಾರೆ. ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಬರುವ ಕರ್ತವ್ಯಗಳನ್ನು ಮತ್ತು ಸರ್ಕಾರದ ಯೋಜನೆಗಳನ್ನು ನಿರ್ವಹಿಸಲು ಪಿಡಿಓ ಅವರು ಬದ್ಧರಾಗಿರುತ್ತಾರೆ. ಗ್ರಾಮ ಪಂಚಾಯತ್ ಗೆ ಸಂಬಂಧಿಸಿದ ಹಣದ ವ್ಯವಹಾರವನ್ನು ಪಿಡಿಓ ಅವರು ನಿರ್ವಹಿಸಬೇಕು. ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ನಿಗದಿತ ಸಮಯದಲ್ಲಿ ಸಾಮಾನ್ಯ ಸಭೆ, ವಿಶೇಷ ಸಭೆಗಳನ್ನು ನಡೆಸುವುದು ಮತ್ತು ನಿರ್ಣಯಗಳನ್ನು ತೆಗೆದುಕೊಳ್ಳುವುದು ಪಿಡಿಓ ಅವರ ಕರ್ತವ್ಯವಾಗಿದೆ. ಗ್ರಾಮ ಪಂಚಾಯತ್ ಗೆ ಸಂಬಂಧಿಸಿದ ಲೆಕ್ಕಗಳ ಮಾಹಿತಿ ಸಂಗ್ರಹಿಸುವುದು ಮತ್ತು ಬಜೆಟ್ ಮಂಡನೆ ಮಾಡುವ ಜವಾಬ್ದಾರಿ ಪಿಡಿಓ ಅವರಿಗೆ ಸೇರಿದೆ. ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಬರುವ ಹಳ್ಳಿಗಳಿಗೆ ಎಷ್ಟು ಟ್ಯಾಕ್ಸ್ ಬಂದಿದೆ, ಎಷ್ಟು ವಸೂಲಾಗಿದೆ ಎಂಬಿತ್ಯಾದಿ ತೆರಿಗೆ ವಸೂಲಾತಿ ಮೇಲ್ವಿಚಾರಣೆಯ ಜವಾಬ್ದಾರಿಯನ್ನು ಪಿಡಿಓ ಅವರು ನೋಡಿಕೊಳ್ಳಬೇಕು. ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರಗಳ ಯೋಜನೆಗಳನ್ನು ಪಿಡಿಓ ಅವರು ತನ್ನ ವ್ಯಾಪ್ತಿಗೆ ಬರುವ ಗ್ರಾಮಪಂಚಾಯತ್ ನಲ್ಲಿ ಸಂಪೂರ್ಣವಾಗಿ, ಸಕಾಲಿಕವಾಗಿ ಅನುಷ್ಠಾನಗೊಳಿಸಬೇಕು. ತಾಲೂಕು ಪಂಚಾಯತ್ ಮತ್ತು ಜಿಲ್ಲಾ ಪಂಚಾಯತ್ ಗೆ ಗ್ರಾಮ ಪಂಚಾಯತಿಯ ಪ್ರಗತಿಯ ಕುರಿತು ಮಾಸಿಕ ವರದಿಯನ್ನು ಪಿಡಿಓ ಅವರು ಸಲ್ಲಿಸಬೇಕು. ಪಿಡಿಓ ಅವರು ತನ್ನ ಗ್ರಾಮ ಪಂಚಾಯತ್ ವ್ಯಾಪ್ತಿಗೆ ಬರುವ ಗ್ರಾಮಗಳಲ್ಲಿ ಉದ್ಯೋಗ ಖಾತರಿ ಯೋಜನೆಯನ್ನು ಅನುಷ್ಠಾನಗೊಳಿಸುವುದು, ಅದರ ಮೇಲ್ವಿಚಾರಣೆ ಮಾಡುವುದು, ಎಂಐಎಸ್ ರಿಪೋರ್ಟ್ ಸಿದ್ದಪಡಿಸುವುದು, ಸದರಿ ಯೋಜನೆಯಡಿ ಸರ್ಕಾರದ ನಿರ್ದೇಶನಗಳನ್ನು ಪಾಲಿಸಬೇಕು. ಗ್ರಾಮ ಪಂಚಾಯತ್ ಬಗ್ಗೆ ಮಾಹಿತಿ ಒದಗಿಸುವ ಮತ್ತು ಆಡಳಿತಕ್ಕೆ ಸಂಬಂಧಿಸಿದ ವೆಬ್ಸೈಟ್ ಪಂಚತಂತ್ರ ತಂತ್ರಾಂಶ, ಈ ಪಂಚಾಯತ್, ಈ ಸ್ವತ್ತು ಉದ್ಯೋಗ ಖಾತ್ರಿ ವೆಬ್ಸೈಟ್ ಮೊದಲಾದ ಕಂಪ್ಯೂಟರ್ ಆಧಾರಿತ ಕಾರ್ಯಕ್ರಮಗಳ ನಿರ್ವಹಣೆಯನ್ನು ಪಿಡಿಓ ಅವರು ಮಾಡಬೇಕು.

ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಬರುವ ವಿವಿಧ ಇಲಾಖೆಗಳ ಕಾರ್ಯಕ್ರಮಗಳ ಅನುಷ್ಠಾನದ ಬಗ್ಗೆ ಮಾಹಿತಿ ಕ್ರೋಢಿಕರಣ ಮತ್ತು ಬೇರೆ ಇಲಾಖೆಗಳೊಂದಿಗೆ ಸಮನ್ವಯ ರೀತಿಯಲ್ಲಿ ನಡೆದುಕೊಳ್ಳುವುದು ಪಿಡಿಓ ಅವರ ಕರ್ತವ್ಯವಾಗಿರುತ್ತದೆ. ಮಾಹಿತಿ ಹಕ್ಕು ಕಾಯಿದೆ 2005ರ ಅಧಿನಿಯಮದಡಿ ಮೇಲ್ಮನವಿ ಪ್ರಾಧಿಕಾರವಾಗಿ ಕರ್ತವ್ಯ ನಿರ್ವಹಿಸಬೇಕಾಗುತ್ತದೆ ಅಂದರೆ ಮಾಹಿತಿ ಕೇಳಿದಾಗ ಸಂಪೂರ್ಣವಾದ, ಸರಿಯಾದ ಮಾಹಿತಿಯನ್ನು ಒದಗಿಸುವ ಕರ್ತವ್ಯವೂ ಪಿಡಿಓ ಅವರದಾಗಿರುತ್ತದೆ. ಸರ್ಕಾರದಿಂದ ಜನರಿಗೆ ದೊರೆಯುವ ಪ್ರಮುಖ ಸೇವೆಯಾದ ಸಕಾಲ ಸೇವೆಗಳ ನಿರ್ವಹಣೆಯ ಜವಾಬ್ದಾರಿಯೂ ಪಿಡಿಓ ಅವರದಾಗಿರುತ್ತದೆ. ಕಾಲಕಾಲಕ್ಕೆ ಸರ್ಕಾರದಿಂದ ಜಾರಿಯಾಗುವ ಗ್ರಾಮೀಣಾಭಿವೃದ್ಧಿ ಯೋಜನೆಗಳನ್ನು ಕಾರ್ಯರೂಪಕ್ಕೆ ತರುವ ಜವಾಬ್ದಾರಿಯು‌ ಪಿಡಿಓ ಅವರದಾಗಿರುತ್ತದೆ. ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಬರುವ ಹಳ್ಳಿಗಳ ಬೀದಿ ದೀಪ, ಕುಡಿಯುವ ನೀರು, ವಿದ್ಯುಚ್ಛಕ್ತಿ ಬಿಲ್ ಗಳ ಲೆಕ್ಕವನ್ನು ಪಿಡಿಓ ಅವರು ಪರಿಶೀಲಿಸಬೇಕಾಗುತ್ತದೆ ಮತ್ತು ಅದನ್ನು ನಿರ್ವಹಿಸಬೇಕು. ಮ್ಯುಟೇಷನ್ ರಿಜಿಸ್ಟರ್, ಜಾಹೀರಾತು ಫಲಕಗಳ ತೆರಿಗೆ ವಸೂಲಾತಿ ರಿಜಿಸ್ಟರ್, ಲೈಸನ್ಸ್ ನೀಡುವ ರಿಜಿಸ್ಟರ್, ಆದಾಯ ವಸೂಲಿ ದಾಖಲೆಗಳ ನಿರ್ವಹಣೆಯನ್ನು ಪಿಡಿಓ ಅವರು ಮಾಡಬೇಕು. ಗ್ರಾಮ ಪಂಚಾಯತಿಗೆ ಆದಾಯ ತರುವ ಆಸ್ತಿಪಾಸ್ತಿ ರಿಜಿಸ್ಟರ್ ಹಾಗೂ ಕಂದಾಯ ವಸೂಲಿ ದಾಖಲೆಗಳ ನಿರ್ವಹಣೆಯನ್ನು ಪಿಡಿಓ ಅವರು ಮಾಡಬೇಕಾಗುತ್ತದೆ. ಗ್ರಾಮ ಪಂಚಾಯತ್ ಗೆ ಸಂಬಂಧಿಸಿದ ರಿಜಿಸ್ಟರ್ ಪುಸ್ತಕಗಳ ನಿರ್ವಹಣೆಯನ್ನು ಪಿಡಿಓ ಅವರು ಮಾಡಬೇಕಾಗುತ್ತದೆ. ಪಿಡಿಓ ಅವರು ಗ್ರಾಮ ಪಂಚಾಯತ್ ಜಮಾಬಂದಿ ಕಾರ್ಯಕ್ರಮವನ್ನು ನಡೆಸಿಕೊಡಬೇಕು. ಗ್ರಾಮ ಪಂಚಾಯತ್ ನೌಕರರ ಸೇವಾ ವಿಷಯಗಳನ್ನು ಪಿಡಿಓ ಅವರು ನಿರ್ವಹಣೆ ಮಾಡಬೇಕು. ಸಾರ್ವಜನಿಕರು ಕೊಡುವ ದೂರುಗಳ ಬಗ್ಗೆ ಪಿಡಿಓ ಅವರು ಪರಿಶೀಲನೆ ನಡೆಸಬೇಕು ಹಾಗೂ ಜನಸ್ಪಂದನ ಅರ್ಜಿಗಳ ವಿಲೇವಾರಿಯನ್ನು ನಿರ್ವಹಿಸಬೇಕು. ಸರ್ಕಾರ ಜಾರಿಗೆ ತರುವ ಜನಪರ ಕಾರ್ಯಗಳನ್ನು ಜನರಿಗೆ ತಲುಪಿಸುವ ಮಹತ್ತರ ಜವಾಬ್ದಾರಿಯೂ ಪಿಡಿಓ ಅವರದಾಗಿರುತ್ತದೆ. ಇಷ್ಟು ಕರ್ತವ್ಯಗಳ ಜೊತೆಗೆ ಇನ್ನಿತರ ಮಹತ್ತರ ಕರ್ತವ್ಯಗಳನ್ನು ನಿರ್ವಹಿಸಬೇಕು.

Leave a Reply

Your email address will not be published. Required fields are marked *