ಪಾರ್ವತಮ್ಮ ರಾಜ್ ಕುಮಾರ್ ಅವರು ತಮ್ಮ ಸ್ವಂತ ನಿರ್ಮಾಣದ, ಮೊದಲ ಸಿನಿಮಾ ಯಾವುದು ಗೊತ್ತೇ

0 2

ಡಾಕ್ಟರ್ ಪಾರ್ವತಮ್ಮ ರಾಜಕುಮಾರ್ ಅವರ ಜೀವನ ಹಾಗೂ ಅವರ ಸಾಧನೆಯ ಬಗ್ಗೆ ಈ ಲೇಖನದ ಮೂಲಕ ತಿಳಿಯೋಣ.

ಪಾರ್ವತಮ್ಮ ರಾಜಕುಮಾರ್ ಅವರು ರಾಜಕುಮಾರ್ ಅವರ ಸಾಧನೆಗೆ ಬಹಳಷ್ಟು ಕಾರಣರಾದ ಹಾಗೂ ಮನ ಮೆಚ್ಚಿದ ಮಡದಿ. ಡಿಸೆಂಬರ್ 6,1939 ರಂದು ಮೈಸೂರು ಬಳಿಯ ನಂಜನಗೂಡಿನಲ್ಲಿ ಹುಟ್ಟಿದರು. ಬೆಳೆದಿದ್ದು ಪುಟ್ಟ ಗ್ರಾಮವಾದ ಸಾಲಿಗ್ರಾಮದಲ್ಲಿ ತಂದೆ ಸಂಗೀತದ ಮೇಷ್ಟ್ರು ಅಪ್ಪಾಜಿ ಗೌಡ, ತಾಯಿ ಲಕ್ಷ್ಮಮ್ಮ. ಪಾರ್ವತಮ್ಮ ಹುಟ್ಟಿದಾಗಲೇ ಸೋದರಮಾವ ಸಿಂಗಾನಲ್ಲೂರು ಪುಟ್ಟಸ್ವಾಮಯ್ಯ ಹಾಗೂ ಅತ್ತೆ ಲಕ್ಷ್ಮಮ್ಮ ಹರಸಿದರು ಹಾಗೂ ಇವಳೇ ನಮ್ಮ ಮನೆಯ ಹಿರಿಯ ಸೊಸೆ ಎಂದು ವಾಗ್ದಾನ ನೀಡಿದರು. ಸಾಲಿಗ್ರಾಮದ ದೇವಸ್ಥಾನ, ಹನುಮಂತರಾಯರ ಗುಡಿ, ಜೀವನದಿ ಕಾವೇರಿ ಧುಮ್ಮಿಕ್ಕಿ ಹರಿಯುವ ಚುಂಚನಕಟ್ಟೆ ಜಲಪಾತ ಈ ಸುಂದರ ತಾಣದಲ್ಲಿ ಪಾರ್ವತಮ್ಮನವರು ತಮ್ಮ ಬಾಲ್ಯವನ್ನು ಕಳೆದಿದ್ದಾರೆ.

ಸಾಲಿಗ್ರಾಮದ ಶಾಲೆಯಲ್ಲಿ ಎಸ್ಎಸ್ಎಲ್ ಸಿ ಓದು ಮುಗಿಸಿದರು. 1953 ಜೂನದಲ್ಲಿ ನಂಜನಗೂಡಿನ ರಾಣಪ್ಪನ ಛತ್ರದಲ್ಲಿ ರಾಜಕುಮಾರ್ ಅವರೊಂದಿಗೆ ಮದುವೆಯಾಯಿತು. ನಾಟಕ ಕಂಪನಿಯಲ್ಲಿ ಕೆಲಸ ಮಾಡುತ್ತಾ ಊರೂರು ಅಲೆಯುತ್ತಾ ಹೊಟ್ಟೆ, ಬಟ್ಟೆಗಾಗಿ ಕಷ್ಟ ಪಡುತ್ತಿದ್ದ ಕಾಲವದು ಆದರೂ ಪಾರ್ವತಮ್ಮನವರ ದಕ್ಷತೆಯಿಂದ ಇಡೀ ಕುಟುಂಬ ಬಡತನದಲ್ಲೂ ಸಿರಿತನ ಕಂಡಿತು. ಶ್ರೀ ಪುಟ್ಟಸ್ವಾಮಯ್ಯನವರಿಗೆ ತಮ್ಮ ಮಗನಿಗೆ ಸಿನಿಮಾ ರಂಗದಲ್ಲಿ ಮಿಂಚಲು ಅವಕಾಶ ಸಿಗಲಿಲ್ಲ ಎಂಬ ಕೊರಗು ಕಾಡುತಿತ್ತು ಆ ಕೊರಗಿನಲ್ಲಿ ಅವರು ಕಣ್ಮುಚ್ಚಿದರು. ಅದೇ ವರ್ಷ ಅಗಸ್ಟ್ ನಲ್ಲಿ ಬೇಡರ ಕಣ್ಣಪ್ಪ ಚಿತ್ರದಲ್ಲಿ ನಾಯಕ ನಟನಾಗಿ ನಟಿಸಲು ಅವಕಾಶ ಸಿಕ್ಕಿತು. ಅಂದು ಆರಂಭವಾದ ತಮ್ಮ ಗಂಡನ ಚಿತ್ರ ಬದುಕನ್ನು ಸಮರ್ಥವಾಗಿ 205 ಚಿತ್ರಗಳವರೆಗೆ ಮುನ್ನಡೆಸಿಕೊಂಡು ಹೋಗಿ ಭಾರತೀಯ ಚಿತ್ರರಂಗದಲ್ಲಿ ದಾಖಲೆಯನ್ನು ನಿರ್ಮಿಸಿದ ಏಕೈಕ ಮಹಿಳಾ ಮಣಿ ಡಾಕ್ಟರ್ ಪಾರ್ವತಮ್ಮ ರಾಜಕುಮಾರ್.

ತಮ್ಮ ಸ್ವಂತ ನಿರ್ಮಾಣದ ಮೊದಲ ಚಿತ್ರವಾಗಿ ಶ್ರೀ ಶ್ರೀನಿವಾಸ ಕಲ್ಯಾಣ ಚಿತ್ರದಲ್ಲಿ ಶಿವಣ್ಣ, ಲಕ್ಷ್ಮೀ, ರಾಘವೇಂದ್ರ ಮತ್ತು ಪೂರ್ಣಿಮಾ ನಟಿಸುವಂತೆ ಮಾಡಿದ್ದು ವಿಶೇಷ. ಪಾರ್ವತಮ್ಮ ಅವರು ಪ್ರಥಮ ಮಹಿಳಾ ವಿತರಕಿ ಆಗಿದ್ದಾರೆ. ಹುಬ್ಬಳ್ಳಿಯಲ್ಲಿ ಚಂದ್ರಿಕಾ ಮೂವೀಸ್ ಎಂಬ ಹಂಚಿಕಾ ಸಂಸ್ಥೆಯನ್ನು ತೆರೆದು ತಮ್ಮ ಎಲ್ಲ ಚಿತ್ರಗಳನ್ನು ಉತ್ತರ ಕರ್ನಾಟಕದಲ್ಲಿ ವಿತರಿಸಿದರು. ನಂತರ ತಮ್ಮ ಮೂವರು ಮಕ್ಕಳನ್ನು ಸಿನಿಮಾದಲ್ಲಿ ನಾಯಕ ನಟರಾಗಿ ಮಾಡಿದ್ದಲ್ಲದೆ ತನ್ನ ಪತಿ ಹಾಗೂ ಪುತ್ರರು ನಟಿಸಿದ ಒಂದೇ ಭಾಷೆಯ 75 ಚಿತ್ರಗಳ ನಿರ್ಮಾಪಕಿ ಹಾಗೂ ವಿತರಕಿ ಆಗಿದ್ದಾರೆ.

ಬೆಂಗಳೂರಿನಲ್ಲಿ ವಜ್ರೇಶ್ವರಿ ಕಂಬೈನ್ಸ್ ಪ್ರಾರಂಭಿಸಿ ರಜತೋತ್ಸವವನ್ನು ಆಚರಿಸಿಕೊಂಡಿತು. ಮಹಿಳೆಯೊಬ್ಬರ ನೇತೃತ್ವದಲ್ಲಿ ಇಡೀ ಕರ್ನಾಟಕದಾದ್ಯಂತ ನೂರಾರು ಚಿತ್ರ ಹಂಚಿಕೆ ಮಾಡಿದ್ದಲ್ಲದೆ ನಿರ್ಮಾಣ ಪಥದಲ್ಲೂ ಪಾರ್ವತಮ್ಮ ಅವರು ದಾಖಲೆಗಳನ್ನು ನಿರ್ಮಿಸಿದ್ದಾರೆ. ಪುನೀತ್ ರಾಜಕುಮಾರ್ ಅವರಿಗೆ ಅತ್ಯುತ್ತಮ ಬಾಲ ನಟ‌ ಪ್ರಶಸ್ತಿ ಲಭಿಸಿದೆ. ಅತ್ಯುತ್ತಮ ಹಾಡಿಗಾಗಿ ಜೀವನ ಚೈತ್ರ ಚಿತ್ರದಿಂದ ಡಾಕ್ಟರ್ ರಾಜಕುಮಾರ್ ಅವರಿಗೆ ನಾಡಿನ ಅತಿ ಶ್ರೇಷ್ಟ ಗಾಯಕ ಎಂದು ರಾಷ್ಟ್ರಪತಿಯವರು ಗೌರವಿಸಿದರು. ಶ್ರಾವಣ ಬಂತು, ಶಂಕರ್ ಗುರು, ಅಪೂರ್ವ ಸಂಗಮ, ಹಾಲು ಜೇನು, ಶಬ್ದವೇಧಿ, ಸಮಯದ ಗೊಂಬೆ, ಜೀವನ ಚೈತ್ರ ಇನ್ನು ಹಲವಾರು ಚಿತ್ರಗಳನ್ನು ಪಾರ್ವತಮ್ಮ ರಾಜಕುಮಾರ್ ಅವರು ನಿರ್ಮಿಸಿದ್ದಾರೆ.

ತಮ್ಮ ವ್ಯವಹಾರದ ವ್ಯಾಪ್ತಿಯನ್ನು ಅಭಿವೃದ್ಧಿಪಡಿಸುತ್ತಾ ಹೋಟೆಲ್ ಉದ್ಯಮಕ್ಕೂ ವಿಸ್ತರಿಸಿ ಬೆಂಗಳೂರಿನ ಗಾಂಧಿನಗರದಲ್ಲಿ ಡಾಕ್ಟರ್ ರಾಜಕುಮಾರ್ ಇಂಟರ್ ನ್ಯಾಷನಲ್ ಹೋಟೆಲನ್ನು ಪ್ರಾರಂಭಿಸಿದ್ದಾರೆ. ಪಾರ್ವತಮ್ಮನವರಿಗೆ ಕಾದಂಬರಿ ಓದುವುದೆಂದರೆ ಆಸಕ್ತಿ. ತಮ್ಮ ಪತಿ ನಟಿಸಿದ ಚಿತ್ರಗಳಾದ ಬಂಗಾರದ ಮನುಷ್ಯ, ಎರಡು ಕನಸು ಮುಂತಾದ ಕಥೆಯನ್ನು ಆರಿಸಿದ್ದಲ್ಲದೇ ಬೇರೆ ನಟರು ನಟಿಸಿದ ಚಿತ್ರಗಳಿಗೂ ಕಥೆಗಳನ್ನು ಸೂಚಿಸುತ್ತಿದ್ದರು. ಅವರ ಸಾಧನೆಯನ್ನು ಗುರುತಿಸಿ ಫಾಲ್ಕೆ ಸಮಿತಿಯು ಅತ್ಯುನ್ನತ ಫಾಲ್ಕೆ ಪ್ರಶಸ್ತಿಯನ್ನು ನೀಡಿ ಗೌರವಿಸಿತು. ಮೈಸೂರಿನಲ್ಲಿ ಶಕ್ತಿಧಾಮ ಸ್ಥಾಪಿಸಿ ಅಶಕ್ತ ಮಹಿಳೆಯರಿಗೆ ಆಶ್ರಯ ನೀಡಿ ಅವರ ಬಾಳಿಗೆ ದಾರಿದೀಪವಾಗಿ ಅವರನ್ನು ಸಶಕ್ತರನ್ನಾಗಿ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದರು. ನೇತ್ರದಾನ ಮುಂತಾದ ಅನೇಕ ಧ್ಯೇಯಗಳನ್ನು ಹೊತ್ತು ಸ್ಥಾಪಿತವಾದ ಡಾಕ್ಟರ್ ರಾಜಕುಮಾರ್ ಟ್ರಸ್ಟ್ ಗೂ ಪಾರ್ವತಮ್ಮನವರೆ ಅಧ್ಯಕ್ಷರಾಗಿದ್ದರು. ಅವರ ಸಾಧನೆಯು ಎಂದಿಗೂ ಅಮರ.

Leave A Reply

Your email address will not be published.