ಬಡವರಿಗಾಗಿ ದಿಲ್ಲಿಯಲ್ಲಿ ಸ್ವಂತ ಹಣದಿಂದ ಕ್ಯಾಂಟಿನ್ ತೆರೆದ ಬಿಜೆಪಿ ಸಂಸದ ಗಂಭೀರ್ ಊಟದ ಬೆಲೆ ಕೇವಲ 1 ರೂಪಾಯಿ. ಜನ ರಸೋಯಿ ಎಂಬ ಹೆಸರಿನ ಕ್ಯಾಂಟೀನ್‌ವೊಂದನ್ನು ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ಆರಂಭಿಸಿದ್ದು, ಬಡವರಿಗೆ ಎರಡು ಹೊತ್ತು ಊಟ ಸಿಗಬೇಕು ಎನ್ನುವ ಉದ್ದೇಶದಿಂದ ಈ ಕ್ಯಾಂಟೀನ್ ಆರಂಭಿಸಿರುವುದಾಗಿ ಗಂಭೀರ್ ಮಾಹಿತಿ ನೀಡಿದ್ದಾರೆ. ಕಡು ಬಡವರು ದಿನಕ್ಕೆ ಎರಡು ಹೊತ್ತಿನ ಊಟಕ್ಕೂ ಪರದಾಡುವುದನ್ನು ನೋಡಿ ನಾನು ಬೇಸರಗೊಂಡಿದ್ದೆ. ಇದಕ್ಕಾಗಿ ಗಾಂಧಿನಗರದಲ್ಲಿ ಸುಸಜ್ಜಿತವಾದ ಜನ್ ರಸೋಯಿ ಆಧುನಿಕ ಕ್ಯಾಂಟೀನ್ ಆರಂಭಿಸಲಾಗಿದೆ ಎಂದು ತಿಳಿಸಿದ್ದಾರೆ.
ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ , ದೆಹಲಿ ಸಂಸದ ಗೌತಮ್ ಗಂಭೀರ್ ಹೊಸ ಕ್ಯಾಂಟೀನ್ ಆರಂಭಿಸಿದ್ದಾರೆ. ವಿಶೇಷ ಅಂದರೆ ಕೇವಲ ಒಂದು ರೂಪಾಯಿಗೆ ಊಟ ಸಿಗಲಿದೆ. ಇದು ದೇಶದಲ್ಲಿರುವ ಅತ್ಯಂತ ಕಡಿಮೆ ಬೆಲೆಯಲ್ಲಿ ಆಹಾರ ಸಿಗುವ ಕ್ಯಾಂಟೀನ್ ಅನ್ನೋ ಹೆಗ್ಗಳಿಗೆ ಪಾತ್ರವಾಗಿದೆ. ಈ ವಿಶೇಷ ಕ್ಯಾಂಟೀನ್ ಕುರಿತ ಮಾಹಿತಿ ಇಲ್ಲಿದೆ. ಹೋಟೆಲ್‌ಗಳಿಗೆ ಊಟಕ್ಕೆ ಹೋದ್ರೆ ಒಂದು ಊಟಕ್ಕೆ ಕಡಿಮೆ ಅಂದರೂ 30 ರಿಂದ 50 ರೂ ಇರುತ್ತದೆ. ಆದರೆ ದಿಲ್ಲಿಯ ಗಾಂಧಿನಗರದಲ್ಲಿ ಇನ್ನು ಮುಂದೆ 1 ರೂಪಾಯಿಗೆ ಊಟ ಸಿಗಲಿದೆ. ಬಿಜೆಪಿ ಸಂಸದ ಗೌತಮ್ ಗಂಭೀರ ವಿನೂತನ ಕ್ಯಾಂಟೀನ್‌ವೊಂದನ್ನು ತಮ್ಮ ಹಣದಿಂದಲೇ ತೆರೆದಿದ್ದು, ಈ ಹೋಟೆಲ್‌ನಲ್ಲಿ ಒಂದು ರೂಪಾಯಿಗೆ ಊಟ ಸಿಗುತ್ತಿದೆ. ಅಗತ್ಯವಿರುವವರು ಇಲ್ಲಿಗೆ ಬಂದು 1 ರೂಪಾಯಿ ನೀಡಿ ಊಟ ಮಾಡಬಹುದು ಎಂದು ಗಂಭೀರ್ ತಿಳಿಸಿದ್ದಾರೆ. ಮುಂದಿನ ಗಣರಾಜ್ಯೋತ್ಸವದ ದಿನ ದಿಲ್ಲಿಯ ಅಶೋಕನಗರದಲ್ಲಿ ಮತ್ತೊಂದು ಕ್ಯಾಂಟೀನ್ ಆರಂಭಿಸುವುದಾಗಿಯೂ ಗೌತಮ್ ಗಂಭೀರ್ ತಿಳಿಸಿದ್ದಾರೆ. ಯಾವುದೇ ಜಾತಿ, ಮತ, ಧರ್ಮ ಅಥವಾ ಆರ್ಥಿಕ ಸ್ಥಿತಿಯನ್ನು ಲೆಕ್ಕಿಸದೆ ಪ್ರತಿಯೊಬ್ಬರಿಗೂ ಆರೋಗ್ಯಕರ ಮತ್ತು ಶುಚಿತ್ವವಿರುವ ಆಹಾರ ಸಿಗಬೇಕು ಎಂದು ನಾನು ಭಾವಿಸುತ್ತೇನೆ ಎಂದು ಮಾಜಿ ಕ್ರಿಕೆಟ್ ಆಟಗಾರ ಗೌತಮ್ ಗಂಭೀರ್ ತಿಳಿಸಿದ್ದಾರೆ.
ಅಷ್ಟೇ ಅಲ್ಲದೇ , ದಿಲ್ಲಿಯ ಪ್ರತಿಯೊಬ್ಬ ವ್ಯಕ್ತಿಗೆ ಆರೋಗ್ಯಕರ ಆಹಾರ ಮತ್ತು ಶುದ್ಧ ನೀರನ್ನು ಪಡೆಯುವ ನನ್ನ ಕನಸು ನನಸಾಗುವ ವರೆಗೆ ನಾನು ಶ್ರಮಿಸುತ್ತೇನೆ ಎಂದು ತಿಳಿಸಿದ್ದಾರೆ. ಪೂರ್ವ ದಿಲ್ಲಿಯ ಗಾಂಧಿನಗರದಲ್ಲಿ ಈ ಕ್ಯಾಂಟೀನ್ ಇದ್ದು, ಸಂಪೂರ್ಣ ಅಭಿವೃದ್ಧಿ ಹೊಂದಿದ ಖಾಸಗಿ ಕ್ಯಾಂಟೀನ್ ಇದಾಗಿದೆ. ಇತರೆ ಹೋಟೆಲ್‌ಗಿಂತಲೂ ಕಮ್ಮಿ ಇಲ್ಲವೆಂಬಂತೆ ನಿರ್ಮಾಣಗೊಂಡಿದೆ. ಈ ಕ್ಯಾಂಟೀನ್‌ನ ಸಂಪೂರ್ಣ ವೆಚ್ಚವನ್ನು ಗೌತಮ್ ಗಂಭೀರ್ ನೋಡಿಕೊಳ್ಳುತ್ತಿದ್ದಾರೆ. ಬಡವರಿಗೆ ಆಹಾರ ನೀಡುವ ಉದ್ದೇಶದಿಂದ ಈ ಕ್ಯಾಂಟೀನ್ ತೆರೆಯಲಾಗಿದ್ದು, ಜನರು ಗೌತಮ್ ಗಂಭೀರ್ ಕಾರ್ಯಕ್ಕೆ ಶ್ಲಾಘನೆ ವ್ಯಕ್ತಪಡಿಸುತ್ತಿದ್ದಾರೆ. ಗೌತಮ್ ಗಂಭೀರ್ ತಮ್ಮ ವ್ಯಾಪ್ತಿಯ 10 ಕ್ಷೇತ್ರಗಳಲ್ಲಿ ತಲಾ ಒಂದೊಂದು ಜನ ರಸೋಯಿ ಕ್ಯಾಂಟೀನ್ ಆರಂಭಿಸಲು ಯೋಜನೆ ರೂಪಿಸಿದ್ದಾರೆ. ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ಅವರು ಸಂಸದನಾದ ಬಳಿಕ ಹಲವು ಸಾಮಾಜಿಕ ಕಾರ್ಯಗಳನ್ನು ಯಶಸ್ವಿಯಾಗಿ ಮಾಡುತ್ತಿದ್ದಾರೆ. ದೆಹಲಿ ಕಸದ ಸಮಸ್ಯೆಗೆ ಮುಕ್ತಿ ನೀಡಲು ಅವಿರತ ಪ್ರಯತ್ನ ಮಾಡುತ್ತಿದ್ದಾರೆ. ಈಗ ಹೊಸದಾಗಿ ಈ ಕ್ಯಾಂಟೀನ್ ಆರಂಭ ಮಾಡಿದ್ದು ಒಟ್ಟಾರೆ ಗಂಭೀರ್ ರ ಈ ಮಾದರಿ ಕೆಲಸಕ್ಕೆ ದೆಹಲಿ ಜನತೆ ಬಹು ಪರಾಕ್ ಹೇಳಿದ್ದಾರೆ.