ಹಾಲು ಅನೇಕ ಪೋಷಕಾಂಶಗಳನ್ನು ತನ್ನಲ್ಲಿ ಒಳಗೊಂಡ ಒಂದು ಅದ್ಭುತ ಆರೋಗ್ಯಕರ ಪಾನೀಯ. ಯಾವ ವಯಸ್ಸಿನವರು ಬೇಕಾದರೂ ಇಷ್ಟ ಪಟ್ಟು ಕುಡಿಯುವಂತಹ ನೈಸರ್ಗಿಕ ಡೈರಿ ಉತ್ಪನ್ನ. ಆದರೂ ಕೆಲವೊಮ್ಮೆ ಕೆಲವರಿಗೆ ಹಾಲು ಮತ್ತು ಅದರ ರುಚಿ ನಾಲಿಗೆಗೆ ಸ್ವಲ್ಪ ಅಲರ್ಜಿ. ಅದರಲ್ಲೂ ಬೆಳಗಿನ ಸಮಯದಲ್ಲಿ ಉಪಹಾರಕ್ಕೆ ಮುಂಚೆ ಹಾಲು ಕುಡಿದರೆ ವಾಕರಿಕೆಯಿಂದ ವಾಂತಿಯಾಗುವ ಸಂಭವ ಹೆಚ್ಚು. ಅಂತಹವರು ಒಂದು ಟೇಬಲ್ ಚಮಚದಷ್ಟು ಬೆಲ್ಲವನ್ನು ಹಾಲಿಗೆ ಸೇರಿಸಿಕೊಂಡು ಚೆನ್ನಾಗಿ ಮಿಶ್ರಣ ಮಾಡಿ ಸವಿದರೆ ಅದರ ರುಚಿಯೇ ಬೇರೆ. ಜೊತೆಗೆ ಬೆಲ್ಲ ಮತ್ತು ಹಾಲಿನ ಮಿಶ್ರಣ ಮನುಷ್ಯನ ಆರೋಗ್ಯಕ್ಕೆ ಹಲವು ಬಗೆಯ ಉತ್ತಮ ಪ್ರಯೋಜನಗಳನ್ನು ದೊರಕಿಸಿ ಕೊಡುತ್ತದೆ.
ಬೆಲ್ಲ ಮನುಷ್ಯನ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಕ್ಯಾಲ್ಸಿಯಂ ಅಂಶದ ಕಣಜವಾಗಿರುವ ಹಾಲು ಮನುಷ್ಯನ ರೋಗ ನಿರೋಧಕ ಶಕ್ತಿಯನ್ನು ಅಭಿವೃದ್ಧಿ ಪಡಿಸುತ್ತದೆ. ಹಾಲಿನ ಜೊತೆ ಬೆಲ್ಲ ಮಿಶ್ರಣವಾದಾಗ ಹಾಲಿನ ರೋಗ ನಿರೋಧಕ ಶಕ್ತಿಯನ್ನು ಉತ್ತಮ ಪಡಿಸುವ ಶಕ್ತಿ ದ್ವಿಗುಣ ಗೊಳ್ಳುತ್ತದೆ. ಅಂದರೆ ಬೆಲ್ಲದ ಸಿಹಿ ಮಿಶ್ರಣವಾದ ಹಾಲು ಕೇವಲ ಬಾಯಿಗೆ ಸಿಹಿ ಮತ್ತು ರುಚಿ ಕೊಡುವ ವಿಷಯದಲ್ಲಿ ಮಾತ್ರವಲ್ಲದೆ, ಮನುಷ್ಯರ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿ ಚಳಿಗಾಲದಲ್ಲಿ ಸಹಜವಾಗಿಯೇ ಆಕ್ರಮಣ ಮಾಡುವ ಕಾಯಿಲೆ ತರುವ ಎಂತಹ ಬ್ಯಾಕ್ಟೀರಿಯಗಳ ವಿರುದ್ಧ ಬೇಕಾದರೂ ಹೋರಾಡುವಂತಹ ಶಕ್ತಿಯನ್ನು ಮನುಷ್ಯನ ದೇಹಕ್ಕೆ ನೀಡುತ್ತದೆ.
ಹಾಲಿನಲ್ಲಿ ಹೆಚ್ಚಿನ ಕ್ಯಾಲ್ಸಿಯಂ, ವಿಟಮಿನ್ ಎ ಮತ್ತು ಬಿ, ಪ್ರೋಟೀನ್ ಮತ್ತು ಇತರ ಅನೇಕ ಪೋಷಕಾಂಶಗಳು ಇರುವುದರಿಂದ ಅತ್ಯಂತ ಪೌಷ್ಟಿಕ ಪಾನೀಯವಾಗಿದೆ. ರಾಣಿ ಕ್ಲಿಯೋಪಾತ್ರ ತನ್ನ ತ್ವಚೆಯನ್ನು ತೇವವಾಗಿ ಮತ್ತು ಕಾಂತಿಯುತವಾಗಿಡಲು ಹಾಲಿನ ಸ್ನಾನ ಮಾಡುತ್ತಿದ್ದಳು ಎಂದು ಹೇಳಲಾಗುತ್ತದೆ. ಹಾಲನ್ನು ಬೆಲ್ಲದೊಂದಿಗೆ ಬೆರೆಸಿದಾಗ ಹಾಲಿನ ಪೌಷ್ಠಿಕಾಂಶದ ಮೌಲ್ಯವು ಅನೇಕ ಪಟ್ಟು ಹೆಚ್ಚಾಗುತ್ತದೆ. ಬೆಲ್ಲವನ್ನು ಜೀರ್ಣಾಂಗ ವ್ಯವಸ್ಥೆಗೆ ಪ್ರಯೋಜನಕಾರಿಯಾಗಿದ್ದು, ದೇಹದ ವಿಷವನ್ನು ಶುದ್ಧೀಕರಿಸುವ ಡಿಟಾಕ್ಸಿಫೈಯಿಂಗ್ ಏಜೆಂಟ್ ಆಗಿ ಕಾರ್ಯನಿರ್ವಹಿಸುತ್ತದೆ.
ಈಗಿನ ಕಾಲದಲ್ಲಿ ಮನುಷ್ಯನ ವಿಚಿತ್ರ ಜೀವನ ಶೈಲಿಯ ಅಭ್ಯಾಸದಿಂದ ತನ್ನ ಆರೋಗ್ಯವನ್ನು ತಾನೇ ಕೈಯಾರೆ ಹಾಳು ಮಾಡಿಕೊಳ್ಳುತ್ತಿದ್ದಾನೆ. ಮುಖ್ಯವಾಗಿ ಮನೆಯ ಹೊರಗಿನ ಬೀದಿ ಬದಿಯ ಜಂಕ್ ಫುಡ್ ಸೇವನೆಯ ಕಾರಣದಿಂದ ಮನುಷ್ಯನಿಗೆ ಯಾವುದೇ ಸಮಯದಲ್ಲಿ ಬೇಕಾದರೂ ಅಜೀರ್ಣತೆಯ ಸಮಸ್ಯೆ ಎದುರಾಗಿ ಗ್ಯಾಸ್ಟ್ರಿಕ್ ಉಂಟಾಗುತ್ತದೆ. ಇದರ ಬೆನ್ನಲ್ಲೇ ಮಲಬದ್ಧತೆ, ಕ್ರಮರಹಿತ ಕರುಳಿನ ಚಲನೆ ಇತ್ಯಾದಿ ಸಮಸ್ಯೆಗಳು ಕಾಡಲು ಪ್ರಾರಂಭ ವಾಗುತ್ತವೆ. ಇಂತಹ ಸಂದರ್ಭದಲ್ಲಿ ಈ ಎಲ್ಲಾ ಸಮಸ್ಯೆಗಳನ್ನು ದೂರ ಮಾಡಲು ತನ್ನ ಅದ್ಭುತ ಸಿಹಿಯ ರುಚಿಯಿಂದ ಮನೆ ಮಾತಾಗಿರುವ ಬೆಲ್ಲ ನಿಮ್ಮ ಸಹಾಯಕ್ಕೆ ಬರುತ್ತದೆ. ಅಂದರೆ ಹಾಲಿನಲ್ಲಿ ಬೆಲ್ಲವನ್ನು ಕದಡಿ ಈ ಸಿಹಿಯಾದ ಹಾಲನ್ನು ಕುಡಿಯುವ ಅಭ್ಯಾಸವನ್ನು ನಿಮ್ಮ ದಿನನಿತ್ಯದ ಆಹಾರ ಪದ್ಧತಿ ಯಲ್ಲಿ ಅಳವಡಿಸಿ ಕೊಳ್ಳುವುದರಿಂದ ನಿಮ್ಮ ದೇಹದ ಜೀರ್ಣ ಕ್ರಿಯೆ ಉತ್ತಮಗೊಂಡು ಪಚನ ಕ್ರಿಯೆ ಸಹ ಉತ್ತಮವಾಗಿ ನಿರ್ವಹಣೆಗೊಂಡು ಅಜೀರ್ಣತೆ ಮತ್ತು ಗ್ಯಾಸ್ಟ್ರಿಕ್ ನಂತಹ ಸಮಸ್ಯೆಗಳಿಂದ ಬಹು ಬೇಗನೆ ಮುಕ್ತಿ ಪಡೆಯುವಿರಿ.
ವೈದ್ಯಲೋಕ ಹೇಳುವ ಪ್ರಕಾರ ಯಾವುದೇ ಡೈರಿ ಉತ್ಪನ್ನಗಳನ್ನು ಸೇವಿಸಿದರೂ ಮನುಷ್ಯನಿಗೆ ಮತ್ತು ಆತನ ಆರೋಗ್ಯಕ್ಕೆ ತುಂಬಾ ಒಳ್ಳೆಯದೇ ಆಗುತ್ತದೆ. ಅದರಲ್ಲೂ ಹಾಲು ಕುಡಿದರೆ ಮನುಷ್ಯನ ಮೂಳೆಗಳು ಗಟ್ಟಿಯಾಗುತ್ತವೆ ಎಂಬ ನಮ್ಮ ಹಿರಿಯರ ಹೇಳಿಕೆಯಂತೆ ಹಾಲಿನಲ್ಲಿರುವ ಕ್ಯಾಲ್ಸಿಯಂ ಅಂಶ ನಮ್ಮ ದೇಹದ ಮೂಳೆಗಳನ್ನು ಬಲ ಪಡಿಸಿ ಕೀಲು ನೋವಿಗೆ ಉತ್ತಮ ಪರಿಹಾರ ಒದಗಿಸುತ್ತದೆ. ಆದ್ದರಿಂದಲೇ ಚಿಕ್ಕ ವಯಸ್ಸಿನಿಂದ ಮನೆಯ ಪೋಷಕರ ಮತ್ತು ಶಾಲೆಯ ಶಿಕ್ಷಕರ ಅಣತಿಯಂತೆ ಪ್ರತಿ ದಿನ ಒಂದು ಲೋಟ ಹಾಲು ಕುಡಿಯುವ ಅಭ್ಯಾಸ ಬೆಳೆಸಿಕೊಂಡು ಬಂದಿರುತ್ತೇವೆ. ಬಹಳ ದಿನಗಳಿಂದ ಬಳಲುತ್ತಿರುವ ಕೀಲು ನೋವಿನಿಂದ ಶೀಘ್ರ ಪರಿಹಾರಕ್ಕಾಗಿ ಹಾಲಿಗೆ ಬೆಲ್ಲ ಮಿಶ್ರಣ ಮಾಡಿ ಕುಡಿಯುವ ಅಭ್ಯಾಸವನ್ನು ರೂಡಿ ಮಾಡಿಕೊಳ್ಳಬಹುದು.
ಗರ್ಭಿಣಿ ಸ್ತ್ರೀಯರಿಗೆ ಗರ್ಭಾವಸ್ಥೆಯಲ್ಲಿ ಅನಿಮಿಯಾ ಸಮಸ್ಯೆಯನ್ನು ದೂರ ಮಾಡುತ್ತದೆ. ಹೆಣ್ಣಿಗೆ ತಾಯಿಯಾಗುವ ಕನಸು ಒಂದು ಸುಂದರವಾದ ಸಂದರ್ಭದ ಪ್ರತಿರೂಪವನ್ನು ಎದುರು ನೋಡುವ ಶುಭ ಸಮಯ. ಸರಿಯಾದ ಮುಂಜಾಗ್ರತ ಕ್ರಮಗಳನ್ನು ತೆಗೆದುಕೊಂಡು ಮುಂದುವರೆದರೆ ತಾಯಿ ಮತ್ತು ಮಗು ಇಬ್ಬರ ಆರೋಗ್ಯ ಸಹ ತುಂಬಾ ಚೆನ್ನಾಗಿರುತ್ತದೆ. ಸಾಮಾನ್ಯವಾಗಿ ಸ್ತ್ರೀಯರು ಗರ್ಭಾವಸ್ಥೆಯ ಸಮಯದಲ್ಲಿ ಎದುರಿಸುವ ಸಮಸ್ಯೆಯೆಂದರೆ ಅದು ಅನಿಮಿಯಾ ಅಂದರೆ ದೇಹದಲ್ಲಿ ಕಬ್ಬಿಣದ ಅಂಶದ ಕೊರತೆ. ಈ ಸಂದರ್ಭದಲ್ಲಿ ವೈದ್ಯರು ಕಬ್ಬಿಣದ ಅಂಶವಿರುವ ಐರನ್ ಫೋಲೆಟ್ ಔಷಧಿಗಳನ್ನು ಶಿಫಾರಸು ಮಾಡುತ್ತಾರೆ. ಗರ್ಭಾವಸ್ಥೆಯ ಸಮಯದಲ್ಲಿ ಈಗಾಗಲೇ ಹಲವಾರು ಔಷಧಿಗಳ ಸೇವನೆ ಮುಂದುವರೆದಿರುವುದರಿಂದ ಈ ಔಷಧಿಗಳನ್ನೂ ಜೊತೆಗೆ ತೆಗೆದುಕೊಳ್ಳುವುದು ಸ್ವಲ್ಪ ಕಿರಿಕಿರಿ ಅನ್ನಿಸಬಹುದು. ಈ ಸಮಯದಲ್ಲಿ ಇವುಗಳ ಬದಲಿಗೆ ಹಾಲಿನಲ್ಲಿ ಬೆಲ್ಲವನ್ನು ಮಿಶ್ರಣಮಾಡಿ ಪ್ರತಿದಿನ ನಿಯಮಿತವಾಗಿ ಕುಡಿಯುವ ಅಭ್ಯಾಸವನ್ನು ರೂಢಿಮಾಡಿ ಕೊಳ್ಳಬಹುದು.
ಮುಟ್ಟಿನ ನೋವಿನಿಂದ ಬಳಲುತ್ತಿರುವ ಹೆಣ್ಣು ಮಕ್ಕಳಿಗೆ ಹಾಲಿಗೆ ಬೆಲ್ಲವನ್ನು ಮಿಶ್ರಣ ಮಾಡಿ ಕುಡಿಯಲು ಕೊಡುವುದು ಬಹಳ ಹಿಂದಿನಿಂದ ರೂಢಿ ಮಾಡಿಕೊಂಡು ಬಂದ ಪದ್ಧತಿ. ಕೆಲವೊಮ್ಮೆ ಹೆಂಗಸರಲ್ಲಿ ಮುಟ್ಟಿನ ನೋವು ಸಾಧಾರಣದಿಂದ ವಿಪರೀತ ಹಂತಕ್ಕೆ ತಿರುಗಿ ಹೊಟ್ಟೆಯ ಸೆಳೆತ ಮತ್ತು ವಿಪರೀತ ಹೊಟ್ಟೆ ನೋವು ಉಂಟು ಮಾಡುತ್ತದೆ. ಇಂತಹ ಸಮಯದಲ್ಲಿ ಪ್ರತಿ ಬಾರಿ ಔಷಧಿಗಳ ಸೇವನೆ ಮತ್ತು ಶಾಖ ನೀಡುವಿಕೆಯು ಆರೋಗ್ಯಕ್ಕೆ ಅಷ್ಟು ಒಳ್ಳೆಯದಲ್ಲ. ಆದರೆ ಇಂತಹ ಸಂದರ್ಭದಲ್ಲಿ ಔಷಧೀಯ ಗುಣ ಲಕ್ಷಣ ಹೊಂದಿರುವ ಬೆಲ್ಲ ಹೊಟ್ಟೆಯ ನೋವು ಮತ್ತು ಸೆಳೆತಕ್ಕೆ ಉಪಶಮನ ಕೊಡಬಲ್ಲದು. ಮುಟ್ಟಿನ ಸಮಯದಲ್ಲಿ ದೇಹಕ್ಕೆ ಇನ್ನಷ್ಟು ಶಕ್ತಿ ಕೊಡುವ ಕೆಲಸ ಹಾಲು ಮತ್ತು ಬೆಲ್ಲದ ಮಿಶ್ರಣ ಮಾಡುತ್ತದೆ. ಜೊತೆಗೆ ಈ ಸಮಯದಲ್ಲಿ ಉಂಟಾಗುವ ಮನಸ್ಥಿತಿಯ ಏರುಪೇರಿನಲ್ಲಿ ಸಹ ಗುಣ ಕಾಣಲು ಹಾಲು ಮತ್ತು ಬೆಲ್ಲದ ಸೇವನೆ ಅತ್ಯಗತ್ಯ ಎಂಬುದು ನಮ್ಮ ಹಿರಿಯರ ವಾದ.
ಉತ್ತಮ ಜೀರ್ಣ ಕ್ರಿಯೆ ಮತ್ತು ಮೆಟಬಾಲಿಸಂ ಪ್ರಕ್ರಿಯೆ ನಿಮ್ಮದಾಗಬೇಕಾದರೆ ಮೊದಲು ಹಾಲಿಗೆ ಬೆಲ್ಲವನ್ನು ಮಿಶ್ರಣ ಮಾಡಿ ಸೇವನೆ ಮಾಡುವುದನ್ನು ಅಭ್ಯಾಸ ಮಾಡಿಕೊಳ್ಳಿ. ಅಜೀರ್ಣತೆಯಿಂದ ದೇಹದಲ್ಲಿ ಜಡತೆ ಆವರಿಸಿ ಯಾವ ಕೆಲಸವನ್ನು ಮಾಡಲು ಮನಸ್ಸಿಲ್ಲದ ಮನುಷ್ಯ ಹಾಲು ಮತ್ತು ಬೆಲ್ಲದ ಮಿಶ್ರಣದ ಸೇವನೆಯಿಂದ ತನ್ನ ಆರೋಗ್ಯದಲ್ಲಿ ಬಹಳ ಬೇಗನೆ ಗುಣ ಹೊಂದಬಹುದು ಮತ್ತು ತನ್ನ ದೈನಂದಿನ ಕಾರ್ಯ ಚಟುವಟಿಕೆಗಳನ್ನು ಇನ್ನಷ್ಟು ಚುರುಕಾಗಿ ಕೈಗೊಳ್ಳಬಹುದು.