ತಾಜ್ ಮಹಲ್ ಕಟ್ಟುವ ಮೊದಲೇ ಮಡದಿಗೋಸ್ಕರ ಪ್ರೇಮ ಕೊಳ ನಿರ್ಮಿಸಿದ ಕನ್ನಡದ ಈ ವೀರಕಲಿ ಯಾರು ನೋಡಿ

Temple story
ನಿಮ್ಮ ಆತ್ಮೀಯರಿಗೂ ಶೇರ್ ಮಾಡಿ

ಷಹಜಹಾನ್ ಎಂದರೆ ನೆನಪಾಗುವುದು ತಾಜ್ ಮಹಲ್. ತನ್ನ ಪ್ರೀತಿಯ ಮಡದಿಗಾಗಿ ನಿರ್ಮಿಸಿದ ಸುಂದರ ಸೌಧ ಪ್ರಪಂಚದ ಏಳು ಅದ್ಭುತಗಳ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿದೆ. ಷಹಜಹಾನ್ ತಾಜ್ ಮಹಲ್ ನಿರ್ಮಿಸುವುದಕ್ಕೆ ಮೊದಲೆ ಕರ್ನಾಟಕದ ಶಿವಮೊಗ್ಗ ಜಿಲ್ಲೆಯ ಸಾಗರದ ಬಳಿ ಪ್ರೇಮ ಪ್ರತ್ಯೇಕವಾಗಿ ಕೊಳವನ್ನು ನಿರ್ಮಿಸಲಾಗಿದೆ. ಹಾಗಾದರೆ ಈ ಕೊಳವನ್ನು ನಿರ್ಮಿಸಿದವರು ಯಾರು ಎಂಬ ಸಂಪೂರ್ಣ ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿದುಕೊಳ್ಳೋಣ.

ಷಹಜಹಾನ್ ತನ್ನ ಪತ್ನಿ ಮುಮ್ತಾಜ್ ಮರಣದ ನಂತರ ಆಗ್ರಾದಲ್ಲಿ ತಾಜ್ ಮಹಲ್ ನಿರ್ಮಿಸಿದ್ದಾನೆ. ತಾಜ್ ಮಹಲ್ ನಿರ್ಮಾಣದ ಸುಮಾರು 50ವರ್ಷಗಳ ಮೊದಲೆ ಕೆಳದಿಯ ನಾಯಕರೊಬ್ಬರು ತಮ್ಮ ಪ್ರೀತಿಯ ಮಡದಿಯ ಮರಣದ ನಂತರ ಆಕೆಯ ನೆನಪಿಗಾಗಿ ಸುಂದರ ಕೊಳವನ್ನು ಪ್ರೇಮದ ಕಾಣಿಕೆಯಾಗಿ ನಿರ್ಮಿಸಿದ್ದಾರೆ. ಆ ಕೊಳದ ಹೆಸರು ಚಂಪಕ ಸರಸಿ. ಈ ಅದ್ಭುತ ಕೊಳವಿರುವುದು ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಆನಂದಪುರ ಎಂಬ ಗ್ರಾಮದಲ್ಲಿ.

ಕೆಳದಿಯ ನಾಯಕ ವೆಂಕಟಪ್ಪ ನಾಯಕನ ಆಡಳಿತಾವಧಿಯಲ್ಲಿ ಆನಂದಪುರ ಗ್ರಾಮದಲ್ಲಿ ಕೆಳದಿಯ ಸೈನಿಕರ ಒಂದು ತುಕಡಿಯು ಆನಂದಪುರ ಕೋಟೆಯೊಳಗೆ ಬೀಡು ಬಿಟ್ಟಿರುತ್ತದೆ. ಆಗ ವೆಂಕಟಪ್ಪ ನಾಯಕ ಆಗಾಗ ಕೋಟೆಗೆ ಬಂದು ತಂಗುತ್ತಿರುತ್ತಾರೆ. ಅವರಿಗೆ ಒಮ್ಮೆ ಆನಂದಪುರ ಗ್ರಾಮದಲ್ಲಿ ಸುಂದರವಾಗಿ ಚಿತ್ರಿಸಿರುವ ರಂಗೋಲಿ ಕಂಡುಬರುತ್ತದೆ. ಈ ರಂಗೋಲಿಯನ್ನು ಚಿತ್ರಿಸಿರುವುದು ಯಾರು ಎಂದು ಹುಡುಕುತ್ತಾ ಹೋದಾಗ ಅವರಿಗೆ ಚಂಪಕ ಎಂಬ ಸುಂದರ ಕನ್ಯೆ ಸಿಗುತ್ತಾಳೆ.

ಆಕೆ ಆನಂದಪುರ ಗ್ರಾಮದ ನಿವಾಸಿಯಾಗಿರುತ್ತಾಳೆ ಅವಳನ್ನು ಮೋಹಿಸಿದ ವೆಂಕಟಪ್ಪನಾಯಕ ಅವಳನ್ನು ವಿವಾಹವಾಗುತ್ತಾನೆ. ಚಂಪಕ ಬೇರೆ ಜಾತಿಯವಳು ಎಂಬ ಕಾರಣಕ್ಕೆ ಪಟ್ಟದರಾಣಿಯು ಅವಳನ್ನು ನಿರಾಕರಿಸುತ್ತಾಳೆ. ನಂತರ ಪಟ್ಟದರಾಣಿ ಖಾಯಿಲೆಗೆ ಬಿದ್ದು ಮರಣಹೊಂದುತ್ತಾಳೆ. ಇದಕ್ಕೆ ಚಂಪಕ ಕಾರಣ ಎಂದು ಕೆಳದಿಯ ಪ್ರಜೆಗಳು ಚಂಪಕಳನ್ನು ದೂಷಿಸುತ್ತಾರೆ.

ಇದರಿಂದ ಮನನೊಂದ ಚಂಪಕ ಕೆಲವು ವರ್ಷಗಳಲ್ಲಿ ಆತ್ಮಹತ್ಯೆಗೆ ಶರಣಾಗುತ್ತಾಳೆ. ಚಂಪಕಳನ್ನು ಅತಿಯಾಗಿ ಪ್ರೀತಿಸುತ್ತಿದ್ದ ವೆಂಕಟಪ್ಪನಾಯಕ ಅವಳ ನೆನಪಿಗಾಗಿ ಆನಂದಪುರ ಗ್ರಾಮದಲ್ಲಿ ಸುಂದರ ಕೊಳವನ್ನು ನಿರ್ಮಿಸಿ ಅದಕ್ಕೆ ಚಂಪಕ ಸರಸಿ ಎಂದು ನಾಮಕರಣ ಮಾಡುತ್ತಾನೆ. ಸರಸಿ ಎಂದರೆ ಕೊಳ ಎಂದರ್ಥ. ಕೆಲವು ಶಾಸನಗಳಲ್ಲಿ ಚಂಪಕ ಸರಸಿ ಬಗ್ಗೆ ಉಲ್ಲೇಖಿಸಲಾಗಿದೆ.

ಕೊಳದ ನಡುವೆ ಒಂದು ಶಿವಾಲಯವಿದೆ. ಕೊಳದ ಮಧ್ಯಭಾಗದಲ್ಲಿರುವ ಶಿವಾಲಯವನ್ನು ತಲುಪಲು ಕಲ್ಲಿನ ಸೇತುವೆ ಇದೆ. ಈ ಕೊಳದ ತಟದಲ್ಲಿ ಪ್ರಾಚೀನ ಕಾಲದಲ್ಲಿ ಮಠವೊಂದು ಅಸ್ತಿತ್ವದಲ್ಲಿತ್ತು. ಈ ಮಠಕ್ಕೆ ಮಹಾಂತೇಶ್ವರ ಮಠ ಎಂದು ಕರೆಯುತ್ತಾರೆ. ಚಂಪಕ ಸರಸಿ ಕೊಳ ವಿಶಾಲವಾಗಿದ್ದು ಇಡಿ ವರ್ಷ ನೀರಿನಿಂದ ಕೂಡಿರುತ್ತದೆ. ಕೊಳದ ಪಶ್ಚಿಮ ಭಾಗದ ಮೂಲೆಯೊಂದರಲ್ಲಿ ಸುರಂಗವಿದ್ದು ಈ ಸುರಂಗ ಆನಂದಪುರ ಕೋಟೆಯನ್ನು ಸಂಪರ್ಕಿಸುತ್ತದೆ.

ಕೊಳದ ಪ್ರವೇಶದ್ವಾರದಲ್ಲಿ ಎರಡು ಆನೆಯ ಶಿಲ್ಪವಿದೆ ಅದರಲ್ಲಿ ಒಂದು ಗಂಡು ಆನೆ ಇನ್ನೊಂದು ಹೆಣ್ಣು ಆನೆ ಎಂದು ಹೇಳಲಾಗುತ್ತದೆ. ಸುಂದರ ರಂಗೋಲಿಯನ್ನು ನೋಡಿ ಅದನ್ನು ಬಿಡಿಸಿದ ಕನ್ಯೆಯನ್ನು ವಿವಾಹವಾದ ವೆಂಕಟಪ್ಪ ನಾಯಕರು ತಮ್ಮ ಮಡದಿಯ ನೆನಪಿಗಾಗಿ ನಿರ್ಮಿಸಿದ ಕೊಳ ಇಂದಿಗೂ ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದೆ. ಶಿವಮೊಗ್ಗ ಜಿಲ್ಲೆಗೆ ಭೇಟಿ ನೀಡಿದರೆ ಒಮ್ಮೆ ಸಾಗರದ ಬಳಿ ಇರುವ ಚಂಪಕ ಸರಸಿ ಕೊಳಕ್ಕೆ ಭೇಟಿ ನೀಡಿ.


ನಿಮ್ಮ ಆತ್ಮೀಯರಿಗೂ ಶೇರ್ ಮಾಡಿ

Leave a Reply

Your email address will not be published. Required fields are marked *