ರಾಜ್ಯದಲ್ಲಿ ಕನ್ನಡ ಭಾಷೆಯನ್ನು ಆಡಳಿತಾತ್ಮಕ ಭಾಷೆಯನ್ನಾಗಿ ಶೇ.100 ರಷ್ಟು ಬಳಕೆ ಮಾಡಬೇಕು ಎಂಬ ಕೂಗಿಗೆ ದಶಕಗಳ ಇತಿಹಾಸ ಇದೆ. ಆದರೆ, ಇದು ಈವರೆಗೆ ಸಾಧ್ಯವಾಗಿಲ್ಲ. ಹೀಗಾಗಿ ಇಂದು ಈ ಕುರಿತು ಬಿ.ಎಸ್. ಯಡಿಯೂರಪ್ಪ ಹೇಳಿಕೆ ನೀಡಿರುವುದು ಭವಿಷ್ಯದಲ್ಲಿ ಕನ್ನಡ ಭಾಷೆ ಆಡಳಿತಾತ್ಮಕ ಭಾಷೆಯಾಗಿ ಬಳಕೆಯಾಗುವ ಸಾಧ್ಯತೆಯನ್ನು, ಆಶಾವಾದವನ್ನು ನಮ್ಮ ಮುಂದಿಟ್ಟಿದೆ. ರಾಜ್ಯ ಸರ್ಕಾರ 2020-21 ನೇ ವರ್ಷವನ್ನು ಕನ್ನಡ ಕಾಯಕ ಹೆಸರಿನಲ್ಲಿ ವರ್ಷಾಚರಣೆ ಮಾಡುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರದ ಎಲ್ಲ ಇಲಾಖೆಗಳು ಕಡ್ಡಾಯವಾಗಿ ಕನ್ನಡದಲ್ಲಿಯೇ ವ್ಯವಹರಿಸುವಂತೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯ ಭಾಸ್ಕರ್ ಸುತ್ತೋಲೆ ಹೊರಡಿಸಿದ್ದಾರೆ. ಈ ಮೂಲಕ ರಾಜ್ಯದಲ್ಲಿ ‘ಕನ್ನಡ’ ಕಡ್ಡಾಯ ಎಂದು ಸರ್ಕಾರದಿಂದ ಮಹತ್ವದ ಆದೇಶವನ್ನು ಹೊರಡಿಸಲಾಗಿದೆ. ಈ ಆದೇಶದ ಪ್ರಕಾರ ಸರ್ಕಾರ ಹೊರಡಿಸಿದ ಸುತ್ತೋಲೆಯಲ್ಲಿ ಏನೆಲ್ಲಾ ವಿಷಯಗಳು ಅಡಕವಾಗಿದೆ ಎನ್ನುವುದನ್ನು ನಾವು ಈ ಲೇಖನದ ಮೂಲಕ ತಿಳಿದುಕೊಳ್ಳೋಣ.

ರಾಜ್ಯದಲ್ಲಿ ಎಲ್ಲಾ ಇಲಾಖೆಗಳೂ ಕನ್ನಡ ಭಾಷೆಯಲ್ಲಿಯೇ ವ್ಯವಹರಿಸುವಂತೆ ಸುತ್ತೋಲೆಯನ್ನು ಹೊರಡಿಸಲಾಗಿದ್ದು , ಸುತ್ತೋಲೆಯ ಮುಖ್ಯಾಂಶಗಳು ಈ ರೀತಿಯಾಗಿವೆ. ತಂತ್ರಾಂಶದಲ್ಲಿ ಕನ್ನಡವನ್ನು ಯಶಸ್ವಿಯಾಗಿ ಬಳಸಲು ಕಾರ್ಯಕ್ರಮ ರೂಪಿಸುವುದು. ಇಲಾಖೆಗಳು ರೂಪಿಸುವ ನೀತಿ, ಕರಡು ಪ್ರತಿಗಳನ್ನು ಕಡ್ಡಾಯವಾಗಿ ಕನ್ನಡದಲ್ಲಿಯೇ ಸಿದ್ದಪಡಿಸಿ ಹಾಗೂ ಅನುಮೋದಿತ ಅಂತಿಮ ಪ್ರತಿಯನ್ನು ಕನ್ನಡದಲ್ಲಿ ಸಿದ್ದಪಡಿಸುವುದು. ತಂತ್ರಾಂಶ ವ್ಯವಸ್ಥೆ ಮೂಲಕ ಅರ್ಜಿದಾರರಿಗೆ ಎಸ್‍ಎಂಎಸ್ ಹಾಗೂ ಇ-ಮೇಲ್‍ಗಳನ್ನು ಕನ್ನಡದಲ್ಲಿ ಕಳುಹಿಸುವುದು. ಕರ್ನಾಟಕದ ನಗರ ಪಟ್ಟಣಗಳ ಹೆಸರುಗಳನ್ನು ಕನ್ನಡದಲ್ಲಿಯೇ ಬರೆಯುವುದು, ಮೈಲುಗಲ್ಲುಗಳ ಮೇಲೆ ಕನ್ನಡ ಅಂಕಿ ಮತ್ತ ಅಕ್ಷರ ಬಳಕೆ, ಎಲ್ಲ ಇಲಾಖೆಗಳ ಜಾಲತಾಣಗಳ ಪ್ರಧಾನ ಹಾಗೂ ಒಳ ಪುಟಗಳು, ಸಾಮಾಜಿಕ ಜಾಲತಾಣದಲ್ಲೂ ಕನ್ನಡವನ್ನು ಕಡ್ಡಾಯವಾಗಿ ಬಳಕೆ ಮಾಡುವುದು. ಇಲಾಖೆ ಟಿಪ್ಪಣಿಗಳು, ಸಚಿವ ಸಂಪುಟದ ಟಿಪ್ಪಣಿ, ಕಾಯ್ದೆ ಕಾನೂನು ಆದೇಶಗಳನ್ನು ಕಡ್ಡಾಯವಾಗಿ ಕನ್ನಡದಲ್ಲಿ ಬಳಕೆ ಮಾಡುವುದು. ಕರ್ನಾಟಕದಲ್ಲಿ ಮಾರಾಟವಾಗುವ ಉತ್ಪನ್ನಗಳ ಪ್ಯಾಕೇಟ್ ಮೇಲೆ ಕನ್ನಡ ಬಳಕೆ ಮಾಡಲು ಒತ್ತಾಯಿಸುವುದು. ಅಲ್ಲದೇ ನಿಗಮ ಮಂಡಳಿಗಳು, ಸರ್ಕಾರದಿಂದ ಅನುದಾನ ಪಡೆಯುವ ಎಲ್ಲ ಸಂಘ ಸಂಸ್ಥೆಗಳು ವಾರ್ಷಿಕ ವರದಿಗಳನ್ನು, ಆಯವ್ಯಯ ದಾಖಲೆಗಳನ್ನು ಕಡ್ಡಾಯವಾಗಿ ಕನ್ನಡದಲ್ಲಿಯೇ ಸಲ್ಲಿಸುವುದು.

ರಾಜ್ಯ ಸರ್ಕಾರ ನೇಮಿಸಿಕೊಳ್ಳುವ ಗುತ್ತಿಗೆ ಹಾಗೂ ಹೊರ ಗುತ್ತಿಗೆ ನೌಕರರ ನೇಮಕಾತಿಯಲ್ಲಿ ಕಡ್ಡಾಯವಾಗಿ ಕನ್ನಡಿಗರನ್ನೇ ಒದಗಿಸುವಂತೆ ಮಾನವ ಸಂಪನ್ಮೂಲ ಸೇವೆ ಒದಗಿಸುವ ಸಂಸ್ಥೆಗಳಿಗೆ ಷರತ್ತು ವಿಧಿಸುವುದು. ಜಿಲ್ಲೆಯ ಪ್ರಮುಖ ರಸ್ತೆ, ವೃತ್ತಗಳಿಗೆ ನಾಡಿನ ಪ್ರಮುಖ ಸಾಹಿತಿಗಳ, ಸ್ವಾತಂತ್ರ್ಯ ಹೋರಾಟಗಾರರ ಹೆಸರು ಇಡುವುದು. ಹಾಗೂ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ನರ್ಸಿಂಗ್ ಹೋಂಗಳು ಸಾರ್ವಜನಿಕ ಮಾಹಿತಿಗಳನ್ನು ಕನ್ನಡದಲ್ಲಿಯೇ ಒದಗಿಸಬೇಕು ಎಂದು ಸುತ್ತೋಲೆಯಲ್ಲಿ ತಿಳಿಸಿದ್ದಾರೆ.

ಕನ್ನಡ ಭಾಷೆಗೆ ಸಾವಿರಾರು ವರ್ಷಗಳ ಇತಿಹಾಸ ಇದೆ. ನಾಡು-ನುಡಿ-ಜಲ ವಿಚಾರದಲ್ಲಿ ನಮಗೆ ಅಭಿಮಾನ ಇರಬೇಕು. ಇವೆಲ್ಲ ಕೇವಲ ಆಚರಣೆಗೆ ಸೀಮಿತವಾದರೆ ವ್ಯರ್ಥ. ಕರ್ನಾಟಕದಲ್ಲಿ ವಾಸ ಮಾಡುವ ಎಲ್ಲರೂ ಕನ್ನಡಿಗರೆ. ಆದರೆ, ಹೊರ ರಾಜ್ಯಗಳಿಂದ ಇಲ್ಲಿಗೆ ಬಂದು ನೆಲೆಸುವವರು ತಮ್ಮ ತನವನ್ನು ಉಳಿಸಿಕೊಳ್ಳುವ ಜೊತೆಗೆ ಕನ್ನಡ ಭಾಷೆ ಮತ್ತು ರಾಜ್ಯವನ್ನು ಗೌರವಿಸಿ ಬಾಳಬೇಕು

Leave a Reply

Your email address will not be published. Required fields are marked *