ಕರ್ನಾಟಕದ ನೂತನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ದಿನ ಕರ್ನಾಟಕದ ರೈತರ ಮಕ್ಕಳಿಗೆ ವಿದ್ಯಾರ್ಥಿವೇತನ ಯೋಜನೆಯನ್ನು ಘೋಷಣೆ ಮಾಡಿದ್ದರು. ಇದೀಗ, ರಾಜ್ಯ ಸರ್ಕಾರವು, ಸಚಿವ ಸಂಪುಟದ ಸಭೆಯ ನಿರ್ಣಯದಂತೆ, ರೈತರ ಮಕ್ಕಳ ಹೆಚ್ಚಿನ ಹಾಗೂ ಉನ್ನತ ಶಿಕ್ಷಣಕ್ಕೆ ಒತ್ತುಕೊಡಲು ಮತ್ತು ಪ್ರೋತ್ಸಾಹಿಸಲು ಪ್ರತ್ಯೇಕವಾಗಿ ರೂಪಾಯಿ ಒಂದು ಸಾವಿರ ಕೋಟಿಗಳ ಹೆಚ್ಚುವರಿ ವೆಚ್ಚದಲ್ಲಿ ಒಂದು ಹೊಸ ಶಿಷ್ಯ ವೇತನ ಯೋಜನೆಯನ್ನು ಆರಂಭಿಸಲು ಆದೇಶ ಹೊರಡಿಸಿದೆ.
ಎಸ್.ಎಸ್.ಎಲ್.ಸಿ. ಅಥವಾ 10ನೇ ತರಗತಿಯನ್ನು ಪೂರ್ಣಗೊಳಿಸಿದ ನಂತರ ಕರ್ನಾಟಕ ರಾಜ್ಯದ ಯಾವುದೇ ಭಾಗದಲ್ಲಿರುವ ಅಧಿಕೃತವಾಗಿ ನೋಂದಣಿಯಾಗಿರುವ ಶಿಕ್ಷಣ ಸಂಸ್ಥೆಗಳು ಅಥವಾ ವಿಶ್ವವಿದ್ಯಾಲಯಗಳಲ್ಲಿ ಸ್ನಾತಕೋತ್ತರ ಕೋರ್ಸ್ಗಳವರೆಗೆ ಪ್ರವೇಶವನ್ನು ಪಡೆದಿರುವ ಕರ್ನಾಟಕ ರಾಜ್ಯದ ರೈತರ ಎಲ್ಲಾ ಮಕ್ಕಳ ಬ್ಯಾಂಕ್ಗಳ ಖಾತೆಗಳಿಗೆ ನೇರ ನಗದು ವರ್ಗಾವಣೆ ಪದ್ಮತಿಯ ಮೂಲಕ 2021-22ನೇ ಆರ್ಥಿಕ ವರ್ಷದ ಸಾಲಿನಿಂದ ಜಾರಿಗೆ ಬರುವಂತ ಶಿಷ್ಯ ವೇತನದ ಹಣದ ಮೊತ್ತವನ್ನು ವಾರ್ಷಿಕ ಶಿಷ್ಯ ವೇತನ ರೂಪದಲ್ಲಿ ಒದಗಿಸಲು ಮತ್ತು ಪಾವತಿಸಲು ಸರ್ಕಾರವು ಅನುಮೋದನೆಯನ್ನು ನೀಡಿದೆ.
ಪಿಯುಸಿ, ಐಟಿಐ ಅಥವಾ ತತ್ಸಮಾನ ತರಗತಿಗಳಲ್ಲಿ ಓದುತ್ತಿರುವ ಬಾಲಕರಿಗೆ 2,500 ಮತ್ತು ಬಾಲಕಿಯರಿಗೆ ತಲಾ 3,000 ರೂ. ಶಿಷ್ಯವೇತನ ದೊರಕಲಿದೆ. ಪದವಿ, ಎಂಬಿಬಿಎಸ್, ಎಂಜಿನಿಯರಿಂಗ್ ಪದವಿ ಹಾಗೂ ಪದವಿಗೆ ಸಮನಾದ ಕೋರ್ಸ್ಗಳ ವಿದ್ಯಾರ್ಥಿಗಳಿಗೆ ತಲಾ 5,000 ಮತ್ತು ವಿದ್ಯಾರ್ಥಿನಿಯರಿಗೆ ತಲಾ 5,500 ರೂ. ಶಿಷ್ಯವೇತನ ಪ್ರಕಟಿಸಲಾಗಿದೆ.
ಕಾನೂನು ಪದವಿ, ಅರೆ ವೈದ್ಯಕೀಯ, ಬಿ. ಫಾರ್ಮಾ, ನರ್ಸಿಂಗ್ ಮತ್ತು ಇತರ ವೃತ್ತಿಪರ ಕೋರ್ಸ್ ಗಳ ವಿದ್ಯಾರ್ಥಿಗಳಿಗೆ 7,500 ಮತ್ತು ವಿದ್ಯಾರ್ಥಿನಿಯರಿಗೆ 8,000 ಶಿಷ್ಯವೇತನ ನೀಡಲಾಗುತ್ತದೆ. ವೈದ್ಯಕೀಯ, ಎಂಜಿನಿಯರಿಂಗ್ ಸೇರಿದಂತೆ ಎಲ್ಲ ಸ್ನಾತಕೋತ್ತರ ಕೋರ್ಸ್ಗಳ ವಿದ್ಯಾರ್ಥಿಗಳಿಗೆ 10,000, ವಿದ್ಯಾರ್ಥಿನಿಯರಿಗೆ 11,000 ಶಿಷ್ಯವೇತನ ಘೋಷಿಸಲಾಗಿದೆ.
ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳ ಪೋಷಕರು ಸಾಗುವಳಿ ಮಾಡುತ್ತಿರುವ ಕೃಷಿ ಜಮೀನು ಹೊಂದಿರಬೇಕು. ಪೋಷಕರು ಇಲ್ಲವಾದಲ್ಲಿ, ವಿದ್ಯಾರ್ಥಿಗಳ ಹೆಸರಿನಲ್ಲಿ ಕೃಷಿ ಜಮೀನು ಇರಬೇಕು. ಈ ಯೋಜನೆಯಡಿ ಒಬ್ಬ ವಿದ್ಯಾರ್ಥಿ ಒಮ್ಮೆ ಮಾತ್ರ ಶಿಷ್ಯವೇತನ ಪಡೆಯಬಹುದು ಎಂದು ಆದೇಶದಲ್ಲಿ ತಿಳಿಸಲಾಗಿದೆ.
ರಾಜ್ಯ ಸರ್ಕಾರದ ಅನುದಾನದಲ್ಲಿ ನೀಡುವ ಇತರೆ ಸಾಮಾನ್ಯ ಶಿಷ್ಯವೇತನಗಳನ್ನು ಯೋಜನೆಯ ಫಲಾನುಭವಿಗಳು ಆ ಅವಧಿಯಲ್ಲಿ ಪಡೆಯುವಂತಿಲ್ಲ. ಮೆರಿಟ್, ಅರ್ಹತಾ ಪರೀಕ್ಷೆ, ರ್ಯಾಂಕ್ ಆಧಾರದಲ್ಲಿ ನೀಡುವ ಶಿಷ್ಯವೇತನ ಅಥವಾ ಪ್ರಶಸ್ತಿಗಳಿಗೆ ಈ ನಿರ್ಬಂಧ ಅನ್ವಯಿಸುವುದಿಲ್ಲ.