ನುಗ್ಗೆಸೊಪ್ಪು ಇದು ಹಲವು ರೋಗಗಳಿಗೆ ಔಷಧ. ನುಗ್ಗೆ ಸೊಪ್ಪನ್ನು ಆಹಾರದಲ್ಲಿ ಬಳಸುವುದರಿಂದ ಹಲವಾರು ಆರೋಗ್ಯ ಲಾಭಗಳು ದೊರಕುತ್ತದೆ. ನುಗ್ಗೆಸೊಪ್ಪು ಹೊಟ್ಟೆಯಲ್ಲಿನ ವಿಷದ ಅಂಶಗಳನ್ನು ತೆಗೆಯುತ್ತದೆ ಎಂಬ ಮಾತು ಇದೆ. ಈ ನುಗ್ಗೆಸೊಪ್ಪು ಅಥವಾ ನುಗ್ಗೆಕಾಯಿಯನ್ನು ಯಾರು ಬಳಸಬಹುದು ಯಾರು ಹೆಚ್ಚು ಬಳಸಬಾರದು ಎಂಬ ಮಾಹಿತಿ ನಾವು ತಿಳಿಯೋಣ.
ಮನುಷ್ಯನಲ್ಲಿ ವಾತ, ಪಿತ್ತ, ಕಫ ಎಂಬ ಮೂರು ರೀತಿಯ ಪ್ರಕೃತಿ ಇರುತ್ತದೆ. ನುಗ್ಗೆಸೊಪ್ಪು ಅಥವಾ ನುಗ್ಗೆಕಾಯಿಯಲ್ಲಿ ಉಷ್ಣಾಂಶವಿರುತ್ತದೆ. ನುಗ್ಗೆಸೊಪ್ಪುನ್ನು ಎಲ್ಲರೂ ಮಿತಿಯಲ್ಲಿ ಬಳಸಬಹುದು. ಆದರೆ ರಕ್ತದ ಪಿಎಚ್ ಮೌಲ್ಯ ಅಸಿಡಿಕ್ ಕಡೆಯಲ್ಲಿ ಇದ್ದು ಪಿತ್ತ ಪ್ರಕೃತಿ ಇದ್ದವರು ನುಗ್ಗೆಸೊಪ್ಪುನ್ನು ಹೆಚ್ಚಾಗಿ ಬಳಸಬಾರದು. ಯಾಕೆಂದರೆ ಪಿತ್ತವು ಉಷ್ಣದಿಂದಲೆ ಉಂಟಾಗುವ ಕಾರಣ ನುಗ್ಗೆಸೊಪ್ಪು ದೇಹದಲ್ಲಿ ಉಷ್ಣತೆಯನ್ನು ಬಿಡುಗಡೆ ಮಾಡುತ್ತದೆ. ನುಗ್ಗೆಸೊಪ್ಪುನ್ನು ಕಫ ಪ್ರಕೃತಿ ಉಳ್ಳವರು ಹೇರಳವಾಗಿ ಬಳಸಬಹುದು.
ಕಫವು ಶೀತದಿಂದ ಬರುತ್ತದೆ. ಆದ್ದರಿಂದ ನುಗ್ಗೆಸೊಪ್ಪಿನಲ್ಲಿರುವ ಉಷ್ಣಾಂಶ ಕಫವನ್ನು ಕರಗಿಸುತ್ತದೆ. ನುಗ್ಗೆಸೊಪ್ಪು ಹಾಗೂ ನುಗ್ಗೆಕಾಯಿಯಲ್ಲಿ ಎಲ್ಲ ರೀತಿಯ ಖನಿಜಾಂಶಗಳು ಇವೆ. ಮೂಳೆಗಳು ದುರ್ಬಲವಾಗಿದ್ದವರು, ರಕ್ತದ ಕೊರತೆ ಇದ್ದವರು, ಅಸ್ತಿ ಧಾತುವಿನ ಕೊರತೆ ಇರುವವರು ಈ ನುಗ್ಗೆಕಾಯಿ, ನುಗ್ಗೆಸೊಪ್ಪು ಬಳಸುವುದರಿಂದ ಈ ಸಮಸ್ಯೆಗಳಿಂದ ಪರಿಹಾರ ಪಡೆಯಬಹುದು. ನುಗ್ಗೆಸೊಪ್ಪು ಹಾಗೂ ನುಗ್ಗೆಕಾಯಿ ಇಂದ ಈಗಾಗಲೆ ಇರುವ ಖಾಯಿಲೆಗಳಿಗೆ ಪರಿಹಾರ ಸಿಗುವುದರ ಜೊತೆಗೆ, ಮುಂದೆ ಬರುವ ಖಾಯಿಲೆಗಳನ್ನು ತಡೆಗಟ್ಟಲು ಸಹಾಯ ಮಾಡುತ್ತದೆ.
ನುಗ್ಗೆಕಾಯಿ ಹಾಗೂ ನುಗ್ಗೆಸೊಪ್ಪು ಇವುಗಳು ಮನೆಯ ಹಿತ್ತಲಲ್ಲೆ ಸಿಗುತ್ತದೆ. ನುಗ್ಗೆಸೊಪ್ಪಿನಿಂದ ಪಲ್ಯ, ಕೊಸಂಬರಿ, ಸಾಂಬಾರ್ ಎಲ್ಲವನ್ನು ಮಾಡಬಹುದು. ನೈಸರ್ಗಿಕವಾಗಿ ಸಿಗುವ, ಔಷಧೀಯ ಗುಣಗಳನ್ನು ಹೊಂದಿರುವ ಸೊಪ್ಪುಗಳನ್ನು, ತರಕಾರಿಗಳನ್ನು ಬಳಸಿಕೊಂಡು ಆರೋಗ್ಯವನ್ನು ಕಾಪಾಡಿಕೊಳ್ಳುವ ದಾರಿ ನಮ್ಮ ಬಳಿಯೆ ಇದೆ.