ಕನ್ನಡದ ಕೋಟ್ಯಧಿಪತಿ ಭಾರತೀಯ ಕನ್ನಡ ಭಾಷೆಯ ರಸಪ್ರಶ್ನೆ ಆಟದ ಕಾರ್ಯಕ್ರಮವಾಗಿದ್ದು, ಇದನ್ನು ಪುನೀತ್ ರಾಜ್ಕುಮಾರ್ ನಿರೂಪಣೆ ಮಾಡಿದ್ದಾರೆ. ಇದು ಅಂತರರಾಷ್ಟ್ರೀಯ ಖ್ಯಾತಿಯ ಸೋನಿ ಪಿಕ್ಚರ್ಸ್ ಟೆಲಿವಿಷನ್- ಪ್ರಸಿದ್ಧ ಗೇಮ್ ಶೋ ಹು ವಾಂಟ್ಸ್ ಟು ಬಿ ಅ ಮಿಲಿಯನೇರ್ ನ ಅಧಿಕೃತ ಕನ್ನಡ ಭಾಷಾ ರೂಪಾಂತರವಾಗಿದೆ. ಈ ಕಾರ್ಯಕ್ರಮದ ಮೊದಲ ಮೂರು ಸೀಸನ್ಗಳು ಸ್ಟಾರ್ ಸುವರ್ಣದಲ್ಲಿ ಪ್ರಸಾರ ಮಾಡಲಾಗುತ್ತಿತ್ತು. ರಿಯಾಲಿಟಿ ಶೋಗಳಲ್ಲಿ ಹೊಸ ಆಲೋಚನೆಗಳ ಸರಣಿಯ ನಂತರ ಸ್ಟಾರ್ ನೆಟ್ವರ್ಕ್ನ ಕನ್ನಡದ ಸಾಮಾನ್ಯ ಮನರಂಜನಾ ಚಾನೆಲ್ ಏಷ್ಯನೆಟ್ ಸುವರ್ಣ ಮತ್ತೊಂದು ಅಮೋಘ ರಿಯಾಲಿಟಿ ಶೋ ಅನ್ನು ಘೋಷಿಸಿತು.
ಅತ್ಯಂತ ಜನಪ್ರಿಯ ರಿಯಾಲಿಟಿ ಶೋ ಕೌನ್ ಬನೇಗಾ ಕರೋಡಪತಿ ಆಧಾರಿತ ಕನ್ನಡದ ಕೋಟ್ಯಾಧಿಪತಿ. ಸಾಮಾನ್ಯ ಕನ್ನಡಿಗರನ್ನು ಉದ್ದೇಶಿಸಿರುವ ಈ ಕಾರ್ಯಕ್ರಮವು ಕನ್ನಡ ದೂರದರ್ಶನದ ಅತಿದೊಡ್ಡ ರಿಯಾಲಿಟಿ ಶೋಗಳಲ್ಲಿ ಒಂದಾಗಿದ್ದು, ಇದರಲ್ಲಿ ಗೆದ್ದವರಿಗೆ 1 ಕೋಟಿ ರೂ ಬಹುಮಾನ ನೀಡಲಾಗುತ್ತದೆ. ಕನ್ನಡ ಕೋಟ್ಯಾಧಿಪತಿಯ ಆವೃತ್ತಿಯ ಸ್ವರೂಪ ಮತ್ತು ನಿಯಮಗಳು ಕೆಬಿಸಿಯ ಮೊದಲ ಆವೃತ್ತಿಯಂತೆಯೇ ಇರುತ್ತದೆ. ಕಾರ್ಯಕ್ರಮದ ಮೊದಲೆರಡು ಸೀಸನ್ ಗಳನ್ನು ನಟ ಪುನೀತ್ ರಾಜ್ಕುಮಾರ್ ನಿರೂಪಿಸಿದ್ದರು.
ದೂರದರ್ಶನದಲ್ಲಿ ಮೊದಲ ಬಾರಿಗೆ ನಿರೂಪಕರಾಗಿ ಪಾದಾರ್ಪಣೆ ಮಾಡಿದ ಪುನೀತ್ ರಾಜ್ಕುಮಾರ್, ಈ ಕಾರ್ಯಕ್ರಮದ ನಿರೂಪಕನಾಗಿರುವುದರ ಬಗ್ಗೆ ನಾನು ಉತ್ಸುಕನಾಗಿದ್ದೇನೆ, ಇದು ಸಾಮಾನ್ಯ ಜನರೊಂದಿಗೆ ನಿಕಟವಾಗಿ ಸಂವಹನ ನಡೆಸಲು ನನಗೆ ಅವಕಾಶ ನೀಡುತ್ತದೆ. ಪ್ರದರ್ಶನದ ಸ್ವರೂಪವು ವಿಶಿಷ್ಟವಾಗಿದೆ ಏಕೆಂದರೆ ಇದು ಸಾಮಾನ್ಯ ಜನರಿಗೆ ತಮ್ಮ ಜ್ಞಾನವನ್ನು ಬಳಸಲು ಮತ್ತು ಅವರ ಜೀವನವನ್ನು ಬದಲಾಯಿಸಲು ಅವಕಾಶವನ್ನು ನೀಡುತ್ತದೆ. ಕನ್ನಡ ಕೋಟ್ಯಾಧಿಪತಿಯನ್ನು ಕೆಬಿಸಿಯಂತೆಯೇ ಬಿಗ್ ಸಿನರ್ಜಿ ನಿರ್ಮಿಸುತ್ತದೆ.
ಕಾರ್ಯಕ್ರಮದ ಮೂರನೇ ಸೀಸನನ್ನು ನಟ ರಮೇಶ್ ಅರವಿಂದ್ ನಿರೂಪಣೆ ಮಾಡಿದರು. ಈ ಸೀಸನ್ನಿನಲ್ಲಿ ಕಾರ್ಯಕ್ರಮದ ಶೀರ್ಷಿಕೆಯನ್ನು ಕನ್ನಡದ ಕೋಟ್ಯಾಧಿಪತಿಯಿಂದ ಕನ್ನಡದ ಕೋಟ್ಯಧಿಪತಿ ಎಂದು ಬದಲಾಯಿಸಲಾಯಿತು. ಇಲ್ಲಿಯವರೆಗೆ 1 ಕೋಟಿ ರೂಪಾಯಿಗಳನ್ನು ಕೇವಲ ಒಬ್ಬರೇ ಗೆದ್ದಿದ್ದಾರೆ. ಕಾರ್ಯಕ್ರಮದ ಎರಡನೇ ಸೀಸನ್ನಿನಲ್ಲಿ ಕೊಪ್ಪಳದವರಾದ ಹುಸೇನ್ ಬಾಷಾ ಎಂಬುವವರು ₹1 ಕೋಟಿ ಗೆದ್ದಿದ್ದಾರೆ.
1 ಮತ್ತು 2ನೇ ಸೀಸನ್ ಅನ್ನು ಪುನೀತ್ ರಾಜ್ಕುಮಾರ್ ನಡೆಸಿಕೊಟ್ಟಿದ್ದರು. ಆದರೆ 3ನೇ ಸೀಸನ್ ನ್ನು ಕಾರಣಾಂತರಗಳಿಂದಾಗಿ ಪುನೀತ್ ಅವರು ನಡೆಸಿಕೊಡಲು ಆಗಿರಲಿಲ್ಲ, ಇವರ ಬದಲಾಗಿ ಎವರ್ ಗ್ರೀನ್ ಹೀರೋ ರಮೇಶ್ ಅರವಿಂದ್ 3ನೇ ಸೀಸನ್ ಅನ್ನು ನಡೆಸಿಕೊಟ್ಟಿದ್ದರು. ರಮೇಶ್ ಅಚ್ಚುಕಟ್ಟಾಗಿ ಶೋ ನಡೆಸಿಕೊಟ್ಟಿದ್ದರೂ ಕೋಟ್ಯಧಿಪತಿ ಕಾರ್ಯಕ್ರಮ ಪುನೀತ್ ನಡೆಸಿಕೊಟ್ಟಷ್ಟು ಜನಪ್ರಿಯತೆಯನ್ನು ತಂದುಕೊಡಲಿಲ್ಲ, ವಿಕೆಂಡ್ ವಿತ್ ರಮೇಶ್ ಕಾರ್ಯಕ್ರಮದ ರೀತಿಯಲ್ಲಿಯೂ ಇದು ರಮೇಶ್ ಅವರ ನೇತೃತ್ವದಲ್ಲಿ ಹಿಟ್ ಆಗುತ್ತೆ ಎಂದು ಭಾವಿಸಲಾಗಿತ್ತು, ಆದರೆ ಅದಾಗಲಿಲ್ಲ.
ಹೀಗಾಗಿ 4ನೇ ಸೀಸನ್ಗೆ ಪುನಃ ಪುನೀತ್ ರಾಜ್ಕುಮಾರ್ ಬರಲೇಬೇಕಾಯಿತು. ಹೀಗೆ ಕನ್ನಡದ ಕೋಟ್ಯಧಿಪತಿ ಕಾರ್ಯಕ್ರಮದ ಯಶಸ್ಸಿನಲ್ಲಿ ಪುನೀತ್ ರಾಜ್ಕುಮಾರ್ ಅವರ ಪಾತ್ರ ಹಿರಿಯದಿದೆ. ಆದರೆ ಇಂದು ಪುನೀತ್ ಇಲ್ಲದ ಕೋಟ್ಯಧಿಪತಿಯನ್ನು ನಿಜಕ್ಕೂ ಯಾರೂ ಊಹಿಸಿಕೊಳ್ಳಲು ಆಗಲ್ಲ. ಈಗಲೂ ಸಹ ಕನ್ನಡ ಕೋಟ್ಯಧಿಪತಿ ರಿಯಾಲಿಟಿ ಶೋ ಅಂದ್ರೆ ಥಟ್ ಅಂತ ನೆನಪಾಗೋದೇ ನಮ್ಮೆಲ್ಲರ ಅಚ್ಚುಮೆಚ್ಚಿನ ಕರ್ನಾಟಕದ ರತ್ನ ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್. ಕನ್ನಡ ಕೋಟ್ಯಧಿಪತಿ ಶೋ ಸೂಪರ್ ಡೂಪರ್ ಹಿಟ್ ಆಗಲು ಮೂಲ ಕಾರಣವೇ ಅಪ್ಪು ಅನ್ನೋದ್ರಲ್ಲಿ ನೋಡೌಟ್. ಆದರೆ ಪುನೀತ್ ಇವತ್ತು ಇಲ್ಲದಿರುವುದರಿಂದ ಕಷ್ಟವಾದರೂ 5ನೇ ಸೀಸನ್ ಕೋಟ್ಯಧಿಪತಿಗೆ ಹೊಸಬರನ್ನು ಹುಡುಕಿಕೊಳ್ಳಲೇ ಬೇಕಿದೆ.
ರಮೇಶ್ ಅರವಿಂದ್ ಮತ್ತೆ ಕೋಟ್ಯಧಿಪತಿ ಜವಾಬ್ದಾರಿ ಹೊರುವುದು ಅನುಮಾನ. ಹೀಗಾಗಿ ಕನ್ನಡದಲ್ಲಿ ಯಾವುದೇ ರಿಯಾಲಿಟಿ ಶೋ ನಡೆಸಿಕೊಡಬಲ್ಲ ಸ್ಟಾರ್ ನಟರಲ್ಲಿ ಮುಂಚೂಣಿಯಲ್ಲಿರುವುದು ಕಿಚ್ಚ ಸುದೀಪ್, ಈಗಾಗಲೇ ಬಿಗ್ ಬಾಸ್ನ ಸಾರಥಿಯಾಗಿ ಜನಮನ ಗೆದ್ದಿರುವ ಕಿಚ್ಚ ಈಗ ಕೋಟ್ಯಧಿಪತಿಯ ಜವಾಬ್ದಾರಿಯನ್ನು ಹೊರುವ ಸಾಧ್ಯತೆ ಇದೆ. ಪುನೀತ್ ರಾಜ್ಕುಮಾರ್ ಮತ್ತು ಸುದೀಪ್ ಬಾಲ್ಯದಿಂದಲೂ ಸ್ನೇಹಿತರು. ಪುನೀತ್ ನಡೆಸಿಕೊಡುತ್ತಿದ್ದ ಕಾರ್ಯಕ್ರಮ ಸದಾ ಮುಂದುವರೆಯಬೇಕೆಂಬುದು ಎಲ್ಲರ ಆಸೆ. ಈ ಕಾರ್ಯಕ್ರಮ ಅದ್ಭುತವಾದ ರಿಯಾಲಿಟಿ ಶೋ ಕೂಡ ಅನ್ನೋದ್ರಲ್ಲಿ ನೋ ಡೌಟ್. ಹೀಗಾಗಿ ಸುದೀಪ್ ಅವರು ಕೋಟ್ಯಾಧಿಪತಿ ಕಾರ್ಯಕ್ರಮದ ಸಾರಥ್ಯವನ್ನು ವಹಿಸಲಿದ್ದಾರೆ ಎನ್ನಲಾಗುತ್ತಿದೆ. ಒಂದು ವೇಳೆ ಈ ಸುದ್ದಿ ಖಚಿತವಾದಲ್ಲಿ ಬಿಗ್ ಬಾಸ್ ನಂತರ ಮತ್ತೊಂದು ರಿಯಾಲಿಟಿ ಶೋ ನಡೆಸಿಕೊಡುವ ಜವಾಬ್ದಾರಿ ಸುದೀಪ್ ಅವರಿಗೆ ಬೀಳಲಿದೆ.