ಚಿತ್ರದುರ್ಗ ಎಂದಾಕ್ಷಣ ನಮ್ಮೆಲ್ಲರಿಗೂ ನೆನಪಾಗುವುದು ಶೌರ್ಯ ಹಾಗೂ ವೀರತ್ವವನ್ನು ಪ್ರತಿಪಾದಿಸುವಂತಹ ಚಿತ್ರದುರ್ಗದ ದುರ್ಗಮ ಕೋಟೆ ಚಂದ್ರವಳ್ಳಿ ಕೆರೆ ಹಾಗೂ ಗುಹೆ ಹಾಗೂ ಚಳಿಗಾಲದಲ್ಲಿಯೂ ಮೈ ಕಾವೇರಿಸುವಂತಹ ರಣಬಿಸಿಲು ಮತ್ತು ಸುತ್ತಮುತ್ತಲು ಕತ್ತೆತ್ತಿ ನೋಡಿದರೆ ಕಾಣಸಿಗುವಂತಹ ವಿದ್ಯುತ್ ಉತ್ಪಾದಿಸುವ ಗಾಳಿಯಂತ್ರಗಳು. ಐತಿಹಾಸಿಕ ಪ್ರವಾಸಿ ತಾಣವಾಗಿರುವ ಕೋಟೆಗಳ ನಾಡು ಚಿತ್ರದುರ್ಗ ಕೇವಲ ಬಂಡೆಗಳಿಂದ ಕೂಡಿರುವ ಬಯಲುಸೀಮೆ ಎಂದು ಜನರು ಭಾವಿಸುತ್ತಾರೆ. ಆದರೆ ಬಯಲು ಸೀಮೆಯ ಪ್ರದೇಶವಾದ ಚಿತ್ರದುರ್ಗದಲ್ಲಿ ಮಲೆನಾಡಲ್ಲಿ ಕಾಣಿಸುವಂತಹ ಗಿರಿಧಾಮಗಳು ಇರುವುದು ಬಹುಶಹ ಬಹಳಷ್ಟು ಜನರಿಗೆ ತಿಳಿದಿರುವುದಿಲ್ಲ.

ಚಿತ್ರದುರ್ಗದ ಐತಿಹಾಸಿಕ ಕೋಟೆಯನ್ನು ನೋಡಲು ಪ್ರತಿನಿತ್ಯ ಪ್ರವಾಸಿಗರ ದಂಡೇ ಆಗಮಿಸುತ್ತದೆ ಆದರೆ ಚಿತ್ರದುರ್ಗದ ಕಲ್ಲಿನ ಕೋಟೆಯ ಬೆಟ್ಟಕ್ಕೆ ಹೊಂದಿಕೊಂಡಿರುವಂತೆ ಒಂದು ಅದ್ಭುತ ಗಿರಿಧಾಮವಿದೆ. ಈ ಗಿರಿಧಾಮವನ್ನು ನೋಡದೆ ತೆರಳಿದರೆ ತಮ್ಮ ಚಿತ್ರದುರ್ಗದ ಪ್ರವಾಸ ಅಪೂರ್ಣವೇ ಸರಿ. ನಮ್ಮ ಕನ್ನಡ ಚಿತ್ರರಂಗದ ಐತಿಹಾಸಿಕ ಚಿತ್ರ ಎಂದು ಕರೆಸಿಕೊಳ್ಳುವ ನಾಗರಹಾವು ಸಿನಿಮಾದಲ್ಲಿ ಪುಟ್ಟಣ್ಣ ಕಣಗಾಲ್ ಅವರು ಬಾರೆ ಬಾರೆ ಚಂದದ ಚೆಲುವಿನ ತಾರೆ ಹಾಡನ್ನ ಚಿತ್ರೀಕರಿಸಿದ್ದು ಚಿತ್ರದುರ್ಗದ ಇದೇ ಗಿರಿಧಾಮದಲ್ಲಿ. ಸದಾ ಹಸಿರನ್ನು ಹೊತ್ತು ಮಲೆನಾಡಿನ ಅಪೂರ್ವ ಸೊಬಗನ್ನ ಸೃಷ್ಟಿಮಾಡಿ ಬಿಸಿಲಿನ ತಾಪವನ್ನು ತಂಗಾಳಿಯ ಮೂಲಕ ಪರಿಹರಿಸಿ ನೋಡುಗರ ಕಣ್ಮನಗಳನ್ನ ಮುದಗೊಳಿಸುವಂತಹ ಚಿತ್ರದುರ್ಗದ ಅದ್ಭುತ ಗಿರಿಧಾಮವೇ ಜೋಗಿಮಟ್ಟಿ.

ಚಿತ್ರದುರ್ಗ ನಗರದಿಂದ ಹತ್ತು ಕಿಲೋಮೀಟರ್ ದೂರದಲ್ಲಿರುವ ಬಯಲುಸೀಮೆಯ ಊಟಿ ಎಂದೇ ಖ್ಯಾತಿಯನ್ನು ಪಡೆದಿರುವ ಜೋಗಿಮಟ್ಟಿಯ ಬಗ್ಗೆ ಕೆಲವು ಮಾಹಿತಿಯನ್ನು ತಿಳಿದುಕೊಳ್ಳೋಣ. ಚಿತ್ರದುರ್ಗದ ಅತ್ಯಂತ ಎತ್ತರದ ಪ್ರದೇಶವೇ ಜೋಗಿಮಟ್ಟಿ ಈ ಶಿಖರ ಸಮುದ್ರಮಟ್ಟದಿಂದ ಸುಮಾರು ಮೂರು ಸಾವಿರದ ಎಂಟು ನೂರಾ ಮೂರು ಅಡಿ ಎತ್ತರದಲ್ಲಿದೆ. ಚಿತ್ರದುರ್ಗ ಹೊಳಲ್ಕೆರೆ ಹಾಗೂ ಹಿರಿಯೂರು ತಾಲೂಕಿನ ಸುಮಾರು ಹತ್ತು ಸಾವಿರದ ನಾಲವತ್ತೊಂಬತ್ತು ಹೆಕ್ಟರ್ ಅರಣ್ಯ ಪ್ರದೇಶದಲ್ಲಿ ಹರಡಿಕೊಂಡಿರುವುದೇ ಈ ಜೋಗಿಮಟ್ಟಿ.

ಈ ಜೋಗಿಮಟ್ಟಿ ಪ್ರದೇಶ ಸುಮಾರು ನಲವತ್ತು ಕಿಲೋಮೀಟರ್ ನಷ್ಟು ವಿಸ್ತಾರವಾಗಿ ಹರಡಿಕೊಂಡಿದೆ. ಜೋಗಿಮಟ್ಟಿಯ ವಿಶೇಷತೆಯೆಂದರೆ ಇದು ನಮ್ಮ ಏಷ್ಯಾ ಖಂಡದಲ್ಲಿಯೇ ಅತಿ ಹೆಚ್ಚು ಗಾಳಿ ಬೀಸುವ ಪ್ರದೇಶವೆನಿಸಿಕೊಂಡಿದೆ ಸುತ್ತಲೂ ಬಯಲು ಹೆಚ್ಚಾಗಿರುವ ಕಾರಣ ಇಲ್ಲಿ ಹೆಚ್ಚಾಗಿ ಗಾಳಿ ಬೀಸುತ್ತಿರುತ್ತದೆ ರಭಸದಿಂದ ಗಾಳಿ ಬೀಸುವ ಕಾರಣ ಅದರಿಂದ ವಿದ್ಯುತ್ತನ್ನು ಉತ್ಪಾದಿಸುವ ಸಲುವಾಗಿ ಹಲವಾರು ಪವನ ವಿದ್ಯುತ್ ಯಂತ್ರಗಳನ್ನು ಅಳವಡಿಸಲಾಗಿದೆ.

ಈ ಗಿರಿಧಾಮಕ್ಕೆ ಜೋಗಿಮಟ್ಟಿ ಎಂದು ಹೆಸರು ಬರಲು ಒಂದು ವಿಶೇಷ ಕಾರಣವಿದೆ ಹಿಂದೆ ಈ ಗಿರಿಯ ತಪ್ಪಲಿನಲ್ಲಿ ಒಬ್ಬ ಜೋಗಿ ವಾಸಿಸುತ್ತಿದ್ದರಂತೆ ಪ್ರಸಿದ್ಧ ಯೋಗಿ ಆಗಿದ್ದ ಇವರಿಗೆ ಅನೇಕ ವನಸ್ಪತಿಗಳ ಪರಿಚಯವಿತ್ತಂತೆ ಬಡ ರೋಗಿಗಳಿಗೆ ತಮ್ಮ ವನಸ್ಪತಿ ವಿದ್ಯೆಯಿಂದ ಔಷಧಿಯನ್ನು ಅವರು ಮಾಡಿ ಕೊಡುತ್ತಿದ್ದರಂತೆ. ತಮ್ಮ ಸಾಮಾಜಿಕ ಕಾರ್ಯದಿಂದ ಅವರು ದೈವತ್ವಕ್ಕೆ ಏರಿದ್ದರು ಮುಂದೆ ಇದೇ ಗಿರಿಧಾಮದ ತಪ್ಪಲಿನಲ್ಲಿ ಜೋಗಿಯವರು ನಿರ್ವಾಣ ಹೊಂದಿದ್ದು ಅವರ ಸಮಾಧಿ ಗಿರಿಧಾಮದ ಶಿಖರದಲ್ಲಿ ಇರುವುದರಿಂದ ಅದಕ್ಕೆ ಜೋಗಿಮರಡಿ ಎಂಬ ಹೆಸರು ಬಂದು ನಂತರ ಆಡುಭಾಷೆಯಲ್ಲಿ ಜೋಗಿಮಟ್ಟಿ ಎಂದು ಕರೆಯಲಾಗುತ್ತಿದೆ.

ಜೋಗಿಮಟ್ಟಿ ಅರಣ್ಯ ಪ್ರದೇಶವನ್ನು ಸರ್ಕಾರ ವನ್ಯಧಾಮ ಎಂದು ಘೋಷಿಸಿದೆ ಜೋಗಿಮಟ್ಟಿಯಲ್ಲಿ ಕರಡಿ ಜಿಂಕೆ ಚಿರತೆ ಗಳಂತಹ ವನ್ಯ ಪ್ರಾಣಿ-ಪಕ್ಷಿಗಳು ಲೆಕ್ಕವಿಲ್ಲದಷ್ಟು ಇವೆ. ಹೀಗಾಗಿ ದಿನನಿತ್ಯವೂ ನೂರಾರು ಜನ ನಿಸರ್ಗದ ಸೌಂದರ್ಯವನ್ನು ಸವಿಯಲೆಂದೇ ಜೋಗಿಮಟ್ಟಿಗೆ ಭೇಟಿ ನೀಡುತ್ತಾರೆ.

ಗಿರಿ ಶಿಖರದ ಮೇಲೆ ಕಾಣುವ ಸೂರ್ಯೋದಯ ಮತ್ತು ಸೂರ್ಯಾಸ್ತದ ದೃಶ್ಯಾವಳಿಗಳಿಗೆ ಮನಸೋಲದವರೇ ಇಲ್ಲ. ಮಳೆಗಾಲ ಮತ್ತು ಚಳಿಗಾಲದಲ್ಲಿ ಮಲೆನಾಡಿನ ಸೌಂದರ್ಯವನ್ನೇ ನಾಚಿಸುವಂತಹ ಅದ್ಭುತ ಸೊಬಗು ಜೋಗಿಮಟ್ಟಿಯಲ್ಲಿ ಮೈದಳೆದಿರುತ್ತದೆ. ಜೋಗಿಮಟ್ಟಿಯ ತುತ್ತತುದಿಯಲ್ಲಿ ಸುಂದರವಾದ ಪರಿಸರದ ಆವರಣದಲ್ಲಿ ಜೋಗಿಯ ದೇವಾಲಯವಿದೆ ಅದರ ಎದುರು ಅರಣ್ಯ ಇಲಾಖೆ ನಿರ್ಮಿಸಿರುವಂತಹ ವೀಕ್ಷಣಾ ಗೋಪುರವಿದೆ.

ಬ್ರಿಟಿಷರ ಕಾಲದಲ್ಲಿ ನಿರ್ಮಿಸುವಂತಹ ಪ್ರವಾಸಿ ಭವನ ಇದೆ. ಜೋಗಿಮಟ್ಟಿಯಲ್ಲಿ ಪ್ರವಾಸಿಗರಿಗೆ ವಿಶ್ರಾಂತಿ ಕೊಠಡಿಗಳು ಸಹ ಲಭ್ಯವಿದೆ ಅರಣ್ಯ ಇಲಾಖೆಯ ಪರವಾನಿಗೆ ಪಡೆದುಕೊಂಡು ವಿಶ್ರಾಂತಿ ಗ್ರಹಗಳಲ್ಲಿ ವಾಸ್ತವ್ಯ ಹೂಡಬಹುದು. ಜೋಗಿಮಟ್ಟಿಯಲ್ಲಿ ಮಳೆ ಸುರಿದಾಗ ಅಲ್ಲಲ್ಲಿ ತೊರೆಗಳು ಸೃಷ್ಟಿಯಾಗುತ್ತವೆ. ಇಲ್ಲಿ ಅನೇಕ ಜಾತಿಯ ಸಸ್ಯ ಪ್ರಭೇದವಿದೆ ಅಲ್ಲದೆ ಎರಡು ನೂರಕ್ಕೂ ಅಧಿಕ ವಿಶೇಷ ಔಷಧೀಯ ಮೂಲಿಕೆಗಳು ಇವೆ.

ಅಚ್ಚುಕಟ್ಟಾಗಿ ನಿರ್ಮಿಸಿರುವ ಮೆಟ್ಟಿಲುಗಳನ್ನು ಏರಿ ಜೋಗಿಮಟ್ಟಿ ಗಿರಿಧಾಮವನ್ನು ವೀಕ್ಷಣೆ ಮಾಡಬಹುದು ಇದರ ತಪ್ಪಲಿನಲ್ಲಿ ಹಲವಾರು ಪ್ರೇಕ್ಷಣೀಯ ಸ್ಥಳಗಳಿವೆ. ಅವುಗಳಲ್ಲಿ ಆಡುಮಲ್ಲೇಶ್ವರ ಹಾಗೂ ಹಿಮವತ್ ಕೇದಾರ ಪ್ರಮುಖವಾಗಿವೆ. ಬೆಂಗಳೂರಿನಿಂದ ಚಿತ್ರದುರ್ಗ ಸುಮಾರು ಎರಡು ನೂರು ಕಿಲೋಮೀಟರ್ ದೂರದಲ್ಲಿದೆ ಚಿತ್ರದುರ್ಗದಿಂದ ಜೋಗಿಮಟ್ಟಿ ಕೇವಲ ಹತ್ತು ಕಿಲೋಮೀಟರ್ ಅಂತರದಲ್ಲಿದೆ ಬಿಸಿಲನಾಡು ಚಿತ್ರದುರ್ಗದಲ್ಲಿ ತಂಪಾದ ವಾತಾವರಣವನ್ನು ತನ್ನ ಮಡಿಲಲ್ಲಿಟ್ಟುಕೊಂಡಿರುವಂತಹ ಜೋಗಿಮಟ್ಟಿ ನಿಜಕ್ಕೂ ಆ ಭಾಗದ ಪ್ರಾಕೃತಿಕ ಅಚ್ಚರಿಯಾಗಿದೆ. ನೀವು ಚಿತ್ರದುರ್ಗಕ್ಕೆ ಪ್ರವಾಸಕ್ಕೆ ಹೋದ ಸಂದರ್ಭದಲ್ಲಿ ಈ ಅದ್ಭುತ ಗಿರಿಧಾಮಕ್ಕೂ ಕೂಡ ಭೇಟಿ ನೀಡಿ.

Leave a Reply

Your email address will not be published. Required fields are marked *