ದೇವಾಲಯಗಳ ಬೀಡಾದ ಕರ್ನಾಟಕ ರಾಜ್ಯದಲ್ಲಿ ಹಲವು ದೇವಾಲಯಗಳಿವೆ, ಪ್ರತಿಯೊಂದು ದೇವಾಲಯವು ತನ್ನದೇ ಆದ ಐತಿಹಾಸಿಕ ಹಿನ್ನೆಲೆ, ಪೌರಾಣಿಕ ಹಿನ್ನೆಲೆ, ವಿಶೇಷತೆಯನ್ನು ಹೊಂದಿದೆ. ಬೀದರ್ ನಲ್ಲಿರುವ ಝರಣಿ ನರಸಿಂಹ ದೇವಾಲಯದ ಪೌರಾಣಿಕ ಹಿನ್ನೆಲೆ ಹಾಗೂ ಐತಿಹಾಸಿಕ ಹಿನ್ನೆಲೆ, ವಿಶೇಷತೆಯ ಬಗ್ಗೆ ಈ ಲೇಖನದ ಮೂಲಕ ತಿಳಿಯೋಣ.

ಕರ್ನಾಟಕದಲ್ಲಿರುವ ಒಂದೊಂದು ದೇಗುಲವು ತನ್ನದೇ ಆದ ಐತಿಹಾಸಿಕ ಹಿನ್ನೆಲೆಯನ್ನು ಹೊಂದಿದೆ. ಕರ್ನಾಟಕದ ಬೀದರ್ ನಲ್ಲಿರುವ ನರಸಿಂಹಸ್ವಾಮಿ ದೇವಾಲಯ ಪ್ರಸಿದ್ಧ ದೇವಾಲಯವಾಗಿದೆ, ಇದೊಂದು ಗುಹಾಂತರ ದೇವಾಲಯವಾಗಿದೆ. ಬಹಳಷ್ಟು ನರಸಿಂಹಸ್ವಾಮಿ ದೇವಾಲಯವಿದ್ದರೂ ಈ ದೇವಾಲಯ ವಿಶೇಷತೆಯಿಂದ ಹೆಸರುವಾಸಿಯಾಗಿದೆ. ಈ ದೇವಸ್ಥಾನಕ್ಕೆ ಬೇರೆ ರಾಜ್ಯ, ದೇಶ, ವಿದೇಶಗಳಿಂದ ಭಕ್ತರು ಬರುತ್ತಾರೆ. 400 ವರ್ಷಕ್ಕಿಂತಲೂ ಹೆಚ್ಚು ವರ್ಷಗಳ ಇತಿಹಾಸವನ್ನು ಹೊಂದಿರುವ ಈ ದೇವಾಲಯದಲ್ಲಿ ಮಹಾವಿಷ್ಣುವಿನ ಅವತಾರವಾದ ಉಗ್ರನರಸಿಂಹನು ನೆಲೆಸಿದ್ದಾನೆ. ದೇವಾಲಯದ ಸುತ್ತಲೂ ಹಚ್ಚ ಹಸಿರಿನ ಪರ್ವತ, ಪ್ರಶಾಂತ ವಾತಾವರಣ ಭಕ್ತರನ್ನು ಕೈಬೀಸಿ ಕರೆಯುತ್ತದೆ. ಇಲ್ಲಿರುವ ಗುಹೆಯಲ್ಲಿ ಎದೆ ಮಟ್ಟದಲ್ಲಿರುವ ನೀರಿನ ಆಳದಲ್ಲಿ ಇಳಿದು 300 ಮೀಟರ್ ನಡೆದುಕೊಂಡು ಹೋಗಿ ಗರ್ಭಗುಡಿಯಲ್ಲಿ ನೆಲೆಸಿದ ನರಸಿಂಹಸ್ವಾಮಿಯ ಉದ್ಭವ ಮೂರ್ತಿಯ ದರ್ಶನ ಪಡೆಯುವುದು ಭಾಗ್ಯವಾಗಿದೆ. ಗುಹೆಯಲ್ಲಿ ಹರಿದು ಬರುತ್ತಿರುವ ನೀರು ಎಲ್ಲಿಂದ ಬರುತ್ತದೆ ಎಂದು ಇದುವರೆಗೂ ಯಾರಿಗೂ ತಿಳಿದಿಲ್ಲ. ವರ್ಷದ 365 ದಿನವೂ ಇಲ್ಲಿ ನೀರು ಹರಿಯುತ್ತಲೇ ಇರುತ್ತದೆ, ಈ ನೀರಿನಲ್ಲಿ ನಡೆದರೆ ಚರ್ಮರೋಗಗಳು ಗುಣವಾಗುತ್ತವೆ ಎಂಬ ನಂಬಿಕೆ ಇದೆ. ನರಸಿಂಹಸ್ವಾಮಿಯ ಪಾದಕಮಲಗಳಿಂದ ನೀರು ಪ್ರವಹಿಸುವ ಕಾರಣದಿಂದ ಝರಣಿ ನರಸಿಂಹ ಸ್ವಾಮಿ ಎಂದು ಕರೆಯಲಾಗುತ್ತದೆ.

ಪುರಾಣದ ಪ್ರಕಾರ ಶಿವನು ಇಲ್ಲಿ ತಪಸ್ಸು ಮಾಡುತ್ತಿರುವಾಗ ಝರಾಸುರನೆಂಬ ರಾಕ್ಷಸನು ತಪಸನ್ನು ಭಗ್ನಗೊಳಿಸಲು ಮುಂದಾಗುತ್ತಾನೆ. ಆಗ ಲಕ್ಷ್ಮೀ ನರಸಿಂಹಸ್ವಾಮಿಯು ಝರಾಸುರನ ಸಂಹಾರ ಮಾಡಲು ಮುಂದಾದಾಗ, ಝರಾಸುರನು ಸ್ವಾಮಿಯ ಪಾದಕಮಲಗಳಲ್ಲಿ ನೀರಾಗಬೇಕೆಂಬ ಕೋರಿಕೆಯನ್ನು ಮುಂದಿಡುತ್ತಾನೆ. ಇದಕ್ಕೆ ಒಪ್ಪಿದ ನರಸಿಂಹಸ್ವಾಮಿ ತನ್ನ ಪಾದಕಮಲಗಳಡಿ ನೀರಾಗು ಎಂದು ಅನುಗ್ರಹಿಸುತ್ತಾನೆ. ತನ್ನ ಹೆಸರಿನಲ್ಲಿ ಈ ಕ್ಷೇತ್ರವನ್ನು ಭಕ್ತಾದಿಗಳು ಕರೆಯುವಂತೆ ಆಗಬೇಕು ಎಂದು ಝರಾಸುರ ರಾಕ್ಷಸನು ಹೇಳುತ್ತಾನೆ. ಈ ಕಾರಣಕ್ಕಾಗಿ ಝರ ನರಸಿಂಹಸ್ವಾಮಿ ಎಂಬ ಹೆಸರಿನಿಂದ ಕರೆಯಲಾಗುತ್ತದೆ. ಶಿವ ಹಾಗೂ ನರಸಿಂಹನನ್ನು ಈ ಸ್ಥಳದಲ್ಲಿ ಪೂಜಿಸಲಾಗುತ್ತದೆ. ಗುಹೆಯ ಕೊನೆಯಲ್ಲಿ ಕಲ್ಲಿನ ಮೇಲೆ ನರಸಿಂಹಸ್ವಾಮಿಯ ಕೆತ್ತಿದ ವಿಗ್ರಹವಿದೆ, ನರಸಿಂಹ ಜಯಂತಿಯಂದು ಒಂಭತ್ತು ದಿನಗಳ ಕಾಲ ವಿಜೃಂಭಣೆಯಿಂದ ಉತ್ಸವ ನಡೆಯುತ್ತದೆ. ಸಂತಾನ ಪ್ರಾಪ್ತಿಗಾಗಿ ಭಕ್ತಾದಿಗಳು ಇಲ್ಲಿಗೆ ಬರುತ್ತಾರೆ. ಈ ಗುಹೆ ಚಿಕ್ಕದಾಗಿದ್ದು ಮಕ್ಕಳನ್ನು ಕರೆದುಕೊಂಡು ಬಂದರೆ ಜಾಗರೂಕತೆಯಿಂದ ನೋಡಿಕೊಳ್ಳಬೇಕಾಗುತ್ತದೆ. ಗುಹೆಯ ಛಾವಣಿಯಲ್ಲಿ ಬಾವಲಿಗಳು ನೇತಾಡುವುದನ್ನು ಹಾಗೂ ಸುರಂಗದ ಉದ್ದಕ್ಕೂ ಹಾರುವುದನ್ನು ನೋಡಬಹುದು. ಇಲ್ಲಿಯವರೆಗೂ ಬಾವಲಿಯಿಂದ ಯಾವುದೇ ಅಪಾಯವಾಗಿಲ್ಲ. ಈ ದೇವಾಲಯ ಬೀದರ್ ನಗರದಿಂದ 4.8 ಕಿಲೋಮೀಟರ್ ದೂರದಲ್ಲಿದೆ. ಬೆಂಗಳೂರಿನಿಂದ ಬೀದರ ನಗರ ಸುಮಾರು 678 ಕಿಲೋಮೀಟರ್ ದೂರದಲ್ಲಿದೆ. ಹುಬ್ಬಳ್ಳಿ ಧಾರವಾಡದಿಂದ 440 ಕಿಲೋಮೀಟರ್ ದೂರದಲ್ಲಿದೆ.

Leave a Reply

Your email address will not be published. Required fields are marked *