ಮನುಷ್ಯನು ಬದುಕುಳಿಯಲು ಪ್ರಕೃತಿಯಲ್ಲಿ ದೊರೆಯುವ ನೀರು, ಗಾಳಿ, ಮಣ್ಣು, ಖನಿಜಗಳು, ಗಿಡ ಮರಗಳು, ಪ್ರಾಣಿಗಳು, ಆಹಾರ, ಅನಿಲ ಹೀಗೆ ಹಲವಾರು ಸಂಪನ್ಮೂಲಗಳ ಮೇಲೆ ಅವಲಂಬಿತನಾಗಿದ್ದಾನೆ. ಒಂದು ವೇಳೆ ಈ ಸಂಪನ್ಮೂಲಗಳಲ್ಲಿ ಯಾವುದಾದರೊಂದು ಕೊರತೆಯಾದರೂ ಮನುಷ್ಯನ ಬದುಕು ದುಸ್ತರವಾಗುತ್ತದೆ ಹಾಗೂ ಅಂತಹ ಬದುಕನ್ನು ಕಲ್ಪಿಸುವುದು ಸಹ ಭಯಾನಕವೆಂದೇ ಹೇಳಬಹುದು. ನಿಸರ್ಗವು ಮನುಷ್ಯನಿಗೆ ಎಲ್ಲವನ್ನು ಕೊಟ್ಟಿದೆ. ಆ ಕೊಟ್ಟದ್ದನ್ನು ಎಲ್ಲವೂ ಒಮ್ಮೆಲೆ ಬಾಚಿಕೊಳ್ಳುವ ಹಂಬಲದಲ್ಲಿ ನಿಸರ್ಗವನ್ನು ಬರಡಾಗಿ ಮಾಡುತ್ತಿದ್ದಾನೆ ಮನುಷ್ಯ. ನಮಗೆ ನಿಸರ್ಗವು ನೀಡಿದ ಅನೇಕ ವಸ್ತು, ಪದಾರ್ಥಗಳಲ್ಲಿ ಜೇನುತುಪ್ಪವು ಒಂದು ಮಹತ್ವದ ಸಾಧನವಾಗಿದೆ. ಇದಕ್ಕೆ ನೈಸರ್ಗಿಕ ಔಷಧಿ ಅಂತಲೇ ಕರೆಯುತ್ತಾರೆ. ಅದೇ ರೀತಿಯಲ್ಲಿ ನಮಗೆ ನೈಸರ್ಗಿಕವಾಗಿ ದೊರೆಯುವುದು ಜೇನುತುಪ್ಪ. ನಾವು ಪ್ರತೀ ದಿನ ಒಂದು ಅಥವಾ ಎರಡು ಚಮಚ ಜೇನುತುಪ್ಪವನ್ನು ಅದುರಲ್ಲಿಯೂ ವಿಶೇಷವಾಗಿ ಚಳಿಗಾಲದಲ್ಲಿ ಸ್ವಲ್ಪ ಜೇನುತುಪ್ಪವನ್ನು ಸೇವಿಸಿದರೆ ಅದರ ಅನೇಕ ಲಾಭಗಳು ನಮ್ಮ ದೇಹಕ್ಕೆ ಸಿಗುತ್ತದೆ. ಇದರಿಂದ ದೇಹವು ನಿರೋಗಿ, ಶಕ್ತಿಯುತ ಹಾಗೂ ಸ್ವಾಸ್ಥ್ಯದಿಂದ ಕೂಡಿರುತ್ತದೆ. ಚಳಿಯಲ್ಲಿ ವಾತಾವರಣದಿಂದಾಗುವ ಬದಲಾವಣೆಗೆ ಜೇನುತುಪ್ಪವು ದೇಹಕ್ಕೆ ಹೊಂದಿಕೊಳ್ಳಲು ಸಹಾಯ ಮಾಡುವುದು. ಹಾಗಿದ್ದರೆ ಚಳಿಗಾಲದಲ್ಲಿ ನಾವು ಒಂದೆರಡು ಚಮಚ ಜೇನುತುಪ್ಪವನ್ನು ಸೇವನೆ ಮಾಡುವುದರಿಂದ ನಮಗೆ ಆಗುವ ಪ್ರಯೋಜನಗಳ ಬಗ್ಗೆ ನಾವು ಈ ಲೇಖನದ ಮೂಲಕ ತಿಳಿದುಕೊಳ್ಳೋಣ.

ಜೇನುತುಪ್ಪ ಎಂದರೆ ಸಕ್ಕರೆಗೆ ಬದಲಿ, ಇನ್ನೂ ಹೆಚ್ಚೆಂದರೆ ಶೀತ ಕೆಮ್ಮಿನ ವಿರುದ್ಧ ಹೋರಾಡಲು ಮತ್ತು ನಮ್ಮ ತ್ವಚೆಗೆ ಆರ್ದ್ರತೆ ನೀಡುವ ಪ್ರಸಾದನ ಎಂದೇ ನಮ್ಮಲ್ಲಿ ಹೆಚ್ಚಿನವರು ತಿಳಿದುಕೊಂಡಿದ್ದಾರೆ, ಆದರೆ ವಿಜ್ಞಾನಿಗಳು ಇದನ್ನು ಸೂಪರ್‌ಫುಡ್ ಅಥವಾ ಅತಿ ಮಹತ್ವದ ಆಹಾರ ಎಂದು ಕರೆದಿದ್ದಾರೆ ಎಂಬುದು ನಿಮಗೆ ತಿಳಿದಿಲ್ಲದಿರಬಹುದು. ವಿಜ್ಞಾನಿಗಳೇ ಹೀಗೆಂದಿರಬೇಕಾದರೆ ನಾವು ಕೇಳಿರದ ಅಥವಾ ಅರಿತಿರದ ಇನ್ನೂ ಅನೇಕ ಇತರ ಗುಣಲಕ್ಷಣಗಳನ್ನು ಇವರು ಖಂಡಿತಾ ಕಂಡುಕೊಂಡೇ ಇದ್ದಾರೆ. ಹಲವಾರು ಶತಮಾನಗಳಿಂದ ಹಲವು ಕಾಯಿಲೆಗಳನ್ನು ಗುಣಪಡಿಸಲು ಬಳಸಲಾಗುತ್ತಿರುವ ಜೇನುತುಪ್ಪದ ಅನೇಕ ಪ್ರಯೋಜನಗಳನ್ನು ನಾವು ಇಲ್ಲಿ ನೋಡೋಣ. ಮನೆ ಔಷಧಿಯಾಗಿ ಹಾಗೂ ಸಾಂಪ್ರದಾಯಿಕ ಔಷಧದಲ್ಲಿ ಜೇನುತುಪ್ಪದ ಕೆಲವು ಉಪಯೋಗಗಳನ್ನು ನಾವು ನೋಡೋಣ. ಸಹಸ್ರಾರು ವರ್ಷಗಳಿಂದ, ಜೇನುತುಪ್ಪವು, ಅಡುಗೆ ಮನೆಯ ಒಂದು ವಿಶೇಷ ಆಹಾರ ಹಾಗೂ ಪ್ರಮುಖವಾದ ವೈದ್ಯಕೀಯ ಪರಿಹಾರವಾಗಿದೆ. ಜಗತ್ತಿನಾದ್ಯಂತ, ನಮ್ಮ ಪೂರ್ವಜರು ಜೇನುತುಪ್ಪದ ಅನೇಕ ಪ್ರಯೋಜನಗಳನ್ನು ಚೆನ್ನಾಗಿ ಅರಿತುಕೊಂಡಿದ್ದಂತೆ ಕಾಣುತ್ತದೆ.

ಮೊದಲಿಗೆ ಜೇನುತುಪ್ಪಿನಲ್ಲಿ ಏನಿರುತ್ತೆ? ಎಂದು ನೋಡುವುದಾದರೆ, ಜೇನುತುಪ್ಪದಲ್ಲಿ ಫ್ರಕ್ಟೋಜ್, ಗ್ಲುಕೊಜ್, ಸುಕ್ರೋಜ್, ಮಾಲ್ಟೋಜ್ ಈ ರೀತಿಯ ಎಲ್ಲ ಪ್ರಕಾರದ ಹಾಗೂ ದೇಹಕ್ಕೆ ಬೇಕಾಗುವ ಮಹತ್ವದ ಶರ್ಕರಗಳು ಇರುತ್ತವೆ. ಇವೆಲ್ಲವುಗಳು ಕೂಡಿ ಒಟ್ಟು 75 ಪ್ರತಿಶತ ಸಕ್ಕರೆ ಇರುತ್ತದೆ. ಇದರ ಜೊತೆಗೆ ಈ ಜೇನುತುಪ್ಪದಲ್ಲಿ ಎಂಜಾಯಿಮ್, ಅಮಿನೋ ಎಸಿಡ್, ಕಾರ್ಬೋ ಹೈಡ್ರೇಟ್, ಆಯೋಡಿನ್, ಪ್ರೊಟೀನ್, ಎಲ್ಬುಮಿನ್, ಐರನ್, ಸೋಡಿಯಂ, ಫಾಸ್ಪರಸ್,ಕ್ಯಾಲ್ಸಿಯಂ, ಕ್ಲೋರಿನ್ ಹೀಗೆ ದೇಹಕ್ಕೆ ಉಪಯುಕ್ತವಾಗುವ ಹತ್ತು ಹಲವು ಘಟಕಗಳು ಇರುತ್ತವೆ. ಇದೇ ಕಾರಣದಿಂದ ಇದಕ್ಕೆ ನೈಸರ್ಗಿಕ ಔಷಧಿ ಎನ್ನುತ್ತಾರೆ.

ಜೇನುತುಪ್ಪದ ಸೇವನೆಯಿಂದ ಆಗುವ ಲಾಭಗಳು ಏನೆಂದು ನೋಡುವುದಾದರೆ , ರೋಗಪ್ರತಿರೋಧಕ ಶಕ್ತಿ ಹೆಚ್ಚಾಗುವುದು. ನೆಗಡಿ ಕೆಮ್ಮುಗಳಂತಹ ವೈರಲ್ ರೋಗಗಳು ಸಮೀಪ ಬರುವದಿಲ್ಲ. ಇದರ ಸೇವನೆಯಿಂದ ವ್ಯಕ್ತಿಯು ಯಾವತ್ತು ಉಲ್ಲಾಸದಿಂದ ಇರುವನು. ಪಚನ ಶಕ್ತಿಯ ಸುಧಾರಣೆಯಾಗುತ್ತದೆ. ಪ್ರತಿ ದಿನ ನೀರಿನಲ್ಲಿ ಜೇನುತುಪ್ಪವನ್ನು ಹಾಕಿ ಕುಡಿದರೆ ಹೊಟ್ಟೆ ಹಗುರವಾಗುತ್ತದೆ. ಕಜ್ಜಿ, ಗಜಕರ್ಣಗಳಂತಹ ಚರ್ಮಕ್ಕೆ ಸಂಬಂಧಿಸಿದ ರೋಗಗಳಿಂದ ಬೇಸತ್ತಿದ್ದರೆ ಒಂದು ಗ್ಲಾಸ್ ನೀರಿನಲ್ಲಿ ಒಂದು ಚಮಚ ಜೇನುತುಪ್ಪವನ್ನು ಸೇರಿಸಿ ಖಾಲಿ ಹೊಟ್ಟೆಯಲ್ಲಿ ಸೇವಿಸಿದರೆ ಚರ್ಮ ರೋಗಗಳ ಸಮಸ್ಯೆ ದೂರಾಗುವುದು. ಕಫ ಮತ್ತು ದಮ್ಮು ಇವುಗಳಿಗೆ ಜೇನುತುಪ್ಪವು ರಾಮಬಾಣವಾಗಿ ಕೆಲಸ ಮಾಡುತ್ತದೆ. ಇದನ್ನೇ ಹಸಿ ಶುಂಠಿಯ ಜೊತೆಗೆ ಸೇವಿಸಿದರೆ ಕೆಮ್ಮು ಸಹ ಕಡಿಮೆಯಾಗುವುದು. ಹೃದಯ ರೋಗಗಳಿಂದ ದೂರವಿರಲು ಹಾಗೂ ಹೃದಯವು ಯೋಗ್ಯ ರೀತಿಯಲ್ಲಿ ಕೆಲಸ ಮಾಡಲು ಜೇನುತುಪ್ಪವನ್ನು ಸೇವಿಸಬೇಕು.

ಜೇನುತುಪ್ಪದ ಸೇವನೆಯಿಂದ ರಕ್ತವು ಶುದ್ಧವಾಗುತ್ತದೆ. ಜೇನುತುಪ್ಪದ ಸೇವನೆಯಿಂದ ಆರೋಗ್ಯವು ಚೆನ್ನಾಗಿರುವುದರ ಜೊತೆಗೆ ದೇಹವು ಸ್ಥೂಲವಾಗುವುದಿಲ್ಲ. ಮಾವಿನ ಹಣ್ಣಿನ ರಸದಲ್ಲಿ ಜೇನುತುಪ್ಪ ಹಾಕಿ ಕುಡಿದರೆ ಕಾಮಾಲೆ ರೋಗವು ಕಡಿಮೆಯಾಗುವುದು. ಇದರ ಸೇವನೆಯಿಂದ ಮೂತ್ರಪಿಂಡಗಳು ಒಳ್ಳೆಯ ಸ್ಥಿತಿಯಲ್ಲಿರುತ್ತವೆ. ಜೇನುತುಪ್ಪದ ಸೇವನೆ ಮಾಡುವುದರಿಂದ ಮುಖದ ಮೇಲಿನ ಮೊಡವೆಗಳು ಕಡಿಮೆಯಾಗುತ್ತವೆ. ಹಾಗೆಯೇ ರೋಸ್ ವಾಟರ್, ನಿಂಬೆಹಣ್ಣು ಮತ್ತು ಜೇನುತುಪ್ಪ ಈ ಮೂರು ಪದಾರ್ಥಗಳ ಮಿಶ್ರಣವನ್ನು ಮುಖಕ್ಕೆ ಹಚ್ಚಿದರೆ ಅದರಿಂದಲೂ ಲಾಭವಾಗುತ್ತದೆ. ಜೇನುತುಪ್ಪ ಇದು ಗಾಯವನ್ನು ಬೇಗ ಗುಣಮುಖವಾಗಲು ಸಹಾಯ ಮಾಡುತ್ತದೆ. ಜೇನುತುಪ್ಪದಲ್ಲಿ ಆಂತಿಬ್ಯಾಕ್ಟೀರಿಯಲ್ ಮತ್ತು ಆಂಟಿ ಮೈಕ್ರೋಬಿಯಲ್ ಗುಣಗಳಿರುವುದರಿಂದ ಯಾವುದೇ ರೀತಿಯ ಗಾಯವನ್ನು ಗುಣಪಡಿಸಲು ಸಹಾಯ ಮಾಡುತ್ತದೆ. ಟೊಮೇಟೊ ಅಥವಾ ಕಿತ್ತಳೆ ಹಣ್ಣಿನ ರಸದಲ್ಲಿ 1 ಚಮಚ ಜೇನುತುಪ್ಪನ್ನು ಹಾಕಿ ಪ್ರತಿ ದಿನ ಕುಡಿಯುವುದರಿಂದ ಅಪಚನ ಮತ್ತು ಮಲಬದ್ಧತೆಯಂತಹ ಸಮಸ್ಯೆಗಳು ಕಡಿಮೆಯಾಗುವವು.

Leave a Reply

Your email address will not be published. Required fields are marked *