ಕೂದಲು ದಪ್ಪವಾಗಿ ಬೆಳೆಯಲು ಹಾಗು ಕೂದಲಿನ ಆರೈಕೆ ಹೀಗಿರಲಿ

Health & fitness
ನಿಮ್ಮ ಆತ್ಮೀಯರಿಗೂ ಶೇರ್ ಮಾಡಿ

ಕೂದಲು ಉದುರುವಿಕೆ ಸಮಸ್ಯೆಯು ತುಂಬಾ ಸಮಸ್ಯೆಯನ್ನು ಉಂಟು ಮಾಡುವುದು. ಮಾಲಿನ್ಯ, ಒತ್ತಡ ಮತ್ತು ಕೆಟ್ಟ ಗುಣಮಟ್ಟದ ನೀರು ಇದು ಕೂದಲು ಉದುರುವಿಕೆಗೆ ಪ್ರಮುಖ ಕಾರಣಗಳು. ಜಡ ಜೀವನಶೈಲಿ, ಪೋಷಕಾಂಶಗಳ ಕೊರತೆ, ಅಲರ್ಜಿ, ಹಾರ್ಮೋನ್ ಅಸಮತೋಲನ, ಕೂದಲಿನ ಕೆಟ್ಟ ಆರೈಕೆ ಮತ್ತು ಅನುವಂಶೀಯವಾಗಿಯೂ ಇದು ಬರಬಹುದು. ತಜ್ಞರ ಪ್ರಕಾರ ಕೂದಲು ತೆಳ್ಳಗಾಗುವುದು ಮತ್ತು ಕೂದಲು ಉದುರುವಿಕೆ ಸಮಸ್ಯೆಯು ಇಂದಿನ ದಿನಗಳಲ್ಲಿ ಅತಿಯಾಗಿದೆ. ತಲೆ ಬಾಚುವಾಗ ಬಾಚಣಿಕೆ ತುಂಬಾ ಕೂದಲು ಇದ್ದರೆ ಮನಸ್ಸಿಗೆ ತುಂಬಾನೇ ಬೇಸರವಾಗುವುದು. ಕೂದಲು ಉದುರುವುದನ್ನು ನಿಯಂತ್ರಣ ಮಾಡದಿದ್ದರೆ ಕೂದಲು ಸಂಪೂರ್ಣವಾಗಿ ಉದುರುವುದು. ಆದ್ದರಿಂದ ಕೂದಲು ಸ್ವಲ್ಪ ಅಧಿಕ ಉದುರುತ್ತಿದೆ ಎಂದು ಗೊತ್ತಾದ ಕೂಡಲೇ ಕೂದಲಿನ ಆರೈಕೆ ಕಡೆ ತುಂಬಾ ಗಮನ ನೀಡಬೇಕಾಗುತ್ತದೆ. ಈ ಲೇಖನದ ಮೂಲಕ ತಿಳಿಸಿದ ಕೆಲವು ಟಿಪ್ಸ್ ಗಳನ್ನ ಪಾಲಿಸುವುದರಿಂದ ಕೂದಲು ಉದುರುವುದು ಕಡಿಮೆ ಮಾಡಿಕೊಳ್ಳುವುದು ಹೇಗೆ? ಎನ್ನುವುದನ್ನು ನೋಡೋಣ.

ಕೂದಲು ಉದುರುವ ಸಮಸ್ಯೆ ಕಂಡು ಬಂದರೆ ಹೆಚ್ಚಿನವರು ಯಾವ ಎಣ್ಣೆ ಹಚ್ಚಬೇಕು, ಯಾವ ಶ್ಯಾಂಪೂ ಹಚ್ಚಬೇಕು ಎಂದು ತಲೆಕೆಡಿಸಿಕೊಳ್ಳುತ್ತಾರೆ. ಆದರೆ ಇವೆಲ್ಲಕ್ಕಿಂತ ಮುಖ್ಯವಾಗಿ ಕೂದಲು ಯಾವ ಕಾರಣಕ್ಕೆ ಉದುರುತ್ತದೆ ಎಂದು ತಿಳಿದುಕೊಂಡರೆ ಕೂದಲು ಉದುರುವುದನ್ನು ತಡೆಗಟ್ಟಬಹುದು. ಕೂದಲು ಉದುರುವುದನ್ನು ತಡೆಗಟ್ಟಲು ಬಾಹ್ಯಾ ಹಾಗೂ ಆಂತರಿಕ ಆರೈಕೆ ಬಹುಮುಖ್ಯ, ನಮ್ಮ ಆಹಾರಕ್ರಮ, ಜೀವನಶೈಲಿ ಕೂಡ ಕೂದಲಿನ ಆರೋಗ್ಯದ ಮೇಲೆ ಪ್ರಭಾವ ಬೀರುವುದು. ಈ ರೀತಿಯ ಆಹಾರಕ್ರಮದಿಂದ ಕೂದಲು ಉದುರುವ ಸಮಸ್ಯೆ ಹೆಚ್ಚಾಗುವುದು ಅತ್ಯಧಿಕ ಖಾರ, ಉಪ್ಪು, ಉಳಿ ಆಹಾರ ಸೇವನೆ, ಕಾಫಿ ಕುಡಿಯುವ ಚಟ, ಮದ್ಯಪಾನ, ಅತೀಹೆಚ್ಚು ಆಹಾರ ಸೇವನೆ , ಧೂಮಪಾನ, ಎಣ್ಣೆಯಲ್ಲಿ ಕರಿದ ಪದಾರ್ಥಗಳು, ಅಸಿಡಿಟಿ ಆಹಾರಗಳು ಇವುಗಳು ಪಿತ್ತವನ್ನು ಹೆಚ್ಚುಮಾಡುತ್ತದೆ ಇದರಿಂದಾಗಿ ಕೂದಲು ಉದುರುವುದು. ಇವುಗಳ ಜೊತೆಗೆ ಈ ಕೆಳಗಿನ ಕೆಲವು ಟಿಪ್ಸ್ ಗಳನ್ನು ಬಳಸಿಕೊಂಡು ಕೂದಲು ಉದುರುವ ಸಮಸ್ಯೆಯಿಂದ ದೂರವಾಗೋಣ.

ಕೂದಲಿಗೆ ಮಸಾಜ್‌ ಮಾಡುವುದರಿಂದ ತಲೆ ಬುಡದಲ್ಲಿ ರಕ್ತ ಸಂಚಾರ ಹೆಚ್ಚಾಗಿ ಕೂದಲು ಉದುರುವುದನ್ನು ತಡೆಯಲು ಸಹಕಾರಿಯಾಗಿದೆ. ತಲೆಗೆ ಎಣ್ಣೆಯಿಂದ ಮಸಾಜ್ ಮಾಡಿ ಒಂದು ಟವಲ್‌ ಅನ್ನು ಬಿಸಿ ನೀರಿನಲ್ಲಿ ಅದ್ದಿ, ಅದನ್ನು ಹಿಂಡಿ ತಲೆಗೆ ಸುತ್ತಿ ಒಂದು ಗಂಟೆಯ ಬಳಿಕ ತಲೆಸ್ನಾನ ಮಾಡಬೇಕು. ತಲೆಗೆ ಮಸಾಜ್ ಮಾಡುವುದರಿಂದ ರಿಲ್ಯಾಕ್ಸ್ ಕೂಡ ಅನಿಸುವುದು.

ಲೋಳೆಸರವನ್ನು ಕೂದಲು ಉದುರುವುದನ್ನು ತಡೆಗಟ್ಟಲು ಬಳಸಬಹುದು. ತಲೆಯಲ್ಲಿ ಅತ್ಯಧಿಕ ಎಣ್ಣೆಯಂಶ ಇದ್ದರೆ ಕೂದಲಿನ ಬುಡದ ರಂಧ್ರಗಳು ಮುಚ್ಚಿ ಹೋಗುವುದರಿಂದ ಕೂದಲಿನ ಬುಡ ದುರ್ಬಲವಾಗುತ್ತದೆ, ಈ ಕಾರಣದಿಂದಾಗಿ ಕೂಡ ಕೂದಲು ಉದುರುವ ಸಮಸ್ಯೆ ಉಂಟಾಗುವುದು. ಲೋಳೆಸರವನ್ನು ವಾರದಲ್ಲಿ ಎರಡು ಬಾರಿ ತಲೆಗೆ ಹಚ್ಚಿ ನಂತರ ತಲೆಸ್ನಾನ ಮಾಡಿದರೆ ಕೂದಲಿನ ಬುಡ ಸ್ವಚ್ಛವಾಗಿರುತ್ತದೆ, ತಲೆಹೊಟ್ಟಿನ ಸಮಸ್ಯೆ ಕೂಡ ಕಾಡುವುದಿಲ್ಲ.

ಫಿಶ್‌ ಆಯಿಲ್ ಸೇವಿಸುವುದರಿಂದ ಕೂದಲನ್ನು ಆಂತರಿಕವಾಗಿ ಪೋಷಣೆ ಮಾಡಿದಂತಾಗುವುದು. ಫಿಶ್‌ಆಯಿಲ್‌ನಲ್ಲಿ ಪೋಷಕಾಂಶ ಹಾಗೂ ಪ್ರೊಟೀನ್ಸ್ ಇರುತ್ತದೆ. ಇದರಲ್ಲಿರುವ ಒಮೆಗಾ 3 ಕೊಬ್ಬಿನಂಶ ಆರೋಗ್ಯಕ್ಕೂ ಒಳ್ಳೆಯದು. ಕೂದಲಿನ ಪೋಷಣೆಗಾಗಿ ಪ್ರತಿದಿನ ಒಂದು ಫಿಶ್‌ ಆಯಿಲ್ ಮಾತ್ರೆ ಸೇವನೆ ಒಳ್ಳೆಯದು.

ಕೂದಲು ಉದುರುವುದನ್ನು ತಡೆಗಟ್ಟುವಲ್ಲಿ ಈರುಳ್ಳಿ ರಸ ತುಂಬಾನೇ ಪರಿಣಾಮಕಾರಿಯಾಗಿದೆ. ಬ್ಯಾಕ್ಟಿರಿಯಾ ಸೋಂಕಿನಿಂದ ಕೂದಲು ಕಿತ್ತು ಹೋಗಿರುವ ಜಾಗಕ್ಕೆ ಈರುಳ್ಳಿ ರಸ ಹಚ್ಚಿದರೆ ಸಾಕು ಅಲ್ಲಿ ಕೂದಲು ಮರು ಹುಟ್ಟುತ್ತದೆ. ಈರುಳ್ಳಿಯನ್ನು ರುಬ್ಬಿ ಅದರ ರಸ ತೆಗೆದು ಅದನ್ನು ತಲೆಗೆ ಹಚ್ಚಿ 15 ನಿಮಿಷ ಬಿಡಬೇಕು. ನಂತರ ಶ್ಯಾಂಪೂ ಹಚ್ಚಿ ತಲೆ ತೊಳೆಯಬೇಕು. ಈ ರೀತಿ ಮಾಡುತ್ತಿದ್ದರೆ ಕೂದಲು ಉದುರುವುದು ಕಡಿಮೆಯಾಗಿರುವುದು ಕೆಲವೇ ವಾರಗಳಲ್ಲಿ ನಿಮ್ಮ ಗಮನಕ್ಕೆ ಬರುವುದು.

ಗೆರಾನಿಯಮ್ ಎಣ್ಣೆ ಕೂದ ಕೂದಲಿನ ಬೆಳವಣಿಗೆಗೆ ಸಹಕಾರಿ. ನೀವು ತಲೆಗೆ ಬಳಸುವ ಎಣ್ಣೆಗೆ 4-5 ಹನಿ ಗೆರಾನಿಯಮ್ ಎಣ್ಣೆ ಹಾಕಿ ಮಿಶ್ರ ಮಾಡಿ, ಇದರಿಂದ ತಲೆಗೆ ಮಸಾಜ್ ಮಾಡಿ. ಗೆರಾನಿಯಮ್ ಕೂದಲನ್ನು ಬಲ ಪಡಿಸುತ್ತದೆ ಹಾಗೂ ಹೊಸ ಕೂದಲು ಹುಟ್ಟಲು ಸಹಕರಿಯಾಗಿದೆ. ಇನ್ನು ನೀವೂ ಕೂದಲಿನ ಪೋಷಣೆಗೆ ತಾಜಾ ನಿಂಬೆ ಹಣ್ಣು ಬಳಸಬಹುದು ಅಥವಾ ಲೆಮನ್ ಆಯಿಲ್ ಕೂಡ ಬಳಸಬಹುದು. ನಿಂಬೆ ಹಣ್ಣಿನ ರಸವನ್ನು ತಲೆಸ್ನಾನ ಮಾಡುವ 15 ನಿಮಿಷ ಮುಂಚೆ ತಲೆಗೆ ಹಚ್ಚಿ ನಂತರ ತಲೆ ಸ್ನಾನ ಮಾಡಿ. ಈ ರೀತಿ ಮಾಡುವುದರಿಂದ ಕೂದಲಿನ ಬುಡ ಸ್ವಚ್ಛವಾಗಿರುತ್ತದೆ ಹಾಗೂ ತಲೆಹೊಟ್ಟಿನ ಸಮಸ್ಯೆಯೂ ಇರುವುದಿಲ್ಲ. ಅಲ್ಲದೆ ನಿಂಬೆರಸ ಹಚ್ಚಿ ತಲೆಸ್ನಾನ ಮಾಡಿದರೆ ಕೂದಲು ಕೂಡ ಮಂದವಾಗಿ ಕಾಣುವುದು.

ರೋಸೆಮೆರಿ ಎಣ್ಣೆ ಕೂಡ ಕೂದಲಿನ ಪೋಷಣೆಗೆ ತುಂಬಾನೇ ಸಹಕಾರಿ. ಆದರೆ ಇದನ್ನು ನೇರವಾಗಿ ಬಳಸಬಾರದು. ಬದಲಿಗೆ ತಲೆಗೆ ಹಚ್ಚುವ ಎಣ್ಣೆಗೆ ಇದರ ಕೆಲವು ಹನಿ ಹಾಕಿ ಮಿಶ್ರ ಮಾಡಿ ಬಳಸಬೇಕು. ಈ ಎಣ್ಣೆಯ ಮಿಶ್ರವನ್ನು ವಾರದಲ್ಲಿ 2-3 ಬಾರಿ ಹಚ್ಚಬೇಕು. ಅಲ್ಲದೆ ತಲೆಗೆ ಹಚ್ಚುವ ಶ್ಯಾಂಪೂ ಹಾಗೂ ಕಂಡೀಷನರ್‌ ಜೊತೆಯೂ ಈ ಎಣ್ಣೆ ಮಿಶ್ರ ಮಾಡಿ ಬಳಸಿದರೆ ಕೂದಲು ಉದುರುವುದು ಕಡಿಮೆಯಾಗುವುದಲ್ಲದೆ ಹೊಸ ಕೂದಲು ಹುಟ್ಟಿ ಕೂದಲು ತುಂಬಾ ಮಂದವಾಗುವುದು.

ಕೂದಲು ಉದುರುತ್ತಿದ್ದರೆ ಎಲ್ಲಾ ಬಗೆಯ ವಿಧಾನಗಳನ್ನು ಟ್ರೈ ಮಾಡಲು ಹೋಗಬೇಡಿ, ಇದರಿಂದ ಪ್ರಯೋಜನವಿಲ್ಲ. ಯಾವುದಾದರು ಒಂದು ವಿಧಾನ ಪ್ರಯತ್ನಿಸಿ. ಅದನ್ನು ನಿಯಮಿತವಾಗಿ ಮಾಡುತ್ತಾ ಬನ್ನಿ, ಕೆಲವು ತಿಂಗಳಿನಲ್ಲಿ ಫಲಿತಾಂಶ ದೊರೆಯುವುದು.ಇನ್ನು ಕೂದಲು ಉದುರುವುದನ್ನು ತಡೆಗಟ್ಟಲು ಬಾಹ್ಯ ಪೋಷಣೆ ಮಾತ್ರ ಸಾಲದು, ಕೂದಲನ್ನು ಆಂತರಿಕವಾಗಿಯೂ ಪೋಷಣೆ ಮಾಡಬೇಕು. ಅದಕ್ಕೆ ಆರೋಗ್ಯಕರ ಆಹಾರ ಸೇವನೆ ಮಾಡಬೇಕು. ಏನು ಮಾಡಿದರೂ ಕೂದಲು ಉದುರುವುದು ಕಡಿಮೆಯಾಗದಿದ್ದರೆ ಹಾರ್ಮೋನ್ ಅಥವಾ ಮತ್ತಿತರ ದೈಹಿಕ ಸಮಸ್ಯೆ ಇರಬಹುದು, ವೈದ್ಯರನ್ನು ಭೇಟಿಯಾಗಿ ಚಿಕಿತ್ಸೆ ಪಡೆಯಿರಿ.


ನಿಮ್ಮ ಆತ್ಮೀಯರಿಗೂ ಶೇರ್ ಮಾಡಿ

Leave a Reply

Your email address will not be published. Required fields are marked *