ಮನಸ್ಸಿದ್ದರೆ ಏನು ಬೇಕಾದರೂ ಮಾಡಬಹುದು. ಛಲವಿದ್ದರೆ ಏನನ್ನಾದರೂ ಸಾಧಿಸಬಹುದು ಎಂಬುದಕ್ಕೆ ಹಲವಾರು ಉದಾಹರಣೆಗಳನ್ನು ನಾವು ಕಾಣಬಹುದು. ಅನೇಕರು ನಮ್ಮಲ್ಲಿ ಜಮೀನಿಲ್ಲ ನೀರಿಲ್ಲ ಯಾವುದೇ ಕೃಷಿ ಸಲಕರಣೆಗಳ ಸೌಲಭ್ಯ ಕೂಡಾ ಸರಿಯಾಗಿ ಇಲ್ಲ ಹೀಗಿದ್ದಾಗ ನಾವು ಕೃಷಿ ಮಾಡೋದು ಹೇಗೆ? ಜೀವನ ನಡೆಸೋದು ಹೇಗೆ? ಎಂದು ಕೇಳುತ್ತಾರೆ.

ಆದರೆ ಜಮೀನಿಲ್ಲದಿದ್ದರೆ ಏನಂತೆ! ಉಪಕಸುಬು ಮಾಡಬಾರದು ಎಂದು ಎಲ್ಲಿಯೂ ಇಲ್ಲವಲ್ಲ. ಉಪಕಸುಬು ಎಂದರೆ, ಕುರಿ, ಮೇಕೆ, ಕೋಳಿ, ಹಸು ಸಾಕಣೆ. ದೇಸಿ ಹಸುಗಳ ಸಾಕಣೆ ಇತ್ತೀಚೆಗೆ ಜನಪ್ರಿಯವಾಗುತ್ತಿದೆ. ಈ ಹಸುಗಳ ಹಾಲಿಗೆ ದುಪ್ಪಟ್ಟು ಬೆಲೆಯಿದ್ದರೆ ಸಗಣಿ, ಗಂಜಳಕ್ಕೂ ಬೇಡಿಕೆ ಹೆಚ್ಚುತ್ತಿದೆ. ಅದೇ ರೀತಿ ಬರಗಾಲದಎಲ್ಲಿ 200 ಹಸುಗಳನ್ನು ಸಾಕಿ, ದಿನಕ್ಕೆ 500 ಲೀಟರ್ ಹಾಲು ಉತ್ಪಾದಿಸಿ ರಾಷ್ಟ್ರ ಪ್ರಶಸ್ತಿ ಪಡೆದ ಚಿತ್ರದುರ್ಗದ ಮಹಿಳೆ ಇದಕ್ಕೆ ಒಂದು ಉತ್ತಮ ಉದಾಹರಣೆ ಎನ್ನಬಹುದು. ಈ ಮಹಿಳೆಯ ಸಾಧನೆಯ ಕುರಿತು ನಾವು ಈ ಲೇಖನದ ಮೂಲಕ ತಿಳಿದುಕೊಳ್ಳೋಣ.

ಹೆಣ್ಣು ಮನಸ್ಸು ಮಾಡಿದರೆ ಏನು ಬೇಕಾದರೂ ಸಾಧಿಸಬಹುದು ಎಂಬುದನ್ನ ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ತಾಲೂಕಿನ ರಾಂಪುರದ ಮಹಿಳೆಯೊಬ್ಬರು ನಿರೂಪಿಸಿದ್ದಾರೆ. ಈ ಸಾಧಕಿ ಮಹಿಳೆಯ ಹೆಸರು ರೋಜಾ ಎಂದು. ಬರಗಾಲದಿಂದ ಬೆಳೆಗಳು ಕೈಕೊಟ್ಟಾಗ ಹೈನುಗಾರಿಕೆ ಮೊರೆಹೋದ ರೋಜಾ ನೌಕರಿಗೆ ಹೋಗೋಣ ಅಂದ್ರೆ ಜಾಸ್ತಿ ಓದಿಲ್ಲ.

ಬೇರೆ ಕಡೆ ಕೆಲಸಕ್ಕೆ ಹೋಗೋಣ ಅಂದ್ರೆ ಊರು ಬಿಟ್ಟು ಮನೆಮಂದಿನೆಲ್ಲಾ ಬಿಟ್ಟು ಹೋಗೋಕೆ ಮನಸ್ಸು ಬರಲಿಲ್ಲ. ಮತ್ತೆ ಹೇಗಪ್ಪಾ ಜೀವನ ನಡೆಸೋದು ಅನ್ನೋ ಚಿಂತೆ ಇವರಿಗೂ ಕಾಡಿತ್ತು. ಆಗ ಒಂದು ಧೃಡ ನಿರ್ಧಾರಕ್ಕೆ ಬಂದರು. ಊರಲ್ಲೇ ಇದ್ದುಕೊಂಡು ಏನಾದರು ಉಪಕಸುಬು ಮಾಡಬೇಕು. ಅದರಲ್ಲೇ ಜೀವನ ಸಾಗಿಸಬೇಕು ಅಂತ ಯೋಚಿಸಿದರು. ಆಗ ಅವರಿಗೆ ಅರಿವಾದದ್ದು ಹಸು ಸಾಕಾಣಿಕೆ.

ರಾಂಪುರ ಗ್ರಾಮದ ಕೃಷಿಕ ಕುಟುಂಬದ ಮಹಿಳೆ ರೋಜಾ ಬರಗಾಲಕ್ಕೆ ಸೆಡ್ಡು ಹೊಡೆದು ಈಗಿನ ಹೊಸ ತಂತ್ರಜ್ಞಾನವನ್ನ ಅಳವಡಿಸಿಕೊಂಡು ಹೈನುಗಾರಿಕೆ ಮಾಡುತ್ತಿದ್ದಾರೆ. ಇದರಿಂದ ನಿತ್ಯ 500 ಲೀಟರ್ ಹಾಲು ಉತ್ಪಾದಿಸುವ ಮೂಲಕ ರಾಷ್ಟ್ರ ಪ್ರಶಸ್ತಿಗೆ ಈ ಮಹಿಳೆ ಭಾಜನರಾಗಿದ್ದಾರೆ. ಹಸು ಸಾಕಾಣಿಕೆ ಮೂಲಕ ತಮ್ಮ ತೋಟದ ಮನೆಯ ಪಕ್ಕದ ಶೆಡ್ ಒಂದರಲ್ಲಿ ಸುಮಾರು 200 ಕ್ಕೂ ಹೆಚ್ಚು ಹಸುಗಳನ್ನ ಸಾಕಿದ್ದಾರೆ.

ಹಸುಗಳಿಗೆ ಸಮಯಕ್ಕೆ ಸರಿಯಾಗಿ ಒಣ ಹಾಗೂ ಹಸಿ ಮೇವು, ಬೂಸಾ ಸೇರಿದಂತೆ ಪೌಷ್ಠಿಕ ಆಹಾರಗಳನ್ನು ಕೊಟ್ಟು ತಮ್ಮ ಮಕ್ಕಳಂತೆ ಹಸುಗಳನ್ನ ಆರೋಗ್ಯವಾಗಿ ನೋಡಿಕೊಳ್ಳುತ್ತಿದ್ದಾರೆ. ರೋಜಾ ಅವರ ಈ ಕಾರ್ಯಕ್ಕೆ ಅವರ ಪತಿಯು ಕೂಡ ಬೆಂಬಲವಾಗಿ ನಿಂತಿದ್ದಾರೆ. ಇವರು ಪ್ರತೀ ನಿತ್ಯ 500 ಲೀಟರ್ ಹಾಲನ್ನು ಉತ್ಪಾದಿಸಿ ಶಿಮುಲ್ ಡೈರಿಗೆ ಸರಬರಾಜು ಮಾಡುವ ಮೂಲಕ ಅಧಿಕ ಲಾಭವನ್ನು ಗಳಿಸುತ್ತಿದ್ದಾರೆ.

ಹಸುಗಳ ಬಗ್ಗೆ ಅಪಾರ ಕಾಳಜಿ ಹೊಂದಿರುವ ಇವರು ಅವುಗಳ ಆರೋಗ್ಯದ ದೃಷ್ಟಿಯಿಂದ ವಾರಕ್ಕೊಮ್ಮೆ ಪಶು ವೈದ್ಯರನ್ನ ಕರೆಸಿ ತಪಾಸಣೆ ಮಾಡಿಸಿ ಚಿಕಿತ್ಸೆ ಕೋಡಿಸುತ್ತಿದ್ದಾರೆ. ಗೋವುಗಳ ಆರೋಗ್ಯದ ಕಡೆಗೂ ಹೆಚ್ಚಿನ ಗಮನ ಹರಿಸುತ್ತಿದ್ದಾರೆ. ಅಷ್ಟೇ ಅಲ್ಲದೆ ರೋಜಾ ಹಾಗೂ ಅವರ ಪತಿ ಇಬ್ಬರೂ ಸೇರಿಕೊಂಡು ತಮಗೆ ಇರುವ ಎರಡು ಎಕರೆ ಜಮೀನಿನಲ್ಲಿ ಹಸುವಿನ ಸಗಣಿಯನ್ನ ಸಹ ಬೇಡದ ಕಸವೆಂದು ಎಸೆಯದೇ ಅದನ್ನೇ ಗೊಬ್ಬರವನ್ನಾಗಿ ಬಳಸಿಕೊಂಡು ಹಸಿ ಮೇವನ್ನ ಬೆಳೆದು ಹಸುಗಳಿಗೆ ಬೇಕಾದ ಪೌಷ್ಟಿಕಾಂಶವುಳ್ಳ ಆಹಾರಗಳನ್ನು ಸಹ ಬೆಳೆದು ನೀಡುತ್ತಿದ್ದಾರೆ.

ಭೀಕರ ಬರದಿಂದ ತತ್ತರಿಸಿ ಸಾಲದ ಬಾಧೆ ತಾಳದೆ ಆ ತ್ಮಹ ತ್ಯೆ ಮಾಡಿಕೊಳ್ಳುವ ರೈತರ ನಡುವೆ ನೂತನ ತಂತ್ರಜ್ಞಾನದ ಜೊತೆಗೆ ಸಾವಯವ ಪದ್ಧತಿಯನ್ನು ಅಳವಡಿಸಿಕೊಂಡು ಹೈನುಗಾರಿಕೆ ಮಾಡಿ ಲಕ್ಷಾಂತರ ರೂಪಾಯಿ ಸಂಪಾದಿಸಿರುವ ಈ ಮಹಿಳೆ ದೇಶಕ್ಕೆ ಮಾದರಿಯಾಗಿದ್ದಾರೆ. ಹೀಗಾಗಿ ಇವರ ಸಾಧನೆಯನ್ನು ಗಮನಿಸಿದ ಭಾರತೀಯ ಹೈನುಗಾರಿಕೆ ಇಲಾಖೆ ರಾಷ್ಟ್ರ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!