ಭಾರತದಲ್ಲಿ ವೈಭವದಿಂದ ಆಚರಿಸಲ್ಪಡುವ ಒಂದು ಹಬ್ಬಗಳಲ್ಲಿ ಗಣೇಶಚತುರ್ಥಿ ಕೂಡ ಒಂದು. ಪ್ರತಿ ವರ್ಷದ ಭಾದ್ರಪದ ಮಾಸದ ಶುಕ್ಲಪಕ್ಷದ ಚತುರ್ಥಿಯ ದಿನ ಈ ಹಬ್ಬವನ್ನು ಆಚರಿಸಲಾಗುತ್ತದೆ. ಈ ಹಬ್ಬದಲ್ಲಿ ಗಣಪತಿಯನ್ನು ಪೂಜಿಸಲಾಗುತ್ತದೆ. ಬೆಳ್ಳಿ ಅಥವಾ ಮಣ್ಣಿನಿಂದ ಮಾಡಿದ ಗಣಪತಿಯ ಮೂರ್ತಿಯನ್ನು ಪೂಜಿಸಿ ವ್ರತವೆಂದು ಆಚರಿಸಲಾಗುತ್ತದೆ.
ಹಬ್ಬದ ದಿನ ಮೋದಕ, ಕಡುಬು ಮೊದಲಾದ ಪಂಚಖಾದ್ಯಗಳನ್ನು ಮಾಡಿ ಗಣೇಶನಿಗೆ ನೈವೇದ್ಯ ಮಾಡಲಾಗುತ್ತದೆ. ಆ ದಿನ ಯಾರೂ ಚಂದ್ರನನ್ನು ನೋಡಬಾರದು ಎಂದು ಹೇಳುತ್ತಾರೆ. ಆದ್ದರಿಂದ ನಾವು ಇಲ್ಲಿ ಏಕೆ ಚಂದ್ರನನ್ನು ನೋಡಬಾರದು ಎನ್ನುವುದರ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳೋಣ.
ಗಣೇಶ ಭೂಲೋಕಕ್ಕೆ ಬಂದ ದಿನವನ್ನು ವಾರಗಟ್ಟಲೆ ಸಂಭ್ರಮದಿಂದ ಆಚರಿಸುವುದು ಅನಾದಿ ಕಾಲದಿಂದಲೂ ರೂಢಿಯಲ್ಲಿದೆ. ಮೊದಲ ದಿನ ತಾಯಿ ಸ್ವರ್ಣಗೌರಿಯ ಹಬ್ಬ ಮಾಡಲಾಗುತ್ತದೆ. ಅಂದು ದೇಗುಲಗಳಲ್ಲಿ ವಿಶೇಷ ಪೂಜೆಗಳನ್ನು ಮಾಡಲಾಗುತ್ತದೆ. ಸಾಮಾನ್ಯವಾಗಿ ಈ ಹಬ್ಬ ಭಾದ್ರಪದ ಚೌತಿಯ ದಿನದಂದು ಬರುತ್ತದೆ.
ಶಿವನ ಮಗನಾದ ಗಣಪತಿಗೆ ಸಿಹಿ ತಿಂಡಿ ಎಂದರೆ ಬಹಳ ಇಷ್ಟ. ಒಂದು ದಿನ ಒಬ್ಬ ಭಕ್ತನ ಪೂಜೆಯ ನೈವೇದ್ಯದಲ್ಲಿ ಬಹಳಷ್ಟು ಸಿಹಿಯಾದ ಖಾದ್ಯಗಳನ್ನು ಇಟ್ಟಿದ್ದ. ಇದರಿಂದ ಖುಷಿಯಾಗಿ ಬೆಳಿಗ್ಗೆಯಿಂದ ಎಲ್ಲವನ್ನೂ ತಿಂದು ರಾತ್ರಿಯ ವೇಳೆಗೆ ಉಳಿದದ್ದನ್ನು ಹೊಟ್ಟೆಗೆ ಬಟ್ಟೆಯಲ್ಲಿ ಕಟ್ಟಿಕೊಂಡು ಹೊರಟನು.
ಹೋಗುವಾಗ ಹೊಟ್ಟೆ ತುಂಬಿದ್ದರಿಂದ ಒಂದು ಬಾರಿ ದಾರಿಯಲ್ಲಿ ಎಡವಿ ಬಿದ್ದನು. ಆಗ ಎಲ್ಲವೂ ಬಿದ್ದು ಹೋದಾಗ ಯಾರೂ ನೋಡಿಲ್ಲ ಎಂದು ತಿಳಿದು ಮತ್ತೆ ಎತ್ತಿಕೊಂಡು ಹೊರಡುತ್ತಾನೆ. ಆದರೆ ಚಂದ್ರ ಇದನ್ನು ನೋಡಿರುತ್ತಾನೆ. ಆಗ ಚಂದ್ರ ಎಲ್ಲಾ ದಿನಗಳಲ್ಲೂ ಒಂದೇ ರೀತಿ ಇರುತ್ತಿದ್ದ ಎಂದು ಹೇಳುತ್ತಾರೆ. ಹಾಗೆಯೇ ಚಂದ್ರನಿಗೆ ತಾನು ಸುಂದರವಾಗಿ ಇದ್ದೇನೆ ಎನ್ನುವ ಅಹಂಕಾರ ಇತ್ತು. ಆಗ ಈಗಿನ ರೀತಿ ಹುಣ್ಣಿಮೆ ಮತ್ತು ಅಮಾವಾಸ್ಯೆ ಇರಲಿಲ್ಲ. ಹಾಗೆಯೇ ನಂತರದಲ್ಲಿ ಮತ್ತೆ ಗಣಪತಿಯು ಬಿದ್ದನು. ಇವೆಲ್ಲವನ್ನು ನೋಡಿ ಚಂದ್ರ ನಗುತ್ತಿದ್ದನು.
ಇದನ್ನು ನೋಡಿ ಗಣಪತಿ ಸಿಟ್ಟುಗೊಂಡು ನೀನು ಆಕಾಶದಿಂದ ಕಣ್ಮರೆಯಾಗು ಎಂದು ಶಾಪ ಕೊಟ್ಟನು. ಆಗ ಚಂದ್ರನು ಭಯಗೊಂಡು ಕ್ಷಮೆಯಾಚಿಸಿದಾಗ ಗಣಪತಿಯು ಚಂದ್ರನ ಅಹಂಕಾರ ಮುರಿದದ್ದನ್ನು ನೋಡಿ ನೀನು ದಿನೇ ದಿನೇ ಆಕಾಶದಲ್ಲಿ ಒಂದು ದಿನ ಪೂರ್ತಿಯಾಗಿ ಕಂಡು ನಂತರ ದಿನೇ ದಿನೇ ಕಡಿಮೆಯಾಗಿ ಒಂದು ದಿನ ಕಾಣುವುದಿಲ್ಲ ಎಂದು ಹೇಳಿದನು. ಅಂದಿನಿಂದ ಹುಣ್ಣಿಮೆ ಮತ್ತು ಅಮಾವಾಸ್ಯೆಗಳು ಬಂದವು. ಹಾಗೆ ಚೌತಿ ಹಬ್ಬದ ದಿನ ಚಂದ್ರನನ್ನು ನೋಡಬಾರದು ಎಂದು ಹೇಳುತ್ತಾರೆ. ಏಕೆಂದರೆ ಗಣೇಶನು ಚಂದ್ರನಿಗೆ ಶಾಪ ಕೊಟ್ಟಿದ್ದರಿಂದ ಚಂದ್ರನನ್ನು ನೋಡಿದರೆ ಚಂದ್ರದೋಷ ತಗಲುತ್ತದೆ. ಈ ರೀತಿಯಾಗಿ ಪುರಾಣಗಳು ಕಥೆಯನ್ನು ಹೇಳುತ್ತವೆ.