ರುಚಿ ಬಣ್ಣ ವಾಸನೆ ಯಾವುದೂ ಇಲ್ಲದ ನೀರು ಇದನ್ನು ಕುಡಿದರೆ ನಮ್ಮ ಆರೋಗ್ಯಕ್ಕೆ ತುಂಬಾನೆ ಒಳ್ಳೆಯದು. ಆದರೆ ಅದು ಹೇಗೆ ಮತ್ತು ಏಕೆ ಎಂಬುದರ ಕುರಿತಾಗಿ ಯಾರು ಹೇಳಿರುವುದಿಲ್ಲ. ಇದರ ಬಗ್ಗೆ ಈ ಲೇಖನದ ಮೂಲಕ ತಿಳಿದುಕೊಳ್ಳೋಣ.
ನೀರು ನಮ್ಮ ಚರ್ಮವನ್ನು ಸ್ವಚ್ಛಗೊಳಿಸಲು ಸಹಾಯಕಾರಿಯಾಗಿದೆ. ಹೆಚ್ಚು ನೀರು ಕುಡಿಯುವುದರಿಂದ ಚರ್ಮಕ್ಕೆ ಸಾಕಷ್ಟು ಆರೋಗ್ಯಕರ ಲಾಭಗಳು ದೊರೆಯುತ್ತವೆ. ಚರ್ಮ ಸುಕ್ಕುಗಟ್ಟುವುದು ರಿಂದ ಹಿಡಿದು ಮುಖದ ಮೇಲೆ ಮೊಡವೆಗಳು ಆಗುವುದರಿಂದ ಸಹ ಮುಕ್ತಿ ದೊರೆಯುತ್ತದೆ. ನಮ್ಮ ಚರ್ಮದಲ್ಲಿರುವ ಯಾವುದೇ ವಿಷಕಾರಿ ಅಂಶಗಳನ್ನು ಸಹ ನೀರು ಹೊರಹಾಕುತ್ತದೆ. ಮೊಡವೆ ಗಳಲ್ಲಿರುವ ಬ್ಯಾಕ್ಟೀರಿಯಾದ ಹಾನಿಕಾರಕ ಅಂಶಗಳನ್ನು ತೆಗೆದು ಹಾಕಲು ನೀರು ಸಹಾಯಕಾರಿಯಾಗುತ್ತದೆ. ನೀರನ್ನು ನಿಯಮಿತವಾಗಿ ಕುಡಿಯುವುದರಿಂದ ಒಣ ಚರ್ಮವನ್ನು ಹೋಗಲಾಡಿಸಿ ಚರ್ಮದಲ್ಲಿ ಕಾಂತಿ ಬರುವಂತೆ ಮಾಡಿಕೊಳ್ಳಬಹುದು.
ದೇಹದ ತೂಕವನ್ನು ಕಡಿಮೆಮಾಡಲು ನೀರು ಸಹಾಯ ಮಾಡುತ್ತದೆ. ಸಾಮಾನ್ಯವಾಗಿ ಜನರಲ್ಲಿ ಹೆಚ್ಚು ನೀರನ್ನು ಕುಡಿಯುವುದರಿಂದ ನಮ್ಮ ದೇಹದ ತೂಕ ಹೆಚ್ಚಾಗುತ್ತದೆ ಎನ್ನುವ ತಪ್ಪು ಕಲ್ಪನೆ ಇದೆ. ಆದರೆ ಹೆಚ್ಚು ನೀರನ್ನು ಕುಡಿಯದಿದ್ದರೆ ದೇಹವು ನಿರ್ಜಲಿಕರಣ ಗೊಂಡು ದೇಹದಲ್ಲಿರುವ ಕೊಬ್ಬಿನ ಅಂಶಗಳನ್ನು ಒಡೆಯಲು ಕಷ್ಟವಾಗುತ್ತದೆ. ಈ ಕಾರಣದಿಂದಾಗಿ ಆಹಾರ ಸೇವಿಸುವಾಗ ಅರ್ಧ ಗಂಟೆ ಮೊದಲು ಒಂದು ಲೋಟ ನೀರನ್ನು ಕುಡಿಯಲೇ ಬೇಕು. ಆಗ ನಮ್ಮ ದೇಹವು ಹೈಡ್ರೇಟ್ ಆಗಿ ಕೊಬ್ಬಿನ ಕೋಶಗಳನ್ನು ಒಡೆಯಲು ನೆರವಾಗುತ್ತದೆ. ಊಟಕ್ಕೆ ಮೊದಲು ನೀರು ಕುಡಿಯುವುದರಿಂದ ಆಗುವ ಪ್ರಯೋಜನ ಎಂದರೆ ಊಟದ ಮೊದಲು ನೀರು ಕುಡಿಯುವುದರಿಂದ ಹೆಚ್ಚು ಆಹಾರ ಸೇವಿಸುವುದು ಬೇಕಾಗಿರುವುದಿಲ್ಲ. ಈ ಮೂಲಕ ದೇಹದ ತೂಕವನ್ನು ಇಳಿಸಿಕೊಳ್ಳಬಹುದು.
ಕಾಯಿಲೆಗಳು ಬರದಂತೆ ತಡೆಯಬಹುದು ನೀರನ್ನು ಕುಡಿಯುವ ಮೂಲಕ ಅನೇಕ ರೀತಿಯ ಕಾಯಿಲೆಗಳು ಬರದಂತೆ ತಡೆಯಬಹುದು. ನೀರು ನಮ್ಮ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿ ನಮ್ಮ ದೇಹದ ಎಲ್ಲಾ ಜೀವಕೋಶಗಳಿಗೂ ಆಮ್ಲಜನಕವನ್ನು ಒದಗಿಸಿ ಚೆನ್ನಾಗಿ ಕೆಲಸ ಮಾಡುವಂತೆ ಮಾಡುತ್ತದೆ. ಹೆಚ್ಚು ಹೆಚ್ಚು ನೀರನ್ನು ಕುಡಿಯುವುದರಿಂದ ಕಿಡ್ನಿ ಸಮಸ್ಯೆ ಬರದಂತೆ ತಡೆಯಬಹುದು. ಹೆಚ್ಚು ನೀರು ಕುಡಿಯುವುದರಿಂದ ಕೆಮ್ಮು ಹಾಗೂ ಮೂಗು ಸ್ರವಿಸುವುದರಿಂದ ಸಹ ದೂರ ಇರಬಹುದು. ಮೂಗು ಕಟ್ಟಿ ಉಸಿರಾಡಲು ತೊಂದರೆ ಉಂಟಾದಾಗ ಹೆಚ್ಚು ನೀರು ಕುಡಿಯುವುದರಿಂದ ಉಸಿರಾಟದ ತೊಂದರೆಯಿಂದ ಸಹ ಮುಕ್ತಿ ಪಡೆಯಬಹುದು.
ಏಕಾಗ್ರತೆ ಮತ್ತು ಶಕ್ತಿಯನ್ನು ಹೆಚ್ಚಿಸುತ್ತದೆ. ನಮ್ಮೆಲ್ಲರ ದೇಹದಲ್ಲಿ ಶೇಕಡಾ 75ರಷ್ಟು ನೀರಿದೆ ಅದೇ ರೀತಿ ನಮ್ಮ ಮೆದುಳು ಶೇಕಡಾ 85ರಷ್ಟು ನೀರಿನಿಂದ ಕೂಡಿರುತ್ತದೆ. ಇದರ ಅರ್ಥ ನಮ್ಮ ದೇಹಕ್ಕೆ ಸರಿಯಾಗಿ ನೀರು ಸಿಗದೆ ಇದ್ದಲ್ಲಿ ದೇಹ ಬೇಗ ನಿರ್ಜಲೀಕರಣ ಆಗುತ್ತದೆ. ಇದರಿಂದ ನಮ್ಮ ಏಕಾಗ್ರತೆಯ ಮಟ್ಟ ಕುಸಿಯುತ್ತದೆ ಹಾಗೂ ದೇಹದ ಶಕ್ತಿ ಕೂಡಾ ಕುಸಿಯುತ್ತದೆ. ಹೀಗಾಗಿ ಹೆಚ್ಚು ನೀರು ಕುಡಿಯುವುದರಿಂದ ನಮ್ಮ ಏಕಾಗ್ರತೆ ಹೆಚ್ಚುವುದರ ಜೊತೆಗೆ ದೇಹದ ಶಕ್ತಿ ಕೂಡಾ ಹೆಚ್ಚುವುದು.
ತಲೆ ನೋವು ಬರದಂತೆ ತಡೆಯಬಹುದು ದೇಹವು ನಿರ್ಜಲೀಕರಣ ಆದಂತೆ ತಲೆನೋವು ಮತ್ತು ವಾಕರಿಕೆ ಬರುವ ಸಾಧ್ಯತೆ ಇರುತ್ತದೆ. ಇದರಿಂದ ದಿನವಿಡೀ ನಿಯಮಿತ ಪ್ರಮಾಣದಲ್ಲಿ ನೀರನ್ನು ಕುಡಿಯುವ ಮೂಲಕ ನಮ್ಮ ದೇಹವು ಹೈಡ್ರೇಟ್ ಆಗಿರುವ ಹಾಗೆ ನೋಡಿಕೊಳ್ಳಬೇಕು. ಒಂದುವೇಳೆ ತಲೆನೋವು ಮತ್ತು ವಾಕರಿಕೆ ಕಂಡುಬಂದರೆ ಪೈನ್ ಕಿಲ್ಲರ ಮಾತ್ರೆಗಳ ಬದಲು ಒಂದು ಲೋಟ ನೀರು ಕುಡಿಯುವುದು ಉತ್ತಮ.
ಆರೋಗ್ಯಯುತ ಹೃದಯಕ್ಕೆ ನೀರು ಅಗತ್ಯ ನಮ್ಮ ರಕ್ತದಲ್ಲಿ ಶೇಕಡಾ 83 ರಷ್ಟು ನೀರು ಇರುತ್ತದೆ. ಹೆಚ್ಚು ನೀರು ಕುಡಿಯದೆ ಹೋದಲ್ಲಿ ದೇಹವು ನಿರ್ಜಲೀಕರಣಗೊಂಡು ರಕ್ತ ದಪ್ಪ ಆಗುತ್ತದೆ. ದಪ್ಪವಾದ ರಕ್ತವನ್ನು ದೇಹದ ಬೇರೆ ಬೇರೆ ಭಾಗಗಳಿಗೆ ಕಳುಹಿಸಲು ಹೃದಯ ಹೆಚ್ಚು ಕಷ್ಟ ಪಟ್ಟು ಹೃದಯಕ್ಕೆ ಹೆಚ್ಚು ಒತ್ತಡ ಬೀಳುತ್ತದೆ. ಹಾಗಾಗಿ ಹೆಚ್ಚು ಹೆಚ್ಚು ನೀರು ಕುಡಿಯುವುದರಿಂದ ರಕ್ತ ಸಂಚಾರ ಸರಾಗವಾಗಿ ನಡೆದು ಹೃದಯ ಕೂಡ ತನ್ನ ಕೆಲಸವನ್ನು ಸುಲಭಾವಾಗಿ ನಿರ್ವಹಿಸುತ್ತದೆ.
ಮಲಬದ್ಧತೆಗೆ ರಾಮಬಾಣ ಹೆಚ್ಚು ನೀರು ಕುಡಿಯುವುದರಿಂದ ಲಿವರ್ ಸರಿಯಾಗಿ ಕಾರ್ಯ ನಿರ್ವಹಿಸಿ ದೇಹದಲ್ಲಿರುವ ವಿಷಕಾರಿ ಅಥವಾ ಬೇಡವಾದ ಅಂಶಗಳನ್ನು ಹೊರಹಾಕುತ್ತದೆ. ಸರಿಯಾಗಿ ನೀರು ಕುಡಿಯದೇ ಹೋದಲ್ಲಿ ಬೇಡವಾದ ಅಂಶಗಳು ಗಟ್ಟಿಯಾಗಿ ಮಲಬದ್ಧತೆ ಸಮಸ್ಯೆ ಉಂಟಾಗುತ್ತದೆ. ನೀರು ಕುಡಿಯುವುದರಿಂದ ಗಟ್ಟಿಯಾದ ಆಹಾರ ಮೃದು ಆಗಲು ಸಹಾಯ ಆಗುತ್ತದೆ.
ದೇಹದ ತಾಪಮಾನ ಕಾಪಾಡಲು ದೇಹವನ್ನ ಸ್ಥಿರವಾಗಿ ತಾಪಮಾನದಲ್ಲಿ ಇಡಲು ನೀರು ಅತ್ಯವಶ್ಯಕ. ಇಲ್ಲವಾದಲ್ಲಿ ನಾವು ಆದಷ್ಟು ಬೇಗ ಅನಾರೋಗ್ಯಕ್ಕೆ ತುತ್ತಾಗುತ್ತೇವೆ. ದೇಹವು ಅಗತ್ಯ ಇದ್ದಾಗ ತಾಪಮಾನವನ್ನು ನಿಯಂತ್ರಿಸಲು ಸಾಧ್ಯ ಆಗುವಂತೆ ನೀರಿನ ಮಟ್ಟವು ಹೆಚ್ಚಿರಬೇಕು. ಅಂದರೆಯ ವ್ಯಾಯಾಮ ಮಾಡುವಾಗ ಬೆವರಿನ ಮೂಲಕ ಹೆಚ್ಚು ನೀರು ಹೊರಹೋಗುತ್ತದೆ ಆಗ ಅಂತಹ ಸಮಯದಲ್ಲಿ ದೇಹವು ಆಂತರಿಕ ತಾಪಮಾನವನ್ನು ಸರಿದೂಗಿಸಲು ನೀರಿನ ಮಟ್ಟ ಸರಿಯಾಗಿ ಇರಬೇಕು.
ಹ್ಯಾಂಗೋವರ್ ಗೆ ಉತ್ತಮ ಔಷಧ ಆಲ್ಕೋಹಾಲ್ ಕುಡಿಯುವುದರಿಂದ ಬಾಯಾರಿಕೆ ಕಡಿಮೆ ಆಗುತ್ತದೆ ಇದರಿಂದ ದೇಹ ಮತ್ತಷ್ಟು ನಿರ್ಜಲೀಕರಣ ಆಗುತ್ತದೆ. ಹಾಗಾಗಿ ಆಲ್ಕೋಹಾಲ್ ಕುಡಿಯುವಾಗ ಒಂದು ಲೋಟ ನೀರು ಕುಡಿದರೆ ದೇಹದ ನೀರಿನ ಪ್ರಮಾಣ ಸ್ಥಿರವಾಗುತ್ತದೆ. ಇದರಿಂದ ಬೆಳಿಗ್ಗೆ ಎದ್ದಾಗ ಹ್ಯಾಂಗೋವರ್ ಕಡಿಮೆ ಆಗುವ ಸಾಧ್ಯತೆ ಇರುತ್ತದೆ. ಪ್ರತೀ ದಿನ ಕನಿಷ್ಠ ಎರಡರಿಂದ ಮೂರು ಲೀಟರ್ ನೀರು ಕುಡಿಯಬೇಕು ಎಂದು ಹೇಳುತ್ತಾರೆ ಆದರೆ ರುಚಿ ಇಲ್ಲದ ನೀರನ್ನು ಕುಡಿಯಲು ಇಷ್ಟ ಆಗುವುದಿಲ್ಲ. ಹಾಗಾಗಿ ಹೆಚ್ಚು ಹೆಚ್ಚು ನೀರಿನ ಅಂಶ ಇರುವಂತಹ ತರಕಾರಿಗಳನ್ನು ಹಾಗೂ ಹಣ್ಣುಗಳನ್ನು ಸೇವಿಸುವುದು ಒಳ್ಳೆಯದು.